ನವದೆಹಲಿ: ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ಐತಿಹಾಸಿಕ ಕ್ಷಣ ಇಂದು ಬಂದೊದಗಿದೆ. ಹೌದು. ಯುನೆಸ್ಕೋದ ವಿಶ್ವ ನೋಂದಣಿಯ ಸ್ಮರಣಿಕೆಯಲ್ಲಿ ಭಗವದ್ಗೀತೆ ಮತ್ತು ಭರತ ಮುನಿಯ ನಾಟ್ಯಶಾಸ್ತ್ರವನ್ನು ಸೇರ್ಪಡೆಗೊಳಿಸಲಾಗಿದೆ.
ಈ ಮಾಹಿತಿಯನ್ನು ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ.
ಭರತ ಮುನಿ ಭಾರತದ ಖ್ಯಾತ ನಾಟ್ಯಶಾಸ್ತ್ರಜ್ಞ. ಇವರನ್ನು ಭಾರತದ ರಂಗಭೂಮಿಯ ಪಿತಾಮಹ ಎನ್ನಬಹುದು. ಇವರು ಬರೆದ ನಾಟ್ಯಶಾಸ್ತ್ರ ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ. ನಾಟ್ಯಶಾಸ್ತ್ರ, ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ, ಇಡೀ ನಾಟಕ ಕಲೆಯ ಕುರಿತು ಒಂದು ಸಂಕ್ಷಿಪ್ತ ವಿಶ್ವಕೋಶವಾಗಿದೆ.
ಇಂತಹ ಮಹತ್ವದ ಗ್ರಂಥವನ್ನು ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ʼನಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದು ಅತ್ಯುತ್ತಮ ಮೌಲ್ಯದ ಸಾಕ್ಷ್ಯಚಿತ್ರ ಪರಂಪರೆಯನ್ನು ಸಂರಕ್ಷಿಸುವ ಜಾಗತಿಕ ಉಪ್ರಕಮವೂ ಇದಾಗಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಈ ಸೇರ್ಪಡೆ ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆಯಾಗಿದೆ. ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿವೆ. ಅವರ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.