ನವದೆಹಲಿ: ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕೆಲವೆಡೆ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ ನಡೆದಿದ್ದು, ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವುನೋವುಗಳ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
26 ನಾಗರಿಕರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆಯೇ ಪಾಕಿಸ್ತಾನದ ಸೇನೆ ಗುಂಡಿನ ದಾಳಿ ನಡೆದಿದೆ. "ಗಡಿ ನಿಯಂತ್ರಣ ರೇಖೆಯ ಕೆಲವು ಕಡೆಗಳಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಪಾಕಿಸ್ತಾನವು ಗುಂಡು ಹಾರಿಸಿದ ಘಟನೆಗಳು ನಡೆದಿವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಗುಂಡು ಹಾರಿಸಿದ್ದಕ್ಕೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡಲಾಗಿದೆ" ಎಂದು ಮೂಲಗಳು ಹೇಳಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ, ಕೇಂದ್ರ ಸರ್ಕಾರವು ಪಾಕ್ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದೆ. ಅಟ್ಟಾರಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಬಂದ್ ಮಾಡುವುದು, ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಸ್ಥಗಿತಗೊಳಿಸಿದ್ದಲ್ಲದೆ, ಅವರು ತಮ್ಮ ದೇಶಕ್ಕೆ ಮರಳಲು 40 ಗಂಟೆಗಳ ಗಡುವು ನೀಡಲಾಗಿದೆ. ಜೊತೆಗೆ, ಎರಡೂ ಕಡೆಯ ಹೈಕಮಿಷನ್‌ಗಳಲ್ಲಿ ಅಧಿಕಾರಿಗಳ ಸಂಖ್ಯೆಯನ್ನು ಇಳಿಕೆ ಮಾಡಲು ನಿರ್ಧರಿಸಲಾಗಿದೆ.
ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿರುವ ರಕ್ಷಣಾ/ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸೋನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಭಾರತವನ್ನು ತೊರೆಯಲು ಒಂದು ವಾರಗಳ ಕಾಲಾವಕಾಶವಿದೆ. ಭಾರತವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ತನ್ನ ರಕ್ಷಣಾ/ನೌಕಾಪಡೆ/ವಾಯುಪಡೆ ಸಲಹೆಗಾರರನ್ನು ಹಿಂತೆಗೆದುಕೊಳ್ಳಲಿದೆ. ಆಯಾ ಹೈಕಮಿಷನ್‌ಗಳಲ್ಲಿನ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ. ಸೇವಾ ಸಲಹೆಗಾರರ ಐದು ಸಹಾಯಕ ಸಿಬ್ಬಂದಿಯನ್ನು ಎರಡೂ ಹೈಕಮಿಷನ್‌ಗಳಿಂದ ಹಿಂತೆಗೆದುಕೊಳ್ಳಲಾಗುವುದು" ಎಂದು ಈಗಾಗಲೇ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಅಟ್ಟಾರಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತಿದೆ. ಜೊತೆಗೆ, ಪಹಲ್ಗಾಮ್ ದಾಳಿಯ ನಂತರ ಭಾರತವು 1960ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವನ್ನು ಕೂಡ ಅಮಾನತು ಮಾಡಿದೆ.