ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವೈಫಲ್ಯ ಮುಂದುವರೆದಿರುವಂತೆಯೇ ಆರ್ ಸಿಬಿಯ ಸ್ಟಾರ್ ಬ್ಯಾಟರ್ ಗಳ ವಿರುದ್ಧ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತು. ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯವನ್ನು ತಲಾ 14 ಓವರ್ ಗಳಿಗೆ ಸೀಮಿತಗೊಳಿಸಲಾಯಿತು.
ಐಪಿಎಲ್ ನಲ್ಲಿ ಮತ್ತೆ ಆರ್ ಸಿಬಿ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಅಪಾಯವಿತ್ತು. ಆದರೆ ಈ ಹಂತದಲ್ಲಿ ಕ್ರೀಸ್ ಗೆ ಬಂದ ಟಿಮ್ ಡೇವಿಡ್ ಆರ್ ಸಿಬಿ ಬ್ಯಾಟಿಂಗ್ ಗೆ ಜೀವ ತುಂಬಿದರು. ಕೇವಲ 26 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್, 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಅಜೇಯ 50ರನ್ ಗಳಿಸಿದರು. ಆದರೆ ಟಿಮ್ ಡೇವಿಡ್ ಗೆ ತಂಡದ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. ನಾಯಕ ರಜತ್ ಪಾಟಿದಾರ್ (23 ರನ್)ಹೊರತು ಪಡಿಸಿದರೆ, ತಂಡದ ಬರೊಬ್ಬರಿ 10 ಆಟಗಾರರ ರನ್ ಗಳಿಕೆ ಒಂದಂಕಿಯಲ್ಲಿತ್ತು. ಇದು ಆರ್ ಸಿಬಿಯ ವೈಫಲ್ಯಕ್ಕೆ ಕಾರಣವಾಯಿತು,
ಟಿಮ್ ಡೇವಿಡ್ ರನ್ನು ಹೊರತುಪಡಿಸಿದರೆ, ಆರ್ ಸಿಬಿಯ ಉಳಿದಾವ ಬ್ಯಾಟರ್ ಗಳಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಪ್ರಮುಖವಾಗಿ ವಿರಾಟ್ ಕೊಹ್ಲಿ 1 ರನ್ ಗಳಿಸಿದರೆ, ನಾಯಕ ರಜತ್ ಪಾಟಿದಾರ್ 23ರನ್ ಮತ್ತು ಜಿತೇಶ್ ಶರ್ಮಾ ಕೇವಲ 2 ಗಳಿಸಿ ವಿಕೆಟ್ ಒಪ್ಪಿಸಿದರು. ಅಂತೆಯೇ ಕೃನಾಲ್ ಪಾಂಡ್ಯ 1 ರನ್ ಮತ್ತು ಮನೋಜ್ ಭಂಡಾಗೆ 1ರನ್ ಗಳಿಸಿ ಮತ್ತೆ ನಿರಾಶೆ ಮೂಡಿಸಿದರು.
ಆರ್ ಸಿಬಿ ಬ್ಯಾಟಿಂಗ್ ವೈಫಲ್ಯದ ಕುರಿತು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತೀವ್ರ ಟೀಕಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಲ್ಲಿ ಬ್ಯಾಟ್ಸ್‌ಮನ್‌ಗಳು ಹೇಗೆ ಬ್ಯಾಟಿಂಗ್ ಮಾಡಬೇಕೆಂಬುದರ ಬಗ್ಗೆ ಆರ್ ಸಿಬಿ ಬ್ಯಾಟರ್ ಗಳು 'ಸಾಮಾನ್ಯ ಜ್ಞಾನದ ಕೊರತೆ' ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ