ಶ್ರೀವಿಶ್ವಾವಸುನಾಮ ಸಂವತ್ಸರ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ. ನಮ್ಮೆಲ್ಲರ ಜೀವನದಲ್ಲಿ ಶ್ರೀಕಮಲಾಪತಿ ಮಧುಸೂದನ ದೇವರು, ಶುಭತರುವುದರ ಜತೆ, ಆರೋಗ್ಯ, ಸುಖ, ಸಂತೋಷ ಹಾಗೂ ಸಂಪತ್ತನ್ನು ಕರುಣಿಸಲಿ.
ಈ ಸಂವತ್ಸರದಲಿ ಉತ್ತಮ ಮಳೆಯಾಗಿ ಇಳೆ ತಣಿದು ಸಸ್ಯ ಶ್ಯಾಮಲೆಯಾಗಲಿ. ಗೋ ಸಂಪತ್ತು ಹೆಚ್ಚಲಿ, ಚಂದನ ಅಗರು ವೃದ್ಧಿಸಲಿ. ಪಾಂಡಿತ್ಯ ಪ್ರವರ್ಧಮಾನಕ್ಕೆ ಬರಲಿ. ಕಷ್ಟ ನಷ್ಟದಲ್ಲಿರುವ ಜನರ ಅನಿಷ್ಟ ನಿವಾರಣೆಯಾಗಲಿ. ರೋಗ ರುಜಿನ ತೊಲಗಲಿ, ಸರ್ವರೂ ಆರೋಗ್ಯವಂತರಾಗಲಿ. ನಿರ್ದೋಷನಾದ ಶ್ರೀಹರಿ ಸಕಲ ಜನರಲ್ಲಿನ ದೋಷ ನಿರ್ದೋಷಗೊಳಿಸಲಿ ಎಂದು ಬೇಡುತ್ತೇನೆ. ಪುರಾಣದ ಪ್ರಕಾರ ಬ್ರಹ್ಮದೇವರು ಮೊದಲನೇ ಯುಗವಾದ ಕೃತ ಯುಗವನ್ನು ಆರಂಭಿಸಿದ ದಿನ. ಯುಗದ ಆದಿ ಆದ್ದರಿಂದ ಈ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ವಿಶೇಷವೆಂದರೆ ಈ ಯುಗಾದಿ ದಿನದಿಂದಲೇ ಚಾಂದ್ರಮಾನಪದ್ಧತಿಯ ಕಾಲಗಣನೆ ಆರಂಭವಾಗುತ್ತದೆ. ಚಂದ್ರ ಭೂಮಿಯ ಸುತ್ತ ಸುತ್ತುವ ವೇಗದ ಗತಿ(ಚಲನೆ)ಯನ್ನು ಆಧರಿಸಿ ಚಾಂದ್ರಮಾನ ಪದ್ಧತಿಯನ್ನು ರೂಪಿಸಲಾಗಿದೆ. ಚಾಂದ್ರಮಾನ ಪದ್ಧತಿಯ ಪ್ರಕಾರ ಒಂದು ವರ್ಷದಲ್ಲಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ , ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಹಾಗೂ ಫಾಲ್ಗುಣ ಎಂಬ 12 ಮಾಸ (ತಿಂಗಳು) ಗಳು ಬರುತ್ತವೆ. ಪ್ರತಿ ತಿಂಗಳು ತಲಾ 15 ದಿನಗಳಂತೆ ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ ಶುಕ್ಲಪಕ್ಷ ಹಾಗೂ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಕೃಷ್ಣಪಕ್ಷ ಎಂಬ ಎರಡು ಪಕ್ಷಗಳು. ಈ ಪಕ್ಷಗಳಲ್ಲಿ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ,ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿಯ ನಂತರ ಶುಕ್ಲ ಪಕ್ಷದಲ್ಲಿ 15ನೇ ದಿನ ಹುಣ್ಣಿಮೆ ಮತ್ತು ಕೃಷ್ಣಪಕ್ಷದ 15ನೇ ದಿನ ಅಮಾವಾಸ್ಯೆ ಎಂಬ ತಲಾ 15 ತಿಥಿಗಳಿವೆ. ಇದು ಚಾಂದ್ರಮಾನ ಪದ್ಧತಿ. ಚಾಂದ್ರಮಾನ ಪದ್ಧತಿಯ ವರ್ಷ (ಸಂವತ್ಸರ)ದ ಮೊದಲ ದಿನ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ. ಹಾಗಾಗಿ ಈ ಪದ್ಧತಿಯನ್ನು ಅನುಸರಿಸುವವರಿಗೆ ಈ ದಿನ ಯುಗಾದಿಯಾಗಿರುತ್ತದೆ. ಹಾಗಾಗಿ ಚಾಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ. ಇದೇ ರೀತಿ ಸೂರ್ಯನ ಗತಿಯನ್ನು ಆಧರಿಸಿ ಸೌರಮಾನ ಪದ್ಧತಿಯನ್ನು ರೂಪಿಸಲಾಗಿದೆ. ಸೂರ್ಯ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಮತ್ತು ಮೀನ ಹೀಗೆ ಹನ್ನೆರಡು ರಾಶಿಗಳಲ್ಲಿ ಒಂದೊಂದು ತಿಂಗಳು ಇರುವುದರಿಂದ ಈ ಪದ್ಧತಿ ಅನುಸರಣೆಯನ್ನು ಸೌರಮಾನ ಎನ್ನಲಾಗುತ್ತದೆ. ಹಾಗಾಗಿ ಸೂರ್ಯ ಮೇಷ ರಾಶಿಗೆ ಪ್ರವೇಶಿಸುವ ಸಂಕ್ರಮಣ ದಿನದ ಮರು ದಿನವನ್ನು ಸೌರಮಾನ ಯುಗಾದಿ ಎನ್ನಲಾಗುತ್ತದೆ. ಭಾರತದಲ್ಲಿ ಈ ಎರಡೂ ಪದ್ಧತಿಯನ್ನು ಅನುಸರಿಸಲಾಗುತ್ತದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಸೌರಮಾನ ಪದ್ಧತಿ ಆಚರಿಸಲಾಗುತ್ತದೆ. ಉಳಿದಂತೆ ರಾಜ್ಯದ ಘಟ್ಟದ ಮೇಲಿನವರು, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಚಾಂದ್ರಮಾನ ಪದ್ಧತಿ ಆಚರಿಸಲಾಗುತ್ತದೆ. ದಿನಾಂಕ: 30-03-2025 ರಂದು ಬುಧವಾರ ನಮಗೆಲ್ಲಾ ಚಾಂದ್ರಮಾನ ಯುಗಾದಿ. ದಿನಾಂಕ: 14-04-2025 ರಂದು ಸೋಮವಾರ ಸೌರಮಾನ ಯುಗಾದಿ. ಚಾಂದ್ರಮಾನ ಹಾಗೂ ಸೌರಮಾನ ಹಬ್ಬದ ಆಚರಣೆಯಲ್ಲಿ ಕೆಲಬಪದ್ಧತಿಗಳ ಹೊರತು ಹೇಳಿಕೊಳ್ಳುವಂತಹ ವ್ಯತ್ಯಾಸ ಏನಿಲ್ಲ. ಆಚರಣೆಯ ದಿನಾಂಕ ಬೇರೆಯಷ್ಟೇ. ಯುಗಾದಿ ಹಬ್ಬದ ದಿನ ಮುಂಜಾನೆ ಎದ್ದು ಹೊಸ ವರ್ಷ, ಹರುಷ ತರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ. ನಂತರ ಶುದ್ಧವಾದ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅದಕ್ಕೆ ನಿಮ್ಮಲ್ಲಿ ಶ್ರೀಗಂಧದೆಣ್ಣೆ ಮತ್ತಿತರ ಸುಗಂಧದ ಎಣ್ಣೆಯಿದ್ದರೆ ಮಿಶ್ರಣ ಮಾಡಿ. ಇಲ್ಲವಾದಲ್ಲಿ ಮಾವಿನ ಚಿಗುರು, ಬೇವಿನ ಚಿಗುರು ಹಾಕಿ ಮತ್ತೆ ಸ್ವಲ್ಪ ಬಿಸಿ ಮಾಡಿ, ದೇಹಕ್ಕೆ ಈ ಎಣ್ಣೆಯನ್ನು ಹಚ್ಚಿ ಮರ್ಧನ (ಮಸಾಜ್) ಮಾಡಿಸಿಕೊಳ್ಳಿ. ಅತಿ ಹೆಚ್ಚು ಬಿಸಿಯಿಲ್ಲದ ನೀರನ್ನು ಎರೆದುಕೊಂಡು ಕಡಲೆ ಹಿಟ್ಟು ಅಥವಾ ಸೀಗೆಪುಡಿಯೊಟ್ಟಿಗೆ ಸ್ನಾನ ಮಾಡಬೇಕು. ಅಭ್ಯಂಗ ಸ್ನಾನವನ್ನು ಸ್ತ್ರೀ, ಪುರುಷ, ಬಾಲ, ವೃದ್ಧ ಎಂಬ ಭೇದವಿಲ್ಲದೆ ಎಲ್ಲರೂ ಮಾಡಬೇಕು. ಈ ಅಭ್ಯಂಗ ಸ್ನಾನ ದೇಹಕ್ಕೆ ಹಿತ ನೀಡುವುದರ ಜತೆ ಬಿಗಿದ ಸ್ನಾಯುಗಳನ್ನು ಸಡಿಲಗೊಳಿಸಿ ಬಲಗೊಳಿಸುತ್ತದೆ. ಹೊಸವರ್ಷದ ಅಂಗವಾಗಿ ಮನೆ ಮುಂದೆ ರಂಗೋಲಿ ಬಿಡಿಸಿ, ಬಾಗಿಲುಗಳಿಗೆ ಮಾವಿನ ತಳಿರಿನ ತೋರಣ ಕಟ್ಟಿ, ಬೇವಿನ ಸೊಪ್ಪು ಸಿಕ್ಕಿಸಬೇಕು. ನಂತರ ಹೊಸ ಬಟ್ಟೆ ಧರಿಸಿ, ದೇವರಿಗೆ ಯಥಾಶಕ್ತಿ ಭಕ್ತಿಯಿಂದ ಪೂಜೆ ಸಲ್ಲಿಸಿ, ತಂದೆ ತಾಯಿ ಹಾಗೂ ಹಿರಿಯರಿಗೆ ನಮಿಸಿ. ಇದಾದ ಬಳಿಕ ಮನೆ ಮಂದಿಯೊಂದಿಗೆ ದೇವರಿಗೆ ಸಮರ್ಪಿಸಿದ ಬೇವು ಬೆಲ್ಲವನ್ನು ಸ್ವೀಕರಿಸಿ. ಸಾಧ್ಯವಾದರೆ ಗ್ರಾಮದೇವತೆಗಳು ಹಾಗೂ ಇಷ್ಟ ದೇವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ. ಇಷ್ಟ, ಮಿತ್ರರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಿ. ನಂತರ ಮನೆಯಲ್ಲಿ ಸಂಭ್ರಮದಿಂದ ಹಬ್ಬದೂಟ ಸವಿಯಿರಿ. ಈ ದಿನ ಹೋಳಿಗೆ ವಿಶೇಷ. ಹಿಂದಿನ ದಿನಗಳಲ್ಲಿ ಹೊಲಗಳಲ್ಲಿ ಬೆಳೆಯುತ್ತಿದ್ದ ಕೆಂಪು ತೊಗರಿಯಲ್ಲಿ ಹೊಳಿಗೆ ಮಾಡಲಾಗುತ್ತಿತ್ತು. ಸುಗ್ಗಿ ಕಾಲದ ಬೆಳೆಯಿಂದ ಬಂದ ತೊಗರಿಯನ್ನು ನೀರಿನಲ್ಲಿ ಇಡೀ ರಾತ್ರಿ ನೆನೆಸಿ, ಮರುದಿನ ಕೆಮ್ಮಣ್ಣು ಕಟ್ಟಲಾಗುತ್ತಿತ್ತು. ನಂತರ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ, ಬೀಸುಕಲ್ಲಲ್ಲಿ ಬೀಸಿ ಬೆಳೆ ಮಾಡಲಾಗುತ್ತಿತ್ತು. ಈ ಬೇಳೆಯಿಂದ ಹೂರಣ ತಯಾರಿಸಿ ಬೇಳೆ ಹೋಳಿಗೆ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಕೊಬ್ಬರಿಯಿಂದ ಮಾಡುವ ಕಾಯಿ ಹೋಳಿಗೆ ವ್ಯಾಪಕವಾಗಿ ಚಾಲನೆಗೆ ಬಂತು. ಇದು ಮಾಡುವುದು ಸುಲಭವಾದ್ದರಿಂದ ಮಹಿಳೆಯರ ಮನಸ್ಸು ಇತ್ತ ವಾಲಿತು. (ಮೊದಲೆಲ್ಲಾ ಅಪರೂಪಕ್ಕೆ ವಿಶೇಷ ಸಂದರ್ಭಗಳಲ್ಲಿ ಮಾಡುತ್ತಿದ್ದ ಹೋಳಿಗೆ ಈಗ ದಿನ ನಿತ್ಯ ಉಣ್ಣುವ ಸಿಹಿಯಾಗಿದೆ. ಎಲ್ಲ ಸಭೆ ಸಮಾರಂಭಗಳಲ್ಲಿ ಈಗ ಭರ್ಜರಿಯಾಗಿ ಬಡಿಸಲಾಗುತ್ತದೆ. ಹೋಟೆಲುಗಳಲ್ಲೂ ಸದಾ ದೊರೆಯುತ್ತವೆ. ಹಾಗಾಗಿ ಅಪರೂಪಕ್ಕೆ ಸವಿದು, ಹೋಳಿಗೆ ರುಚಿಯನ್ನು ಆಸ್ವಾದಿಸುವ ಅವಕಾಶ ಕುಂಟಿತವಾಗಿದೆ.) ದೇವರು ಬಡತನ ಕೊಡಬಹುದು, ಆದರೆ ಕೊಳೆತನ ಕೊಡುವುದಿಲ್ಲ ಎಂಬುದು ಮನದಲ್ಲಿರಲಿ. ಅದ್ಧೂರಿ, ಆಡಂಬರ ಇಲ್ಲದಿದ್ದರೂ ಶುದ್ಧತೆ ಹಾಗೂ ಶುದ್ಧ ಮನಸ್ಸಿನಿಂದ ಹಬ್ಬ ಆಚರಣೆ ಮಾಡಿ. ಈ ದಿನದ ವಿಶೇಷ ಯುಗಾದಿ ಹಬ್ಬದ ದಿನ ಮಹಾ ಪರ್ವದಿನ. ಬ್ರಹ್ಮಾಂಡ ಸೃಷ್ಠಿಯಾದ ದಿನ. ಸಾಡೇತೀನ್(ಮೂರುವರೆ) ಮೂಹೂರ್ತಗಳಲ್ಲಿ ಮೊದಲನೇ ದಿನ.ಶ್ರೀಬ್ರಹ್ಮದೇವರು ಬ್ರಹ್ಮಾಂಡ ಸೃಷ್ಠಿ ಮಾಡಿದಾಗ ಸ್ವಯಂಭುವ ಮನ್ವಂತರ, ಕೃತಯುಗ, ಪ್ರಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಪಾಡ್ಯಮಿ ತಿಥಿ, ಭಾನುವಾರ, ಅಶ್ವಿನಿನಕ್ಷತ್ರ, ವಿಷ್ಕಾಂಭ ಯೋಗ ಹಾಗೂ ಭವಕರಣವಿತ್ತು.ಮತ್ಸಾವತಾರದ ದಿನ: ರಾಕ್ಷಸನೊಬ್ಬ ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿಸಿದ್ದ, ಅವನನ್ನು ಸಂಹರಿಸಲು ಮಹಾವಿಷ್ಣು ಮತ್ಸ್ಯರೂಪ ತಾಳಿದದಿನ.ಶ್ರೀರಾಮಚಂದ್ರನ ಪಟ್ಟಾಭಿಷೇಕ: ಹದಿನಾಲ್ಕು ವರ್ಷ ವನವಾಸ ಮಾಡಿ ಅಯೋಧ್ಯೆಗೆ ವಾಪಾಸ್ಸಾದ ಶ್ರೀರಾಮಚಂದ್ರ ಮಹಾರಾಜನಿಗೆ ಪಟ್ಟಾಭಿಷೇಕವಾದ ದಿನ. ಶಾಲಿವಾಹನ ಮಹಾರಾಜನಾದ ದಿನ: ದಕ್ಷಿಣ ಭಾರತದ ಪ್ರಸಿದ್ಧ ದೊರೆ ಶಾಲಿವಾಹನ ಮಹಾರಾಜ, ಪಟ್ಟಾಭಿಷಿಕ್ತನಾದ ದಿನವಿದು. ಋತುಗಳಲ್ಲಿ ಅತ್ಯಂತ ಶ್ರೇಷ್ಠವಾದ ವಸಂತ ಋತು ಆಗಮನದ ದಿನವಿದು. ಪ್ರಕೃತಿಯಲ್ಲಿ ಮರಗಿಡ ಚಿಗುರಿ ನಳನಳಿಸುವ ಕಾಲವಿದು. ಇಂತಹ ಸಂಭ್ರಮದ ಹಬ್ಬವನ್ನು ಸಡಗರದಿಂದ ಆಚರಿಸೋಣ. ಜೀವನದಲ್ಲಿ ಕೇವಲ ಸುಖವೇ ಇರಬಾರದು, ಹಾಗೆಂದು ಕಷ್ಟದಲ್ಲಿ ಜೀವನ ನಡೆಸುವಂತಾಗಬಾರದು. ಪೂರ್ಣ ಭಾಗ ಸುಖವಿದ್ದರೂ ಆಗಾಗ ಕಷ್ಟದ ಛಾಯೆಯ ಅರಿವಾಗಬೇಕು. ಇಲ್ಲವಾದಲ್ಲಿ ಮಾನವನ ಜೀವನಕ್ಕೆ ಸಾರ್ಥಕಥೆ ಇರುವುದಿಲ್ಲ. ಮನುಷ್ಯ ಪರಿಪೂರ್ಣನಾಗಿ ಸದಾ ಸುಖದಲ್ಲೇ ತೇಲುತ್ತಿದ್ದರೆ, ಇನ್ನೊಬ್ಬರ ಕಷ್ಟ ಅರ್ಥ ಆಗುವುದಿಲ್ಲ. ಹಾಗಾಗಿ ಅಲ್ಪಸ್ವಲ್ಪ ಕಷ್ಟದ ರುಚಿ ಗೊತ್ತಾಗಬೇಕು. ಇದನ್ನು ನಮಗೆ ಮನದಟ್ಟು ಮಾಡಲೆಂದು ಹಿರಿಯರು, ಬೇವಿನ ಜತೆ ಬೆಲ್ಲ ತಿನ್ನುವಂತೆ ನಿಗಧಿ ಮಾಡಿದ್ದಾರೆ. ಹಬ್ಬದ ದಿನ ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಈ ಶ್ಲೋಕವನ್ನು ಹೇಳಿಕೊಳ್ಳಿ.ಶತಾಯಃ ವಜ್ರದೇಹಾಯ ಸರ್ವಸಂಪತ್ಕರಾಯಚ|ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ|| ( ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವಿಸುತ್ತೇನೆ ).ಬೇವು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ, *ಶತ್ರುತ್ವ ಬಿಟ್ಟು ಪ್ರೀತಿಯ ಸ್ನೇಹತ್ವ ಬೆಳೆಸೋಣಮತ್ತೊಮ್ಮೆ ಸರ್ವರಿಗೂ ಶ್ರೀವಿಶ್ವಾವಸುನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು...🌷🌷🌷. ಶ್ರೀಶ ಚರಣಾರಾಧಕ:ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.x
ಈ ಸಂವತ್ಸರದಲಿ ಉತ್ತಮ ಮಳೆಯಾಗಿ ಇಳೆ ತಣಿದು ಸಸ್ಯ ಶ್ಯಾಮಲೆಯಾಗಲಿ. ಗೋ ಸಂಪತ್ತು ಹೆಚ್ಚಲಿ, ಚಂದನ ಅಗರು ವೃದ್ಧಿಸಲಿ. ಪಾಂಡಿತ್ಯ ಪ್ರವರ್ಧಮಾನಕ್ಕೆ ಬರಲಿ. ಕಷ್ಟ ನಷ್ಟದಲ್ಲಿರುವ ಜನರ ಅನಿಷ್ಟ ನಿವಾರಣೆಯಾಗಲಿ. ರೋಗ ರುಜಿನ ತೊಲಗಲಿ, ಸರ್ವರೂ ಆರೋಗ್ಯವಂತರಾಗಲಿ. ನಿರ್ದೋಷನಾದ ಶ್ರೀಹರಿ ಸಕಲ ಜನರಲ್ಲಿನ ದೋಷ ನಿರ್ದೋಷಗೊಳಿಸಲಿ ಎಂದು ಬೇಡುತ್ತೇನೆ.