ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇಕಡ 73.45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಡುಪಿ ಜಿಲ್ಲೆಯು ಶೇಕಡ 93.90 ರಷ್ಟು ಫಲಿತಾಂಶ ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದೆÉ, ದಕ್ಷಿಣ ಕನ್ನಡ ಶೇಕಡ 93.57 ರಷ್ಟು ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದು, ಬೆಂಗಳೂರು ದಕ್ಷಿಣ ಶೇ 85.36ರಷ್ಟು ಪಡೆದು ತೃತೀಯ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯು ಶೇಕಡ 48.45 ರಷ್ಟು ಪಡೆಯುವ ಮೂಲಕ ಕೊನೆಯ ಸ್ಥಾನದಲ್ಲಿದೆ.
ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಒಟ್ಟು 6,37,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2,69,212 ಬಾಲಕಿಯರು ಉತ್ತೀರ್ಣರಾಗಿದ್ದು, 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ
ನಗರ ಪ್ರದೇಶದಲ್ಲಿ 5,03,300 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 3,75,188 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ 1,34,505 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದು ಆ ಪೈಕಿ 92,251 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ-1ನ್ನು 2025 ಮಾರ್ಚ್ 01 ರಿಂದ ಮಾರ್ಚ್ 20 ರವರೆಗೆ ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದಂತ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 76 ಮೌಲ್ಯಮಾಪನ ಕೇಂದ್ರಗಳಲ್ಲಿ ಮಾರ್ಚ್ 21 ರಿಂದ ಏಪ್ರಿಲ್ 02 ರವರೆಗೆ 28,092 ಮೌಲ್ಯಮಾಪಕರಿಂದ ನಡೆಸಲಾಗಿದೆ.
ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ, ವಿದ್ಯಾರ್ಥಿಗಳು https://karresults.nic.in ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದು. 2025ರ ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು 2025 ರ ಏಪ್ರಿಲ್ 24 ರಿಂದ ಮೇ 08 ನಡೆಸಲಾಗುವುದು.
2025ರ ದ್ವಿತೀಯ ಪಿಯುಸಿ ಪರೀಕ್ಷೆ-2/ ಪರೀಕ್ಷೆ-3ಕ್ಕೆ ಎಲ್ಲಾ ವರ್ಗದ ಬಾಲಕಿಯರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವರ್ಗ-1ರ ಬಾಲಕರಿಗೆ ಪುನರಾವರ್ತಿತ/ಅಪೂರ್ಣ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಲು ಪರೀಕ್ಷಾ ಶುಲ್ಕ ಇರುವುದಿಲ್ಲ.
2025ರ ದ್ವಿತೀಯ ಪಿಯುಸಿ ಪರೀಕ್ಷೆ-3 ನ್ನು 2025 ಜೂನ್ 9 ರಿಂದ 21 ರವರೆಗೆ ನಡೆಸಲಾಗುವುದು. 2025ರ ದ್ವಿತೀಯ ಪಿಯುಸಿ ಪರೀಕ್ಷೆ-1 ಕ್ಕೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಪರೀಕ್ಷೆ-2/ಪರೀಕ್ಷೆ-3ಕ್ಕೆ ಮಂಡಲಿಯ ನಿಯಮಾನುಸಾರ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಶಾಲಾಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಣೆ ತಿಳಿಸಿದೆ.