ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದ್ದು, ಡೆಂಗ್ಯೂ, ಉಸಿರಾಟ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಕ್ರಿಯಾ ಆಸ್ಪತ್ರೆ ಮತ್ತು ಅದ್ವಿಕಾ ಕೇರ್ ಫೌಂಡೇಶನ್ ಭಾನುವಾರ ಆಯೋಜಿಸಿದ್ದ "ಸ್ವಚ್ಛ ದಾಸರಹಳ್ಳಿ" ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವಿಶಿಷ್ಟ ಸ್ವಚ್ಛತಾ ಅಭಿಯಾನಕ್ಕೆ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಚಾಲನೆ ನೀಡಿದರು. ಬೆಳ್ಳಂಬೆಳಗ್ಗೆ ಆಸ್ಪತ್ರೆಯ ಸಿಬ್ಬಂದಿ, ಬಿಬಿಎಂಪಿ ನೌಕರರು ಹಾಗೂ ನೂರಾರು ಸ್ವಯಂಸೇವಕರು ಸೇರಿ ರಸ್ತೆ, ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಈ ಕಾರ್ಯಕ್ರಮ ಒಂದು ಬಾರಿಯ ಕಾರ್ಯಕ್ರಮವಲ್ಲ. ಬದಲಿಗೆ ದಾಸರಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುವವರೆಗೆ ದೀರ್ಘಾವಧಿಯಲ್ಲಿ ಕಾರ್ಯನಿರ್ವಹಿಸಲಿದೆ. ಕ್ಷೇತ್ರವು ಗಂಭೀರ ಕಸದ ಸಮಸ್ಯೆ ಎದುರಿಸುತ್ತಿದೆ. ಪ್ರಕ್ರಿಯಾ ಆಸ್ಪತ್ರೆಯ ಬೆಂಬಲದೊಂದಿಗೆ ಪ್ರಾರಂಭಿಸಿದ ಇಡೀ ದಾಸರಹಳ್ಳಿಯನ್ನು ಸ್ವಚ್ಛ ಮತ್ತು ಆರೋಗ್ಯಪೂರ್ಣವಾಗಿ ರೂಪಿಸುವ ಉದ್ದೇಶವಿದೆ. ಈ ಹೊಸ ವರ್ಷವು ಸ್ವಚ್ಛ, ಆರೋಗ್ಯಕರ ದಾಸರಹಳ್ಳಿಗೆ ನಾಂದಿ ಹಾಡಿದೆ. ಸ್ವಚ್ಛತೆ ಕಾಪಾಡಲು ನಿವಾಸಿಗಳು ಕೈಜೋಡಿಸುವಂತೆ ಕೋರುತ್ತೇನೆ, ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ತಿಳಿಸಿದರು.
ರೋಗ ಉಲ್ಬಣಗಳ ವಿರುದ್ಧ ಹೋರಾಟ
ಪ್ರಕ್ರಿಯಾ ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ. ಶ್ರೀನಿವಾಸ್ ಚಿರುಕುರಿ ಮಾತನಾಡಿ, ದಾಸರಹಳ್ಳಿ ಸುತ್ತಮುತ್ತಲಿನ ಅಶುಚಿತ್ವ ತಾಂಡವವಾಡುತ್ತಿದೆ. ಇದರಿಂದ ರೋಗ ರುಜಿನಗಳು ಹೆಚ್ಚಾಗುತ್ತಿವೆ. ಒಂದೊಮ್ಮೆ ಸೀಸನಲ್ ಆಗಿದ್ದ ಡೆಂಗ್ಯೂನಂತಹ ರೋಗ ಈಗ ವರ್ಷವಿಡೀ ಹರಡುತ್ತಿದೆ. ಅಶುಚಿಯಾದ ಪರಿಸರವು ಸಾಂಕ್ರಾಮಿಕ ರೋಗಗಳು, ವೈರಲ್ ಸೋಂಕುಗಳು ಮತ್ತು ಅಸ್ತಮಾ ಮತ್ತು ಕ್ಯಾನ್ಸರ್‌ನಂತಹ ಪರಿಸ್ಥಿತಿಗಳ ಹೆಚ್ಚುತ್ತಿರುವ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ, ಸ್ವಚ್ಛ ಪರಿಸರವನ್ನು ನಿರ್ಮಿಸುವುದು ಬಹಳ ಮುಖ್ಯ. ಪ್ರಕ್ರಿಯಾ ಆಸ್ಪತ್ರೆ, ಅದ್ವಿಕಾ ಕೇರ್ ಫೌಂಡೇಶನ್ ಜೊತೆಗೆ ಅಸಮರ್ಪಕ ಕಸ ವಿಲೇವಾರಿ ಹಾಗೂ ಕಸಮುಕ್ತ ಪ್ರದೇಶ ನಿರ್ಮಾಣಕ್ಕೆ ಕೈ ಜೋಡಿಸಲಿದೆ ಎಂದರು.
ಕಸ ನಿರ್ವಹಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ನಾವು ಇದಕ್ಕಾಗಿ ಬಿಬಿಎಂಪಿ ಸಿಬ್ಬಂದಿಗಳನ್ನ ದೂಷಿಸುತ್ತಿದ್ದೇವೆ. ನಮ್ಮ ವರ್ತನೆಯಲ್ಲಿ ಬದಲಾವಣೆಯಿಂದ ಮಾತ್ರ ಇದಕ್ಕೆ ಪರಿಹಾರ ಹುಡುಕುವುದು ಸುಲಭವಾಗಲಿದೆ. ನಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವವಾಗಿದೆ. ಈ ಪ್ರದೇಶದಲ್ಲಿರುವ ಸುತ್ತಮುತ್ತಲಿನ ಅಪಾರ್ಟ್ ಮೆಂಟ್ ನಿವಾಸಿಗಳು ಕೂಡಾ ಕೈ ಜೋಡಿಸಿದ್ದಾರೆ. ಈ ಮೂಲಕ ಎಲ್ಲೇ ಕಸ ಕಂಡರೂ ಅದನ್ನ ವಿಲೇವಾರಿಗೆ ವ್ಯವಸ್ಥೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ, ಎಂದು ಹೇಳಿದರು.
ದಾಸರಹಳ್ಳಿಯ ಎಲ್ಲಾ 11 ವಾರ್ಡ್‌ಗಳಲ್ಲಿಯೂ ಈ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ವಾಟ್ಸ್ ಅಪ್ ಮೂಲಕ ನಿರಂತರವಾಗಿ ಈ ಚಟುವಟಿಕೆ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಪ್ರಕ್ರಿಯಾ ಆಸ್ಪತ್ರೆ ಮತ್ತು ಅದ್ವಿಕಾ ಕೇರ್ ಫೌಂಡೇಶನ್ ಸಹ ಬರುವ ದಿನಗಳಲ್ಲಿ ಅನೇಕ ಚಟುವಟಿಕೆಗಳನ್ನ ಕೈಗೊಳ್ಳುವ ಯೋಜನೆ ಹೊಂದಿದೆ. ಇವುಗಳಲ್ಲಿ ಕ್ಯಾನ್ಸರ್ ಜಾಗೃತಿ ಅಭಿಯಾನ, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಫೆಬ್ರವರಿ 2 ರಂದು ವಿಧಾನಸೌಧದ ಬಳಿ ನಡೆಯುವ ವಾಕಥಾನ್‌ನಲ್ಲಿ 3,000 ಜನ ಭಾಗವಹಿಸುವ ನಿರೀಕ್ಷೆಯಿದೆ. “ಇದು ಕೇವಲ ಆರಂಭ. ನಿರಂತರ ಸಮುದಾಯದ ಸಹಭಾಗಿತ್ವದೊಂದಿಗೆ, ನಾವು ದಾಸರಹಳ್ಳಿಯನ್ನು ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರವಾಗಿ ರೂಪಿಸಿ ಮಾದರಿಯಾಗಿ ಪರಿವರ್ತಿಸುತ್ತೇವೆ ಎಂದು ಡಾ ಶ್ರೀನಿವಾಸ್ ತಿಳಿಸಿದರು.