ಬೆಂಗಳೂರು: ಭಕ್ತಿ ಮಾರ್ಗ ಸಾಧನೆಗೆ ನೃತ್ಯ ಪೂರಕವಾಗಿದೆ ಎಂದು ವೈದ್ಯ ಮತ್ತು ಆಪ್ತ ಸಮಾಲೋಚಕ ಡಾ. ಗುರುರಾಜ ಪಾಟೀಲ ಹೇಳಿದರು.
* ಯುವ ಕಲಾವಿದೆ ತನುಶ್ರೀ ಕುಲಕರ್ಣಿ ನರ್ತನ ಪ್ರದರ್ಶನ.
ಬಸವೇಶ್ವರ ನಗರದ ಕೆಇಎ ಪ್ರಭಾತ ರಂಗಮಂದಿರದಲ್ಲಿ ನಗರದ ಸಂಯೋಗ ಕನೆಕ್ಟಿಂಗ್ ಆರ್ಟ್ಸ್ ಸಂಸ್ಥೆಯ ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ ತನುಶ್ರೀ ಕುಲಕರ್ಣಿ ಭರತನಾಟ್ಯರಂಗ ಪ್ರವೇಶ ‘ ನೃತ್ಯಶಿವೆ’ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭರತನಾಟ್ಯ ಒಂದು ದೈವಿಕ ಕಲೆ. ಇದು ಕೇವಲ ರಂಜನೆಗೆ ಮಾತ್ರ ಅಲ್ಲ. ದೈವ ಸಾಕ್ಷಾತ್ಕಾರಕ್ಕೂ ಪ್ರೇರಕ. ಮಕ್ಕಳಿಗೆ ಈ ಕಲೆ ಕಲಿಸಿದರೆ ಅವರ ಸಮಗ್ರ ವಿಕಸನ ಸಾಧ್ಯವಾಗಲಿದೆ ಎಂದವರು ಹೇಳಿದರು. ಸಂಯೋಗ ಕಲಾಶಾಲೆಯು ಒಂದು ಮಹಾವಿದ್ಯಾಲಯದಂತೆ ಕಲಾಸೇವೆ ಮಾಡಿರುವುದು ಶ್ಲಾಘನೀಯ . ಶಿವಮೊಗ್ಗ ಮೂಲದ ಗುರು ವಿದುಷಿ ಲತಾ ಲಕ್ಷ್ಮೀಶ ಅವರ ಸಾರಥ್ಯದ 22ನೇ ರಂಗ ಪ್ರವೇಶ ಕಾರ್ಯಕ್ರಮ ‘ ನೃತ್ಯಶಿವೆ’ ಯಲ್ಲಿ ಯುವ ಕಲಾವಿದೆ ತನುಶ್ರೀ ಮನೋಜ್ಞವಾಗಿ ಕಲಾ ಪ್ರದರ್ಶನ ಮಾಡಿರುವುದು ಕ್ರಿಯಾಶೀಲತೆಯ ಸಂಕೇತವಾಗಿದೆ ಎಂದರು.
ವಿದ್ಯಾಸಂಸ್ಕಾರ ಪ. ಪೂರ್ವ ಕಾಲೇಜು ಪ್ರಾಂಶುಪಾಲ ಜಿ. ವಿ. ವಿನಯ್ ಮಾತನಾಡಿ, ಸಂಗೀತ- ನೃತ್ಯದಿಂದ ಬದುಕಿಗೆ ಉತ್ತಮ ಸಂಸ್ಕಾರ ಲಭ್ಯವಾಗಲಿದೆ. ನೃತ್ಯಶಿವೆ ಮೂಲಕ ತನುಶ್ರೀ ಕಲಾವಂತಿಕೆ ಮೇಳೈಸಿದೆ. ಈ ನಿಟ್ಟಿನಲ್ಲಿ ಗುರು , ವಿದುಷಿ ಲತಾ ಅವರ ಶ್ರಮ ಸಾರ್ಥಕವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ತಂತ್ರಜ್ಞ ಶಶಿಧರ ಕುಲಕರ್ಣಿ ಮತ್ತು ಸಾಕ್ಷಿ ಕುಲಕರ್ಣಿ ಹಾಜರಿದ್ದರು.
ಗಮನ ಸೆಳೆದ ನಾಟ್ಯ: ಕಲಾವಿದೆ ತನುಶ್ರೀ ಅವರು ಆರಭಿ ರಾಗದ ಪುಷ್ಪಾಂಜಲಿಯೊಂದಿಗೆ ನರ್ತನ ಪ್ರಸ್ತುತಿ ಆರಂಭಿಸಿದರು. ಅಭೇರಿ ರಾಗದ ಅಭಂಗ, ತೋಡಿ ರಾಗದ ವರ್ಣ ಗಳಲ್ಲಿ ಕಲಾಭಿವೃತ್ತಿಯನ್ನು ಪಡಮೂಡಿಸಿದರು. ರೇವತಿರಾಗದ ಕೃತಿ , ದೇವರ ನಾಮದಲ್ಲಿ ಪ್ರೌಢಿಮೆ ಪ್ರದರ್ಶಿಸಿದರು. ನಂತರ ದೇಶ್ ರಾಗದ ತಿಲ್ಲಾನದೊಂದಿಗೆ ಭರತನಾಟ್ಯ ಪ್ರದರ್ಶನಕ್ಕೆ ಮಂಗಳ ಹಾಡಿದ್ದು ಕಲಾರಸಿಕರ ಗಮನ ಸೆಳೆಯಿತು.
ಕಲಾಮೇಳದ ಸಾಥ್: ರಂಗಪ್ರವೇಶಕ್ಕೆ ನಟುವಾಂಗದಲ್ಲಿ ವಿದುಷಿ ಲತಾ , ಗಾಯನದಲ್ಲಿ ವಿದ್ವಾಂಸ ನಂದ ಕುಮಾರ, ಮೃದಂಗದಲ್ಲಿ ಜನಾರ್ದನ, ವೀಣೆಯಲ್ಲಿ ಗೋಪಾಲ ವೆಂಕಟರಮಣ, ಕೊಳಲು ವಾದನದಲ್ಲಿ ಜಯರಾಮ ಮತ್ತು ಖಂಜಿರದಲ್ಲಿ ವಿದ್ಯಾಸಾಗರ ಹಿಮ್ಮೇಳ ಸಹಕಾರ ನೀಡಿದ್ದು ನರ್ತನ ಪ್ರಸ್ತುತಿಯ ಕಳೆ ಹೆಚ್ಚಿಸಿತು.
ನನ್ನ ಶಿಷ್ಯೆ ಮತ್ತು ಭರವಸೆಯ ಕಲಾವಿದೆ ತನುಶ್ರೀ ಕುಲಕರ್ಣಿ ಭರತನಾಟ್ಯದ ಬಗ್ಗೆ ಅಪಾರ ಗೌರವ ಮತ್ತು ಕಲಿಕಾಸಕ್ತಿ ಹೊಂದಿದ್ದಾಳೆ. ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಈಕೆಯ ಪ್ರಸ್ತುತಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಇಡೀ ಕುಟುಂಬ ಕಲಾ ಶಿಕ್ಷಣಕ್ಕೆ ಬೆಂಬಲಿಸಿದೆ. ತನುಶ್ರೀ ಜೀವನ ಪೂರ್ಣ ಭರತನಾಟ್ಯ ಕಲೆಯ ಆರಾಧನೆಗೆ ವೇದಿಕೆಯಾಗಿ, ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿ.
* ವಿದುಷಿ ಲತಾ ಲಕ್ಷ್ಮೀಶ
ಸಂಯೋಗ ಕನೆಕ್ಟಿಂಗ್ ಆರ್ಟ್ಸ್ ಸಂಸ್ಥೆ, ಬೆಂಗಳೂರು.
####
ಬೆಂಗಳೂರಿನ ಬಸವೇಶ್ವರ ನಗರದ ಕೆಇಎ ಪ್ರಭಾತ ರಂಗಮಂದಿರದಲ್ಲಿ ಸಂಯೋಗ ಕನೆಕ್ಟಿಂಗ್ ಆರ್ಟ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ತನುಶ್ರೀ ಭರತನಾಟ್ಯ ರಂಗ ಪ್ರವೇಶ ‘ ನೃತ್ಯಶಿವೆ’ ಉದ್ಘಾಟನೆ ಸಂದರ್ಭ ವಿದುಷಿ ಲತಾ, ಕಲಾ ನಿರ್ದೇಶಕ ಲಕ್ಷ್ಮೀಶ, ಡಾ. ಗುರುರಾಜ ಪಾಟೀಲ , ಪ್ರಾಂಶುಪಾಲ ಜಿ. ವಿ. ವಿನಯ್, ತಂತ್ರಜ್ಞ ಶಶಿಧರ ಕುಲಕರ್ಣಿ ಮತ್ತು ಸಾಕ್ಷಿ ಕುಲಕರ್ಣಿ ಹಾಜರಿದ್ದರು.