ಕಾಂತರಾಜ್ ವರದಿ ಹಿಂಪಡೆದು ಆಧಾರ್ ಸಹಿತ ವೈಜ್ಞಾನಿಕವಾಗಿ ಜಾತಿ ಗಣತಿ ಸಮೀಕ್ಷೆ ಮಾಡಲು ಹಾಗೂ ಹಿಂದುಳಿದ ಕುಂಚಿಟಿಗ ಜಾತಿಗೆ ಸಾಮಾಜಿಕ ನ್ಯಾಯ ನೀಡಲು ಒತ್ತಾಯಿಸಿ ಮನವಿ-
ಹೆಚ್.ಕಾಂತರಾಜ್ ನೇತೃತ್ವದ ಜಾತಿ ಗಣತಿ ವರದಿ ಅವೈಜ್ಞಾನಿಕ ಮತ್ತು ತಾರತಮ್ಯದಿಂದ ಕೂಡಿದೆ. ಕಾಂತರಾಜ್ ಅವರು ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ಕುಂಚಿಟಿಗ ಜಾತಿಯವರು ಹಲವು ಮನವಿ ಸಲ್ಲಿಸಿ ಅಗತ್ಯ ಮೀಸಲಾತಿ ನೀಡಿ ಎಂದು ಕೋರಿದ್ದರೂ ಅವರು ಸೌಜನ್ಯಕ್ಕಾದರೂ ಕುಂಚಿಟಿಗ ಜಾತಿಯ ಬೇಡಿಕೆ ಮತ್ತು ಸಮಸ್ಯೆಗಳನ್ನು ಆಲಿಸಲಿಲ್ಲ.
ಮುಂದುವರೆದು ಜಯಪ್ರಕಾಶ್ ಹೆಗ್ಡೆ ಅವರಿಗೂ ಹಲವು ಮನವಿ ಸಲ್ಲಿಸಿದರೂ ಕುಂಚಿಟಿಗರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಾಲದಕ್ಕೆ ನಿಮಗೆ ಬುಡಕಟ್ಟು ಲಕ್ಷಣಗಳಿವೆ, ಎಸ್ಟಿ ಮೀಸಲಾತಿಗೆ ಶಿಫಾರಸು ಮಾಡುತ್ತೇವೆ, ಅಲ್ಲಿ ಮೀಸಲಾತಿ ಪಡೆದುಕೊಳ್ಳಿ ಎಂದು ಸಬೂಬು ಹೇಳಿ ಕಳುಹಿಸಿದರು.
ಇದರ ಮಧ್ಯ ಮೈಸೂರು ವಿಶ್ವ ವಿದ್ಯಾಲಯವು ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಸಹ ಅದನ್ನು ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ಗಮನ ನೀಡಿಲ್ಲ.
ಕುಂಚಿಟಿಗರು ಯಾವುದೇ ಒಕ್ಕಲಿಗ/ಲಿಂಗಾಯಿತ ಜಾತಿಯ ಉಪ ಜಾತಿಯಲ್ಲ. ಇದೊಂದು ಪ್ರತ್ಯೇಕ ಜಾತಿ. ಒಕ್ಕಲಿಗ/ಲಿಂಗಾಯಿತ ಸ್ವಾಮೀಜಿಗಳು, ಒಕ್ಕಲಿಗ/ ಲಿಂಗಾಯಿತ ಸಂಘ ಸಂಸ್ಥೆಯವರು, ರಾಜಕೀಯ ಪಕ್ಷಗಳು ಒಕ್ಕಲಿಗ ಮತ್ತು ಲಿಂಗಾಯಿತ ಜನಸಂಖ್ಯೆ ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಕುಂಚಿಟಿಗರಂತಹ ಹಲವು ಜಾತಿಗಳಿಗೆ ಅಡ್ಡಿ ಮಾಡುತ್ತಿರುವುದು ನೋವಿನ ಸಂಗತಿ.
ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿ ಆಧರಿಸಿ ಕೇಂದ್ರ ಒಬಿಸಿ ಮೀಸಲಾತಿಗೆ ರಾಜ್ಯ ಸರ್ಕಾರ ದಿನಾಂಕ-30-10-2023 ರಂದು ಶಿಫಾರಸು ಮಾಡಿದೆ. ಆದರೆ ರಾಜ್ಯದಲ್ಲಿ ಆ ವರದಿಯನ್ನ ಅನುಷ್ಠಾನ ಮಾಡಿಲ್ಲ. ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿ ಅನುಷ್ಠಾನವಾಗಿದ್ದರೆ ರಾಜ್ಯದಲ್ಲಿ ಕುಂಚಿಟಿಗರಿಗೆ ಪ್ರವರ್ಗ-1ರ ಮೀಸಲಾತಿ ಸೌಲಭ್ಯ ದೊರೆಯುತ್ತಿತ್ತು. ಜಯಪ್ರಕಾಶ್ ಹೆಗ್ಡೆ ಅವರು ಶಿಫಾರಸು ಮಾಡಿರುವ ಜಾತಿಗಳ ವರ್ಗೀಕರಣದಲ್ಲಿ ಕುಂಚಿಟಿಗರಿಗೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಆಯೋಗದ ಜಾತಿ ಗಣತಿ ವರದಿ ಅವೈಜ್ಞಾನಿಕ, ಪ್ರಭಾವಿ ಜಾತಿಗಳಿಗೆ ಮಾತ್ರ ಮಣೆ ಹಾಕಿ ಪ್ರವರ್ಗ-1, 1ಬಿ, ಪ್ರವರ್ಗ-2, 2ಬಿ ಮೀಸಲು ವರ್ಗೀಕರಣ ಮಾಡಿರುವುದು ಖಂಡನೀಯ.
ರಾಜ್ಯ ಸರ್ಕಾರ ಕುಂಚಿಟಿಗರಿಗೆ ಮಾಡಿರುವ ಮಹಾ ದ್ರೋಹದ ಕೆಲಸವಾಗಿದೆ.
ಕುಂಚಿಟಿಗ ಕುಲ ಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ ಜಾರಿ ಮಾಡಬೇಕು. ಕುಂಚಿಟಿಗರನ್ನ ಪ್ರವರ್ಗ-3ಎ, 3ಬಿ ನಂತಹ ಪ್ರಭಾವಿ ಜಾತಿಗಳಿಂದ ತೆಗೆದು ಪ್ರವರ್ಗ-1ರ ಮೀಸಲಾತಿ ನೀಡಬೇಕು.
ಕುರುಬ, ಕುಂಚಿಟಿಗ, ಕಾಡುಗೊಲ್ಲ ಈ ಮೂರು ಜಾತಿಗಳ ಮೂಲ, ಕಟ್ಟೆ ಮನೆ ಮತ್ತು ಬುಡಕಟ್ಟು ನೆಲೆ ಒಂದೇ ಆಗಿದೆ. ಹಾಗಾಗಿ ಕುಂಚಿಟಿಗ ಜಾತಿಗೆ ಪ್ರವರ್ಗ-1ರ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ನೀಡಬೇಕು.
ರಾಜ್ಯ ಸರ್ಕಾರ ಪ್ರವರ್ಗಗಳ ವರ್ಗೀಕರಣಕ್ಕೆ ಮುಂದಾದರೆ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಬುಡಕಟ್ಟು ಪಂಗಡ ಎಂದು 2 ಭಾಗವಾಗಿ ವರ್ಗೀಕರಿಸಿ ಕಾಡುಗೊಲ್ಲ, ಕುರುಬ, ಕುಂಚಿಟಿಗ, ಉಪ್ಪಾರ, ಬೆಸ್ತ, ಈಡಿಗ ಸೇರಿದಂತೆ ಮತ್ತಿತರ ಬುಡುಕಟ್ಟು ಲಕ್ಷಣಗಳಿರುವ ಜಾತಿಗಳನ್ನು ಸೇರಿಸಿ ಎಸ್ಟಿ ಮೀಸಲಾತಿ ಸೌಲಭ್ಯ ನೀಡಬೇಕು. ಈ ರೀತಿ ವರ್ಗೀಕರಣ ಮಾಡುವ ಹಿಂದುಳಿದ ಬುಡಕಟ್ಟು ಪಂಗಡಗಳನ್ನು ಅಟ್ರಾಸಿಟಿ ವ್ಯಾಪ್ತಿಯಿಂದ ಹೊರಗಿಡಬೇಕು. ಇವರೆಲ್ಲ ಸ್ಪೃಶ್ಯ ಜಾತಿಗಳಾಗಿದ್ದು ಯಾವುದೇ ಕಾರಣಕ್ಕೂ ಅಟ್ರಾಸಿಟಿ ವ್ಯಾಪ್ತಿಗೆ ಸೇರಬಾರದು. ಅಟ್ರಾಸಿಟಿ ವ್ಯಾಪ್ತಿಗೆ ಸೇರಿದರೆ ಅಸ್ಪೃಶ್ಯ ಜಾತಿಗಳ ಮೇಲೆ ದಬ್ಬಾಳಿಕೆ ಮಾಡುವ ಸಾಧ್ಯತೆ ಇರುತ್ತದೆ.
1) ಹಾವೇರಿ, ಕಾರವಾರ ಜಿಲ್ಲೆಗಳಲ್ಲಿ ಕುಂಚಿಟಿಗರನ್ನು ಕಾಮಾಟಿ ಎಂದು ಕರೆಯಲಾಗುತ್ತಿದ್ದು ರಾಜ್ಯದಲ್ಲಿ ಪ್ರವರ್ಗ-1, ಕೇಂದ್ರದಲ್ಲಿ ಒಬಿಸಿ ಸೌಲಭ್ಯ ಪಡೆಯುತ್ತಿದೆ. ಎರಡು ಜಿಲ್ಲೆಗಳಲ್ಲಿ ಸುಮಾರು 15 ರಿಂದ 20 ಸಾವಿರ ಕಾಮಾಟಿ ಕುಂಚಿಟಿಗರಿದ್ದರೂ ಕೇವಲ 1594 ಜನಸಂಖ್ಯೆ ತೋರಿಸಲಾಗಿದೆ.
2) ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ಕುಂಚಿಟಿಗರನ್ನು ನಾಮಧಾರಿಗಳೆಂದು ಕರೆಯಲಾಗುತ್ತಿದೆ. ಪ್ರವರ್ಗ-2ಎ ಮತ್ತು ಕೇಂದ್ರದ ಒಬಿಸಿ ಮೀಸಲು ಸೌಲಭ್ಯವಿದೆ.
3) ಹಳೆ ಮೈಸೂರು ಭಾಗದ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ, ಹಾಸನ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳಲ್ಲಿ ಪ್ರವರ್ಗ-3ಎ ಮತ್ತು 3-ಬಿ ನಲ್ಲಿ ಕುಂಚಿಟಿಗರಿದ್ದು ಈ ಜಿಲ್ಲೆಗಳಲ್ಲಿ ಕೇಂದ್ರದ ಒಬಿಸಿ ಸೌಲಭ್ಯ ಸಿಕ್ಕಿಲ್ಲ. ಇಷ್ಟು ಜಿಲ್ಲೆಗಳಲ್ಲಿ ಕನಿಷ್ಠ ಎಂದರೂ 8 ರಿಂದ 10 ಲಕ್ಷ ಕುಂಚಿಟಿಗ ಜಾತಿ ಜನಸಂಖ್ಯೆ ಇದೆ. ಆದರೆ ಜಾತಿ ಗಣತಿಯಲ್ಲಿ ಕುಂಚಿಟಿಗ ಒಕ್ಕಲಿಗರೆಂದು ಬರೆಸಿಕೊಂಡಿರುವ 52290 ಹಾಗೂ ಕುಂಚಿಟಿಗರೆಂದು ಬರೆಸಿಕೊಂಡಿರುವ 1.95 ಲಕ್ಷ ಜನಸಂಖ್ಯೆ ಇದೆ ಎನ್ನಲಾಗಿದ್ದು ಅವೈಜ್ಞಾನಿಕವಾಗಿದೆ.
ಕುಂಚಿಟಿಗ ಜಾತಿ ಬೇಡಿಕೆ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಜನಾಂಗದ ಪರವಾಗಿ ಕರ್ನಾಟಕ ರಾಜ್ಯ ಕುಂಚಿಟಿಗ ಮೀಸಲಾತಿ ಹೋರಾಟ ಮತ್ತು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹರಿಯಬ್ಬೆ ಸಿ.ಹೆಂಜಾರಪ್ಪ ಇವರು ಎಚ್ಚರಿಸಿದ್ದಾರೆ.