ಕನದಾಸರ ಕಾವ್ಯಗಳಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು ಕುರಿತ ವಿಚಾರ ಸಂಕಿರಣ

varthajala
2 minute read
0

ಬೆಂಗಳೂರು, ಮಾರ್ಚ್ 24 (ಕರ್ನಾಟಕ ವಾರ್ತೆ): ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಅವರ ಕಾವ್ಯಕೃತಿಗಳನ್ನು ಕೇಂದ್ರೀಕರಿಸಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು ಎಂಬ ಶೀರ್ಷಿಕೆಯಡಿ ಒಂದು ದಿನದ ವಿಚಾರ ಸಂಕಿರಣವನ್ನು 2025 ರ ಮಾರ್ಚ್ 25 ರಂದು ಬೆಂಗಳೂರಿನ ಸೆಂಟ್ ಆನ್ಸ್ ಮಹಿಳಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.


ಕನಕದಾಸರ ನಾಲ್ಕು ಕಾವ್ಯಕೃತಿಗಳಲ್ಲಿ ಅಂತರ ತಾರತಮ್ಯವಿಲ್ಲದೆ ಎಲ್ಲರನ್ನು ಒಳಗೊಳ್ಳುವ, ಎಲ್ಲವನ್ನು ಒಳಗೊಳ್ಳುವ ಆಶಯವನ್ನು ಅವರ ಕಾವ್ಯಕೃತಿಗಳು ಪ್ರತಿಪಾದಿಸಿದೆ. ಈ ಆಶಯ ಭಾರತವು ಅಂಗೀಕರಿಸಿ ಅನುಸರಿಸುತ್ತಿರುವ ಸಂವಿಧಾನದ ಆಶಯವೂ ಸಹ ಆಗಿದೆ.

"ಮೋಹನ ತರಂಗಿಣಿ ಕಾವ್ಯದಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು" ಎಂಬ ವಿಷಯ ಕುರಿತು ಚಂದ್ರಶೇಖರ ತಾಳ್ಯ, ಚಿತ್ರದುರ್ಗ ಅವರು, "ನಳಚರಿತ್ರೆ ಹರಿಭಕ್ತಿಸಾರದಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು' ಕುರಿತು ಪೆÇ್ರ. ಶಿವಣ್ಣ, ಬೆಂಗಳೂರು ಅವರು, "ರಾಮಧಾನ್ಯ ಚರಿತೆಯಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು' ಕುರಿತು ಡಾ. ಶೋಭಾರಾಣಿ, ಬೆಂಗಳೂರು ಅವರು, "ನಡೆ ಮತ್ತು ನುಡಿ ಕೀರ್ತನೆಗಳಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು" ಕುರಿತು ಡಾ. ನಾಗಣ್ಣ ಕಿಲಾರೆ, ಹೊಸಪೇಟೆ ಅವರು  ಭಾಷಣ ಮಂಡಿಸಲಿದ್ದಾರೆ.

ವಿಷಯ ಮಂಡನೆಯ ನಂತರ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿಗಳಾದ ಕರಿಯಪ್ಪ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್‍ಗೆ ಅರ್ಜಿ ಆಹ್ವಾನ

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯು “ಹದಿನಾಲ್ಕು ವಾರಗಳ ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್”ಗೆ ಅರ್ಜಿಯನ್ನು ಆಹ್ವಾನಿಸಿದೆ.

ಎಸ್.ಎಸ್.ಎಲ್.ಸಿ. ಪಾಸ್/ಫೇಲ್ ಆಗಿರುವವರು ರೂ.10-00 ಸಂದಾಯಿಸಿ ಅರ್ಜಿ ಫಾರಂಗಳನ್ನು ಸಂಯೋಜಕರು ಮತ್ತು ಮುಖ್ಯಸ್ಥರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ, ಕೃಷಿ ವಿಶ್ವ ವಿದ್ಯಾನಿಲಯ, ಜಿಕೆವಿಕೆÀ, ಬೆಂಗಳೂರು-560 065 ರವರಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ 29 ರೊಳಗೆ ಅಪರಾಹ್ನ 4.00 ಘಂಟೆಯೊಳಗೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080-23513370 ಗೆ ಸಂರ್ಪಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೂರು ದಿನಗಳ ಕಮ್ಮಟಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ. ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು ಎಂಬ ಹೆಸರಿನಲ್ಲಿ ಮೂರು ದಿನಗಳ ಕಮ್ಮಟವನ್ನು ಏಪ್ರಿಲ್ 21, 22 ಮತ್ತು 23 ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಹಾವೇರಿ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು 20 ರಿಂದ 45 ವರ್ಷ ವಯಸ್ಸುಳ್ಳ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ 5 ಕೊನೆಯ ದಿನಾಂಕವಾಗಿದೆ.  ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ ಸೈಟ್ http://karnatakasahithyaacademy.org ನಲ್ಲಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾರ್ಚ್ 27 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸಿಟ್ಟಿಂಗ್ಸ್

ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಮಾರ್ಚ್ 27 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಸಿಟ್ಟಿಂಗ್ಸ್ ನಡೆಸಲಿದೆ.

ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ ನೋಂದಣಿಯಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ, ವಿಲೇ ಮಾಡಿ ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ದೂರುದಾರರು ಹಾಗೂ ಪ್ರತಿವಾದಿ ಪ್ರಾಧಿಕಾರಗಳು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಚ್ 27 ರಂದು ಸಾರ್ವಜನಿಕರಿಂದ ದೂರುಗಳು / ಅಹವಾಲುಗಳನ್ನು ಸಹ ಸ್ವೀಕರಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕರು ನಿಗದಿತ ದಿನಾಂಕದಂದು ಆಯೋಗದ ಮಾನ್ಯ ಅಧ್ಯಕ್ಷರು (ಹಂಗಾಮಿ) ಹಾಗೂ ಮಾನ್ಯ ಸದಸ್ಯರನ್ನು ಸಂಪರ್ಕಿಸಿ, ದೂರುಗಳನ್ನು ಸಲ್ಲಿಸಬಹುದು ಎಂದು  ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಪ್ರಭಾರ ಕಾರ್ಯದರ್ಶಿ ಎ. ದಿನೇಶ್ ಸಂಪತ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆಕ್ಸಸ್ ಎಡ್ಜ್-2025ರ ವಿಚಾರಗೋಷ್ಠಿ
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ‘ಬಿಸಿಯು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್' ಮತ್ತು 'ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಸ್ಟಡೀಸ್ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 25 ರಂದು ಬೆಳಿಗ್ಗೆ 10 ಗಂಟೆಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಒಂದು ದಿನದ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿದೆ.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ.ಲಿಂಗರಾಜ ಗಾಂಧಿ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಇನ್ಫೋಸಿಸ್ ಸಹ ಉಪಾಧ್ಯಕ್ಷರಾದ ವಿಕ್ಟರ್ ಸುಂದರರಾಜ್ ಮತ್ತು ಸ್ಮಾರ್ಟೆಡ್ ಇನ್ನೋವೇಷನ್ಸ್ ಸಂಸ್ಥಾಪಕ ಹಾಗೂ ಸಿಇಓ ಸಾಯಿ ಶ್ರೀಕರ್ ಪ್ರಧಾನ ಉಪನ್ಯಾಸ ನೀಡುವರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ ಟಿ.ಜವರೇಗೌಡ. ಕುಲಸಚಿವ (ಮೌಲ್ಯಮಾಪನ) ಪೆÇ್ರ.ರಮೇಶ್ ಬಿ., ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ಐಐಬಿಎಸ್ ಅಧ್ಯಕ್ಷರಾದ ಡಾ. ಜೈಪ್ರಕಾಶ್ ಗೌರವ ಅತಿಥಿಗಳಾಗಿ ಭಾಗವಹಿಸುವರು. ಬಿಸಿಯುಎಸ್ ಎಂಎಸ್ ಮುಖ್ಯಸ್ಥರಾದ ಡಾ. ನಿರ್ಮಲಾ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಹಣಕಾಸು, ಮಾರ್ಕೆಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಮಾನವ ಸಂಪನ್ಮೂಲ ಹಾಗೂ ಉದ್ಯಮಶೀಲತೆ ವಿಷಯಗಳ ಕುರಿತು ಅನೇಕ ಪರಿಣಿತರು ಸಂವಾದ ನಡೆಸುವರು. ಡಾ.ರಿತ್ತಿಕಾ ಸಿನ್ಹಾ ಮತ್ತು ಡಾ. ಟಿ.ಜಗ್ಗಯ್ಯ ವಿಚಾರಗೋಷ್ಠಿಯ ನಿರ್ವಹಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)
Today | 30, March 2025