ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿ ಸಿದ್ಧಗಂಗಾ ಸ್ವಾಮೀಜಿ ಪರಮಗುರಿ : ಎಚ್.ಎಂ. ರೇವಣ್ಣ
ಬೆಂಗಳೂರು, ಏ,1; ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಚಿಂತನೆಗಳು ಜನ ಕೇಂದ್ರಿತವಾಗಿದ್ದು, ಶಿಕ್ಷಣದ ಮೂಲಕ ಅಭಿವೃದ್ಧಿ ಹೊಂದಿದ ಸಮಾಜ ನಿರ್ಮಿಸುವುದು ಅವರ ಪರಮಗುರಿಯಾಗಿತ್ತು ಎಂದು ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದ್ದಾರೆ.
ರಾಜಾಜಿನಗರದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಟ್ರಸ್ಟ್ ನಿಂದ ಡಾ. ಶಿವಕುಮಾರ ಸ್ವಾಮೀಜಿ ಅವರ 118 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸ್ವಾಮೀಜಿ ರೈತರು ಮತ್ತು ಜಾನುವಾರಗಳ ಸಂಕಷ್ಟಗಳ ನಿವಾರಣೆಗೆ ಆಸಕ್ತರಾಗಿದ್ದರು. ಸಿದ್ದಗಂತೆಯಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ಅಲ್ಲಿ ರೈತರು, ರಾಸುಗಳಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬ ಕಾಳಜಿಯನ್ನು ಅವರು ಹೊಂದಿದ್ದರು. ರೈತಾಪಿ ಜನರಿಗೆ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಜಗಜ್ಯೋತಿ ಬಸವೇಶ್ವರರ ನಾಟಕ ನೋಡಿ ಮಹಾ ಮಂಗಳಾರತಿ ಆದ ನಂತರ ಅಲ್ಲಿಂದ ಹೊರಡುತ್ತಿದ್ದರು. 18 ಸಾವಿರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ರಾಜ್ಯದ ಅತಿ ದೊಡ್ಡ ತ್ರಿವಿಧ ದಾಸೋಹ ಮಠ ನಮ್ಮದು ಎಂಬ ಎಂದರು.
ಡಾ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ತುಮಕೂರಿನ ಮಹಿಳಾ ಕಾಲೇಜಿನ ಜಾಗವನ್ನು ಕಬಳಿಸಲು ಕೆಲವರು ಪ್ರಯತ್ನಿಸುತ್ತಿರುವ ಬಗ್ಗೆ ಸ್ವಾಮೀಜಿ ಅವರು ನನಗೆ ಮಾಹಿತಿ ನೀಡಿದರು. ಆಗ ಕಾಲೇಜಿನ ಜಾಗವನ್ನು ಮಠಕ್ಕೆ ಉಳಸಿಕೊಟ್ಟಿರುವುದು ತಮಗೆ ಅತ್ಯಂತ ಸಂತಸ ತರುವ ಸಂಗತಿ ಎಂದರು.
ಚಲನಚಿತ್ರ ನಿರ್ಮಾಪಕ ಮತ್ತು ಲೇಖಕ ಬಿ.ಕೆ. ಶ್ರೀನಿವಾಸ್ [ಬೆಂಕೋಶ್ರೀ] ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಅತ್ಯಂತ ಅರ್ಥಪೂರ್ಣವಾಗಬೇಕು. ಅದೇ ಮಾತು, ಅದೇ ವಚನ, ಅದೇ ರೀತಿಯ ಕಾರ್ಯಕ್ರಮಗಳು ಸಲ್ಲದು. ಈಗಿನ ಕಾಲದ ಮಕ್ಕಳು ಒಳಗೊಂಡಂತೆ ಎಲ್ಲರಿಗೂ ಸಲ್ಲುವ ಶಾಶ್ವತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ದಿವ್ಯಾಂಗರು, ಅಶಕ್ತರು, ನಿರಾಶ್ರಿತರಿಗೆ ನೆರವು ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ತನ್ಮೂಲಕ ಸ್ವಾಮೀಜಿ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬೇಲಿಮಠದ ಶಿವರುದ್ರ ಮಹಾ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಂಪುರ ಜಿ. ವೆಂಕಟೇಶ್, ಟ್ರಸ್ಟ್ ಅಧ್ಯಕ್ಷರಾದ ಟಿ. ವೆಂಕಟೇಶ್ ಗೌಡ, ಉಪಾಧ್ಯಕ್ಷ ಕ್ರಾಂತಿರಾಜು, ಸಲಹೆಗಾರರಾದ ಪಾಲನೇತ್ರ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.