ಜಾತಿ ಗಣತಿ ವರದಿ ಪರ ದಿನೇಶ್ ಗುಂಡೂರಾವ್ ಬ್ಯಾಟಿಂಗ್: ಆರೋಗ್ಯ ಸಚಿವರು ಹೇಳುವುದೇನು?

varthajala
0

 


ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ಜಾತಿ ಗಣತಿ ಸಮೀಕ್ಷೆ ವರದಿ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಧ್ವನಿಯೆತ್ತಿದ್ದಾರೆ. ವರದಿಯನ್ನು ಓದದೆ, ಅವೈಜ್ಞಾನಿಕ ಎನ್ನುವುದು ಆತುರದ ನಿರ್ಧಾರ ಎಂದು ತಿಳಿಸಿದ್ದಾರೆ.

ಜಾತಿ ಗಣತಿ ವರದಿಯಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆಯನ್ನು 15 ಲಕ್ಷ ಎಂದು ನಮೂದಿಸಿರುವ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಂಘದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರೂ ಆಗಿರುವ ಅಶೋಕ್ ಹಾರ್ನಹಳ್ಳಿ ಅವರು ಬ್ರಾಹ್ಮಣರ ಜನಸಂಖ್ಯೆ ರಾಜ್ಯದಲ್ಲಿ ಸುಮಾರು 45 ಲಕ್ಷ ಇದೆ. ಆದರೆ, 15 ಲಕ್ಷ ಎಂದು ಹೇಳಿರುವ ಜಾತಿ ಗಣತಿ ವರದಿ ಒಪ್ಪಲು ಸಾಧ್ಯವಿಲ್ಲ ಎಂದಿರುವ ಬೆನ್ನಲ್ಲೇ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಸಚಿವ ದಿನೇಶ್ ಗುಂಡೂರಾವ್ ವರದಿ ಪರ ಮಾತನಾಡಿರುವುದು ಕುತೂಹಲ ಮೂಡಿಸಿದೆ.

ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ: ''ಜಾತಿ ಗಣತಿ ವರದಿಯಲ್ಲಿ ಆಯೋಗ ಶಿಫಾರಸು ಮಾಡಿರುವ ಕೆಲ ಅಂಶಗಳನ್ನು ನಾನು ಗಮನಿಸಿದ್ದೇನೆ. ಜಾತಿ ಗಣತಿ ವರದಿಯಿಂದ ಯಾವುದೇ ಸಮುದಾಯ ಅಸಮಾಧಾನಗೊಳ್ಳುವ ಅಗತ್ಯವಿಲ್ಲ. ವರದಿಯಲ್ಲಿ ಯಾವುದೇ ಸಮುದಾಯವನ್ನು ಕಡೆಗಣಿಸಲಾಗಿಲ್ಲ ಎಂಬುದು ನನ್ನ ಭಾವನೆಯಾಗಿದೆ'' ಎಂದು ವರದಿಯನ್ನು ಸಚಿವ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.

''ಜಾತಿ ಗಣತಿ ವರದಿಯನ್ನು ಓದದೆ, ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನವನ್ನು ಕೆಲವರು ‌ಮಾಡುತ್ತಿದ್ದಾರೆ‌. ವರದಿಯ ಕುರಿತು ಈಗಲೇ ಯಾರೂ ಅಂತಿಮ ತೀರ್ಮಾನಕ್ಕೆ ಬರುವುದು ಬೇಡ. ಅನಗತ್ಯ ಗೊಂದಲಗಳಿಗೆ ಆಸ್ಪದ ಕೊಡುವುದು ಬೇಡ. ಮೊದಲು ವರದಿಯನ್ನು ಓದೋಣ. ನಂತರ ಚರ್ಚೆಗೆ ನಮ್ಮ ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳೋಣ. ವರದಿಯನ್ನು ಸಂಪೂರ್ಣವಾಗಿ ಓದದೆ, ಅವೈಜ್ಞಾನಿಕ ಎನ್ನುವುದು ಆತುರದ ನಿರ್ಧಾರವಾಗುತ್ತದೆ'' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಾತಿ ಗಣತಿ ವರದಿ ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.

Post a Comment

0Comments

Post a Comment (0)