ಬೆಂಗಳೂರು : ಮಲ್ಲೇಶ್ವರದ ಈಜುಕೊಳದ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳದ ಒಂದು ವಾರದಿಂದ ಜರುಗುತ್ತಿರುವ ಶ್ರೀ ಪುರಂದರದಾಸರ ಆರಾಧನಾ ಕಾರ್ಯಕ್ರಮಗಳ ಪ್ರಯುಕ್ತ ಜ.23, ಗುರುವಾರ ರಾಯರಿಗೆ ಪ್ರಿಯವಾದ ವೀಣಾ ವಾದನ ಕಾರ್ಯಕ್ರಮವನ್ನು ಕು|| ಅಹಿಕಾ ನಡೆಸಿಕೊಟ್ಟರು.
ಕುಮಾರನ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಅಹಿಕಾ (ಶ್ರೀಮತಿ ಕೃತಿಕಾ ಮತ್ತು ಶ್ರೀ ನಾಗದೀಪ್ ಅವರ ಪುತ್ರಿ) ಇಷ್ಟು ಚಿಕ್ಕ ವಯಸ್ಸಿಗೆ ಕರ್ನಾಟಕ ಸರ್ಕಾರದಿಂದ ಕೊಡಲ್ಪಡುವ "ಕರ್ನಾಟಕ ಕಲಾಶ್ರೀ" ಪ್ರಶಸ್ತಿ ಪಡೆದಿದ್ದಾಳೆ. ಅಹಿಕಾ ವೀಣಾ ನುಡಿಸುವುದಲ್ಲದೇ ಭರತನಾಟ್ಯ ಮತ್ತು ಹಾಡುಗಾರಿಕೆಯಲ್ಲೂ ಕಾರ್ಯಕ್ರಮ ನೀಡುವುದರೊಂದಿಗೆ ಓದಿನಲ್ಲೂ ಮುಂದಿದ್ದಾಳೆ.
ವೀಣಾ ವಾದನ ಕಾರ್ಯಕ್ರಮವನ್ನು ಮೊದಲಿಗೆ ಗಜವದನ ಬೇಡುವೆ ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಆರಂಭಿಸಿ, ರೋಗಹರನೇ ಕೃಪಾಸಾಗರ, ದಯಮಾಡೋ ರಂಗ, ಗೋವಿಂದ ನಿನ್ನ ನಾಮವೇ ಚಂದ, ನಾರಾಯಣ ನಿನ್ನ ನಾಮದ ಸ್ಮರಣೆ, ಪಿಳ್ಳಂಗೋವಿಯ ಚೆಲ್ವ ಕೃಷ್ಣನ, ವೆಂಕಟಾಚಲ ನಿಲಯಂ, ಪ್ರೀಣಯಾಮೋ ವಾಸುದೇವಂ, ವಂದೇ ವಂದ್ಯಮ್, ಪಾಲಯಾಚ್ಯುತ, ಭಾಗ್ಯದ ಲಕ್ಷ್ಮಿ ಬಾರಮ್ಮ, ಶ್ರೀ ವಾದಿರಾಜರ ದಶಾವತಾರ ಸ್ತುತಿಯಾದ ಪ್ರೋಷ್ಟೀಶ ವಿಗ್ರಹ ಹೀಗೆ ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ನುಡಿಸಿ, ಪ್ರೇಕ್ಷಕರ ಮನ ಗೆದ್ದಳು. ಸಹವಾದ್ಯದಲ್ಲಿ ಶ್ರೀ ಸೀತಾರಾಮ್ (ಪಿಟೀಲು), ಶ್ರೀ ವರದರಾಜ್ (ಮೃದಂಗ) ಸಾಥ್ ನೀಡಿದರು. ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ರಮಾಮಣಿ ವಂದನಾರ್ಪಣೆ ಮಾಡಿದರು.