ಬೆಂಗಳೂರು, ಏ, 27; ದಿವ್ಯಾಂಗರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈ ಸಮುದಾಯಕ್ಕೆ ಎಲ್ಲಾ ರೀತಿಯಲ್ಲೂ ಸೇವೆ ಸಲ್ಲಿಸಲು ತಾವು ಸಿದ್ಧ ಎಂದು ಸಂಸತ್ತಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ ಅಧ್ಯಕ್ಷರೂ ಆದ ಸಂಸದ ಪಿ.ಸಿ. ಮೋಹನ್ ಹೇಳಿದ್ದಾರೆ.
ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಮರಾಠಾ ಹಾಸ್ಟೆಲ್ ಮೈದಾನದಲ್ಲಿ 694 ದಿವ್ಯಾಂಗರಿಗೆ ಉಚಿತ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ ಜೋಡಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸತ್ತಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ ವ್ಯಾಪ್ತಿಗೆ ದಿವ್ಯಾಂಗ ಸಮೂಹ ಸಹ ಒಳಪಡುತ್ತದೆ. ಹೀಗಾಗಿ ದಿವ್ಯಾಂಗರಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ ಎಂದರು.
ನಾರಾಯಣ ಸೇವಾ ಸಮಿತಿ ಕರ್ನಾಟಕದಲ್ಲೂ ಉತ್ತಮ ಸೇವೆ ಸಲ್ಲಿಸುತ್ತಿದೆ. ಮೂರನೇ ಬಾರಿಗೆ ಅತಿ ದೊಡ್ಡ ಕೃತಕ ಅಂಗಾಂಗ ಜೋಡಣಾ ಶಿಬಿರ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ. ಈ ಸಂಸ್ಥೆಯವರು ದೇವರಂತೆ ದಿವ್ಯಾಂಗರಿಗೆ ನೆರವಾಗುತ್ತಿದೆ. ಬೇರೆಯವರಿಗಾಗಿ ಕೆಲಸ ಮಾಡುವ ಮೂಲಕ ಉದಾತ್ತ ಕಾರ್ಯದಲ್ಲಿ ನಿರತವಾಗಿದೆ. ಮುಂಬರುವ ದಿನಗಳಲ್ಲಿ ನಾರಾಯಣ್ ಸೇವಾ ಸಂಸ್ಥೆಯ ಕೇಂದ್ರ ಕಚೇರಿ ಇರುವ ಉದಯ್ ಪುರದಲ್ಲಿ ಸಂಸತ್ತಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ ಸಭೆ ಕರೆದು ಈ ಸಮುದಾಯಕ್ಕೆ ನೆರವಾಗುತ್ತೇನೆ ಎಂದರು.
ತನ್ನ ನಾಲ್ಕು ದಶಕಗಳ ಸುದೀರ್ಘ ಸೇವಾ ಇತಿಹಾಸದಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ 4.46 ಲಕ್ಷ ಶಸ್ತ್ರ ಚಿಕಿತ್ಸೆಗಳನ್ನು ಸಂಸ್ಥೆ ನೆರವೇರಿಸಿದೆ. 46 ಸಾವಿರಕ್ಕೂ ಅಧಿಕ ಮಂದಿಗ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ ಗಳನ್ನು ಜೋಡಣೆ ಮಾಡಿದೆ. ಇದು ಹಾಸ್ಯದ ಸಂಗತಿಯಲ್ಲ. ಸಿದ್ಧತೆ, ಬದ್ಧತೆ ಇದ್ದಲ್ಲಿ ಮಾತ್ರ ಇಂತಹ ಮಹಾನ್ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯ. ನಿಮ್ಮ ಎಲ್ಲಾ ರಚನಾತ್ಮಕ ಕಾರ್ಯದಲ್ಲಿ ನಾನೂ ಸಹ ಭಾಗಿಯಾಗುತ್ತೇನೆ ಎಂದು ಹೇಳಿದರು.
ನಾರಾಯಣ್ ಸೇವಾ ಸಂಸ್ಥಾನದ ಅಧ್ಯಕ್ಷ ಸೇವಕ್ ಪ್ರಶಾಂತ್ ಭಯ್ಯಾ ಮಾತನಾಡಿ, ಕರ್ನಾಟಕದಲ್ಲಿ ಐದಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಒಟ್ಟು ಸುಮಾರು ಐದು ಸಾವಿರ ಜನರಿಗೆ ಇದರಿಂದ ಅನುಕೂಲವಾಗಿದೆ. ಕರ್ನಾಟಕದಲ್ಲಿ ಒಬ್ಬೇ ಒಬ್ಬ ವ್ಯಕ್ತಿ ವಿಕಲ ಚೇತನ ವ್ಯಕ್ತಿ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ತಮ್ಮ ಪರಮ ಗುರಿಯಾಗಿದೆ. ಕರ್ನಾಟಕದ ಜನತೆ ಶಾಂತಿ, ಸೌಹಾರ್ದತೆಗೆ ಹೆಸರಾಗಿದ್ದಾರೆ. ಇಲ್ಲಿ ಸೇವೆ ಸಲ್ಲಿಸಲು ನಮಗೆ ಉಜ್ವಲ ಅವಕಾಶ ದೊರೆತಿದೆ ಎಂದು ತಿಳಿಸಿದರು.
ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಶಾಖೆಯ ಮುಖ್ಯಸ್ಥ ವಿನೋದ್ ಜೈನ್. ನಿರ್ದೇಶಕ ಭಗವಾನ್ ಪ್ರಸಾದ್ ಗೌರ್ ನೇತೃತ್ವದಲ್ಲಿ ತಜ್ಞ ವೈದ್ಯರು ಕೃತಕ ಅಂಗಾಂಗಗಳನ್ನು ಜೋಡಿಸಿದರು. ದಿವ್ಯಾಂಗರು ಮತ್ತವರ ಕುಟುಂಬಕ್ಕೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಉಸ್ತುವಾರಿ ಖುಬಿಲಾಲ್ ಮೆನಾರಿಯಾ, ಮುಂಬೈ ಶಾಖೆ ಮುಖ್ಯಸ್ಥ ಲಲಿತ್ ಲೋಹರ್, ಸಾಮಾಜಿಕ ಕಾರ್ಯಕರ್ತ ರಾಕೇಶ್ ವೈಷ್ಣವ್, ಗಾನವಿ ಮತ್ತು ಮಾಧ್ಯಮ ಸಂಯೋಜಕರಾದ ಚಂದ್ರಶೇಖರಯ್ಯ ಮತ್ತಿತರರು ದಿವ್ಯಾಂಗರಿಗೆ ನೆರವಾದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 694 ದಿವ್ಯಾಂಗರು ಶಿಸ್ತುಬದ್ಧವಾಗಿ ತಮ್ಮ ಸರದಿಗಾಗಿ ಕಾದು ಕುಳಿತು ಕೃತಕ ಅಂಗಾಂಗಳನ್ನು ಜೋಡಿಸಿಕೊಂಡರು. ಕೈ ಕಾಲು ಕಳೆದುಕೊಂಡವರು, ಎರಡೂ ಕಾಲುಗಳನ್ನು ಕಳೆದುಕೊಂಡವರು. ಕೈ ಇಲ್ಲದವರು. ಹೀಗೆ ಅಂಗಾಂಗ ನ್ಯೂನತೆ ಉಳ್ಳವರು ಸ್ವಂತ ಶಕ್ತಿಯ ಮೇಲೆ ನಿಂತು, ನಡೆದು ಸಂತಸಪಟ್ಟರು. ಅನ್ಯರನ್ನು ಆಶ್ರಯಿಸಿದ್ದವರು ಸ್ವಾವಲಂಬಿ ಕನಸುಗಳ ರೆಕ್ಕೆ ಕಟ್ಟಿಕೊಂಡು ತಮ್ಮ ಊರುಗಳತ್ತ ತೆರಳಿದರು.