ಬರೇಲಿ : ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ತಮಿಳು ನಟ ಮತ್ತು ರಾಜಕಾರಣಿ ವಿಜಯ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಬುಧವಾರದಂದು ಮಾಧ್ಯಮದ ಜೊತೆ ಮಾತನಾಡಿದ ಬರೇಲ್ವಿ, ತಮ್ಮ ಸಿನಿಮಾಗಳಲ್ಲಿ ಮುಸ್ಲಿಮರನ್ನು ನಕಾರಾತ್ಮಕವಾಗಿ ಚಿತ್ರಿಸಿರುವುದಾಗಿ ಮತ್ತು ಜೂಜಾಟ, ಮದ್ಯ ಸೇವನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ತಮ್ಮ ಇಫ್ತಾರ್ ಕೂಟಕ್ಕೆ ಆಹ್ವಾನಿಸಿರುವುದಾಗಿ ಆರೋಪಿಸಿ, ವಿಜಯ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರು ವಿಜಯ್ ಜೊತೆ ನಿಲ್ಲಬಾರದು: ವಿಜಯ್ ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಜೊತೆಗೆ, ಮುಸ್ಲಿಮರೊಂದಿಗೆ ಸೌಹಾರ್ದ ಸಂಬಂಧವನ್ನೂ ಕಾಪಾಡಿಕೊಂಡಿದ್ದಾರೆ. ಅದಾಗ್ಯೂ, ಅವರು ತಮ್ಮ ಸಿನಿಮಾಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದನೆಯನ್ನು ಹರಡುವವರಂತೆ ನಕಾರಾತ್ಮಕ ರೀತಿಯಲ್ಲಿ ತೋರಿಸಿದ್ದಾರೆ. ಜೂಜಾಟದಲ್ಲಿ ತೊಡಗುವವರು ಮತ್ತು ಮದ್ಯ ಸೇವನೆ ಮಾಡುವವರನ್ನು ತಮ್ಮ ಇಫ್ತಾರ್ ಕೂಟಕ್ಕೆ ಆಹ್ವಾನಿಸಲಾಗಿತ್ತು. ಇದೆಲ್ಲದರಿಂದಾಗಿ, ತಮಿಳುನಾಡಿನ ಸುನ್ನಿ ಮುಸ್ಲಿಮರು ಅವರ ಮೇಲೆ ಕೋಪಗೊಂಡಿದ್ದಾರೆ. ಅವರು ಫತ್ವಾ ಕೇಳಿದರು. ಹಾಗಾಗಿ, ನನ್ನ ಉತ್ತರದಲ್ಲಿ, ಮುಸ್ಲಿಮರು ವಿಜಯ್ ಜೊತೆ ನಿಲ್ಲಬಾರದು ಎಂದು ಉಲ್ಲೇಖಿಸಿ ನಾನು ಫತ್ವಾ ಹೊರಡಿಸಿದ್ದೇನೆ" ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ತಿಳಿಸಿದರು.
ಇತ್ತೀಚೆಗೆ, ಟಿವಿಕೆ ಮುಖ್ಯಸ್ಥ ವಿಜಯ್, ವಕ್ಫ್ (ತಿದ್ದುಪಡಿ) ಕಾಯ್ದೆ 2025ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರದಂದು, ಸುಪ್ರೀಂ ಕೋರ್ಟ್ ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಿತು.
ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಕೆಲವು ಪ್ರಮುಖ ನಿಬಂಧನೆಗಳಿಗೆ ತಡೆ ನೀಡಲು ಮಧ್ಯಂತರ ಆದೇಶವನ್ನು ಹೊರಡಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹಾಗೇ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿನ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿ.ವಿ.ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, "ಪ್ರಸ್ತುತ ಅತ್ಯಂತ ತೊಂದರೆ ಉಂಟುಮಾಡುವ ಒಂದು ವಿಷಯವೆಂದರೆ, ನಡೆಯುತ್ತಿರುವ ಹಿಂಸಾಚಾರ. ಈ ವಿಷಯ ನ್ಯಾಯಾಲಯದೆದುರು ಬಂದಿದೆ. ನಾವು ನಿರ್ಧರಿಸುತ್ತೇವೆ" ಎಂದು ಹೇಳಿದೆ.