ಅಪಾಯ - ಎಚ್ಚರ - ಸ್ವಲ್ಪ ಜಾಗೃತರಾಗಿ......

varthajala
0

ಎಲ್ಲೆಲ್ಲೂ ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್ ಮುಂತಾದ ಜೂಜಾಟಗಳದೇ ಅಬ್ಬರ. ಬಸ್ಸು, ರೈಲು, ಯಾವುದೇ ನಿಲ್ದಾಣಗಳು, ಪಾರ್ಕ್, ಸೋಮಾರಿ ಕಟ್ಟೆಗಳಲ್ಲಿ ಸಾಕಷ್ಟು ಜನ ಈ ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. 

ದೇಶದ ಅತ್ಯಂತ ಪ್ರಖ್ಯಾತ ಜನಪ್ರಿಯ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು ಈ ಬೆಟ್ಟಿಂಗ್ ದಂಧೆಯ ರೋಲ್ ಮಾಡೆಲ್ ಗಳಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ಈ ಜೂಜಿನಾಟದಿಂದ ಯಥೇಚ್ಛ ಹಣ ಹರಿದು ಬರುತ್ತಿದೆ. ಸಾಮಾನ್ಯ ಜನರ ಬದುಕಿನ ಸಮಾಧಿಯ ಮೇಲೆ ಮಹಡಿ ಕಟ್ಟುವ ನೀಚ ಮನಸ್ಥಿತಿಯಲ್ಲಿ ಅವರಿದ್ದಾರೆ. 

ಬಹುಶಃ ಇಡೀ ಜಗತ್ತಿನಲ್ಲಿ ಬಹುದೊಡ್ಡ ಮನರಂಜನಾ ಉದ್ಯಮವಿರುವುದು ಭಾರತದಲ್ಲೇ ಇರಬೇಕು. ಭಾರತದಲ್ಲಿ ಸಿನಿಮಾ, ಓಟಿಟಿ, ಧಾರವಾಹಿ, ಜಾಹಿರಾತುಗಳ ಉದ್ಯಮ ಬಹುದೊಡ್ಡದಾಗಿ ಬೆಳವಣಿಗೆ ಹೊಂದಿದೆ. ಅದರ ಅರ್ಥ ಇಲ್ಲಿನ ಬಹಳಷ್ಟು ಜನ ಭ್ರಮಾಧೀನರು, ವಾಸ್ತವದಿಂದ ಪಲಾಯನವಾಗುವವರು, ತಮ್ಮ ನೋವು ಸಂಕಷ್ಟಗಳನ್ನು ಮರೆಯಲು ಮನರಂಜನೆಯ ಚಟಕ್ಕೆ ಬೀಳುವವರು ಎಂದೆನಿಸುತ್ತದೆ. ಕಷ್ಟಗಳಿಗೆ ಪರಿಹಾರ ಸಿಗದಿದ್ದಾಗ ಕನಿಷ್ಠ ಭ್ರಮಾತ್ಮಕ ಮನರಂಜನೆಯಾದರು ಸಿಗಲಿ ಎಂಬುದೇ ಅವರ ನಿರೀಕ್ಷೆಯಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಜೂಜಾಟ ಎಂಬುದು ಅತ್ಯಂತ ಕೆಟ್ಟ ಚಟಗಳಲ್ಲಿ ಒಂದು. ಅದು ಅಂದಿನ ಪುರಾತನ ಕಾಲದ ಮಹಾಗ್ರಂಥ ಮಹಾಭಾರತದಲ್ಲಿ ಜೂಜಾಟದಿಂದಲೇ ಆದ ಕುರುಕ್ಷೇತ್ರ ಯುದ್ದ ಮತ್ತು ಇಡೀ ಸಾಮ್ರಾಜ್ಯದ ಪತನಕ್ಕೆ ಸಾಕ್ಷಿಯಾಗಿ ನಿಂತಿದೆ. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಜೂಜಾಟ ಅಷ್ಟೊಂದು ಅಪಾಯಕಾರಿಯಾಗಿತ್ತು. 

ಇದೀಗ ಅದನ್ನು ಅಧಿಕೃತಗೊಳಿಸುವ ಮೂಲಕ ಇಡೀ ಸಮಾಜದ ಸರ್ವನಾಶಕ್ಕೆ ಕಾರಣವಾಗುತ್ತಿರುವುದು ದುರಂತ. ಈ ವಿಷಯದಲ್ಲಿ ಆಡಳಿತಗಾರರು ಕಣ್ಮುಚ್ಚಿ ಕುಳಿತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ.

ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ......

ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಾಳೆಯಿಂದ ಪ್ರಾರಂಭ......

ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು - ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ.....

ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ.......

ಈ ಆಟ ಒಂದು ದೊಡ್ಡ ಆರ್ಥಿಕ ಚಟುವಟಿಕೆಗಳನ್ನು ಹೊಂದಿದೆ ಎಂಬುದು ನಿಜ. ಆದರೆ ಅಷ್ಟೇ ಸಮಾಜ ಘಾತಕವೂ ಆಗಿದೆ. 

ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ‌ಸಮಾಧಾನಕರ ಉತ್ತರ ಹೇಳಬಹುದು. ಆದರೆ ಈ ಕೊಳ್ಳುಬಾಕ ಸಂಸ್ಕೃತಿ - ಕಾರ್ಪೊರೇಟ್ ವ್ಯವಸ್ಥೆ, ಜನರ ದುರಾಸೆಯ ಪ್ರವೃತ್ತಿ, ಸುಲಭವಾಗಿ ಹಣ ಮಾಡಬೇಕು ಎಂಬ ಮನೋಭಾವ ಎಲ್ಲವೂ ಇರುವಾಗ ಅವರಿಗೆ ಇದೇ ಲಾಭದ ಮಾರ್ಗಗಳು. ಇದನ್ನು ಕೇವಲ ಹಣದ ದೃಷ್ಟಿಯಿಂದ ಮಾತ್ರ ನೋಡದೆ ವ್ಯವಸ್ಥೆಯ ಅಧಃಪತನದ ಹಾದಿಯಾಗಿ ಗುರುತಿಸಬೇಕು.

ವಿವಿಧ ರೀತಿಯ ಆಕರ್ಷಕ ಲಾಭದ ಬೆಟ್ಟಿಂಗ್ ಆ್ಯಪ್ ಗಳು ಮೊಬೈಲ್ ಮಾರುಕಟ್ಟೆಯಲ್ಲಿ ದಾಳಿ ಇಟ್ಟಿವೆ. ಸಾಕಷ್ಟು ಮಧ್ಯಮ ವರ್ಗದ ಜನರೇ ಇದರಲ್ಲಿ ಹಣ ಹೂಡುತ್ತಾರೆ. ಈ ಜೂಜಿನಲ್ಲಿ ಲಾಭ ಮಾಡಿ ಯಶಸ್ವಿಯಾದವರು‌ ತುಂಬಾ ತುಂಬಾ ಕಡಿಮೆ. ನಷ್ಟ ಅನುಭವಿಸಿ ಎಲ್ಲವನ್ನೂ ಕಳೆದುಕೊಂಡವರು ಕೊನೆಗೆ ಪ್ರಾಣವನ್ನೂ ಕಳೆದುಕೊಂಡವರೇ ಹೆಚ್ಚು.

ಪ್ರಾರಂಭದಲ್ಲಿ ಸರಳವಾಗಿ ಖುಷಿ ಖುಷಿಯಾಗಿ ಇದು ನಮ್ಮನ್ನು ಸೆಳೆಯತೊಡಗುತ್ತದೆ. ಹಾಗೆಯೇ ಮುಂದುವರೆದಂತೆ ಆಳಕ್ಕೆ ಎಳೆದೊಯ್ಯುತ್ತದೆ. ಕೊನೆಗೆ ನಮ್ಮ ಅಸ್ತಿತ್ವವನ್ನೇ ಮರೆಸುತ್ತದೆ. ನಮ್ಮ ಭಾವನೆಗಳನ್ನು ಬೆಟ್ಟಿಂಗ್ ನಿಯಂತ್ರಿಸುತ್ತದೆ. ಮಾನ, ಮರ್ಯಾದೆ, ಕುಟುಂಬದ ಜವಾಬ್ದಾರಿ, ಭವಿಷ್ಯದ ಕಷ್ಟಗಳು ಯಾವುದೂ ಆ ಕ್ಷಣದಲ್ಲಿ ನೆನಪಾಗದಂತೆ ಮಾಡುತ್ತದೆ.

ನಮ್ಮಲ್ಲಿ ಸೋಮಾರಿತನ ಬೆಳೆಸುತ್ತದೆ. ಹಣಕ್ಕಾಗಿ ಯಾರನ್ನು ಬೇಕಾದರೂ ಅಂಗಲಾಚುವ, ಏನನ್ನೂ ಬೇಕಾದರೂ ಮಾಡುವ, ಯಾವುದನ್ನು ಬೇಕಾದರೂ ಮಾರುವ ಮನಸ್ಥಿತಿ ಸೃಷ್ಟಿ ಮಾಡುತ್ತದೆ. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕರು ಇದರಿಂದ ಹೊರಬರಲಾಗದೆ ಹತಾಶರಾಗುತ್ತಾರೆ. ಕೆಲವರು ದುಷ್ಚಟಗಳಿಗೆ ಬಲಿಯಾದರೆ, ಮತ್ತೆ ಕೆಲವರು ಎಲ್ಲವನ್ನೂ ಕಳೆದುಕೊಂಡು ತೀರಾ ಕೆಳಹಂತಕ್ಕೆ ಕುಸಿದರೆ, ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಊರು ಬಿಟ್ಟು ಓಡಿ ಹೋಗುವವರು, ಸಂಸಾರದಿಂದ ವಿಚ್ಚೇದಿತರಾಗುವವರು, ಮಾನಸಿಕ ಖಿನ್ನತೆಗೆ ಒಳಗಾಗುವವರು ಸಹ ಸಾಕಷ್ಟು ಜನರಿದ್ದಾರೆ.

ಇದು ಅಧೀಕೃತವಾದರು - ಅನಧೀಕೃತವಾದರು ಪರಿಣಾಮಗಳಲ್ಲಿ ಅಂತಹ ವ್ಯತ್ಯಾಸವೇನು ಆಗುವುದಿಲ್ಲ. ಕಾರಣ ಈ‌ ನೆಲದ ಸಂಸ್ಕೃತಿಗೆ ಈ‌ ಬೆಟ್ಟಿಂಗ್ ಒಗ್ಗುವುದಿಲ್ಲ. ಶ್ರಮ ಸಂಸ್ಕೃತಿ, ಕಾಯಕವೇ ಕೈಲಾಸ, ಉದ್ಯೋಗಂ ಪುರುಷ ಲಕ್ಷಣಂ, ಎಂಬ ಮಾತುಗಳ ಜೊತೆಗೆ ಅನೇಕ ಗಾದೆ ಮಾತುಗಳು ಈ ರೀತಿ ಸುಲಭವಾಗಿ ಬಂದ ಹಣ ಉಳಿಯುವುದಿಲ್ಲ ಅಥವಾ ಅದು ನಮ್ಮನ್ನು ದಾರಿ ತಪ್ಪಿಸುತ್ತದೆ ಎಂದೇ ಅನುಭವದಿಂದ ಸಾಬೀತಾಗಿದೆ.

ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ, ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ, ಜನರ ಹುಚ್ಚು ಮನಸ್ಸಿನ ಹೊಳೆಯಲ್ಲಿ ಬೆಟ್ಟಿಂಗ್ ನಿಲ್ಲಿಸುವುದು ಅಥವಾ ಇಲ್ಲದಂತೆ ಮಾಡುವುದು ಕಷ್ಟ. ಅದಕ್ಕೆ ಬದಲಾಗಿ ನಾವುಗಳೇ ಆ ಚಟಕ್ಕೆ ಬಲಿಯಾಗದಂತೆ ಸ್ವಯಂ ನಿಯಂತ್ರಣ ಹೊಂದಬೇಕು ಮತ್ತು ನಮ್ಮ ‌ಸುತ್ತಮುತ್ತಲಿನ ಪರಿಚಿತರು ಸ್ನೇಹಿತರು ಇದಕ್ಕೆ ಬಲಿಯಾಗದಂತೆ ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು.

ಸಂಘ ಸಂಸ್ಥೆಗಳನ್ನು ನಡೆಸುವವರು ತಮ್ಮ ಸದಸ್ಯರುಗಳಿಗೆ ಸಾಧ್ಯವಾದಷ್ಟು ಎಚ್ಚರಿಕೆ ನೀಡಬೇಕು.......

ಒಂದು ಅತ್ಯುತ್ತಮ ಆಟ ನಿಧಾನವಾಗಿ ಮನರಂಜನೆಯ ಹೆಸರಿನಲ್ಲಿ ದೊಡ್ಡ ಉದ್ಯಮವಾಗಿ ಬೆಳೆದು ಬೆಟ್ಟಿಂಗ್ ದಂಧೆಯಾಗಿ ಮಾರ್ಪಟ್ಟು ಒಂದು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ದುರ್ಗತಿಗೆ ಕಾರಣವಾಗುತ್ತಿರುವುದು ನಮ್ಮ ಸಮಾಜದ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ. 

ಆಡಳಿತಾತ್ಮಕ ವ್ಯವಸ್ಥೆ ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ. ಐ ಪಿ ಎಲ್ ಅಥವಾ ಅದರಿಂದಾಗುವ ಬೆಟ್ಟಿಂಗ್ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿ ಎಂದು ಆಶಿಸುತ್ತಾ..........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್.ಕೆ.

9844013068.........

[29/03, 5:30 am] Vivekananda H K Vivek: ಯುಗಾದಿ.....


" ಉಳ್ಳವರು ಶಿವಾಲಯ ಮಾಡುವರು, 

ನಾನೇನ ಮಾಡಲಿ ಬಡವನಯ್ಯ, 

ಎನ್ನ ಕಾಲೇ ಕಂಬ, 

ದೇಹವೇ ದೇಗುಲ 

ಶಿರವೇ ಹೊನ್ನ ಕಳಸವಯ್ಯ, ಕೂಡಲಸಂಗಮದೇವ ಕೇಳಯ್ಯ, 

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ........"


ಎಂಬ ಬಸವಣ್ಣನವರ ವಚನದ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತಾ...


"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ,

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ......"

               

ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನದ ಸಾಲುಗಳನ್ನು ಗುನುಗುತ್ತಾ.......


ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ.....


ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸಸ್ಯ ಲೋಕ ಚಿಗುರಿದಾಗ ಕಾಣುವ ಸಂಭ್ರಮ ನಮ್ಮ ಅರಿವಿಗೆ ಬರುತ್ತದೆ........


ಹಬ್ಬಗಳ ಧಾರ್ಮಿಕ ಮಹತ್ವ ಏನೇ ಇರಲಿ ಸಾಂಸ್ಕೃತಿಕವಾಗಿ ಹಬ್ಬಗಳು ಜೀವನೋತ್ಸಾಹದ ಕುರುಹುಗಳು. ಸಂಬಂಧಗಳನ್ನು ಬೆಸೆಯುವ ಮತ್ತು ಪುನರ್ ಸ್ಥಾಪಿಸುವ ಪ್ರಕ್ರಿಯೆಗಳ ಚಾಲನಾ ಶಕ್ತಿ.......


ವೈವಿಧ್ಯಮಯ ಭಾರತದಲ್ಲಿ ಹಬ್ಬಗಳನ್ನು ವಿಜೃಂಭಿಸುವುದರ ಜೊತೆಗೆ ಆರ್ಥಿಕ ಅಸಮಾನತೆಯ ಇನ್ನೊಂದು ಮುಖವೂ ತೆರೆದುಕೊಳ್ಳುತ್ತದೆ. ಈಗ ಆ ಅಂತರ ಕಡಿಮೆಯಾಗಿದ್ದರೂ ಕೆಲವು ದಶಕಗಳ ಹಿಂದೆ ಹಬ್ಬಗಳು ಸಹ ಶ್ರೀಮಂತಿಕೆಯ ಪ್ರದರ್ಶನ ಒಂದು ಕಡೆ ಮತ್ತು ಬಡವರ ‌ಆರ್ಥಿಕ ನರಳಾಟ ಮತ್ತೊಂದು ಕಡೆ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿತ್ತು. ವಿಶೇಷ ಊಟ ಮತ್ತು ಹೊಸ ಬಟ್ಟೆ ಹಾಗು ಮನೆಗೆ ಸುಣ್ಣ ಬಣ್ಣ ಜೊತೆಗೆ ಹೊಸ ಮದುವೆಯ ಜೋಡಿಗಳ ಬೇಡಿಕೆ ಹೀಗೆ ಒಂದಷ್ಟು ಆರ್ಥಿಕ ಒತ್ತಡ ಬಡವರನ್ನು ಕಾಡುತ್ತಿತ್ತು........


ಜಾಗತೀಕರಣದ ನಂತರ ಭಾರತದ ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಆದರೆ ಅದರ ಪರಿಣಾಮ ಹಬ್ಬಗಳ ಪ್ರಭಾವವೂ ಕ್ಷೀಣಿಸಿತು ಮತ್ತು ಹೆಚ್ಚು ಕೃತಕವಾಯಿತು. ಅದು ಎಂದಿನಂತೆ ಒಂದು ಸಹಜ ಬದಲಾವಣೆ ಎಂದು ಭಾವಿಸಬಹುದು......


ಸಾಮಾನ್ಯವಾಗಿ ಗ್ರಾಮೀಣ ಭಾಗದ ಯುಗಾದಿ ಹಬ್ಬವೆಂದರೆ....‌


ತಲೆಗೆ ಎಣ್ಣೆ ಹಚ್ಚುವವರು,

ಮೈಗೆ ಎಣ್ಣೆ ತೀಡುವವರು,

ಹೊಟ್ಟೆಗೆ ಎಣ್ಣೆ ಹಾಕುವವರು,

ಹೋಳಿಗೆ ತುಪ್ಪ ಸವಿಯುವವರು,

ಕೋಳಿ, ಕುರಿ ಮಾಂಸ ಭಕ್ಷಿಸುವವರು,

ಇಸ್ಪೀಟ್ ಆಟ ಆಡುವವರು,

ಹೊಸ ಬಟ್ಟೆ ಹಾಕಿ ನಲಿಯುವವರು,

ಹೊಸ ವರ್ಷ ಸಂಭ್ರಮಿಸುವವರು,

ನವ ಜೋಡಿಗಳು,

ಹಳೆ ಬೇರುಗಳು,

ಬಡತನದ ನೋವುಗಳು,

ಸಿರಿತನದ ಖುಷಿಗಳು,

ಅಗಲಿದವರ ನೆನಪುಗಳು,

ಹುಟ್ಟಿದವರ ನಲಿವುಗಳು,


ಯುಗಾದಿ ಎಂದರೆ ಅದೊಂದು ನೆನಪಿನಾ ಹಬ್ಬ. 

ಸಿಹಿಯೂ ಇದೆ - ಕಹಿಯೂ ಇದೆ.

ಕಾಲನ ಪಯಣದಲಿ ಸಿಹಿ ಕಹಿಯಾಗಿ - ಕಹಿ ಸಿಹಿಯಾದ ಅನುಭವ ಒಂದು ವಿಸ್ಮಯ.


ಆಗ ಮಾವಂದಿರು ತಮ್ಮ ಒರಟು ಕೈಗಳಲ್ಲಿ  ಪುಟ್ಟ ಬೆತ್ತಲೆ ಮೈಗೆ ಸುಡುವ ಎಣ್ಣೆ ತಿಕ್ಕುತ್ತಿದ್ದರೆ ಅಲ್ಲೇ ನರಕ ದರ್ಶನ.

ಈಗ Massage parlor ನಲ್ಲಿ ಬಾಡಿ ಮಸಾಜ್ ಮಾಡುತ್ತಾ ಎಷ್ಟೇ ಒತ್ತಿದರೂ ಅದೊಂದು ಸ್ವರ್ಗ ಸುಖ.


ಆಗ ಕಲ್ಲಿನಲಿ ಮೈ ಉಜ್ಜಿ ಬೀದಿಯ ಸುಡು ಬಿಸಿಲಿನಲ್ಲಿ ಬಿಸಿ ನೀರಿನಲ್ಲಿ ಅಮ್ಮ ಸ್ನಾನ ಮಾಡಿಸುತ್ತಿದ್ದರೆ ಅದೊಂದು ಯಾತನಾಮಯ ಸಮಯ.

ಈಗ ಹದ ಬೆರೆತ ಬಿಸಿ ನೀರಿನ ಬಾತ್ ಟಬ್ಬಿನಲಿ ಕುಳಿತು  shower ನಲ್ಲಿ ಸ್ನಾನ ಮಾಡುತ್ತಿದ್ದರೆ ಸಮಯದ ಪರಿವೇ ಇರುವುದಿಲ್ಲ.


ಅಂದು ಹೊಸ ಬಟ್ಟೆಗಾಗಿ ತಿಂಗಳ ಮೊದಲೇ ರೋಮಾಂಚನದ ಕನಸಿನ ಅನುಭವವಾಗುತಿತ್ತು.

ಇಂದು ಈ ಸುಡು  ಬೇಸಿಗೆಯಲಿ ಬಟ್ಟೆ ತೊಡಲೇ ಉತ್ಸಾಹವಿಲ್ಲ. ಕಪಾಟಿನೊಳಗಿಂದ ಇನ್ನೂ ಧರಿಸದ ಹೊಸ ಬಟ್ಟೆಗಳು ಗಹಗಹಿಸಿ ನಗುತ್ತಿವೆ.

ಅಂದು ಹೋಳಿಗೆಯ ಹೂರಣ ಕದ್ದು ತಿನ್ನಲು ನಾನಾ ಯೋಚನೆ - ನಾನಾ ಯೋಜನೆ.

ಇಂದು ತಟ್ಟೆಯ ಮುಂದೆ ಭಕ್ಷ್ಯಭೋಜನ. ತಿನ್ನಲು ಮಾತ್ರ ನಾನಾ ಭಯ.

ಅಂದು ನೆಂಟರು ಬಂದರೆ ಸಂಭ್ರಮವೋ ಸಂಭ್ರಮ. ಜನ ಹೆಚ್ಚಾದಷ್ಟೂ ಖುಷಿಯೋ ಖುಷಿ.

ಇಂದು ಅತಿಥಿಗಳು ಬಂದರೆ ಏನೋ ಕಸಿವಿಸಿ. ಅದಕ್ಕಿಂತ ಟಿವಿಯೇ ವಾಸಿ ಎನಿಸುತ್ತದೆ.

ಅಂದು ಶಿಸ್ತಿನ ಅಪ್ಪ ದೆವ್ವದಂತೆ ಕಾಣುತ್ತಿದ್ದರು.

ಇಂದು ಫೋಟೋ ಆಗಿರುವ ಅಪ್ಪನೇ ದೇವರು.

ಅಂದು ಬುಧ್ಧ ಬಸವ ಗಾಂಧಿ ಸುಭಾಷ್ ಅಂಬೇಡ್ಕರ್ ಆಜಾದ್ ಗಳೇ ಆದರ್ಶ.

ಇಂದು ಬಿಲ್ ಗೇಟ್ಸ್, ಎಲಾನ್ ಮಸ್ಕ್, ಅಂಬಾನಿ, ಅದಾನಿ, ಮಿತ್ತಲ್, ಹಿಂದೂಜಾಗಳೇ ಆದರ್ಶ.

ಅಂದು ಸತ್ಯ, ಸರಳತೆ, ಸ್ವಾಭಿಮಾನ, ಮಾನವೀಯ ಮೌಲ್ಯಗಳೇ ಜೀವನ ಧ್ಯೇಯ.

ಇಂದು ಕಾರು, ಬಂಗಲೇ, ಒಡವೆ,  ಶ್ರೀಮಂತಿಕೆಗಳೇ ಬದುಕಿನ ಧ್ಯೇಯ.

ಆದರೂ,

ನಿರಾಸೆ ಏನಿಲ್ಲ.

ಅಂದಿಲ್ಲದ ಎಷ್ಟೋ ಸೌಲಭ್ಯಗಳು ಇಂದಿವೆ.

ಅಂದಿಲ್ಲದ ಅರಿವು ಜ್ಞಾನ ಇಂದಿದೆ. 

ಅಂದಿಲ್ಲದ ಅನುಭವ ಇಂದಿದೆ. 

ಅರಿತು ಬಾಳಿದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲ.......

ಏನೂ ಇಲ್ಲದಿದ್ದಾಗ ಎಲ್ಲವನ್ನೂ ಗಳಿಸಿದೆ.

ಎಲ್ಲವೂ ಇರುವಾಗ ಏನನ್ನಾದರೂ ಸಾಧಿಸುವಾಸೆ.

ಕಾಲಾಯ ತಸ್ಮೈ ನಮ:....

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು....

ವಿವೇಕಾನಂದ. ಎಚ್. ಕೆ. 9844013068.........

Post a Comment

0Comments

Post a Comment (0)