ಮೆಟ್ರೋದಲ್ಲಿ ಊಟ ಮಹಿಳೆಗೆ ದಂಡ

varthajala
0

 



ನಮ್ಮ ಮೆಟ್ರೋ ಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಮಹಿಳಾ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ₹500 ದಂಡ ವಿಧಿಸಿದೆ. ಇದೀಗ ಈ ಕುರಿತು ಬಿಎಂಆರ್‌ಸಿಎಲ್ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.


ಬಿಎಂಆರ್‌ಸಿಎಲ್ ನೀಡಿದ ಮಾಹಿತಿ ಪ್ರಕಾರ, ಮಾದವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರು ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದರು. ಅವರು ಮೆಟ್ರೋ ರೈಲಿನೊಳಗೇ ಊಟ ಮಾಡುವ ಮೂಲಕ ಸ್ವಚ್ಛತಾ ನಿಯಮಗಳ ವಿರುದ್ಧ ವರ್ತಿಸಿದ್ದರು. ಈ ಕೃತ್ಯವನ್ನು ಅಲ್ಲಿದ್ದ ಮತ್ತೊಬ್ಬ ಪ್ರಯಾಣಿಕರು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಬಿಎಂಆರ್‌ಸಿಎಲ್ ಮಹಿಳೆಯ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡಿದೆ.

ಇಂದು ಬೆಳಿಗ್ಗೆ, ನೈಸ್ ರಸ್ತೆ ಜಂಕ್ಷನ್ ಬಳಿಯ ಮಾದವರ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮಹಿಳೆಯನ್ನು ತಪಾಸಣೆ ನಡೆಸಿ, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ₹500 ದಂಡ ವಿಧಿಸಿದರು. ಬಿಎಂಆರ್‌ಸಿಎಲ್ ನಿಯಮಾವಳಿಯ ಪ್ರಕಾರ, ಮೆಟ್ರೋ ಆವರಣದಲ್ಲಿ ಅಥವಾ ಮೆಟ್ರೋ ರೈಲಿನೊಳಗೆ ಆಹಾರ ಅಥವಾ ಪಾನೀಯ ಸೇವಿಸುವುದು ಸಂಪೂರ್ಣ ನಿಷೇಧಿಸಲಾಗಿದೆ.

ಬಿಎಂಆರ್‌ಸಿಎಲ್ ಹೇಳಿಕೆಯಲ್ಲಿ, “ಮೆಟ್ರೋ ಸರ್ವಜನಿಕ ಬಳಕೆಯ ಸ್ಥಳವಾಗಿದ್ದು, ಎಲ್ಲ ಪ್ರಯಾಣಿಕರು ನಿಯಮಗಳನ್ನು ಗೌರವಿಸುವುದು ಮತ್ತು ಪಾಲಿಸುವುದು ಅತ್ಯಂತ ಅವಶ್ಯಕ. ಪ್ರತಿ ಪ್ರಯಾಣಿಕನ ಸಹಕಾರದೊಂದಿಗೆ ಮಾತ್ರ ನಾವು ಸ್ವಚ್ಛ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಹಾದಿಯನ್ನು ನಿರ್ಮಾಣ ಮಾಡಬಹುದು,” ಎಂದು ತಿಳಿಸಲಾಗಿದೆ.

Post a Comment

0Comments

Post a Comment (0)