ದೆಹಲಿ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸುವ ಮೂಲಕ ಆರ್‌ಸಿಬಿ ತನ್ನ ಸೇಡು ತಿರಿಸಿಕೊಳ್ಳುವುದರ ಜೊತೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲ ಪರ್ಪಲ್ ಮತ್ತು ಆರೇಂಜ್ ಕ್ಯಾಪ್ಗಳನ್ನು ಸಹ ಪಡೆದಿದೆ.
ಮ್ಯಾಚ್ ನಮ್ದೆ: ಭಾನುವಾರ ನಡೆದ ಐಪಿಎಲ್ 2025 ರ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಭುವನೇಶ್ವರ್ ಕುಮಾರ್ (ಮೂರು ವಿಕೆಟ್‌ಗಳು), ಜೋಶ್ ಹ್ಯಾಜಲ್‌ವುಡ್ (ಎರಡು ವಿಕೆಟ್‌ಗಳು) ಅವರ ಅತ್ಯುತ್ತಮ ಬೌಲಿಂಗ್, ನಂತರ ಕೃನಾಲ್ ಪಾಂಡ್ಯ (ಔಟಾಗದೆ 73) ಮತ್ತು ವಿರಾಟ್ ಕೊಹ್ಲಿ (51) ಅವರ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತು.
163 ರನ್‌ಗಳ ಗುರಿಯನ್ನು ಬೆನ್ನಟ್ಟುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಆಘಾತಕ್ಕೆ ಒಳಗಾಗಿತ್ತು. ಜಾಕೋಬ್ ಬೆಥೆಲ್ (12 ರನ್) ಮತ್ತು ದೇವದತ್ ಪಡಿಕ್ಕಲ್ (ಡಕೌಟ್) ಅವರನ್ನು ಅಕ್ಷರ್ ಪಟೇಲ್ ಔಟ್ ಮಾಡಿದಾಗ ಆರ್‌ಸಿಬಿ ಸಂಕಷ್ಟದಲ್ಲಿ ಸಿಲುಕಿತು. ನಂತರ ಕರುಣ್ ನಾಯರ್ ಎಸೆತದಲ್ಲಿ ನಾಯಕ ರಜತ್ ಪಾಟಿದಾರ್ (6 ರನ್) ಔಟ್ ಆಗುವುದರೊಂದಿಗೆ ಆರ್‌ಸಿಬಿ ಸಂಕಷ್ಟ ಮತ್ತಷ್ಟು ಹೆಚ್ಚಾಯಿತು. ಈ ವೇಳೆ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಇಳಿದರು. ಬಳಿಕ ಕೃನಾಲ್ ಮತ್ತು ವಿರಾಟ್ ಕೊಹ್ಲಿ 126 ರನ್‌ಗಳ ಜೊತೆಯಾಟ ತಂಡವನ್ನು ಗೆಲುವಿನ ದಡ ಸೇರಿಸಿತು.
ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿದರು. ಇನ್ನು ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 73 ರನ್ ಗಳಿಸಿದರು. ಟೀಮ್ ಡೇವಿಡ್ ಐದು ಎಸೆತಗಳಲ್ಲಿ (19) ರನ್ ಗಳಿಸಿ ಮಿಂಚಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸುವ ಮೂಲಕ ಆರು ವಿಕೆಟ್‌ಗಳ ಜಯ ಸಾಧಿಸಿತು.
ಪರ್ಪಲ್, ಆರೆಂಜ್ ನಮ್ದೆ: ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅರ್ಧಶತಕ ಗಳಿಸಿದ ನಂತರ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಆರೆಂಜ್ ಕ್ಯಾಪ್ ಪಡೆದಿದ್ದರು. ಆದ್ರೆ ಭಾನುವಾರ ಸಂಜೆ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಅತೀ ಹೆಚ್ಚು ವಿಕೆಟ್ ಪಡೆದ ಜೋಶ್ ಹ್ಯಾಜಲ್‌ವುಡ್ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿದರು. ಈ ಬಾರಿಯ ಐಪಿಎಲ್ನಲ್ಲಿ ಕೊಹ್ಲಿ ಅತೀ ಹೆಚ್ಚು ರನ್ ಗಳಿಸಿ ಮುನ್ನುಗ್ಗುತ್ತಿದ್ದು, ಅವರು ಆರೆಂಜ್ ಕ್ಯಾಪ್ ವಶಪಡಿಸಿಕೊಂಡಿದ್ದಾರೆ. ಪರ್ಪಲ್ ಕ್ಯಾಪ್ ಬಗ್ಗೆ ಹೇಳುವುದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜೋಶ್ ಹ್ಯಾಜಲ್‌ವುಡ್ ಗುಜರಾತ್ ಟೈಟನ್ಸ್‌ನ ಪ್ರಸಿದ್ಧ್ ಕೃಷ್ಣ ಅವರನ್ನು ಹಿಂದಿಕ್ಕಿದ್ದಾರೆ. ಹ್ಯಾಜಲ್‌ವುಡ್ 18 ವಿಕೆಟ್ ಪಡದರೆ ಮತ್ತು ಕೃಷ್ಣ 16 ವಿಕೆಟ್ ಕಬಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ನ ನೂರ್ ಅಹ್ಮದ್ 14 ವಿಕೆಟ್ ಮತ್ತು ಮುಂಬೈ ಇಂಡಿಯನ್ಸ್ನ ಟ್ರೆಂಟ್ ಬೌಲ್ಟ್ 13 ವಿಕೆಟ್ ಪಡೆದಿದ್ದಾರೆ. ಕೃನಾಲ್ ಪಾಂಡ್ಯ ಕೂಡ 13 ವಿಕೆಟ್‌ಗಳನ್ನು ಪಡೆದಿದ್ದು, ರೇಸ್ನಲ್ಲಿದ್ದಾರೆ.
ಪಾಯಿಂಟ್ ಟೇಬಲ್ ನಮ್ದೆ: ಈ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಿಂದ ಹೊರಗೆ ಸತತ ಆರನೇ ಪಂದ್ಯವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ನಂತರ ಬೆಂಗಳೂರು 10 ಪಂದ್ಯಗಳಲ್ಲಿ 7 ಗೆಲುವು ಮತ್ತು 3 ಸೋಲುಗಳೊಂದಿಗೆ 14 ಅಂಕಗಳನ್ನು ಹೊಂದಿದೆ. ಆರ್‌ಸಿಬಿ ನಂತರ ಗುಜರಾತ್ ಟೈಟಾನ್ಸ್ ಲಿಸ್ಟ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ತಂಡ 8 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಎರಡು ಸೋಲುಗಳೊಂದಿಗೆ 12 ಅಂಕಗಳನ್ನು ಹೊಂದಿದೆ. ಆದರೆ ಮುಂಬೈ ಇಂಡಿಯನ್ಸ್ ಈಗ ಮೂರನೇ ಸ್ಥಾನಕ್ಕೆ ಬಂದಿದೆ. ಮುಂಬೈ ತಂಡ 10 ಪಂದ್ಯಗಳಲ್ಲಿ ಆರು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ 12 ಅಂಕಗಳನ್ನು ಹೊಂದಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಒಂಬತ್ತು ಪಂದ್ಯಗಳಲ್ಲಿ ಆರು ಗೆಲುವು ಮತ್ತು ಮೂರು ಸೋಲುಗಳೊಂದಿಗೆ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.