ಬೆಂಗಳೂರು, ಜ, 5; ಬಸವನಗುಡಿಯ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ನಿಂದ ವಿಶ್ವಶಾಂತಿ ಮತ್ತು ಮನುಕುಲದ ಒಳಿತಿಗಾಗಿ “ಭಗವಾನ್ ವಿಷ್ಣುವಿನ ದಶಾವತಾರ, ಏಳೂರ್ಡು ಅಧಿನಾರಾಯಣ, ಲಕ್ಷ್ಮೀ ನಾರಾಯಣ, ವೆಂಕಟೇಶ್ವರ, ಶ್ರೀ ದೇವಿ, ಭೂದೇವಿ, ಹನುಮಂತ, ಗರುಡ, ಹೂವಿನ ಅಲಂಕಾರ ಮತ್ತು ಸುತ್ತಲೂ ಹೂವುಗಳ ಮೇಲೆ ಆದಿಶೇಷನನ್ನು ರಚಿಸಿ ಪೂಜಿಸಲಾಯಿತು.
ಶನಿವಾರ ಮತ್ತು ಭಾನುವಾರ ನಡೆದ ಈ ಧಾರ್ಮಿಕ ಮಹೋತ್ಸವದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ, ಸೀತಾ ರಾಮ ಕಲ್ಯಾಣ ಮತ್ತು ಆದಿ ನಾರಾಯಣ ಕಲ್ಯಾಣವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, 10 ವರ್ಷಗಳಲ್ಲಿ ಇದು ನಾಲ್ಕನೇ ವೈಭವದ ಧಾರ್ಮಿಕ ಮಹೋತ್ಸವವಾಗಿದೆ. ಶ್ರೀ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಎಳೂರ್ಡು ಎಂಬ ಸ್ಥಳದಲ್ಲಿ ಅಧಿನಾರಾಯಣ ದೇವರು ಉದ್ಭವ ಮೂರ್ತಿಯಾಗಿದ್ದು, ತಿರುಪತಿಗೆ ತೆರಳುವ ಮೊದಲು ವೆಂಕಟೇಶ್ವರನು ಈ ಸ್ಥಳಕ್ಕೆ ಬಂದಿದ್ದನೆಂದು ನಂಬಲಾಗಿದೆ. ಹಾಗಾಗಿ ಈ ದೇವರನ್ನು ಆದಿ ನಾರಾಯಣ ಎಂದು ಕರೆಯುತ್ತಾರೆ. ಭಾರತದಲ್ಲಿ ಒಟ್ಟು 107 ದಿವ್ಯ ದರ್ಶನಗಳಿದ್ದು, ಇದು 108 ನೇ ವೈಕುಂಠ ದರ್ಶನವಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಎನ್ ಎಸ್ ನಾಗರಾಜ್, ಉಪಾಧ್ಯಕ್ಷ ಕೆ.ಆರ್. ಚಂದ್ರಶೇಖರ್ ಖಜಾಂಚಿ ರಾಘವೇಂದ್ರ, ಯುವ ಮುಖಂಡರಾದ ಅನಿಲ್ ಕುಮಾರ್, ಅಭಿಲಾಷ್, ಸಿಎ ಕಿರಣ್, ಅರ್ಜುನ್, ಪ್ರಸನ್ನ ಮತ್ತಿತರರು ಮಹೋತ್ಸವದ ಉಸ್ತುವಾರಿ ವಹಿಸಿದ್ದರು.