ಭಾರತದಾದ್ಯಂತ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವಿಶೇಷ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿರುವ ಉಬುಂಟು ಒಕ್ಕೂಟ ಇದೀಗ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆಯಲಿರುವ ಮಹಿಳಾ ನಾಯಕಿಯರ ಸಮಾವೇಶ 2025ಕ್ಕೆ 20 ಮಹಿಳಾ ಉದ್ಯಮಿಗಳ ನಿಯೋಗವನ್ನು ಕಳುಹಿಸಿ ಕೊಡಲು ಸಜ್ಜಾಗಿದೆ. ಇದೇ ಏಪ್ರಿಲ್ 8 ಮತ್ತು 9, 2025 ರಂದು ಶೇರ್-ಇ-ಕಾಶ್ಮೀರ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (SKICC) ಕಾರ್ಯಕ್ರಮ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ಮಹಿಳಾ ನಾಯಕತ್ವ, ಆರ್ಥಿಕ ಸಬಲೀಕರಣ ಮತ್ತು ಉದ್ಯಮಶೀಲತೆಯ ಕುರಿತ ಚರ್ಚೆಗಳಿಗೆ ಇದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ಸಂಸ್ಥಾಪಕ ಅಧ್ಯಕ್ಷೆ ಕೆ. ರತ್ನಪ್ರಭಾ ಅವರ ನೇತೃತ್ವದ ನಿಯೋಗದಲ್ಲಿ ಎಸ್. ಮಾಣಿಕ್ ಪಟವರ್ಧನ್ (ಸ್ವಕೃತ ಚಾರಿಟೇಬಲ್ ಟ್ರಸ್ಟ್), ಆಶಾ ಅರೋಂಡೇಕರ್ (ಗೋವಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ), ರಚನಾ ಮಹೇಶ್ (ವುಮೆನ್ ಕ್ಯಾನ್), ಸರ್ವಮಂಗಳ ಪಾಟೀಲ್ (ಉಬುಂಟು ಕನ್ಸಟೋರಿಯಂ), ಚಿತ್ರಾ ಭರತ್ ಕುಮಾರ್ (WECAN) ಮತ್ತು ರಿಜಾ ಫಾತಿಮಾ (MIA-AWE) ಸೇರಿದಂತೆ ಇತರ 13 ಸಾಧನೆಗೈದ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಏಪ್ರಿಲ್ 7, 2025 ರಂದು ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಕೋರ್ಸ್ ರೆಸ್ಟೋರೆಂಟ್ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಅಲ್ಕಾ ಸರೋಗಿ ಮತ್ತು ಅವರ ಕಾದಂಬರಿ ಗಾಂಧಿ ಮತ್ತು ಸರಳಾ ದೇವಿ ಅವರನ್ನು ಒಳಗೊಂಡ ವಿಶೇಷ ಚರ್ಚೆಯೊಂದಿಗೆ ಸಮಾವೇಶವು ಪ್ರಾರಂಭವಾಗುತ್ತದೆ. ನಂತರ "ಶಾಂತಿ ಮತ್ತು ಸಮೃದ್ಧತೆಯೆಡೆಗೆ ಮಹಿಳೆಯರ ಹಾದಿ" ಕುರಿತು ಸಭೆ ಹಾಗೂ ಸಂವಾದಾತ್ಮಕ ಚಟುವಟಿಕೆಗಳು ನಡೆಯಲಿವೆ.
ಏಪ್ರಿಲ್ 9, 2025ರಂದು SKICC ಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರ ಅಧ್ಯಕ್ಷತೆಯಲ್ಲಿ ಜಾಗತಿಕ ಮಟ್ಟದಲ್ಲಿ ಮಹಿಳಾ ನಾಯಕತ್ವ ಕುರಿತಾಗಿ ʼವುಮೆನ್ ರೈಸಿಂಗ್: ಚಾರ್ಟಿಂಗ್ ಫ್ಯೂಚರ್ ಆಫ್ ಗ್ಲೋಬಲ್ ಲೀಡರ್ಶಿಪ್" ಎಂಬ ಪ್ರಮುಖ ವಿಷಯವನ್ನು ಆಧರಿಸಿ ಥೀಮ್ ಮತ್ತು ಇತರೆ ವಿಷಯಗಳನ್ನು ಚರ್ಚಿಸಲಾಗುತ್ತದೆ. ತದನಂತರ ಮಹಿಳೆಯರ ಮುಂದಿರುವ ಎಲ್ಲಾ ಸವಾಲುಗಳನ್ನು ಎದುರಿಸುವ ದಿಸೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ ʼಬ್ರೇಕಿಂಗ್ ಬ್ಯಾರಿಯರ್ಸ್, ಬಿಲ್ಡಿಂಗ್ ಫ್ಯೂಚರ್ಸ್: ವುಮೆನ್ ಲೀಡಿಂಗ್ ದಿ ವೇ ಇನ್ ಸ್ಟೆಮ್ʼ ಎಂಬ ವಿಷಯಗಳ ಕುರಿತು ಅಧಿವೇಶನ ನಡೆಯಲಿವೆ. ಅಂತಿಮ ಅಧಿವೇಶನದಲ್ಲಿ ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ಪರಿವರ್ತನೆಗೆ ಮಹಿಳೆಯರ ಕೊಡುಗೆಗಳ ಕುರಿತಾಗಿ "ಕ್ರಾಂತಿಕಾರಿ ಬದಲಾವಣೆ: ಸುಸ್ಥಿರತೆ ಮತ್ತು ಸಾಮಾಜಿಕ ಪ್ರಭಾವದ ಚುಕ್ಕಾಣಿಯಲ್ಲಿ ಮಹಿಳೆಯರ ಪಾತ್ರ" ಎಂಬುದರ ಕುರಿತಾಗಿ ಚರ್ಚೆಗಳು ನಡೆಯಲಿವೆ ಎಂದು ಹೇಳಲಾಗಿದೆ.
ಉಬುಂಟು ಬಗ್ಗೆ ಮಾಹಿತಿ:
ಉಬುಂಟು ಒಕ್ಕೂಟವು ಮಹಿಳಾ ಸ್ನೇಹಿ ನೀತಿಗಳು, ಜಾಗತಿಕ ವ್ಯಾಪಾರ ಅವಕಾಶಗಳು ಮತ್ತು ಆರ್ಥಿಕ ಬೆಂಬ ಒದಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಒಟ್ಟಾರೆ 11 ರಾಜ್ಯಗಳಲ್ಲಿ 30,000 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳನ್ನು ಒಳಗೊಂಡ 56 ಸಂಘಟನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದೀಗ ಮಹಿಳಾ ನಾಯಕಿಯರ ಸಮಾವೇಶ 2025ರಲ್ಲಿ ಭಾಗವಹಿಸುತ್ತಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಪ್ರತಿನಿಧಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಸಜ್ಜಾಗಿದೆ.