ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಎತ್ತಿ ಹಿಡಿಯುವ ಸಂವಿಧಾನದ ಆಶಯಗಳು ನೆರವೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ-2025 ಹಾಗೂ 2023ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಕಾರಂಗ ತನ್ನದೇ ಆದ ಧ್ಯೇಯ ಉದ್ದೇಶಗಳನ್ನು ಹೊಂದಿದೆ. ಇದು ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಎಲ್ಲರನ್ನೂ ಸಮಾನರಾಗಿ ಕಾಣುವ ಗುಣವನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ 5.50 ಲಕ್ಷ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಉತ್ತಮವಾಗಿ ಕೆಲಸ ನಿರ್ವಹಿಸಿದ 30 ಸರ್ಕಾರಿ ನೌಕರರಿಗೆ ಸರ್ಕಾರ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಇತರರಿಗೆ ಮಾದರಿಯಾಗುವುದಲ್ಲದೇ ಪುರಸ್ಕøತರ ಮೇಲಿನ ಜವಾಬ್ದಾರಿ ಹೆಚ್ಚಿಸಲಿದೆ ಎಂದರು.
ಕರ್ನಾಟಕ ಪ್ರಗತಿಶೀಲ ರಾಜ್ಯವಾಗಿದ್ದು, ಜಿಎಸ್‍ಟಿ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ 75 ವರ್ಷಗಳಾದರೂ ಸಹ ಸಂವಿಧಾನದ ಧ್ಯೇಯೋದ್ದೇಶಗಳು ಇನ್ನೂ ಈಡೇರಿಲ್ಲ. ಸಮಾಜದ ಪರಿವರ್ತನೆಗೆ ಹೋರಾಟ ನಡೆಸಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಗಾಂಧೀಜಿ, ಬಸವಣ್ಣನವರ ತತ್ವಗಳನ್ನು ನಾವು ಪಾಲಿಸಿ ಸಾಮಾಜಿಕ, ಆರ್ಥಿಕ, ಅಸಮಾನತೆ ತೊಡೆದುಹಾಕಬೇಕು ಎಂದರು.
ಸರ್ಕಾರಿ ನೌಕರರು ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿ ಜನಸೇವೆ ಮಾಡಿ ಉತ್ತಮ ಹೆಸರು ಪಡೆಯಬೇಕು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಜನರಿಗೆ ಉತ್ತಮ ಸೇವೆ ನೀಡಿದ ಅಧಿಕಾರಿ, ನೌಕರರನ್ನು ಜನರೇ ಗೌರವಿಸುತ್ತಾರೆ. ಆದರೆ ಕೆಲವರು ಜನರನ್ನು ವಿನಾಕಾರಣ ಅಲೆಯುವಂತೆ ಮಾಡಿ ಸತಾಯಿಸುತ್ತಾರೆ. ನಾವು ಜನಸ್ನೇಹಿಯಾಗಿ, ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರದ ಕೆಲಸ ದೇವರ ಕೆಲಸ ಎಂದು ಮನಗೊಂಡು ಕಾನೂನುನ ಚೌಕಟ್ಟಿನಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಬೇಕು. ಇದರಿಂದ ನೌಕರರಿಗೂ, ಜನಪ್ರತಿನಿಗಳಿಗೂ ಒಳ್ಳೆಯ ಹೆಸರು ಬರುತ್ತದೆ ಎಂದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ಸರ್ಕಾರಿ ನೌಕರರ/ ಅಧಿಕಾರಿಗಳ ಮೇಲಿದೆ. ನಾವು ಜಾತಿ, ಮತವನ್ನು ಮೀರಿ ಮನುಷ್ಯತ್ವದಿಂದ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ನಗದು ರಹಿತ ಚಿಕಿತ್ಸೆಯಾದ “ಕರ್ನಾಟಕ ಆರೋಗ್ಯ ಸಂಜೀವಿನಿ” ಯೋಜನೆಯ ಕಾರ್ಡ್‍ನ್ನು ಸರ್ಕಾರಿ ನೌಕರರಿಗೆ ನೀಡುವ ಮೂಲಕ ವಿದ್ಯುಕ್ತವಾಗಿ ಗಣ್ಯರು ಚಾಲನೆ ನೀಡಿದರು.
ಅಲ್ಲದೇ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇದರ ಆನ್‍ಲೈನ್ ಕನ್ನಡ ತರಬೇತಿ ತರಗತಿಗಳಿಗೆ ಸಹ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 2023ನೇ ಸಾಲಿನ ಸರ್ವೋತ್ತಮ ಪ್ರಶಸ್ತಿ ಪಡೆದ 30 ಸರ್ಕಾರಿ ನೌಕರರನ್ನು ಇದೇ ಸಂದರ್ಭದಲ್ಲಿ ತಲಾ 50,000 ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರಾದ ಅಶೋಕ್ ಮಹಾದೇವಪ್ಪ ಪಟ್ಟಣ್, ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯಾನಂದ ಕಾಶಪ್ಪನವರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ ಗುಪ್ತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳಾದ ಜಿ.ಸತ್ಯವತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ)ಯ ಸರ್ಕಾರದ ಕಾರ್ಯದರ್ಶಿಗಳಾದ ತುಲಸಿ ಮದ್ದಿನೇನಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.