ಯುಗಾದಿ....
ಯುಗಾದಿ ಆಚರಣೆ ನಮ್ಮಲ್ಲಿ ಬಹು ಮುಖ್ಯವಾದುದು. ಈ ದಿನ ಯುಗಾದಿ ನಮ್ಮ ಹೊಸ ವರುಷದ ಮೊದಲ ದಿನ. ಈ ದಿನ ಮನೆಗೆಲ್ಲ ಹಸಿರು ಮಾವಿನ ತೋರಣ ಕಟ್ಟಿ ಮನೆಯ ಮುಂದೆ ಸಾರಿಸಿ ರಂಗೋಲಿ ಬರೆಯುತ್ತಾರೆ.
ಈ ದಿನ ಎಲ್ಲರೂ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತಾರೆ.ನಂತರ ಮನೆ ಯಜಮಾನ ನಿತ್ಯ ದೇವರ ಪೂಜೆ, ಮನೆದೇವರ ಪೂಜೆ ಮಾಡುತ್ತಾರೆ.ಹೆಂಗಸರು ಹಬ್ಬದಡುಗೆ ತಯಾರಿಸಿ.ಬೇವು ಬೆಲ್ಲದ ಮಿಶ್ರಣ ಮಾಡುತ್ತಾರೆ.ಪೂಜೆಯ ನಂತರ ಎಲ್ಲರೂ ತೀರ್ಥ ಹಾಗು ಬೇವು ಬೆಲ್ಲದ ಮಿಶ್ರಣ ತಿಂದು ನಂತರ ಹಬ್ಬದಡುಗೆ ಸೇವಿಸುತ್ತಾರೆ.2 ಬಗೆ ಪಲ್ಯ,ಕೋಸಂಬರಿ, ಮಾವಿನ ಚಿತ್ರಾನ್ನ, ಸಾರು, ಹುಳಿ, ತೊವ್ವೆ, ಪಾಯಸ, ಒಬ್ಬಟ್ಟು ಈ ದಿನದ ವಿಶೇಷ.ಕೆಲವರು ತೊಗರಿಬೇಳೆ ಒಬ್ಬಟ್ಟು ತಯಾರಿಸಿದರೆ ಕೆಲವರು ಕಡಲೆಬೇಳೆ ಒಬ್ಬಟ್ಟು ಮಾಡುವರು.
ಸಂಜೆಗೆ ಕೆಲವರು ಪಂಚಾಂಗ ಶ್ರವಣ ಇಟ್ಟುಕೊಳ್ಳುತ್ತಾರೆ.ಪಂಚಾಂಗಕ್ಕೆ ಪೂಜೆ ಮಾಡಿ ನಂತರ ಅದನ್ನು ಬಿಡಿಸಿ ಮಳೆ, ಬೆಲೆ, ಸಂಕ್ರಮಣದ ಫಲ, ವರ್ಷ ಭವಿಷ್ಯ, ಗ್ರಹಣಗಳು ಇತ್ಯಾದಿ ಪುರೋಹಿತರು ಹೇಳುತ್ತಾರೆ.ಸಾಮಾನ್ಯವಾಗಿ ಪಂಚಾಂಗ ಶ್ರವಣ ಮಾಡಲು ಊರ ಪುರೋಹಿತರನ್ನು ಮನೆಗೆ ಕರೆದಿರುತ್ತಾರೆ. ಕೇಳಲು ನೆರೆಹೊರೆಯವರನ್ನು ಕರೆದಿರುತ್ಥಾರೆ.ಪಂಚಾಂಗ ಶ್ರವಣ ನಂತರ ಗಂಡಸರಿಗೆ ತಾಂಬೂಲ, ಹೆಂಗಸರಿಗೆ ಅರಿಸಿನ ಕುಂಕುಮ ತಾಂಬೂಲ,ನೀಡಿ ಮನೆಗೆ ಕಳುಹಿಸುತ್ತಾರೆ.ಪುರೋಹಿತರಿಗೆ ಯೋಗ್ಯ ಸಂಭಾವನೆ ನೀಡಿ ಕಳಿಸುತ್ತಾರೆ.
ನಂತರ ಚಂದ್ರನನ್ನು ನೋಡಲು ಸಂಭ್ರಮ ಪಡುತ್ತಾರೆ.
ಮರು ದಿನ ಬಿದಿಗೆ ಚಂದ್ರನನ್ನು ಸಂಜೆ ನೋಡುವರು. ಈ ದಿನ ಹಳೆ ಬಟ್ಟೆ ಧರಿಸಿ ಅದರ ನೂಲು ಒಂದನ್ನು ಚಂದ್ರನೆಡೆಗೆ ತೂರುವರು.ಹೀಗೆ ಮಾಡಿದರೆ ಮುಂದಿನ ವರುಷ ಹೊಸ ವಸ್ತ್ರ ಬರುವುದು ಎಂಬ ನಂಬಿಕೆ ಕೆಲ ಭಾಗದಲ್ಲಿದೆ.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಇದು ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com