ಮರೆಯಲಾಗದ ಕನ್ನಡ ಚಿಂತಕ, ಹೋರಾಟಗಾರ ಡಾ. ಪಿ.ವಿ. ನಾರಾಯಣ (Dr. P.V.Narayan)

varthajala
0

 ಡಾ. ಪಿ.ವಿ. ನಾರಾಯಣ ಅಗ್ರಗಣ್ಯ ಕನ್ನಡ ಚಿಂತಕರು. `ಕನ್ನಡತನ'ಕ್ಕೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿದವರು. ಕನ್ನಡದ ಹಿತಕ್ಕೆ ಧಕ್ಕೆ ಬರುತ್ತಿದೆ ಅನ್ನುವ ಸಂದರ್ಭ ಬಂದಾಗ ಭಾವೋದ್ವೇಗದಿಂದ ನೇರ ಪ್ರತಿಭಟನೆ ನಡೆಸಿದವರು. 


ಕನ್ನಡ ಹೋರಾಟಕ್ಕೆ ನಾಂದಿ ಹಾಡಿದ ಅ.ನ.ಕೃ. ಮ. ರಾಮಮೂರ್ತಿ ಅವರಂತೆ ಗೋಕಾಕ್ ಚಳವಳಿ ನಂತರ ಎಂ. ಚಿದಾನಂದಮೂರ್ತಿ, ಪಿ.ವಿ. ನಾರಾಯಣ ಕನ್ನಡ ಕಾರ್ಯಕರ್ತರ ಪಾಲಿಗೆ `ಭಲೇ ಜೋಡಿ'.

ವಿದ್ಯಾರ್ಥಿ ದೆಸೆಯಿಂದಲೇ ಉತ್ಕಟ ಕನ್ನಡ ಅಭಿಮಾನಿಯಾಗಿದ್ದ ನಾರಾಯಣ ನೇರವಾಗಿ ಕನ್ನಡಕ್ಕಾಗಿ ಬೀದಿಗಿಳಿದದ್ದು ಗೋಕಾಕ್ ಚಳವಳಿ ಸಂದರ್ಭದಲ್ಲಿ. ನಾಡಿನ ಹಲವೆಡೆ ಗೋಕಾಕ್ ಭಾಷಾ ಸೂತ್ರಕ್ಕೆ ಆಗ್ರಹಿಸಿ ಚಳವಳಿ ಆರಂಭವಾಗಿತ್ತು. ಮೊದಲ ಬಾರಿಗೆ ಸಾಹಿತಿಗಳೂ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಮಾತ್ರ ಈ ಹೋರಾಟ ಕಾವು ಪಡೆದುಕೊಂಡಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಕನ್ನಡನಾಡು-ನುಡಿಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಜಿ. ನಾರಾಯಣ ಬೆಂಗಳೂರಿನಲ್ಲಿ ಜಾಗೃತಿ ಸಮಾವೇಶವನ್ನು ವ್ಯವಸ್ಥೆಮಾಡಿದ್ದರು. ಗೋಕಾಕ್ ಭಾಷಾ ಸೂತ್ರವನ್ನು ಅನುಷ್ಠಾನ ಗೊಳಿಸದ ಸರ್ಕಾರದ ವಿರುದ್ಧ ಕನ್ನಡಾಭಿಮಾನಿಗಳಿಗೆ ಕೋಪವಿತ್ತು. ಹಾಗಾಗಿ ಕುತೂಹಲದಿಂದ ಸಾಕಷ್ಟು ಜನ ಬಂದಿದ್ದರು. 

ಅಲ್ಲಿ ಸೇರಿದ್ದ ಕನ್ನಡ ಕಾರ್ಯಕರ್ತರಿಗೆ ಬೆಂಗಳೂರಿನಲ್ಲಿ ಹೋರಾಟ ಆರಂಭವಾಗಿಲ್ಲವಲ್ಲ ಎಂಬ ತಳಮಳ. ಆ ಹೊತ್ತಿಗೆ `ಕನ್ನಡ ಉಳಿಸಿ ಕ್ರಿಯಾ ಸಮಿತಿ'ಯ ಮೂಲಕ ಕನ್ನಡ ಜಾಗೃತಿಯಲ್ಲಿ ತೊಡಗಿಕೊಂಡಿದ್ದ ಚಿದಾನಂದಮೂರ್ತಿ ಮತ್ತು ಅವರ ಮಿತ್ರರಿಗೂ ಇದೇ ಚಿಂತೆ. ಅವರಲ್ಲಿ ಪಿ.ವಿ.ನಾರಾಯಣ ಪ್ರಮುಖರು. ವೇದಿಕೆಯಲ್ಲಿ ಚರ್ಚೆ ನಡೆಯುತ್ತಿದ್ದರೆ, ಕೆಳಗೆ ಬೆಂಗಳೂರಿನಲ್ಲಿ ಏನಾದರೂ ಮಾಡಬೇಕು ಎಂಬ ಬಗ್ಗೆ ಪಿಸುಮಾತು. ಒಂದು ಹಂತದಲ್ಲಿ ಪಿ.ವಿ.ಎನ್. `ಸಾರ್, ನಾವು ಸುಮ್ಮನಿರಬಾರದು; ಯಾರು ಬರಲಿ, ಬಿಡಲಿ, ನಾವೇ ಒಂದಷ್ಟು ಜನ ಉಪವಾಸ ಕುಳಿತುಕೊಳ್ಳೋಣ' ಎಂದು ಚಿ.ಮೂ.ರವರಿಗೆ ಹೇಳಿದರು. ನಂತರದ್ದು ದೊಡ್ಡ ಇತಿಹಾಸ. ಹಿರಿಯ ಸಾಹಿತಿಗಳು, ಕಲಾವಿದರು ಕೈಜೋಡಿಸಿದರು. ದೊಡ್ಡ ರೀತಿಯಲ್ಲಿ ಹೋರಾಟ ಆರಂಭವಾಯಿತು. ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ `ಸಾಹಿತಿಗಳ ಕಲಾವಿದರ ಬಳಗ' ರೂಪು ತಳೆಯಿತು. ಕನ್ನಡದ ಬೇಡಿಕೆಗಳು ಹಕ್ಕೊತ್ತಾಯವಾದವು. ಈ ರೂಪಾಂತರಕ್ಕೆ ಚಿದಾನಂದಮೂರ್ತಿ ಅವರ ಕೊಡುಗೆ, ಪಿ.ವಿ.ಎನ್. ಅವರ ದೇಣಿಗೆ ದೊಡ್ಡದು. ಬಳಗದ ಹೆಸರನ್ನು ಸೂಚಿಸಿದವರೂ ಪಿ.ವಿ.ಎನ್. ಅವರೇ. 

ಸಾಹಿತಿಗಳ ಕಲಾವಿದರ ಬಳಗದ ಸ್ಥಾಪಕ ಖಜಾಂಚಿಯಾದ ಪಿ.ವಿ.ಎನ್. ಒಂದು ವರ್ಷ ಕಳೆಯುವುದರಲ್ಲಿ ಪ್ರಧಾನ ಸಂಚಾಲಕರಾದರು. ಚಳವಳಿಯ ನಂತರ ಸರ್ಕಾರ ರೂಪಿಸಿದ ಭಾಷಾ ಸೂತ್ರಕ್ಕೆ ಕೆಲ ಶಾಲೆಗಳು ತಡೆ ಆಜ್ಞೆ ತಂದಿದ್ದವು. ಸರ್ಕಾರ ತಡೆ ಆಜ್ಞೆಯನ್ನು ತೆರವುಗೊಳಿಸಲೇ ಇಲ್ಲ. ಕನ್ನಡ ಕಲಿಕೆ ಮತ್ತೊಂದು ವರ್ಷ ಮುಂದೆ ಹೋಗುತ್ತದೆಂಬ ಆತಂಕದಿAದ ಸಾಹಿತಿಗಳ ಕಲಾವಿದರ ಬಳಗವು ತಡೆ ಆಜ್ಞೆ ತೆರವು ಸೇರಿದಂತೆ 7 ಅಂಶಗಳನ್ನಿಟ್ಟುಕೊAಡು ಚಳವಳಿ ಆರಂಭಿಸಿತು. 46 ದಿನಗಳು ನಡೆದ ಆ ಹೋರಾಟದ ಫಲಶ್ರುತಿಯೇ ಮಹಿಷಿ ವರದಿ, ರಾಜ್ಯ ಸರ್ಕಾರಿ ನೌಕರರಿಗೆ ಕನ್ನಡ ಜ್ಞಾನ ಕಡ್ಡಾಯ ಮತ್ತು ಕನ್ನಡ ದೂರದರ್ಶನ ಹೋರಾಟಕ್ಕೆ ಚಾಲನೆ. ಆ ಹೋರಾಟದ ಸಂದರ್ಭದಲ್ಲಿಪಿ.ವಿ.ಎನ್. ಟಂಕಿಸಿದ `ಎಂಜಲು ಟಿವಿ ಉಗಿದು ಬಿಡಿ; ಕನ್ನಡ ಟಿವಿ ತಂದುಕೊಡಿ,' `ಹಿಂದಿ ಹೇರಿದರೆ ದೇಶ ಚಿಂದಿ', `ಕನ್ನಡಕ್ಕಾಗಿ ಕೈ ಎತ್ತು; ಬಾರದು ನಿನಗೆ ಆಪತ್ತು' ಘೋಷಣೆಗಳು ಸಂಚಲನ ಸೃಷ್ಟಿಸಿತ್ತು. ಇಲ್ಲಿ

ಉಲ್ಲೇಖಿಸಬೇಕಾದ ಪಿ.ವಿ.ಎನ್. ಪ್ರದಾನ ಸಂಚಾಲರಾಗಿದ್ದಾಗ ನಡೆದ ಇನ್ನೊಂದು ಮಹತ್ವದ ಹೋರಾಟ ಕನ್ನಡಗರಿಗೆ ಉದ್ಯೋಗಕ್ಕೆ ಒತ್ತಾಯಿಸಿ 105 ದಿನಗಳ ನಬಾರ್ಡ್ ಹೋರಾಟ. 

ನೇರ ಹೋರಾಟದ ಜತೆಗೆ ಕನ್ನಡ ಕಾರ್ಯಕರ್ತರಲ್ಲಿ ನಾಡು-ನುಡಿಯ ಬಗ್ಗೆ ಅರಿವು ಮೂಡಿಸಲು ನಿರಂತರ ಉಪನ್ಯಾಸ, ಸಮಸ್ಯೆಗಳ ಸ್ವರೂಪ-ಪರಿಹಾರಕಂಡುಕೊಳ್ಳಲು ತಜ್ಞರ ಚಿಂತನಗೋಷ್ಠಿಗಳನ್ನು ಬಳಗ ನಡೆಸುತ್ತಿತ್ತು. ಬಳಗ ಪ್ರತಿ ಬುಧವಾರ ಸಭೆ ನಡೆಸುತ್ತಿತ್ತು. ಆ ಸಭೆಗೆ ನಗರದ ಬಹಳಷ್ಟು ಕನ್ನಡ ಕಾರ್ಯಕರ್ತರು ಬರುತ್ತಿದ್ದರು. ಪು.ತಿ.ನ., ಜಿ.ಎಸ್.ಎಸ್. ಅಡಿಗರಂಥ ಕವಿಗಳು ಬಂದು ಕವನ ವಾಚನ ಮಾಡುತ್ತಿದ್ದರು. ಹಲವು ಗಣ್ಯರು ಬಂದು ಕನ್ನಡ ಸಾಹಿತ್ಯ,

ಕರ್ನಾಟಕದ ಇತಿಹಾಸವನ್ನು ಪರಿಚಯಿಸುವ ಅಗಣಿತ ಉಪನ್ಯಾಸ ನೀಡಿದ್ದಾರೆ. ಈ ಉಪನ್ಯಾಸ ವ್ಯವಸ್ಥೆಯಲ್ಲಿ ನಾರಾಯಣರ ಪಾತ್ರ ಉಲ್ಲೇಖಾರ್ಹವಾದದ್ದು. ಇಂದು ನಾನು ವೇದಿಕೆಯ ಮೇಲೆ ನಿಂತು ಮಾತನಾಡುತ್ತಿದ್ದರೆ ಅದಕ್ಕೆ ಕಾರಣ ಬಳಗ ನಡೆಸಿದ `ಮಾತುಗಾರಿಕೆ ಶಿಬಿರ'ವೇ ಕಾರಣ. ನನ್ನಂತೆಯೇ ಹಲವರು ಈ ಶಿಬಿರದ ಫಲಾನುಭವಿ ಗಳಾಗಿದ್ದಾರೆ. ಮಾತುಗಾರಿಕೆ ಶಿಬಿರದ ನಿರ್ದೇಶಕರಾಗಿದ್ದವರು ಉತ್ತಮ ವಾಗ್ಮ್ಮಿ ಎನಿಸಿದ್ದ ಪಿ.ವಿ. ನಾರಾಯಣ.

ಸಾಹಿತಿಗಳ ಕಲಾವಿದರ ಬಳಗದ ಕನ್ನಡಪರ ಕಾರ್ಯಗಳು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಿದಾಗ, ಕನ್ನಡಾಭಿಮಾನಿಗಳು ರಾಜ್ಯಮಟ್ಟಕ್ಕೆ ವಿಸ್ತರಿಸಲು ಮನವಿ ಮಾಡುತ್ತಿದ್ದರು. ಇದನ್ನು ಪರಿಗಣಸಿ ಬಳಗವು 1988ರಲ್ಲಿ ರಾಜ್ಯಮಟ್ಟದ ಸಮಾವೇಶ ಕರೆಯಿತು. ಪೂರ್ವಭಾವಿಯಾಗಿ ವ್ಯಾಪಕ ರಾಜ್ಯ ಪ್ರವಾಸ ಮಾಡುವ ನಿರ್ಧಾರವಾಯಿತು. ಬಳಗದ ಪ್ರಧಾನ ಸಂಚಾಲಕರಾಗಿದ್ದ ಡಾ.ಎಂ. ಚಿದಾನಂದಮೂರ್ತಿಯವರು ಅಪಘಾತಕ್ಕೊಳಗಾಗಿದ್ದರಿಂದ ಪ್ರವಾಸ ಮಾಡಿದ್ದು ಪಿ.ವಿ.ಎನ್. ಚಿತ್ರನಟ ಅಶೋಕ್ ಮತ್ತು ನಾನು. ನಂತರ ಕನ್ನಡ ಶಕ್ತಿ ಕೇಂದ್ರದ ಕಾರ್ಯದರ್ಶಿ ಆಗಿ ರಾಜ್ಯಮಟ್ಟದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಗಳ ರಕ್ಷಣೆಗೆ ಪಿ.ವಿ. ನಾರಾಯಣ ಅವರ ಕೊಡುಗೆ ಅಪಾರ. ಸಾಮ್ರಾಜ್ಯಶಾಹಿ ವಿರೋಧಿ ಕ್ರಿಯಾ ಸಮಿತಿ, ನೆಲ ಉಳಿಸಿ ಕ್ರಿಯಾ ಸಮಿತಿ, ಕಸಾಪ ಶುದ್ಧೀಕರಣ ಸಮಿತಿ, ಕನ್ನಡ ಗೆಳೆಯರ ಬಳಗ ಮುಂತಾದ ಸಂಘಟನೆಗಳ ಚಟುವಟಿಕೆಗಳಲ್ಲಿ ಮುಂಚೂಣಿ ನಾಯಕರಾಗಿದ್ದರು.

ಒಂದು ಕಾಲಘಟ್ಟದಲ್ಲಿ ಕನ್ನಡಪರ ಹೋರಾಟಗಳೆಂದರೆ ತಟ್ಟನೆ ನೆನಪಾಗುತ್ತಿದ್ದ ಹೆಸರು ಪಿ.ವಿ. ನಾರಾಯಣ ಅವರದು. ಯಾವುದೇ ಸಂಘಟನೆ ಕರೆದಾಗ ಪಿ.ವಿ.ಎನ್. ಅಲ್ಲಿರುತ್ತಿದ್ದರು. 1982ರ ನಂತರ `ಕನ್ನಡ-ಕನ್ನಡಿಗ-ಕರ್ನಾಟಕ'ಗಳಿಗೆ ಸಂಬAಧಿಸಿದ ಎಲ್ಲ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಕನ್ನಡಕ್ಕಾಗಿ ಜೈಲು, ಪೊಲೀಸ್ ಬಂಧನಕ್ಕೂ ಒಳಗಾಗಿದ್ದಾರೆ. ಅಕ್ಷರಶಃ ನೂರಾರು ಹೋರಾಟ, ಕನ್ನಡಪರ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ಸರ್ಕಾರ ರಚಿಸಿದ ಕನ್ನಡಿಗರ ಉದ್ಯೋಗ ಸಮಿತಿ ಸದಸ್ಯರಾಗಿ, ರಾಜ್ಯಾದಂತ ಪ್ರವಾಸ ಮಾಡಿ ನೂರಾರು ಸಭೆಗಳಲ್ಲಿ ಮಾತನಾಡಿ ಕನ್ನಡಿಗರನ್ನು ಎಚ್ಚರಿಸಿದ್ದಾರೆ. ಇವರ ಬಗ್ಗೆ ಹೇಳಬಹುದಾದ ಯಾದಿ ದೊಡ್ಡದಿದೆ.

ಪಿ.ವಿ. ನಾರಾಯಣ ಅವರು ಇಷ್ಟೆಲ್ಲಾ ಹೋರಾಡಿದ್ದಾರೆ ಎಂಬುದು ನಿಜ.ಆದರೆ ಅವರು ಕನ್ನಡ ಹೋರಾಟಕ್ಕೆ ನೀಡಿದ ಅತಿಶಯದ ಕೊಡುಗೆ ಎಂದರೆ ಅವರು ರಚಿಸಿದ `ಕನ್ನಡತನ ಮತ್ತು ಭಾರತೀಯತೆ' ಪುಸ್ತಿಕೆ. ಇಲ್ಲಿ ಕನ್ನಡಿಗರ ಜ್ವಲಂತ ಸಮಸ್ಯೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ, ದಿಟ್ಟ ನಿಲುವುಗಳನ್ನು ಪ್ರಕಟಿಸಿದ್ದಾರೆ. ಕನ್ನಡತನಕ್ಕೆ ತಾತ್ವಿಕ ನೆಲೆ ಸೃಷ್ಟಿಸಿದ್ದಾರೆ. ಕನ್ನಡದ ಹಿರಿಯ ವಿಮರ್ಶಕ ಪ್ರೊ ಎಲ್.ಎಸ್. ಶೇಷಗಿರಿರಾವ್ `ನಾರಾಯಣರು ಬಾರಿಸುತ್ತಿರುವ ಎಚ್ಚರಿಕೆಯ ಗಂಟೆ ಕನ್ನಡಿಗರನ್ನು ಎಚ್ಚರಿಸಲಿ' ಎಂದು ಈ ಪುಸ್ತಕದ ಮುನ್ನುಡಿಯಲ್ಲಿ ಹೇಳಿದ್ದಾರೆ. ಹಿಂದಿ ಹೇರಿಕೆಯ ಅಪಾಯದ ಬಗ್ಗೆ ನಾರಾಯಣ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ವಲಸೆ ಸಮಸ್ಯೆಯ ಪರಿಹಾರಕ್ಕೆ ಇವರು ಸೂಚಿಸುವ `ದ್ವಿಪೌರತ್ವ' ಜಾರಿಗೆ ಬಂದರೆ, ಕನ್ನಡಿಗರ ಅರ್ಧ ಸಮಸ್ಯೆ ಪರಿಹಾರವಾಗಿ ಬಿಡುತ್ತದೆ.

ಡಾ. ಪಿ.ವಿ.ಎನ್. ಅವರ ಇನ್ನೊಂದು ಮರೆಯಲಾಗದ, ಮರೆಯಬಾರದ ಕೊಡುಗೆ ಎಂದರೆ ಸಾಹಿತಿಗಳ ಕಲಾವಿದರ ಬಳಗ ಪ್ರಕಟಿಸಿದ ವಾರ್ತಾಪತ್ರ `ಕನ್ನಡ ಕಲಿ'ಯ ಸಂಪಾದಕರಾಗಿ ಬರೆದ ಸಂಪಾದಕೀಯಗಳು ಮತ್ತು

ಪ್ರಕಟಿಸಲ್ಪಟ್ಟ ಲೇಖನಗಳು. ಆ ಸಂಪಾದಕೀಯವನ್ನು ಪುಸ್ತಿಕೆಯಾಗಿ ಪ್ರಕಟಿಸಿದರೆ ಕನ್ನಡ ಜಾಗೃತಿಗೆ ದೊಡ್ಡ ಸಾಧನವಾಗುತ್ತದೆ. ಇವರು ಬರೆದ `ಗೋಕಾಕ್ ಭಾಷಾ ಸೂತ್ರ : ಅನುಷ್ಠಾನದ - ಸ್ಥಿತಿ-ಗತಿ' ಒಂದು ಚಳಿವಳಿಯನ್ನು ಹೇಗೆ ಅವಲೋಕನ ಮಾಡಬೇಕೆಂಬುದಕ್ಕೆ ಉತ್ತಮ ಮಾದರಿ. ಇಂತಹ ಒಬ್ಬ ದಿಟ್ಟ ಕನ್ನಡದ ಹಿತ ಚಿಂತಕರನ್ನು ನೆನೆಯುವುದು ಕನ್ನಡಿಗರ ಕರ್ತವ್ಯ.

ರಾ.ನಂ. ಚಂದ್ರಶೇಖರ

Post a Comment

0Comments

Post a Comment (0)