" ಶ್ರೀ ವ್ಯಾಸರಾಜರ [ ಸಿರಿಕೃಷ್ಣ / ಶ್ರೀ ಕೃಷ್ಣ ] ಕಣ್ಣಲ್ಲಿ ದಾಸರೆಂದರೆ ಪುರಂದರದಾಸರಯ್ಯ "

varthajala
0

ರಚನೆ : 

ಶ್ರೀ ವ್ಯಾಸರಾಜ ಗುರುಸಾರ್ವಭೌಮರು 

ಕಾಲ : 

ಕ್ರಿ ಶ 1447 - 1539

ಅಂಕಿತ : 

ಶ್ರೀ ಪ್ರಸಾದಾಂಕಿತ " ಸಿರಿಕೃಷ್ಣ / ಶ್ರೀಕೃಷ್ಣ "

ರಾಗ : ಕಾಂಬೋಧಿ  ತಾಳ : ಝ೦ಪೆ 

ಈ ಕೃತಿಯನ್ನು ರಚಿಸಿದವರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು. 

ಇವರು ಶ್ರೀ ಪುರಂದರದಾಸರಿಗೆ ದಾಸ ದೀಕ್ಷಾ ನೀಡಿದ ಗುರುಗಳು. 

ಶಿಷ್ಯರು ತಮ್ಮ ಗುರುಗಳನ್ನು ಹಾದಿ ಪೊಗಳುವುದು ವಾಡಿಕೆ. 

ಶ್ರೀ  ಪುರಂದರದಾಸರು ಶ್ರೀ ವ್ಯಾಸತೀರ್ಥರನ್ನು ಕುರಿತು ಹಲವು ಕೀರ್ತನೆ ಹಾಗೂ ಸುಳಾದಿ ಮತ್ತು ಉಗಾಭೋಗವನ್ನು ರಚಿಸಿದ್ದಾರೆ. 

ಆದರೆ ಗುರುಗಳು ಶಿಷ್ಯರನ್ನು ಮೆಚ್ಚಿಕೊಂಡು ಅವರನ್ನು ಪ್ರಸಂಶಿಸುವುದು ಅಪರೂಪ. 

ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಪುರಂದರದಾಸರ ವ್ಯಕ್ತಿತ್ವದ ಮೇಲ್ಮೆಯನ್ನೂ - ಶ್ರೀ ಹರಿ ಭಕ್ತಿಯ ನೆಲೆಯನ್ನೂ ಅರಿತು ಕೊಂಡಿದ್ದರು. 

ಅವರು ತಮ್ಮ ಶಿಷ್ಯರನ್ನು ಹಾದಿ ಹೊಗಳಿದಂತೆಯೇ - ಅವರ ವಿದ್ಯಾ ಗುರುಗಳಾದ ಶ್ರೀ ಶ್ರೀಪಾದರಾಜರು ಶ್ರೀ ವ್ಯಾಸರಾಜ ಗುರುಸಾರ್ವಭೌಮರನ್ನು ಹಾಡಿ ಹೊಗಳಿದ್ದು ಅವರ ನೆನಪಿನಲ್ಲಿರಬೇಕು. 

ಶ್ರೀ ಶ್ರೀಪಾದರಾಜರು ತಮ್ಮ ವಿದ್ಯಾ ಶಿಷ್ಯರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರನ್ನು ಕುರಿತು -

ಇದಿರಾದವನು ನಿನಗೀ 

ಧರೆಯೊಳು ।

ಪದುಮನಾಭನ ದಾಸ 

ಪರಮೋಲ್ಲಾಸ ।। ಪಲ್ಲವಿ ।।


ವಾದಿ ತಿಮಿರ ಮಾರ್ತಾಂಡ-

ನೆಂದೆನಿಸಿದ ।

ವಾದಿ ಶರಭ ಭೇರುಂಡ 

ವ್ಯಾಸರಾಯ ।। ಚರಣ ।।


ಯತಿಯೊಳಗೆ ನಿಮ್ಮಂದ-

ದವರುಗಳ ।

ಪ್ರತಿಗಾಣೆನು ಈ ಕ್ಷಿತಿಯೊಳು 

ವ್ಯಾಸರಾಯ ।। ಚರಣ ।।


ಹಮ್ಮನಳಿದು ಶ್ರೀಪತಿ 

ರಂಗವಿಠ್ಠಲನ್ನ ।

ಸುಮ್ಮಾನದಿಂ ಸೇವಿಪ 

ವ್ಯಾಸಮುನಿರಾಯ ।। ಚರಣ ।।


" ದಾಸರೆಂದರೆ  ಪುರಂದರದಾಸರಯ್ಯ "


ದಾಸರೆಂದರೆ 

ಪುರಂದರದಾಸರಯ್ಯ ।। ಪಲ್ಲವಿ ।।


ವಾಸುದೇವ ಕೃಷ್ಣನ್ನ 

ಸೂಸಿ ಪೂಜಿಸುವ ।। ಅ ಪ ।।


ಗ್ರಾಸಕಿಲ್ಲದೆ ಪೋಗಿ ಪರರ 

ಮನೆಗಳ ಪೊಕ್ಕು ।

ದಾಸನೆಂದು ತುಲಸಿ 

ಮಾಲೆ ಧರಿಸಿ ।

ಬೇಸರಿಲ್ಲದೆ ಅವರ ಕಾಡಿ 

ಬೇಡಿ ಬಳಲಿಸುತ ।

ಕಾಸುಗಳಿಸುವ ಪುರುಷ 

ಹರಿದಾಸನೇ ।। ಚರಣ ।।


ಡಂಭಕದಿ ಹರಿಸ್ಮರಣೆ ಮಾಡಿ 

ಜನರ ಮುಂದೆ ।

ಸಂಭ್ರಮದಿ ತಾನುಂಬ 

ಊಟ ಬಯಸಿ ।

ಅಂಬುಜೋದ್ಭವ ಪಿತನ 

ಆಗಮಗಳರಿಯದೆ ।

ತಂಬೂರಿ ಮೀಟಲವ 

ಹರಿದಾಸನೇ ।। ಚರಣ ।।


ಯಾಯಿವಾರವ ಮಾಡಿ 

ವಿಪ್ರರಿಗೆ ಮೃಷ್ಟಾನ್ನ ।

ಪ್ರೀಯದಲಿ ತಾನೊಂದು 

ಕೊಡದ ಲೋಭಿ ।

ಮಾಯ ಸಂಸಾರದಲಿ 

ಮಮತೆ ಹೆಚ್ಚಾಗಿಟ್ಟು ।

ಗಾಯನವ ಮಾಡಲವ 

ಹರಿದಾಸನೇ ।। ಚರಣ ।।


ಪಾಠಕನ ತೆರನಂತೆ ಪದಗಳನು 

ತಾ ಬೊಗಳಿ ।

ಕೂಟ ಜನರ ಮನವ 

ಸಂತೋಷ ಪಡಿಸಿ । 

ಗೂಟ ನಾಮಗಳಿಟ್ಟು 

ಕೊಟ್ಟರಿಯೆ ತಾನೆನುತ ।

ತೂಟಕವ ಮಾಡಲವ 

ಹರಿದಾಸನೇ ।। ಚರಣ ।।


ನೀತಿಯೆಲ್ಲವನರಿತು 

ನಿಗಮವೇದ್ಯನ  ನಿತ್ಯ ।

ವಾತಾಸುತನಲ್ಲಿಹನ 

ವರ್ಣಿಸುತಲಿ ।

ಗೀತಾ ನರ್ತನದಿಂದ 

ಕೃಷ್ಣನ್ನ ಪೂಜಿಸುವ । 

ಪುತಾತ್ಮ ಪುರಂದರ 

ದಾಸರಿವರಯ್ಯ ।। ಚರಣ ।।


" ವಿವರಣೆ "


ಸೂಸಿ = ಭಕ್ತಿ ಸಿಂಪಡಿಸಿ 


ಅಂಬುಜೋದ್ಭವ = ಶ್ರೀ ಚತುರ್ಮುಖ ಬ್ರಹ್ಮದೇವರು 


ಪಿತ = ಶ್ರೀ ಮಹಾವಿಷ್ಣು 


" ಅಂಬುಜೋದ್ಭವ ಪಿತನ ಆಗಮಗಳು "


ಶ್ರೀ ಮಹಾವಿಷ್ಣುವಿನ ಆಗಮಗಳೆಂದರೆ - 


ಪಂಚರಾತ್ರ - ಭಾಗವತ ಧರ್ಮಕ್ಕೆ ಮೂಲಭೂತವಾದದ್ದು. 


ಶ್ವೇತದ್ವೀಪದಲ್ಲಿ ಶ್ರೀಮನ್ನಾರಾಯಣನು ಶ್ರೀ ನಾರದ ಮಹರ್ಷಿಗಳಿಗೆ ಈ ಶಾಸ್ತ್ರವನ್ನು ತಿಳಿ ಹೇಳಿದನೆಂದು -


" ಮಹಾಭಾರತದ ನಾರಾಯಣೀಯವೆಂಬ ಪರಿಚ್ಛೇದದಲ್ಲಿ ವಿವರಣೆ  " ಇದೆ. 


ಈ ಧರ್ಮಕ್ಕೆ ಮುಖ್ಯವಾದುದು ಭಕ್ತಿ. 


ಭಕ್ತಿಯ ಅಗತ್ಯವನ್ನೂ - ಸ್ವಾರಸ್ಯವನ್ನೂ ಮನಗಾಣಿಸಲೆಂದೇ ಸಂಗೀತ ಅದಕ್ಕೆ ಹೊಂದಿಕೊಂಡಿರುವುದು. 


ಭಕ್ತಿಯ ಬಲವಿಲ್ಲದೆ ತಂಬೂರಿ ಮೀಟಿಕೊಂಡು ಹಾಡಿದರೆ ಅವನು ಖಂಡಿತವಾಗಿಯೂ ಹರಿದಾಸನಲ್ಲ!!   


 " ಯಾಯಿವಾರ "


ಧರ್ಮದ ಅನುಷ್ಠಾನದಲ್ಲಿ ದಿನವೂ ಊರೂರು ತಿರುಗುತ್ತಾ ಬೇಡಿ ತಂದು ಶ್ರೀ ಹರಿಗೆ ಸಮರ್ಪಿಸಿ ಸ್ವೀಕರಿಸುವುದಕ್ಕೆ " ಯಾಯಿವಾರ " ಎಂದು ಹೆಸರು. 


ಶ್ರೀಮದ್ಭಾಗವತಕ್ಕೆ ಶ್ರೀ ಶ್ರೀಧರ ಸ್ವಾಮಿಗಳು ಬರೆದಿರುವ ಟೀಕೆಯಲ್ಲಿ - 


ಯಾಯಿವಾರಂ ಪ್ರತ್ಯಹಂ 

ಧಾನ್ಯಾಯಾಂಚ ।


ಎಂದು ವಿವರಣೆ ಇದೆ. ಇದೇ ಕನ್ನಡದಲ್ಲಿ " ಯಾಯಿವಾರ " ವಾಗುವುದು. 


ಭಾಗವತರು ಹೀಗೆ ದಿನವೂ ತಿರುಗಾಡಿ ಹಲವು ಗೃಹಸ್ಥರ ಮನೆಯಿಂದ ಪಡೆದುಕೊಂಡ  ಆಹಾರ ಸಮಾಗ್ರಿಯನ್ನು ಮನೆಗೆ ತಂದು ಭಗವದ್ಭಕ್ತರನ್ನೂ - ಭಾಗವತರನ್ನೂ ಕರೆದು ಉಣಬಡಿಸುವರು. 


ಹಾಗೆ ಮಾಡಿ ತಿರಿದು ತಂದಿದ್ದನ್ನೆಲ್ಲ ತಾನು ನಲಿಯುವವರನ್ನು ಇಲ್ಲಿ ಜರಿಯಲಾಗಿದೆ. 

 " ಪಾಠಕ "

ಸ್ತುತಿ ಪಾಠಕರು ಅಥವಾ ಭಟ್ಟಂಗಿಗಳು - ಅರಸರ ಆಸ್ಥಾನಗಳಲ್ಲಿ ಅರಸನ ಗುಣ ಕೀರ್ತನೆಗೆಂದು ಸಂಬಳಕ್ಕೆ ಇರುವ ಹೊಗಳುಭಟ್ಟರು - ಅರಸನಿಗೆ ಗುಣ ಇದ್ದರೂ - ಇಲ್ಲದಿದ್ದರೂ ಸರಿ! ಅವನು ಕೊಡುವ ಹಣಕ್ಕೆ ಆಸೆಪಟ್ಟು ಅವನನ್ನು ಯಥೇಚ್ಛವಾಗಿ ಹೊಗಳುವುದು ಇವರ ವೃತ್ತಿ - ಹೀಗೆ ಹೃದಯ ಸಂಸ್ಕಾರವಿಲ್ಲದೆ, ಮಾಹಾತ್ಮ್ಯಾ ಜ್ಞಾನವಿಲ್ಲದೆ ಹರಿ ಗುಣ ಕೀರ್ತನೆಯನ್ನು ಜೀವನೋಪಾಯನಕ್ಕಾಗಿ ಕೈಗೊಳ್ಳುವವರನ್ನು ಇಲ್ಲಿ ಖಂಡಿಸಿದ್ದಾರೆ. 

" ಕೂಟಜನ "

ಪರಿಷೆಯಲ್ಲಿ ನೆರೆಯುವ ಪಾಮರರು - ಸಂಸ್ಕಾರವಿಲ್ಲದವರು - ವಿವೇಕ ಬುದ್ಧಿ ಸಾಲದವರು. 

" ಗೂಟ ನಾಮಗಳು "

ಸಂಸ್ಕೃತದಲ್ಲಿ ಊರ್ಧ್ವಪುಂಡ್ರ. 

ದೇಹದ ಹಣೆ - ಕತ್ತು - ಎದೆ - ಹೊಟ್ಟೆ - ಭುಜಗಳು - ಬೆನ್ನು - ಕಿವಿಯ ಹಿಂಭಾಗ ಈ ಸ್ಥಳಗಳಲ್ಲಿ ಗೋಪಿಚಂದನದ ಹನ್ನೆರಡು ನಾಮಗಳನ್ನು ದೇವರ ಹೆಸರುಗಳಿಂದ ಧರಿಸುವುದು ಭಾಗವತ ಸಂಪ್ರದಾಯದಲ್ಲಿದೆ. 

ತೂಟಕ =   ಕಳ್ಳತನ / ತುಡುಗು / ಮೋಸ 


" ನಿಗಮವೇದ್ಯನ ''

ಭಗವಂತನನ್ನು ಅರಿಯಲು ಪ್ರತ್ಯಕ್ಷವಾಗಲೀ - ಅನುಮಾನವಾಗಲೀ ನೆರವಾಗದೆ ಶ್ರುತಿಯೊಂದೇ ಕಾರಣವಾಗುವುದರಿಂದ ಭಗವಂತನನ್ನು " ಸದಾಗಮೈಕವೇದ್ಯ " ನೆಂದು ಶ್ರೀಮನ್ಮಧ್ವಾಚಾರ್ಯರು ಹೇಳಿದ್ದಾರೆ. 

" ವಾತಸುತನಲ್ಲಿಹನ "

" ವಾತ ಸುತ " ಯೆಂದರೆ ಶ್ರೀ ವಾಯುದೇವರು / ಶ್ರೀ ಮುಖ್ಯಪ್ರಾಣದೇವರು [ ಶ್ರೀ ಹನುಮಂತದೇವರು ].

ಶ್ರೀ ವಾಯುದೇವರ ಮೂರನೇ ಅವತಾರವೇ ಶ್ರೀಮನ್ಮಧ್ವಾಚಾರ್ಯರು. 

ಶ್ರೀ ಮುಖ್ಯಪ್ರಾಣದೇವರಲ್ಲಿ ಅಂತರ್ಯಾಮಿಯಾಗಿದ್ದುಕೊಂಡು ಶ್ರೀ ಹರಿಯು ಅವರಿಂದ ಎಲ್ಲ ಕಾರ್ಯವನ್ನು ಮಾಡಿಸುವನು. 

ಅದಕ್ಕಾಗಿಯೇ - 

" ಭಾರತೀ ರಮಣ ಮುಖ್ಯಪ್ರಾಣಾ೦ತರ್ಗತ " 

ಯೆಂಬ ಬಕ್ಕಣಿ ಇರುವುದು. 

" ಶ್ರೀಮನ್ಮಧ್ವಾಚಾರ್ಯ ಹೃತ್ಕಮಲಮಧ್ಯ ನಿವಾಸಿ " ಶ್ರೀಮನ್ನಾರಾಯಣನ ವರ್ಣನೆ ಇದೆ. 

" ಗೀತ ನರ್ತನದಿಂದ "

ಹರಿದಾಸ ಪಂಥದಲ್ಲಿ ಸಂಕೀರ್ತನವೇ ಮುಖ್ಯವಾದ ಸಾಧನೆ. 

ಭಾವದ ಭರದಲ್ಲಿ ನರ್ತನವೂ ಸೇರುತ್ತದೆ. 

ಶ್ರೀ ಪುರಂದರದಾಸರೇ ಒಂದೆಡೆ -

ತಾಳ ದಂಡಿಗೆ ನೃತ್ಯ 

ಗೀತ ಸಮ್ಮೇಳದಿ ।

ಊಳಿಗವನು ಮಾಳ್ಪ 

ಹರಿದಾಸರ ।। - ಎಂದಿದ್ದಾರೆ. 

ಶ್ರೀ ವಿಜಯರಾಯರು -

ದಂಡಿಗೆ ಶಂಖ ತಾಳ ತಂಬೂರಿ ಜಾಗಟೆಯ ।  ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು । ಹಿಂದೂ ಹಿಂಡಾಗಿ ಸಮ್ಮೋಗನಾಗಿ ನಿಂದು ಬೊಮ್ಮಾಂಡ ಕಟಹ ಬಿಚ್ಚುವಂತೆ । ತಂಡ ತಂಡದಿ ಗೆಜ್ಜೆ ಕಟ್ಟಿ ಅಭಿನಯ ತಿರುಹಿ । ಕೊಂಡಾಡೆ ಶಬ್ದ ಪ್ರತಿಶಬ್ದ ವಾಗುತಿದೆ । ಭೂ । ಮಂಡಲದೊಳಗೆ ಈ ಸೊಬಗು ಬಲ್ಲವರಾರು ಕುಂಡಲ ಗಿರಿವಾಸ ।। -

ಎಂದು ಒಕ್ಕಣಿಯಿದೆ. 

" ಕೃಷ್ಣನ್ನ "

ಕೃಷ್ಣ / ಸಿರಿಕೃಷ್ಣ / ಶ್ರೀಕೃಷ್ಣ ಎಂಬುದು ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಬಿಂಬ ಮೂರ್ತಿ. 

" ವಿಶೇಷ ವಿಚಾರ "

ಈ ಕೃತಿಯು ಶ್ರೀ ವಿಜಯರಾಯರ ಕಾಲಕ್ಕೂ ಪ್ರಸಿದ್ಧವಾಗಿದ್ದಿತು. 


ಅವರ ಒಂದು ಸುಳಾದಿಯಲ್ಲಿ ಇದರ ಮೊದಲ ಸಾಲನ್ನು ಉಲ್ಲೇಖಿಸಿದ್ದಾರೆ. 


ಮಠ್ಯ ತಾಳದಲ್ಲಿ -

" ವ್ಯಾಸರಾಯರ ಉಪದೇಶವನ್ನೇ ಕೊಂಡು " ಎಂಬ ಭಾಗದಲ್ಲಿ -    

ದೇಶದೊಳಗೆ ಮೆರೆದು ನಾಶ ರಹಿತ ರಂಗ ವಿಜಯವಿಠ್ಠಲನ್ನ । ದಾಸರೆಂದರೆ ಪುರಂದರದಾಸರೆಂದೆನಿಸುತ್ತ ।।

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)