ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪೈಶಾಚಿಕ ದಾಳಿಯ ಬೆನ್ನಲ್ಲಿಯೇ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಇಲ್ಲಿಯವರೆಗೂ ಭಾರತಕ್ಕೆ ಆದ ಅನ್ಯಾಯದ ರೀತಿಯಲ್ಲೇ ಇದ್ದ ಇಂಡಸ್ ಜಲ ಒಪ್ಪಂದವನ್ನು ಭಾರತ ರದ್ದು ಮಾಡಿದೆ. 1960ರಿಂದಲೂ ಜಾರಿಯಲ್ಲಿದ್ದ ಈ ಇಂಡಸ್ ಜಲ ಒಪ್ಪಂದದ ಪ್ರಕಾರ ಭಾರತ ಕೇವಲ ಶೇ. 20ರಷ್ಟು ನೀರನ್ನು ಮಾತ್ರವೇ ಉಪಯೋಗಿಸಬಹುದಾಗಿತ್ತು. ಈಗ ಇಂಥ ಘೋರ ಒಪ್ಪಂದವನ್ನೇ ಭಾರತ ಅಮಾನತು ಮಾಡುವ ನಿರ್ಧಾರ ಮಾಡಿದೆ.
ಪಹಲ್ಗಾಮ್‌ನಲ್ಲಿ ದಾಳಿ ಪಾಕಿಸ್ತಾನದಲ್ಲಿ ಸುದ್ದಿಯಾಗದೇ ಇದ್ದರೂ, ಪಾಕಿಸ್ತಾನದ ಬಹುತೇಕ ವೆಬ್‌ಸೈಟ್‌ಗಳಲ್ಲಿ ಭಾರತದ ಇಂಡಸ್ ನಿರ್ಧಾರ ಹೆಡ್‌ಲೈನ್ ಆಗಿದೆ. ಪಾಕ್‌ನ ಪ್ರಮುಖ ಪತ್ರಿಕೆ ಡಾನ್, 'Pahalgam attack: India suspends Indus Waters Treaty with immediate effect, closes Attari border check post' ಎನ್ನುವ ಟೈಟಲ್‌ನಲ್ಲಿ ಪ್ರಧಾನ ಸುದ್ದಿಯಾಗಿ ಪೋಸ್ಟ್ ಮಾಡಿದೆ. ಡೇಲಿ ಟೈಮ್ಸ್ ಪತ್ರಿಕೆ, 'India escalates tensions: ends water treaty, orders Pakistanis to leave' ಎಂದು ಲೀಡ್ ಸುದ್ದಿಯಾಗಿ ಪ್ರಕಟಿಸಿದೆ.
ಅದರೊಂದಿಗೆ ಪಾಕಿಸ್ತಾನ ಅಬ್ಸರ್ವರ್ ಪತ್ರಿಕೆ, 'India suspends Indus Water Treaty, expels Pakistani Diplomats after Pahalgam Attack' ಎನ್ನುವ ಹೆಡ್‌ಲೈನ್‌ನಲ್ಲಿ ವಿಚಾರ ಪೋಸ್ಟ್ ಮಾಡಿದೆ.
ಸೆಕ್ಯುರಿಟಿ ಕಮಿಟಿ ಸಭೆ ಕರೆದ ಪಾಕ್ ಪ್ರಧಾನಿ: ಭಾರತದ ಇಂಡಸ್ ನಿರ್ಧಾರದ ಬೆನ್ನಲ್ಲಿಯೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಗುರುವಾರ ಬೆಳಿಗ್ಗೆ ರಾಷ್ಟ್ರೀಯ ಭದ್ರತಾ ಸಮಿತಿಯ (NSC) ತುರ್ತು ಸಭೆ ಕರೆದಿದ್ದಾರೆ. ಈ ಪ್ರಕಟಣೆಯನ್ನು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು X ನಲ್ಲಿ ತಡರಾತ್ರಿ ಪೋಸ್ಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.