ಶಿವಮೊಗ್ಗ: "ದ್ವಿತೀಯ ಪಿಯುಸಿ ಮರು ಪರೀಕ್ಷೆಗೆ ಶುಲ್ಕ ಇರುವುದಿಲ್ಲ" ಎಂದು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ದ್ವಿತೀಯ ಪಿಯುಸಿ ಫೇಲ್ ಆದವರನ್ನು ನಾನು ಅವರು ಫೇಲ್ ಆಗಿಲ್ಲ ಆದ್ರೆ ಪಾಸಾಗಿಲ್ಲ ಎಂದು ಪರಿಗಣಿಸುತ್ತೇನೆ. ದ್ವಿತೀ
ಯ ಪಿಯುಸಿ ಎರಡು ಮತ್ತು ಮೂರನೇ ಪರೀಕ್ಷೆಯು ವಿದ್ಯಾರ್ಥಿಗಳು ಯಾವುದೇ ಶುಲ್ಕ ಕಟ್ಟದೇ ಉಚಿತವಾಗಿ ಪರೀಕ್ಷೆ ಬರೆಯಬಹುದಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತುಂಬ ಅನುಕೂಲಕರವಾಗಲಿದೆ. ಏಪ್ರಿಲ್ 24ರಂದು ಎರಡನೇ ಪರೀಕ್ಷೆ ಹಾಗೂ ಮೂರನೇ ಪರೀಕ್ಷೆ ಮೇ 9ಕ್ಕೆ ನಡೆಸಲಾಗುವುದು" ಎಂದು ಹೇಳಿದರು.
ಮಕ್ಕಳಿಗೆ ಅವಕಾಶ ಕೊಡಬೇಕಿದೆ. ಮಕ್ಕಳಿಗೆ ಪಾಠ ಸರಿಯಾಗಿ ನಡೆಯದೇ ಇರುವುದರಿಂದ ಈ ರೀತಿ ಆಗುತ್ತದೆ. ವಿದ್ಯಾರ್ಥಿಗಳು ಏನೂ ಬೇಕಾದರೂ ಆಗಬಹುದು. ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ವ್ಯವಸ್ಥೆಯಲ್ಲಿ ಕೊರತೆ ಇದೆ. ನಮ್ಮ ಕೊರತೆಯನ್ನು ಮಕ್ಕಳ ಮೇಲೆ ಹಾಕಬಾರದು. ಅವರಿಗೆ ಅವಕಾಶ ಕೊಡಬೇಕು" ಎಂದು ತಿಳಿಸಿದರು.
"ವೆಬ್ ಕಾಸ್ಟಿಂಗ್ನಿಂದಾಗಿ ಶೇಕಡಾವಾರು ಫಲಿತಾಂಶದಲ್ಲಿ ಇಳಿಕೆಯಾಗಿದೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ವೆಬ್ ಕಾಸ್ಟಿಂಗ್ ಅನಿವಾರ್ಯ. ಇವತ್ತು ಕಾಪಿ ಮಾಡಿ ಬರೆದು ಮುಂದಿನ ಪರೀಕ್ಷೆಗಳಲ್ಲಿ ಸಮಸ್ಯೆ ಎದುರಿಸಬಾರದು. ಶೇಕಡಾವಾರು ಫಲಿತಾಂಶದಲ್ಲಿ ಕಡಿಮೆ ಬಂದರೂ ಪರವಾಗಿಲ್ಲ, ಮಕ್ಕಳ ಭವಿಷ್ಯ ಮುಖ್ಯ." ಎಂದರು.