ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳ ಜನಿವಾರ ತೆಗೆದು ಬರುವಂತೆ ಒತ್ತಾಯ; ಹಿಂದೂ ಜನಜಾಗೃತಿ ಸಮಿತಿ ಖಂಡನೆ
ಬೆಂಗಳೂರು : ನಿನ್ನೆ ಶಿವಮೊಗ್ಗ ಮತ್ತು ಬೀದರ್ ನಲ್ಲಿ ನಡೆಯುತ್ತಿದ್ದ ಸಿಇಟಿ ಪರೀಕ್ಷಾ ಸ್ಥಳದಲ್ಲಿ ಜನಿವಾರ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಅಲ್ಲಿನ ಪರೀಕ್ಷಾ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ. ಮತ್ತು ಜನಿವಾರ ತೆಗೆಯದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬೇಕಾಯಿತು. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಇವರು ಖಂಡಿಸಿದ್ದಾರೆ.
ಅವರು ಮುಂದೆ ಮಾತನಾಡಿ ಜನಿವಾರ ಧರಿಸುವುದು ಬ್ರಾಹ್ಮಣರ ಧಾರ್ಮಿಕ ಆಚರಣೆ ಮತ್ತು ಅವರ ಹಕ್ಕಾಗಿದೆ. ಆದರೆ ಪರೀಕ್ಷೆಗಾಗಿ ಅದನ್ನು ತೆಗೆಯಲು ಒತ್ತಾಯಿಸುವುದು ಅವರ ಧಾರ್ಮಿಕ ಭಾವನೆಗಳ ಮೇಲೆ ಮಾಡಿದ ಧಕ್ಕೆ ಆಗಿದೆ. ಈ ಘಟನೆಯು ಸಂವಿಧಾನದ ಆರ್ಟಿಕಲ್ 25 ರ ಉಲ್ಲಂಘನೆಯಾಗಿದೆ ಜೊತೆಗೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗಿದೆ. ದುರ್ದೈವದ ವಿಷಯವೆಂದರೆ ರಾಜ್ಯದಲ್ಲಿ ಇಂದು ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇದೆ ಆದರೆ ಹಿಂದುಗಳ ಜನಿವಾರ, ಮಂಗಲಸೂತ್ರ, ಬಳೆ ಇವುಗಳನ್ನು ಪರೀಕ್ಷೆ ಅಥವಾ ಶಾಲೆಯ ಹೆಸರಿನಲ್ಲಿ ನಿಷೇಧಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗುತ್ತಿದೆ. ಇದರಿಂದ ಪುನಃ ರಾಜ್ಯ ಸರ್ಕಾರದ ಪೊಳ್ಳು ಜಾತ್ಯತೀತತೆ ಎದ್ದು ಕಾಣುತ್ತಿದೆ.
ಇಂದು ಜನಿವಾರಕ್ಕೆ ವಿರೋಧಿಸಿದವರು ನಾಳೆ ಜುಟ್ಟು ಬಿಡಬಾರದು ಎಂಬ ಆದೇಶ ಹೊರಡಿಸಬಹುದು ಹಾಗಾಗಿ ಸರಕಾರವು ಇದರ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಹಿಂದುಗಳಿಗೆ ಅವರ ಧಾರ್ಮಿಕ ಆಚರಣೆಗಳನ್ನು ಮಾಡಲು ಸಂವಿಧಾನದ ಅಡಿಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.