ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಪಾಕಿಸ್ತಾನದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಂಡರು. "ಪಾಕಿಸ್ತಾನದ ವಿರುದ್ದ ಯುದ್ಧಕ್ಕೆ ಭಾರತದೊಳಗೇ ವಿರೋಧವಿದೆ" ಎಂದು ಪಾಕ್ ನ ಸುದ್ದಿವಾಹಿನಿಗಳಲ್ಲಿ ಸಿದ್ದರಾಮಯ್ಯನವರ ಫೋಟೋ ಪ್ರಸಾರ ಮಾಡಲಾಗಿದೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಿದ್ದರಾಮಯ್ಯ "ಪಾಕಿಸ್ತಾನ ರತ್ನ" ಎಂದು ವ್ಯಂಗ್ಯವಾಡಿದ್ದಾರೆ. ಪಾಕ್ ಸುದ್ದಿ ವಾಹಿನಿಗಳಲ್ಲಿ ಸಿದ್ದರಾಮಯ್ಯನವರನ್ನು ವಜೀರ್ ಇ ಅಲಾ ಎಂದು ಸಂಬೋಧಿಸಲಾಗಿತ್ತು.
ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ಈ ಹೇಳಿಕೆ ಪಾಕಿಸ್ತಾನ ಪ್ರಮುಖ ಸುದ್ದಿ ವಾಹಿನಿ ಜಿಯೋ ನ್ಯೂಸ್ ಸೇರಿದಂತೆ ಅಲ್ಲಿನ ಇತರೆ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಈ ಕುರಿತ ವಿಡಿಯೋಗಳು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಭಾರತದೊಳದೇ ವಿರೋಧವಿದೆ ಎಂದು ಅಲ್ಲಿ ಹೇಳಲಾಗುತ್ತಿತ್ತು.
ಬಿಜೆಪಿ ಟೀಕಾಸ್ತ್ರ ಪ್ರಯೋಗ: ಸಿದ್ದರಾಮಯ್ಯನವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, "ಪಾಕಿಸ್ತಾನ ರತ್ನ" ಸಿಎಂ @siddaramaiahನವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ.ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ,ವಿಜಯೇಂದ್ರ ಪ್ರತಿಕ್ರಿಯಿಸಿ, ಪಾಕಿಸ್ತಾನದ ಕುರಿತ ನಿಮ್ಮ ಸಹಾನುಭೂತಿ ಹೇಳಿಕೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧದ ನಿಮ್ಮ ದ್ವೇಷದ ಮಾತುಗಳು ಜನರ ಮನದಲ್ಲಿ ನೀವು ರಾಷ್ಟ್ರ ನಿಷ್ಠರೋ? ಪಾಕಿ ಮನಸ್ಥಿತಿಯ ವಕ್ತಾರರೋ ಎಂಬ ಅನುಮಾನ ಮೂಡಿಸುತ್ತಿದೆ. ಸದ್ಯ ಪಾಕ್ ನಲ್ಲಿ ನಿಮ್ಮ ಹೇಳಿಕೆ ಆಧರಿಸಿ ಅಲ್ಲಿನ ಸುದ್ದಿವಾಹಿನಿಗಳು ನಿಮ್ಮನ್ನು ವೈಭವೀಕರಿಸುತ್ತಿರುವ ಪರಿ ನೋಡಿದರೆ ನಿಮ್ಮ ಅಜೆಂಡಾ ಏನು ಅನ್ನುವುದು ಜನರಿಗೆ ಅರ್ಥವಾಗುತ್ತಿದೆ ಎಂದಿದ್ದಾರೆ.
ನಾವು ಪಾಕಿಸ್ತಾನದ ಜೊತೆಗಿನ ಯದ್ಧದ ಪರವಾಗಿಲ್ಲ ಎಂದು ಸಿಎಂ ಹೇಳಿರುವುದಾಗಿ ವರದಿಯಾಗಿತ್ತು. ಈ ವಿಚಾರ ವ್ಯಾಪಕ ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ, ಸಿಎಂ ಸ್ಪಷ್ಟನೆ ನೀಡಿ, ನಾವು ಯುದ್ಧ ಮಾಡಲೇಬಾರದು ಎಂದು ನಾನು ಹೇಳಿಲ್ಲ ಎಂದಿದ್ದರು.
ನಾನು ಪಾಕಿಸ್ತಾನದ ಜೊತೆಗೆ ಯುದ್ಧ ಮಾಡಲೇಬಾರದೆಂದು ಎಲ್ಲೂ ಹೇಳಿಲ್ಲ. ಯುದ್ಧ ಪರಿಹಾರವಲ್ಲ ಎಂದಿದ್ದೆ. ಪ್ರವಾಸಿಗರಿಗೆ ಭದ್ರತೆ ನೀಡಬೇಕಿತ್ತು. ಇದು ಯಾರ ಜವಾಬ್ದಾರಿ?. ಇದು ವೈಫಲ್ಯ ಎಂದು ಹೇಳಿದ್ದೆ. ಗುಪ್ತಚರ ವೈಫಲ್ಯವಾಗಿದೆ. ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಭದ್ರತೆ ನೀಡಿಲ್ಲ. ಇನ್ನು ಯದ್ಧದ ವಿಚಾರವಾಗಿ ಮಾತನಾಡುವುದಾದರೆ, ಒಂದು ವೇಳೆ ಅನಿವಾರ್ಯವಾದರೆ, ನಾವು ಯುದ್ಧ ಮಾಡಲೇಬೇಕಾಗುತ್ತದೆ ಎಂದರು.
ಇದಕ್ಕೂ ಮುನ್ನ ಸಿಎಂ, ಕಠಿಣ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನಾವು ಯುದ್ಧದ ಪರವಾಗಿಲ್ಲ. ಶಾಂತಿ ಬೇಕು. ಜನರಿಗೆ ಭದ್ರತೆಯ ಭಾವ ಮೂಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿರುವುದಾಗಿ ವರದಿಯಾಗಿತ್ತು.