ಧನುರ್ಮಾಸ ಅಥವಾ ಪುಷ್ಯ ಮಾಸದಲ್ಲಿ ಆಚರಿಸಲ್ಪಡುವ ಸಂಕ್ರಾಂತಿ ಆಚರಣೆ

varthajala
0

ಧನುರ್ಮಾಸ ಅಥವಾ ಪುಷ್ಯ ಮಾಸದಲ್ಲಿ ಜನವರಿ ೧೪ ಪ್ರತಿ ವರುಷ ಸಂಕ್ರಾಂತಿ ಆಚರಿಸಲ್ಪಡುತ್ತದೆ.

ಇದು ಪಿತೃಗಳಿಗೆ ಸಂಬಂಧಪಟ್ಟ ಹಬ್ಬ. ಸಾಮಾನ್ಯವಾಗಿ ಎಳ್ಳನ್ನು ಯಾರು ತೆಗೆದುಕೊಳ್ಳುವುದಿಲ್ಲ.ಆದರೆ ಸಂಕ್ರಾಂತಿ ಹಾಗು ನಂತರ ರಥಸಪ್ತಮಿ ವರೆಗೆ ಎಳ್ಳಿನ ಬೆರಕೆ ಎಲ್ಲರಿಗೂ ಹಂಚುವ ಪದ್ಧತಿ ಇದೆ.

ಸಂಕ್ರಾಂತಿಯ ದಿನ ಮನೆಯ ಹಿರಿಯ ಯಜಮಾನರು ಎಣ್ಣೆ ಸ್ನಾನ ಮಾಡಿ,( ಹಬ್ಬದ ದಿನ) ಮಡಿ ಬಟ್ಟೆ. ಧರಿಸಿ ಮನೆ ದೇವರಿಗೆ ಹಾಗು ಮಿಕ್ಕ ದೇವರಿಗೆ ಷೋಡಶೋಪಚಾರ ಪೂಜೆ ಸರಳವಾಗಿ ಮಾಡುತ್ತಾರೆ ನಂತರ ಒಬ್ಬ ಗೃಹಸ್ಥ ಬ್ರಾಹ್ಮಣನನ್ನು ಕರೆದು ವೀಳ್ಯದೆಲೆ, ಅಡಿಕೆ, ಜೋಡಿ ಬಾಳೆಹಣ್ಣು, ತೆಂಗಿನಕಾಯಿ, ಎಳ್ಳಿನ ಬೆರಕೆ, ಸಕ್ಕರೆ ಅಚ್ಚು ಯಥಾಶಕ್ತಿ ದಕ್ಷಿಣೆ ಇಟ್ಟು ತಾಂಬೂಲ ನೀಡಿ ಅವರಿಗೆ ನಮಸ್ಕರಿಸುತ್ತಾರೆ.

ಮನೆಯ ಹಿರಿಯ ಮುತ್ತೈದೆಯರು ನಿತ್ಯ ಗೌರಿ ಪೂಜೆ ಮಾಡಿ ಬ್ರಾಹ್ಮಣ ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ತಾಂಬೂಲ ನೀಡಿ, ಜೊತೆಗೆ ರವಿಕೆ ಕಣ, ಗಾಜಿನ ಬಳೆಗಳನ್ನು ಅರಿಶಿಣ ಕುಂಕುಮ ಹೂವು ಜೊತೆಗೆ ಕೊಟ್ಟು ನಮಸ್ಕರಿಸುತ್ತಾರೆ.

ಈ ಹಬ್ಬ ಜನವರಿ ೧೪ ರಂದು ಆಚರಿಸಲು ವೈಜ್ಞಾನಿಕ ಕಾರಣಗಳಿವೆ.ಧಾರ್ಮಿಕ ಕಾರಣಗಳು ಪಿತೃ ಗಳ ನೆನಪು.

ಹೊಸದಾಗಿ ಮದುವೆಯಾದ ಹುಡುಗಿಯರು ೫ ವರುಷ ಸಂಕ್ರಾಂತಿ ನೋಂಪಿ ಅಂದರೆ ವ್ರತ ಮಾಡಬೇಕು.ಮೊದಲ ವರುಷ ೫ ಬಾಳೆಹಣ್ಣು ಅಥವಾ ಒಂದು ಚಿಪ್ಪು ಬಾಳೆಹಣ್ಣು,ಮಂಗಳದ್ರವ್ಯ ಸಮೇತ ೫ ಜನ ಮುತ್ತೈದೆಯರಿಗೆ ನೀಡುವರು.ಇದರೊಂದಿಗೆ ಸುಣ್ಣ ಹಚ್ಚಿದ ಹೊಸ ಕುಡಿಕೆಯಲ್ಲಿ, ೩-೪ ಅವರೆಕಾಯಿ, ಕಡಲೆಕಾಯಿ, ಬಾರೆಹಣ್ಣು, ಭತ್ತದ ತೆನೆ, ಬೆಲ್ಲ, ಕಬ್ಬು, ಬಳೆಗಳು ಇತ್ಯಾದಿ ನೀಡುತ್ತಾರೆ.ವ್ರತದ ದ್ರವ್ಯಗಳನ್ನು ಹಿರಿಯ ಮುತ್ತೈದೆಯರಿಗೆ, ಮನೆಯ ವಿವಾಹಿತ ಹೆಣ್ಣು ಮಗಳು, ಹಾಗು ಮುತ್ತೈದೆಯಾಗಿರುವ ತಾಯಿ, ಅತ್ತಿಗೆ ಯರಿಗೆ ನೀಡುವರು.

ಮುಂದಿನ ವರುಷ ಹತ್ತು, ನಂತರ ಹದಿನೈದು, ನಂತರ ಇಪ್ಪತ್ತು, ಕಡೆ ವರುಷ ಅಂದರೆ ೫ ನೆ ವರುಷ ಇಪ್ಪತ್ತೈದು ಬಾಳೆಹಣ್ಣು ೫ ಜನ ಮುತ್ತೈದೆಯರಿಗೆ ನೀಡಿ ನೋಂಪಿಯನ್ನು ಸಮಾಪ್ತಿಗೊಳಿಸಲಾಗುತ್ತದೆ.ಚಿಪ್ಪು ಬಾಳೆಹಣ್ಣು ಕೊಡುವ ರೂಢಿ ಇರುವವರು ೫ ವರುಷವೂ ೫ ಜನ ಮುತ್ತೈದೆಯರಿಗೆ ಒಂದು ಚಿಪ್ಪುಬಾಳೆಹಣ್ಣು ಕೊಡುವರು.ಚಿಪ್ಪಿನಿಂದ ಒಂದು ಹಣ್ಣು ಮುರಿದಿರಬಾರದು.

ಸಂಜೆ ಮಕ್ಕಳು ಎಲ್ಲರ ಮನೆಗೂ ಹೋಗಿ ಎಳ್ಳು, ಸಕ್ಕರೆ ಅಚ್ಚು,ಕಬ್ಬು, ಬಾಳೆಹಣ್ಣು ಹಂಚುವರು. ಸಕ್ಕರೆ ಅಚ್ಚಿನ ಬದಲಾಗಿ ಕೆಲವರು ಬೆಲ್ಲದ ಅಚ್ಚು ಹಂಚುವರು

ಈ ದಿನ ಹಬ್ಬದಡುಗೆ ಮಾಡಲಾಗುತ್ತದೆ.ಕೆಲವರು ಈ ದಿನ ಸಿಹಿ ಪೊಂಗಲ್, ಅವರೆಕಾಳು,ಗೆಣಸಿನ ಪಲ್ಯದ ಅಡುಗೆ, ಕಡಲೆ ಬೀಜ ಬೆರೆಸಿ ಅಡಿಗೆ ಮಾಡುವರು.ಅರಿಶಿಣದ ಕೊಂಬನ್ನು ಮುತ್ತೈದೆಯರಿಗೆ ಕೊಡುವರು.

ಮರು ದಿನ ಬೊಮ್ಬೆ ಎಳ್ಳು ಬೀರುವರು.ಅಂದರೆ ಉದ್ದರಣೆಯಲ್ಲಿ ೨ ಬಾರಿ ಎಳ್ಳಿನ ಬೆರಕೆ ಮಿಶ್ರಣವನ್ನು ನೆರೆಹೊರೆಯವರಿಗೆ ಹಂಚುವರು.

ನೆನಪಿರಲಿ ಎಳ್ಳು ತಯಾರಿಸುವಾಗ ಅದು ಮೀಸಲು.ಅಂದರೆ ರುಚಿ ನೋಡುವಂತಿಲ್ಲ.ದೇವರಿಗೆ ನೈವೇದ್ಯ ಇಡಬೇಕು.ಹಾಗು ಕೆಲವರು ಸಂಕ್ರಾಂತಿ ದಿನ ಎಳ್ಳು ಮಿಶ್ರಣ ತಿನ್ನುವುದಿಲ್ಲ, ಹೊಸ ಬಟ್ಟೆ ಧರಿಸುವುದಿಲ್ಲ.ಎಳ್ಳು ಮಿಶ್ರಣ ಹಂಚುವುದಕ್ಕೆ ಎಳ್ಳು ಬೀರುವುದು ಎನ್ನುತ್ತಾರೆ.

ಮರು ದಿನ ಸಂಜೆ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಆರತಿ ಎ ತ್ತುತ್ತಾರೆ.ಮಕ್ಕಳಿಗೆ ಕುಸುರುಎಳ್ಳಿನ ಸಕ್ಕರೆ ಕಾಳಿನ ಸರ ಇತ್ಯದಿ ಆಭರನ ಹಾಕುತ್ತಾರೆ.ಒಂದು ಚೊಮ್ ಬಿನಲ್ಲಿ ಎಳ್ಳು ಕಬ್ಬಿನ ತುಂಡು, ಬಾರೆಹಣ್ಣು, ಕಾಸು ಹಾಕಿ ಮಕ್ಕಳಿಗೆ ತಲೆಯ ಮೇಲಿನಿಂದ ಸುರಿಯುತ್ತಾರೆ ಇದಕ್ಕೆ ಫಲ ಎರೆಯುವುದು ಎನ್ನುವರು.ನಂತರ ಮಕ್ಕಳಿಗೆ ಎಳ್ಳು ನಿವಾಳಿಸಿ ಅದನ್ನು ತಿರುಕರಿಗೆ ಕೊಡುವರು.


ವೈಚಾರಿಕವಾಗಿ ನೋಡಿದರೆ ಈ ಋತುಮಾನದಲ್ಲಿ ದೇಹಕ್ಕೆ ಕೊಬ್ಬಿನ ಅಂಶದ ಅವಶ್ಯಕತೆ ಇರುತ್ತದೆ.ಹಾಗಾಗಿ ಎಳ್ಳು ,ಕೊಬ್ಬರಿ ,ಕಡಲೆ ಬೀಜ ಬೇಕು.ಎಳ್ಳು ಉಷ್ಣದ ಗುಣ ಹೊಂದಿರುವುದರಿಂದ ದೇಹಕ್ಕೆ ಅದು ಕೂಡ ಸಿಗುತ್ತದೆ.ಬೆಲ್ಲ ರುಚಿ, ಕ್ಯಾಲ್ಸಿಯಂ ಹಾಗು ಪಿತ್ತದ ನಿವಾರಕ ಎನ್ನುವರು.ಸಕ್ಕರೆ ಅಚ್ಚು ಹಾಲಿನಿಂದ ತಯಾರಿಸಿರುವುದರಿಂದ ಅದು ದೇಹಕ್ಕೆ ಆರೋಗ್ಯ ಹಾಗು ರುಚಿ. ಇನ್ನು ಬಾರೆ ಹಣ್ಣು ಕಾಲದ ಫಲ.ಹೊಸ ಧಾನ್ಯ ನೀಡುವುದು ಕೂಡಾ ಒಂದು ರೀತಿಯಲ್ಲಿ ಸಾಮಾಜಿಕ ಸಂಬಂಧ ಸುಧಾರಿಸುತ್ತದೆ.ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಎನ್ನುವ ನುಡಿ ಇದೆ.ಎಳ್ಳು ಬೀರುವುದು ಸಾಮಾಜಿಕ ಸಂಬಂಧ ಅಭಿವೃದ್ಧಿಗೆ ಸಹಕಾರಿ.ಮಕ್ಕಳಿಗೆ ಆರತಿ ಎತ್ತುವುದು ದೃಷ್ಟಿ ನಿವಾರಣೆ ಹಾಗು ಒಂದು ರೀತಿ ಆತ್ಮವಿಶ್ವಾಸ ಹೆಚ್ಚುವ ಸಂಪ್ರದಾಯ.

ಎಲ್ಲರೂ ಎಳ್ಳು ಬೆಲ್ಲ ಬೀರೋಣ, ತಿನ್ನೋಣ.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಇದು ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ.

ರಾಧಿಕಾ ಜಿ.ಎನ್

ಟೀವೀ ಹೊಸ್ಟ್ 

brahmies@gmail.com

Post a Comment

0Comments

Post a Comment (0)