ಪಾಟ್ನಾ: ಬಿಹಾರದಲ್ಲಿದೆ ಒಂದು ನಿಗೂಢವಾದ ಬಾವಿ. ಸದಾ ಜೀವಂತಿಕೆಯಿಂದ ಇರುವ ಈ ಬಾವಿಯಲ್ಲಿ ಇದುವರೆಗೆ ನೀರು ಬತ್ತಿದ್ದೇ ಇಲ್ಲವಂತೆ. ಸ್ವತಃ ಚಕ್ರವರ್ತಿ ಅಶೋಕನೂ ಈ ಬಾವಿಯ ನೀರು ಖಾಲಿ ಮಾಡಲು ವಿಫಲನಾಗಿದ್ದ ಎನ್ನುತ್ತವೆ ಇಲ್ಲಿನ ಸ್ಥಳೀಯರ ದಂತಕಥೆಗಳು. ಹಾಗಾದರೆ ಈ ಬಾವಿ ಬಿಹಾರದಲ್ಲಿ ಎಲ್ಲಿದೆ? ಏನಿದರ ವಿಶೇಷತೆ? ಇತಿಹಾಸ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ..
ಚಕ್ರವರ್ತಿ ಸಾಮ್ರಾಟ್ ಅಶೋಕನನ್ನು ಭಾರತದ ಅತ್ಯಂತ ಪ್ರಭಾವಶಾಲಿ ಆಡಳಿತಗಾರರಲ್ಲಿ ಒಬ್ಬ ಎನ್ನುತ್ತದೆ ಇತಿಹಾಸ. ಮೌರ್ಯ ರಾಜವಂಶದ ಮೂರನೇ ದೊರೆ. ಮೌರ್ಯ ರಾಜವಂಶದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಮಗ ಬಿಂದುಸಾರನ ಮಗ. ಅಶೋಕನ ಜನ್ಮ ದಿನವನ್ನು ಬಿಹಾರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕ್ರಿಸ್ತಪೂರ್ವ 304ರಲ್ಲಿ ಜನಿಸಿ, ಕ್ರಿ.ಪೂ. 269 ರಿಂದ 232 ರವರೆಗೆ ಆಡಳಿತ ನಡೆಸಿದ ಅಶೋಕನ ಜನ್ಮದಿನವನ್ನು ಏಪ್ರಿಲ್ 14 ರಂದು ಆಚರಿಸಲು ಬಿಹಾರ ಸರ್ಕಾರ ನಿರ್ಧರಿಸಿತ್ತು. ಆದರೆ, ಅಶೋಕ ಚೈತ್ರಮಾಸದ ಅಷ್ಟಮಿಯ ದಿನ ಹುಟ್ಟಿದ ಕಾರಣ, ಬಿಹಾರದಲ್ಲಿ ಚೈತ್ರ ಅಷ್ಟಮಿಯನ್ನು ಅಶೋಕ ಅಷ್ಟಮಿ ಎಂದೂ ಕೊಂಡಾಡಲಾಗುತ್ತದೆ.
ಈ ಸಂದರ್ಭದಲ್ಲಿ ಚಕ್ರವರ್ತಿ ಅಶೋಕ ನಿರ್ಮಿಸಿದ ಎಂದು ಹೇಳುವ ಬಿಹಾರದ ಪಾಟ್ನಾದ ಕುಮ್ರಾರ್ ಪುರಾತತ್ವ ಸ್ಥಳದಲ್ಲಿರುವ ಈ ನಿಗೂಢ ಬಾವಿಯ ಬಗ್ಗೆ ತಿಳಿಯೋಣ ಬನ್ನಿ..
ಸಿಂಹಳೀಯ ಸಾಹಿತ್ಯದಲ್ಲಿರುವ ಇತಿಹಾಸ ಏನು ಹೇಳುತ್ತೆ?: ಈಟಿವಿ ಭಾರತ ಜೊತೆಗೆ ಮಾತನಾಡಿದ ಇತಿಹಾಸಕಾರ ಪ್ರೊ.ಆದಿತ್ಯ ನಾರಾಯಣ್ ಝಾ, "ಕ್ರಿಸ್ತಪೂರ್ವ 269ರಲ್ಲಿ ತಂದೆ ಬಿಂದುಸಾರನ ಮರಣಾನಂತರ ಉತ್ತರಾಧಿಕಾರಿಯಾಗಿ ಪಟ್ಟವೇರಿದ ಅಶೋಕ ನಂತರ ರಾಜನಾಗಿ ಆಳ್ವಿಕೆ ನಡೆಸುತ್ತಾನೆ. ಉತ್ತರಾಧಿಕಾರಿಯಾಗಿ ಸಿಂಹಾಸನವೇರಿದ 8 ವರ್ಷಗಳವರೆಗೆ ಅಶೋಕ ಅತ್ಯಂತ ಕ್ರೂರ ಆಡಳಿತಗಾರನಾಗಿದ್ದನು. ಅದಕ್ಕಾಗಿಯೇ ಕೆಲವು ಐತಿಹಾಸಿಕ ಮೂಲಗಳಲ್ಲಿ ಅವನನ್ನು ಚಂದಾಶೋಕ ಅಥವಾ ಕಾಮಶೋಕ ಎಂದೂ ಕರೆಯಲಾಗುತ್ತದೆ. ಈ ವಿವರಣೆಗಳು ಯಾವುದೇ ಭಾರತೀಯ ಸಾಹಿತ್ಯದಲ್ಲಿ ಕಂಡು ಬರುವುದಿಲ್ಲ. ಈ ಎಲ್ಲ ವಿಷಯಗಳು ಶ್ರೀಲಂಕಾದಲ್ಲಿ ಬರೆದ ಬೌಧ ಸಾಹಿತ್ಯದಲ್ಲಿವೆ. ಸಿಂಹಳೀಯ ಸಾಹಿತ್ಯದ ದೀಪವಂಶ ಮತ್ತು ಮಹಾವಂಶದಲ್ಲಿ ಅಶೋಕನ ಬಗ್ಗೆ ಈ ರೀತಿಯ ವಿವರಣೆಗಳನ್ನು ಬರೆಯಲಾಗಿದೆ" ಎನ್ನುತ್ತಾರೆ ಅವರು. ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಈ ನಿಗೂಢ ಬಾವಿಯನ್ನು ಚಕ್ರವರ್ತಿ ಅಶೋಕನ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ದಂತಕಥೆಗಳು ಉಲ್ಲೇಖಿಸುತ್ತವೆ. ನಂತರದಲ್ಲಿ ಈ ಬಾವಿಯನ್ನು ಪಾಟ್ನಾದ ಆಗಮ ಕುವಾನ್ (ಎಂದರೆ ಎಂದೂ ಬತ್ತದ ಬಾವಿ - ಆಳವರಿಯಲಾಗದ ಬಾವಿ) ಎಂದು ಗುರುತಿಸಲಾಯಿತು. ಈ ಆಗಮ ಕುವಾನ್ ಬಗ್ಗೆ ಅನೇಕ ರೀತಿಯ ಕಥೆಗಳು ಜನರಲ್ಲಿ ಪ್ರಚಲಿತದಲ್ಲಿವೆ. ಈ ಬಾವಿಯನ್ನು ಆಳವಾದ ಬಾವಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಇದರ ಆಳ 105 ಅಡಿ ಎಂದು ಹೇಳಲಾಗುತ್ತದೆ.
ಕಳಿಂಗ ಯುದ್ಧದ ನಂತರ ಮನ ಪರಿವರ್ತನೆ: ಕ್ರಿ.ಪೂ 261ರಲ್ಲಿ ಕಳಿಂಗ ಯುದ್ಧ ನಡೆದಿತ್ತು. ಆ ಬಹುದೊಡ್ಡ ಯುದ್ಧದಲ್ಲಿ ಲಕ್ಷಾಂತರ ಸಾಮಾನ್ಯ ಜನರು ಪ್ರಾಣ ಕಳೆದುಕೊಂಡಿದ್ದರು. ಕಳಿಂಗ ಯುದ್ಧ ಕೇವಲ ಎರಡು ರಾಜ್ಯಗಳ ನಡುವಿನ ಯುದ್ಧವಾಗಿರದೇ, ಮೊದಲ ನರಮೇಧವಾಗಿತ್ತು. ಈ ಯುದ್ಧದ ಬಳಿಕ ಅಶೋಕನ ಮನಸ್ಸು ಪರಿವರ್ತನೆಯಾಯಿತು. ನಂತರ ಈತ ಅನುಸರಿಸಿದ ಧಮ್ಮನೀತಿ ಭಾರತದಲ್ಲಿ ಮಾತ್ರವಲ್ಲದೇ, ಭಾರತದ ಹೊರಗೂ ಶಾಂತಿಯ ಸಂದೇಶವನ್ನು ಸಾರಿತ್ತು. ಆದ್ದರಿಂದಲೇ ಈತನನ್ನು ಇತಿಹಾಸದ ಪುಟಗಳಲ್ಲಿ ಸನ್ಯಾಸಿ ರಾಜ ಎಂದು ಕರೆಯಲಾಗುತ್ತದೆ.
ಕಳಿಂಗ ಯುದ್ಧಕ್ಕೂ ಮುನ್ನ ಶೈವ ಸಿದ್ಧಾಂತವನ್ನು ಪಾಲಿಸುತ್ತಿದ್ದ. ಆದರೆ ಕಳಿಂಗ ಯುದ್ಧಾ ನಂತರ ಶಾಂತಿಯ ಸಂಕೇತವಾದ ಬೌದ್ಧ ಧರ್ಮವನ್ನು ಅಳವಡಿಸಿಕೊಂಡನು. ಇದಾದ ಬಳಿಕ ಅಹಿಂಸಾ ಮಾರ್ಗದಲ್ಲಿ ಸಾಗಿ ಇಡೀ ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಸಾರಿದ್ದನು. ನಂತರ ಯುದ್ಧಗಳನ್ನು ತ್ಯಜಿಸುವುದಾಗಿ ಘೋಷಿಸಿದ್ದನು. ಮಾತ್ರವಲ್ಲದೇ ಆತನ ನಂತರದ ಮೌರ್ಯ ಪೀಳಿಗೆ ಕೂಡ ಎಂದಿಗೂ ಯುದ್ಧ ಮಾಡುವುದಿಲ್ಲ. ಧಮ್ಮನೀತಿಯನ್ನು ಪಾಲಿಸುತ್ತಾರೆ ಎನ್ನುವ ವಾಗ್ಧಾನವನ್ನು ಮಾಡಿದ್ದನು. ಕಳಿಂಗ ಯುದ್ಧದ ನಂತರವೂ ಚಕ್ರವರ್ತಿ ಅಶೋಕ ರಾಜ್ಯಾಡಳಿತ ನಡೆಸಿದ್ದನು. ರಾಜನಾಗಿದ್ದರೂ, ಸಕಲ ವೈಯಕ್ತಿಕ ಭೋಗಗಳನ್ನು ತ್ಯಜಿಸಿ, ಸನ್ಯಾಸಿ ರಾಜನಾಗಿ ಅಂದರೆ ಏನೂ ಇಲ್ಲದ ರಾಜನಾಗಿ, ಹಳದಿ ಬಟ್ಟೆ ಧರಿಸಿ ಬೌದ್ಧ ಯೋಗಿಯಾಗಿದ್ದ. ಉಳಿದ ಅಧಿಕಾರಾವಧಿಯಲ್ಲಿ ದೇಶದ ಇತರ ಭಾಗಗಳಲ್ಲಿ ಧಾರ್ಮಿಕ ಸಾಮರಸ್ಯವನ್ನು ಸ್ಥಾಪಿಸುವ ಕೆಲಸ ಮಾಡಿದ್ದ ಎನ್ನುತ್ತಾರೆ ಆದಿತ್ಯ ನಾರಾಯಣ್.
ಈ ನಿಗೂಢ ಬಾವಿ ಬಗೆಗಿದೆ ಧಾರ್ಮಿಕ ನಂಬಿಕೆ: ಈ ಬಾವಿ ಮಾತಾ ಶೀತಲ ದೇವಾಲಯದ ಅಂಗಳದಲ್ಲಿದೆ. ಇದು ಪಾಟ್ನಾದ ಅತ್ಯಂತ ಹಳೆಯ ದೇವಾಲಯ. ಇಲ್ಲಿಗೆ ಭಕ್ತಿಯಿಂದ ಬರುವ ಭಕ್ತರು ಯಾವುದೇ ಇಷ್ಟಾರ್ಥ ಇದ್ದರೂ ಈಡೇರುತ್ತವೆ ಎಂದು ಹೇಳಲಾಗುತ್ತದೆ. ಈ ಬಾವಿಯ ನೀರನ್ನು ಶೀತಲ ಮಾತೆಯ ಪೂಜೆಗೆ ಬಳಸಲಾಗುತ್ತದೆ. ಈ ಬಾವಿಗೆ ನೈವೇದ್ಯ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಜೊತೆಗೆ ಬಾವಿಯ ನೀರು ದೇಹದ ಪ್ರತಿಯೊಂದು ಕಾಯಿಲೆಯನ್ನು ಗುಣಪಡಿಸುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.