ಬೀಜಿಂಗ್: ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಚೀನಾ ಕಿಡಿಕಾರಿದೆ.
ಟ್ರಂಪ್ ಸುಂಕ ಬೆದರಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಚೀನಾದ ವಾಣಿಜ್ಯ ಸಚಿವಾಲಯವು, ಇದು ಬೆದರಿಕೆಯ ತಂತ್ರವಾಗಿದ್ದು. ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅಂತ್ಯದವರೆಗೂ ಹೋರಾಡಲು ಸಿದ್ಧ ಎಂದು ಹೇಳಿದೆ.
ಚೀನಾ ತೆಗೆದುಕೊಂಡ ಕ್ರಮಗಳು ನಮ್ಮ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕ್ರಮವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿವೆ. ಅವು ಸಂಪೂರ್ಣ ನ್ಯಾಯಸಮ್ಮತವಾಗಿವೆ. ಆದರೆ, ಪ್ರತಿಯಾಗಿ ಅಮೆರಿಕಾ ನೀಡುತ್ತಿರುವ ಸುಂಕವು ಬೆದರಿಕೆಯ ತಂತ್ರವಾಗಿದ್ದು, ಇದು ಅಮೆರಿಕಾದ ಬ್ಲ್ಯಾಕ್ ಮೇಲ್ ಮಾಡುವ ಸ್ವಭಾವವನ್ನು ಬಹಿರಂಗಪಡಿಸುತ್ತಿದೆ. ನಾವು ಇದನ್ನು ಎಂದಿಗೂ ಒಪ್ಪುವುದಿಲ್ಲ. ಬೆದರಿಕೆ ತಂತ್ರಗಳಿಗೆ ನಾವು ಬಗ್ಗುವುದಿಲ್ಲ. ಈ ನಿಟ್ಟಿನಲ್ಲಿ ಅಂತ್ಯದ ವರೆಗೂ ಹೋರಾಡಲು ಸಿದ್ಧ ಎಂದು ಹೇಳಿದೆ.