NationalCollege- ಬಸವನಗುಡಿ ನ್ಯಾಷನಲ್‌ ಕಾಲೇಜಿನ 10 ನೇ ಘಟಿಕೋತ್ಸವ : 577 ವಿದ್ಯಾರ್ಥಿಗಳಿಗೆ ಪದವಿ, 9 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ.

varthajala
0
2025 ಕೃತಕ ಬುದ್ದಿ ಮತ್ತೆ ವರ್ಷವಾಗಿ ವಿಜೃಂಭಿಸಲಿದೆ – ಎಐಸಿಟಿಇ ಅಧ್ಯಕ್ಷ ಪ್ರೊ. ಜಿ.ಟಿ. ಸೀತಾರಾಮ್‌

ಬೆಂಗಳೂರು, ಮಾ, 9; ಆಧುನಿಕ ಯುಗದಲ್ಲಿ ಕೃತಕ ಬುದ್ದಿಮತ್ತೆ ನಿರ್ಣಾಯಕ ಪಾತ್ರ ವಹಿಸಲಿದ್ದು, 2025 “ಕೃತಕ ಬುದ್ದಿ ಮತ್ತೆ ವರ್ಷ” ವಾಗಿ ವಿಜೃಂಭಿಸಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ. ಜಿ.ಟಿ. ಸೀತಾರಾಮ್‌ ಹೇಳಿದರು .


ನಗರದ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕದ ಬಸವನಗುಡಿಯ ನ್ಯಾಷನಲ್‌ ಕಾಲೇಜಿನ 10 ನೇ ಘಟಿಕೋತ್ಸವದಲ್ಲಿ 577 ವಿದ್ಯಾರ್ಥಿಗಳಿಗೆ ಪದವಿ, 9 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ತಲಾ 9 ಮಂದಿಗೆ ಬೆಳ್ಳಿ ಮತ್ತು ಕಂಚಿನ ಪದಕ ವಿತರಿಸಲಾಯಿತು. ಘಟಿಕೋತ್ಸವ ಭಾಷಣ ಮಾಡಿದ ಅವರು, ಈ ವರ್ಷದಲ್ಲಿ ತಂತ್ರಜ್ಞಾನ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ. ಹೀಗಾಗಿ ವಿದ್ಯಾರ್ಥಿ ಸಮುದಾಯ ತಾಂತ್ರಿಕ ಕೌಶಲ್ಯವಷ್ಟೇ ಅಲ್ಲದೇ ಸಮಸ್ಯೆಗಳನ್ನು ಬಗೆಹರಿಸುವ, ನಾಯಕತ್ವ ರೂಪಿಸುವ ಪರಿಣಿತಿಯನ್ನು ವೃದ್ಧಿಸಿಕೊಳ್ಳಬೇಕು. ತಂತ್ರಜ್ಞಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡಬೇಕು. ಕೃತಕ ಬುದ್ದಿಮತ್ತೆ ಯುಗದಲ್ಲಿ ನೈತಿಕ ಮೌಲ್ಯ ಅತ್ಯಂತ ಅಗತ್ಯವಾಗಿದೆ. ಹೊಸ ವಿಧಾನಗಳನ್ನು ಗುರುತಿಸುವ, ಅರಿಯುವ ಚಾಣಕ್ಷತನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

1980 ರ ಸಮಯದಲ್ಲಿ ಕಂಪ್ಯೂಟರ್‌ ಬಂದಾಗ ಬ್ಯಾಂಕ್‌ ಸಿಬ್ಬಂದಿ ನಮ್ಮ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ತೀವ್ರ ಹೋರಾಟ ಮಾಡಿದ್ದರು. ಆದರೆ ಈಗ ಎಐ ತಂತ್ರಜ್ಞಾನದಿಂದಲೂ ಕೆಲವು ಉದ್ಯೋಗಗಳು ನಷ್ಟವಾಗಬಹುದು. ಡೀಪ್‌ ಫೇಕ್‌ ಬಗ್ಗೆಯೂ ಇದೇ ರೀತಿಯ ಕಳವಳ ವ್ಯಕ್ತವಾಗಿತ್ತು. 2022 ರ ನವೆಂಬರ್‌ ನಲ್ಲಿ ಚಾಟ್‌ ಜಿಟಿಪಿ ಬಂದಾಗಲೂ ಭೀತಿಯ ವಾತಾವರಣ ಇತ್ತು. ಚಾಟ್‌ ಜಿಟಿಪಿ ತಂತ್ರಜ್ಞಾನದಲ್ಲಿ ಕೇವಲ 20 ಸೆಕೆಂಡ್‌ ಗಳಲ್ಲಿ ಕನ್ನಡ ಕವನವನ್ನೂ ಸಹ ಹೊರ ತರಬಹುದು. 


ಇದೇ ರೀತಿ ಕೃತಕ ಬುದ್ದಿಮತ್ತೆಯಿಂದ ನೈಜವಾಗಿ ಸಂಗೀತ ಸಂಯೋಜನೆ ಮಾಡಬಹುದಾಗಿದೆ. ಹೀಗಾಗಿ ಕಲಾವಿದರು, ಕವಿಗಳು ಒಳಗೊಂಡಂತೆ ಹಲವು ಹುದ್ದೆಗಳನ್ನು ತಂತ್ರಜ್ಞಾನ ಕಸಿಯಲಿದೆ ಎಂಬ ಆತಂಕವಿದೆ. ಆದರೆ ಇದು ಶಕ್ತಿಶಾಲಿ ಸಾಧನ ಎಂದರು.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಎಐ ಸಮಾವೇಶದಲ್ಲಿ ಮಾತನಾಡಿ, ವ್ಯಕ್ತಿಗಳ ಆರೋಗ್ಯದ ಮಾಹಿತಿ ಪಡೆದು ಎರಡು ಮೂರು ನಿಮಿಗಳಲ್ಲಿ ಸಂಪೂರ್ಣ ಸಾರಂಶವನ್ನು ನೀಡುವ ಸಾಮರ್ಥ್ಯವನ್ನು ಕೃತಕ ಬುದ್ದಿ ಮತ್ತೆ ಹೊಂದಿದೆ ಎಂಬುದನ್ನು ಅನಾವರಣಗೊಳಿಸಿದರು. ಬೆಂಗಳೂರು ಐಟಿ ರಾಜಧಾನಿಯಾಗಿ ಹೊರ ಹೊಮ್ಮಿದ್ದು, ನಾವೀಗ ಕೌಶಲ್ಯ, ಮೇಲ್ದರ್ಜೆಗೇರಿಸಿದ ಕೌಶಲ್ಯ, ಮರು ಕೌಶಲ್ಯಗಳನ್ನು ನಿರಂತರವಾಗಿ ಮೈಗೂಡಿಸಿಕೊಳ್ಳಬೇಕು. ಇಂದು ಪದವಿ ಗಳಿಸಿದರೆ ಸಾಲದು ಪೂರಕ ಶಿಕ್ಷಣ ಕಲಿಕೆ ಅಗತ್ಯವಾಗಿದೆ ಎಂದು ಹೇಳಿದರು.

ಅಧ್ಯಯನಕ್ಕೆ ಕೊನೆಯಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿರಂತರ ಓದಿಗೆ ಒತ್ತು ನೀಡಲಾಗಿದೆ. ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ಕಲಿತು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು. ಕೃತಕ ಬುದ್ದಿಮತ್ತೆಗೆ ಪರ್ಯಾಯವಿಲ್ಲ. ಎಲ್ಲಾ ಪೀಳಿಗೆಗೆ ಬೇಕಾಗುವ ಬುದ್ದಿಮತ್ತೆ ಇದೀಗ ಲಭ್ಯವಿದೆ. ಇದನ್ನು ಕ್ರೌಡ್‌ ಇಂಟಲಿಜೆನ್ಸಿ ಎಂದು ಕರೆಯಲಾಗುತ್ತದೆ ಎಂದು ಪ್ರೊ. ಜಿ.ಟಿ. ಸೀತಾರಾಮ್‌ ಹೇಳಿದರು.

ಶಾಸಕ ಡಾ. ಉದಯ್‌ ಗರುಡಾಚಾರ್‌ ಮಾತನಾಡಿ, ನ್ಯಾಷನಲ್‌ ಕಾಲೇಜು ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆ. ಇಲ್ಲಿ ಕಲಿಕೆಗೆ ವ್ಯಾಪಕ ಅವಕಾಶಗಳಿದ್ದು, ಇದನ್ನು ವಿದ್ಯಾರ್ಥಿ ಸಮುದಾಯ ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ಶಿಲ್ಪಿ ಡಾ. ಎಚ್.ನರಸಿಂಹಯ್ಯ ಅವರ ನೆನಪುಗಳು ಇಲ್ಲಿ ಅಚ್ಚಳಿಯದೇ ಉಳಿದಿವೆ ಎಂದು ಹೇಳಿದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕದ ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾ ರೆಡ್ಡಿ ಮಾತನಾಡಿ , ರಾಷ್ಟ್ರ ನಿರ್ಮಾಣ ಮಾಡುವ ಶಿಕ್ಷಣ ನೀಡುವ ಮೂಲಕ ನಮ್ಮ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಎಲ್ಲಾ ಮೌಲ್ಯಗಳನ್ನು ಪ್ರತಿಪಾದಿಸುವ, ನೈತಿಕ ಆಡಳಿತವಿರುವ ಮಹೋನ್ನತ ಸಂಸ್ಥೆ ಎಂದು ಬಣ್ಣಿಸಿದರು.


ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಡಾ. ಎಚ್. ಎನ್.‌ ಸುಬ್ರಮಣ್ಯ, ಉಪಾಧ್ಯಕ್ಷ ಜಿ.ವೈ. ಮಧುಸೂಧನ್‌, ಗೌರವ ಕಾರ್ಯದರ್ಶಿ ಬಿ.ಎಸ್.‌ ಅರುಣ್‌ ಕುಮಾರ್‌, ಖಜಾಂಚಿ ತಲ್ಲಂ ಆರ್.‌ ದ್ವಾರಕಾನಾಥ್, ಜಂಟಿ ಕಾರ್ಯದರ್ಶಿ ಸುಧಾಕರ ಇಸ್ತೂರಿ, ಸಹ ಉಪಾಧ್ಯಕ್ಷ ವಿ. ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)