* ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ
* 22ನೇ ವರ್ಷದ ರಾಮೋತ್ಸವ ಸಂಪನ್ನ
* ನರ್ತನ ಸೇವೆಯಲ್ಲಿ ರಂಜಿಸಿದ ಮಯೂರಿ ನಾಟ್ಯಶಾಲೆಯ ಕಲಾವಿದರು
ಬೆಂಗಳೂರು: ಸಂಗೀತ, ನೃತ್ಯ, ವಾದ್ಯ ಮತ್ತು ವೇದಗಳಿಂದ ಮಾಡಿದ ಆರಾಧನೆ ಭಗವಂತನಿಗೆ ಬಹು ಪ್ರಿಯವಾಗುತ್ತದೆ ಎಂದು
ಉಡುಪಿ ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ನುಡಿದರು.
ಗಿರಿನಗರದಲ್ಲಿರುವ ಉಡುಪಿ ಭಂಡಾರ ಕೇರಿ ಮಠದಲ್ಲಿ ರಾಮ ನವಮಿ ಸಂಭ್ರಮದ 22ನೇ ವರ್ಷದ ಉತ್ಸವದ ಸಾನ್ನಿಧ್ಯ ವಹಿಸಿ ಅವರು ಅಮೃತೋಪದೇಶ ನೀಡಿದರು. ಕಲಾ ಚಟುವಟಿಕೆ ರಹಿತವಾಗಿ ರಾಮೋತ್ಸವ ಮಾಡಿದರೆ ಅದು ಅರ್ಥಪೂರ್ಣ ಆಗಲಾರದು. ದೇವರು ಸಂಗೀತ ಮತ್ತು ನೃತ್ಯಗಳಿಗೆ ಬಹುಬೇಗ ಒಲಿಯುತ್ತಾನೆ ಎಂದು ರಾಮಾಯಣವೇ ಹೇಳಿದೆ ಎಂದರು. ವಾಲ್ಮೀಕಿ ಮಹರ್ಷಿಗಳು ಬಾಲಕರಾದ ಕಶ- ಲವರಿಗೆ ತಮ್ಮ ಆಶ್ರಮದಲ್ಲಿ ತಾವೇ ರಚನೆ ಮಾಡಿದ ರಾಮಾಯಣ ಸಂಪೂರ್ಣ ಕಥನವನ್ನು ಗೀತ ರೂಪಕದಲ್ಲಿ ಕಲಿಸಿ ಸಮಗ್ರ ಶಿಕ್ಷಣ ನೀಡಿರುತ್ತಾರೆ. ಸುಶ್ರಾವ್ಯವಾಗಿ ಹಾಡುತ್ತಿದ್ದ ಮಕ್ಕಳನ್ನು ಶ್ರೀರಾಮ ರಾಜಸಭೆಗೆ ಕರೆಸಿ ಅಲ್ಲಿ ಕಲಾ ಪ್ರದರ್ಶನಕ್ಕೆ ವೇದಿಕೆ ನೀಡುತ್ತಾನೆ. ದೇಶದ ಜನರು ಗಾಯನದ ಮೂಲಕ ಮಹಾಕಾವ್ಯಗಳನ್ನು ಕೇಳಿದರೆ ಅದು ಬೀರುವ ಪ್ರಭಾವ ದೊಡ್ಡದು ಎಂದು ರಾಮನೇ ತಿಳಿಸಿಕೊಟ್ಟಿದ್ದಾನೆ. ಈ ಮೂಲಕ ವಾಲ್ಮೀಕಿ ಋಷಿಗಳು ದೇವರ ಸೇವೆ ಮಾಡಿ ಧನ್ಯತೆ ಗಳಿಸಿದ್ದಾರೆ. ಇವೆಲ್ಲವೂ ನಮಗೆ ಮಾದರಿ ಆಗಬೇಕು. ಈ ದಿಸೆಯಲ್ಲಿ ಖ್ಯಾತ ಗಾಯಕರಾದ ಅಕ್ಷಯ್ ಮತ್ತು ಅಭಿಷೇಕ್ ಸಂಗಡಿಗರು ಗಾಯನದಿಂದ, ಮಯೂರಿ ನಾಟ್ಯಶಾಲೆಯ ವಿದುಷಿ ಪ್ರಜ್ಞಾ ಹರಿದಾಸ ಭಟ್ ಶಿಷ್ಯರು ನೃತ್ಯೋತ್ಸವ ಪ್ರಸ್ತುತಿಯಿಂದ ನಮ್ಮ ಮಠದ ರಾಮೋತ್ಸವದಲ್ಲಿ ಅನನ್ಯ ಸೇವೆ ಮಾಡಿದ್ದಾರೆ. ಇಲ್ಲಿ ಶ್ರೀ ವಿದ್ಯೇಶ ವಿಠಲಾಂಕಿತವಾದ ನಮ್ಮ ಕೃತಿಗಳನ್ನೂ ಬಳಸಿಕೊಂಡು ಕಲಾ ರಸಿಕರಿಗೆ ರಂಜನೆ ಮೂಲಕ ಅಧ್ಯಾತ್ಮ ಜ್ಞಾನವನ್ನು ಪ್ರಸಾರ ಮಾಡಿರುವುದು ಶ್ಲಾಘನೀಯ ಎಂದರು.
10 ಯುವ ಕಲಾವಿದರು ನರ್ತನ ಮಾಡಿ, ಇಲ್ಲಿ ಯಕ್ಷ ರೂಪಗಳನ್ನೂ ತಂದು, ಆಚಾರ್ಯ ಮಧ್ವರ ಮಹೋನ್ನತ ಸಾಧನೆಗಳನ್ನೂ ಅಭಿನಯದ ಮೂಲಕ ಪರಿಚಯಿಸುವ ನಿಟ್ಟಿನಲ್ಲಿ ಪ್ರೌಢ ನಿರ್ದೇಶನವನ್ನು ನೀಡಿದ ವಿದುಷಿ ಪ್ರಜ್ಞಾ ಅವರ ಶ್ರಮ ಸಾರ್ಥಕತೆ ಪಡೆದಿದೆ. ಈ ಕಲಾವಿದರು ಇನ್ನಷ್ಟು ಗುರುಸೇವೆ, ಧರ್ಮದ ಸೇವೆ ಮಾಡಿ ಉನ್ನತಿ ಸಾಧಿಸಲಿ ಎಂದು ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹಾರೈಸಿದರು.
ಸಂಸ್ಥಾನ ಪೂಜೆ:
ರಾಮನವಮಿ ದಿನ ಶ್ರೀಮಠದಲ್ಲಿ ಸಂಸ್ಥಾನ ಪ್ರತಿಮಾ ಶ್ರೀ ಕೋದಂಡರಾಮ ದೇವರಿಗೆ ಪಂಚಾಮೃತ ಅಭಿಷೇಕ, ನಂತರ ಸಂಸ್ಥಾನ ಪೂಜೆ, ಸಂಜೆ 6 ರಂಗ ಪೂಜೆ ನೆರವೇರಿತು. ಸಂಜೆ ಕೋದಂಡರಾಮ ದೇವರ ರಥೋತ್ಸವ ಗಿರಿನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಶಮಿ ದಿನ ಬೆಳಗಿನ ಅವಧಿಯಲ್ಲಿ ರಾಮ ತಾರಕ ಹೋಮ ಮತ್ತು ಸಂಜೆ ಶ್ರೀಮದ್ ರಾಮಾಯಣ ಪ್ರವಚನದ ಮಂಗಳ ಮಹೋತ್ಸವ ಸಂಪನ್ನಗೊಂಡಿತು. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಭಕ್ತರಿಗೆ ಫಲ, ಮಂತ್ರಾಕ್ಷತೆ ಅನುಗ್ರಹಿಸಿ 22ನೇ ವರ್ಷದ ರಾಮೋತ್ಸವಕ್ಕೆ ಮಂಗಳ ಹಾಡಿದರು.