ಇಂದು ಡಾ.ರಾಜ್‍ಕುಮಾರ್ ಅವರ 19ನೇ ಪುಣ್ಯಸ್ಮರಣೆ. 70ರಿಂದ 90ರ ದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ಪ್ರಾಬಲ್ಯ ಸಾಧಿಸಿದ್ದ ಕನ್ನಡ ಚಿತ್ರರಂಗದ ಅಗ್ರಗಣ್ಯ ನಟ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು 2006ರ ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ನಿಧನರಾದರು. ಅಂದು ಅವರನ್ನು ಕಳೆದುಕೊಂಡ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಚಂದನವನದ ಮಹಾನಟ ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪುಗಳು ಮಾತ್ರ ಕನ್ನಡಿಗರೆದೆಯಲ್ಲಿ ಸದಾ ಜೀವಂತವಾಗಿವೆ.
ಶಿವರಾಜ್ಕುಮಾರ್ ಪೋಸ್ಟ್: ಕನ್ನಡಿಗರ ಆರಾಧ್ಯ ದೈವ , ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ಕರ್ನಾಟಕ ರತ್ನ, ಪದ್ಮಭೂಷಣ, ರಸಿಕರ ರಾಜ, ಕೆಂಟಕಿ ಕರ್ನಲ್, ಗಾನ ಗಂಧರ್ವ, ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ, ಅಭಿಮಾನಿಗಳನ್ನು ದೇವರೆಂದು ಕರೆದು, ನಿರ್ಮಾಪಕರನ್ನು ಅನ್ನದಾತರೆಂದು ಕರೆದು, ಕನ್ನಡ ನಾಡಿಗೆ ಸಮಸ್ಯೆ ಬಂದಾಗಲೆಲ್ಲಾ ಮೊದಲಿಗೆ ಬೀದಿಗಿಳಿದು ನಾಡಿಗಾಗಿ ಹೋರಾಟ ಮಾಡಿ, ಅದೆಷ್ಟೋ ಜನರ ಹಸಿವನ್ನು ಸಮಾಜಕ್ಕೆ ತಿಳಿಯದಂತೆ ತೀರಿಸಿ, ನಾನು ಎಂಬುದು ಏನಿಲ್ಲ ಎಂದು ಜಗತ್ತಿಗೆ ತಿಳಿಸಿ ನಾಡಿನ ಜನರ ಮನದಲ್ಲಿ ಶಾಶ್ವತ "ರಾಜಕುಮಾರ"ನಾಗಿ ಉಳಿದಿರುವ ಕನ್ನಡಿಗರ ಕಣ್ಮಣಿ ಡಾ.ರಾಜ್‍ಕುಮಾರ್ ಅವರ ಪುಣ್ಯ ಸ್ಮರಣೆ''.