ಬೆಂಗಳೂರು: ''ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಭ್ರಷ್ಟಾಚಾರ, ಲೂಟಿಕೋರತನ ರಾಜ್ಯ ಕಾಂಗ್ರೆಸ್ ಸರ್ಕಾರದ ಅವಿಭಾಜ್ಯ ಅಂಗ ಎಂಬುದನ್ನು ಸ್ವತಃ ನಿಮ್ಮ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ''ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1'' ಎಂದು ಹೇಳುವ ಮೂಲಕ ಈ ಸರ್ಕಾರದ ಕರಾಳ ಭ್ರಷ್ಟತೆಯ ಮುಖವಾಡ ಬಯಲು ಮಾಡಿ, ರಾಜ್ಯದ ಘನತೆ ಕುಗ್ಗಿದ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ. ಆ ಮೂಲಕ ರಾಷ್ಟ್ರಮಟ್ಟದಲ್ಲಿ ರಾಜ್ಯ ನಿಮ್ಮ ಆಡಳಿತದಲ್ಲಿ ಸಂಪೂರ್ಣ ಭ್ರಷ್ಟತೆಯ ಕಪ್ಪು ಮಸಿ ಮೆತ್ತಿಕೊಂಡಿರುವುದನ್ನು ಅನಾವರಣ ಮಾಡಿ, ಕರ್ನಾಟಕ ವಿಶ್ವಮಟ್ಟದಲ್ಲಿ ತಲೆತಗ್ಗಿಸುವ ಪರಿಸ್ಥಿತಿ ಇರುವುದನ್ನು ವಿವರಿಸಿದ್ದಾರೆ'' ಎಂದು ಹೇಳಿದ್ದಾರೆ.
ವಾಸ್ತವ ಸ್ಥಿತಿ ಮೇಲೆ ಬೆಳಕು ಚೆಲ್ಲಿದ್ದಾರೆ: "ಜನಪ್ರತಿನಿಧಿಗಳು ಹೇಗೆ ಇರುತ್ತಾರೋ ಅದರಂತೆಯೇ ಅಧಿಕಾರಿಗಳೂ ಇರುತ್ತಾರೆ. ಮುಖ್ಯಮಂತ್ರಿ ಏನೇ ಹೇಳಿದರೂ ಭ್ರಷ್ಟಾಚಾರದ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯ ಇದೇ ಇರುತ್ತದೆ. ಯಥಾ ರಾಜ ತಥಾ ಮಂತ್ರಿಗಳು, ಅಧಿಕಾರಿಗಳು ಎಂಬ ಮಾತು ನಿಮ್ಮ ಆಡಳಿತದಲ್ಲಿ ಅಕ್ಷರಶಃ ಅನ್ವಯಿಸುತ್ತಿದೆ ಎನ್ನುವುದನ್ನು ಹೇಳುವ ಮೂಲಕ ವಾಸ್ತವ ಸ್ಥಿತಿಯ ಮೇಲೆ ನೇರವಾಗಿ ಬೆಳಕು ಚೆಲ್ಲಿದ್ದಾರೆ'' ಎಂದು ಟೀಕಿಸಿದ್ದಾರೆ.
''ಹಿಂದಿನ ನಮ್ಮ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಶೇ 40ರಷ್ಟು ಸರ್ಕಾರ ಎಂಬ ಸುಳ್ಳು ಅಪಪ್ರಚಾರಗಳನ್ನು ನಡೆಸಿ, ರಾಜ್ಯದ ಜನತೆಯ ದಿಕ್ಕು ತಪ್ಪಿಸಿ ಜಗತ್ತಿನಲ್ಲಿ 'ನಾವೇ ಸತ್ಯವಂತರು' ಎಂದು ಡಂಗುರ ಸಾರಿ, ಅಧಿಕಾರಕ್ಕೆ ಬಂದ ನಿಮ್ಮ ನೈಜ ಮುಖವಾಡ ಇದೀಗ ಕಳಚಿ ಬಿದ್ದಿದೆ'' ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.