ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಘೋರ ಘಟನೆಯಿಂದಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ 'ದಿ ಬಾಲಿವುಡ್ ಬಿಗ್ ಒನ್ ಯುಕೆ ಟೂರ್'ನ್ನು ಮುಂದೂಡಿರುವುದಾಗಿ ಘೋಷಿಸಿದ್ದಾರೆ. ಮೂಲತಃ ಮೇ 4 ಮತ್ತು 5ರಂದು ಮ್ಯಾಂಚೆಸ್ಟರ್ ಮತ್ತು ಲಂಡನ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೊನೆಯುಸಿರೆಳೆದವರಿಗೆ ಗೌರವಾರ್ಥವಾಗಿ ಮುಂದೂಡಲಾಗಿದೆ. ಇದು ವಿಶ್ವದ ಹಲವೆಡೆ ನಡೆಯುವ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ.
ಸಲ್ಮಾನ್ ಖಾನ್ ಪೋಸ್ಟ್: ಇನ್‌ಸ್ಟಾಗ್ರಾಮ್‌ನಲ್ಲಿಂದು ಸಲ್ಮಾನ್ ಖಾನ್ ಟೂರ್ (ಶೋ) ಪೋಸ್ಟರ್ ಶೇರ್ ಮಾಡಿದ್ದು, ಇದರಲ್ಲಿ ಮಾಧುರಿ ದೀಕ್ಷಿತ್ ನೆನೆ, ವರುಣ್ ಧವನ್, ಟೈಗರ್ ಶ್ರಾಫ್, ದಿಶಾ ಪಟಾನಿ, ಕೃತಿ ಸನೋನ್, ಸಾರಾ ಅಲಿ ಖಾನ್, ಸುನಿಲ್ ಗ್ರೋವರ್ ಮತ್ತು ಮನೀಶ್ ಪೌಲ್ ಅವರ ಫೋಟೋಗಳನ್ನು ಕಾಣಬಹುದು. ಪೋಸ್ಟರ್ನಲ್ಲಿ, 'ದಿ ಬಾಲಿವುಡ್ ಬಿಗ್ ಒನ್ ಯುಕೆ ಟೂರ್' ಶೀರ್ಷಿಕೆ ಮೇಲೆ "ಮುಂದೂಡಲಾಗಿದೆ" (Postponed) ಎಂಬ ಲೇಬಲ್ ಅನ್ನು ಪ್ರದರ್ಶಿಸಲಾಗಿದೆ. ಅಲ್ಲಿಗೆ ಈ ಪ್ರವಾಸ ಮುಂದೂಡಲ್ಪಟ್ಟಿದೆ.
ನಟ ಹೇಳಿದ್ದಿಷ್ಟು: ಪೋಸ್ಟರ್ ಜೊತೆಗೆ ಕ್ಯಾಪ್ಷನ್ನಲ್ಲಿ, "ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ದುರಂತ ಘಟನೆಗಳ ಹಿನ್ನೆಲೆಯಲ್ಲಿ, ತೀವ್ರ ದುಃಖದಿಂದ, ಮೇ 4 ಮತ್ತು 5ರಂದು ಮ್ಯಾಂಚೆಸ್ಟರ್ ಮತ್ತು ಲಂಡನ್‌ನಲ್ಲಿ ನಡೆಯಬೇಕಿದ್ದ ಬಾಲಿವುಡ್ ಬಿಗ್ ಒನ್ ಶೋಗಳನ್ನು ಮುಂದೂಡುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ನಮ್ಮ ಅಭಿಮಾನಿಗಳು ಈ ಪ್ರದರ್ಶನಗಳಿಗಾಗಿ ಎಷ್ಟು ಕಾತರದಿಂದ ಕಾಯುತ್ತಿದ್ದರು ಎಂಬುದರ ಅರಿವಿದಿದ್ದರೂ, ಈ ದುಃಖದ ಸಮಯದಲ್ಲಿ 'ಪಾಸ್' (pause) ಮಾಡೋದು ಸರಿ ಎಂದು ನಾವು ಭಾವಿಸುತ್ತೇವೆ. ಇದರಿಂದ ನಿಮಗಾಗಬಹುದಾದ ನಿರಾಶೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ತಿಳುವಳಿಕೆ ಮತ್ತು ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ. ಕಾರ್ಯಕ್ರಮಗಳ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು" ಎಂದು ಸಲ್ಮಾನ್ ಬರೆದುಕೊಂಡಿದ್ದಾರೆ.