ಜಾತ್ಯತೀತ ಸಮಾಜದಲ್ಲಿ ಜಾತಿಗಳ ನಡುವೆ ವಿಭಜನೆ : ಸಾಮಾಜಿಕ, ಶೈಕ್ಷಣಿಕ ವರದಿ ಬಗ್ಗೆ ಹರಿಹರಪುರ ಮಠದ ಸ್ವಾಮೀಜಿ ವಿಷಾದ

varthajala
0


ಬೆಂಗಳೂರು, ಏ, 20; ಸಂವಿಧಾನ ರಕ್ಷಣೆ, ಜಾತ್ಯತೀತ ಸಿದ್ಧಾಂತಗಳನ್ನು ಪ್ರತಿಪಾದಿಸುವ ಸಮಾಜದಲ್ಲಿ ಜಾತಿ ಆಧಾರದ ಮೇಲೆ ಸಮಾಜ ವಿಭಜಿಸಲಾಗುತ್ತಿದೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಇಂದಿಲ್ಲಿ ಸಾಮಾಜಿಕ, ಶೈಕ್ಷಣಿಕ ವರದಿ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.
ಶ್ರೀ ತಿರುಪತಿ ತಿರುಮಲ ಪಾದಯಾತ್ರಿಗಳ ಶ್ರೀ ತಿರುಪತಿ ತಿರುಮಲ ಸೇವಾ ಟ್ರಸ್ಟ್ ನಿಂದ ಜಯನಗರದ 1ನೇ ಬ್ಲಾಕ್ ನ ಅಯೋಧ್ಯಾ ಕಲ್ಯಾಣ ಮಂಟಪದಲ್ಲಿ “ನರನ ನಡಿಗೆ ನಾರಾಯಣನೆಡೆಗೆ” ಎಂಬ ಘೋಷವಾಕ್ಯದಡಿ 48 ನೇ ವರ್ಷದ ಮಂಡಲೋತ್ಸವದಲ್ಲಿ ಮಾತನಾಡಿದ ಅವರು, ಜಾತಿ ಜಾತಿಗಳ ನಡುವೆ ಸಂಘರ್ಷ ಎದುರಾಗಿದೆ. ಜಾತಿಗಿಂತ ಧರ್ಮ ದೊಡ್ಡದು ಎಂದುಕೊಂಡರೆ ಮಾತ್ರ ಭಾರತ ಉಳಿಯುತ್ತದೆ. ಜಾತಿ ಎನ್ನುವುದು ವೃಕ್ಷದ ಕವಲು. ಧರ್ಮ ತಾಯಿ ಬೇರು. ಬೇರಿಗೆ ನೀರುಣಿಸದಿದ್ದರೆ ಎಲ್ಲಾ ಕೊಂಬೆಗಳು ಒಣಗುತ್ತವೆ. ಜಾತಿ ಮೇಲಿನ ವ್ಯಾಮೋಹದಲ್ಲಿ ಶೇ 10 ರಷ್ಟು ಧರ್ಮದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರೆ ಧರ್ಮಕ್ಕೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದರು.
ಬದುಕನ್ನು ವಾಸ್ತವಿಕವಾಗಿ ನೋಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಬದುಕು ಅನಿಶ್ಚಿತತೆಯ ಸರಮಾಲೆಯಾಗಿದ್ದು, ಭಗವದ್ ಭಕ್ತಿಯನ್ನು ಜೀವನದಲ್ಲಿ ದೃಢವಾಗಿ ಬೆಳೆಸಿಕೊಳ್ಳಲು ಜೀವನ ಎಂದರೆ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ವ್ಯಾಪಾರಿ ಮನಸ್ಥಿತಿ, ಫಲಪ್ರದ ಮನಸ್ಥಿತಿ ಹೊಂದಿರುವವರಲ್ಲಿ ನೈಜ ಭಕ್ತಿ ಸಿಗುವುದಿಲ್ಲ. ಜೀವನ ನಿರಂತರ ಪಯಣವಾಗಿದ್ದು, ನಮ್ಮ ಯಾನದ ಕೊನೆಯ ಹಂತ ಗೊತ್ತಿಲ್ಲ. ಭಾರತೀಯ ಸಂಸ್ಕೃತಿ ಏಕರೂಪದಿಂದ ಕೂಡಿಲ್ಲ. ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಸಂಸ್ಕೃತಿ ಉಳಿಸಲು ಸಾಧ್ಯ. ನಮ್ಮ ಒಕ್ಕೂಟ ವ್ಯವಸ್ಥೆಯ ಮೂಲಕ ಏಕತೆಯನ್ನು ಬಲಪಡಿಸಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಬೇಕು. ಸಂತರು ಒಂದಾದರೆ ಮಾತ್ರ ಸಮಾಜ ಒಂದಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಎರಡು ತಿಂಗಳಲ್ಲಿ ವಿಸ್ಮಯ ಸೃಷ್ಟಿಯಾಗಲಿದೆ ಎಂದರು.
ಅಧ್ಯಕ್ಷರಾದ ಶ್ರೀ ವೆಂಕಟಗಿರಿಗೌಡರು ಹಾಗೂ ಕಾರ್ಯದರ್ಶಿ ಗಳಾದ ಶ್ರೀ ಶಾಂತರಾಜು ರವರು ಭಾಗವಹಿಸಿದ್ದರು. ಬಿಜೆಪಿ ಮುಖಂಡ ಆರ್, ಜಯದೇವ, ಆರ್.ಎಸ್.ಎಸ್ ಮುಖಂಡ ಡಾ. ಎಂ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)