ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಹೊಂದಿರುವ ತರೀಕೆರೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಿನ್ದ ಕೂಡಾ ಮನೆ ಮಾತಾಗಿದೆ.
ಅಲ್ಲಿನ ದೇವರಪ್ಪ ಬೀದಿಯಲ್ಲಿರುವ ಈ ದೇವಸ್ಥಾನ ಬಹು ಮಹಿಮೆ ಉಳ್ಳದ್ದು ಹಾಗು ಜಾಗೃತ ಸ್ಥಾನ.
ಈ ದೇವಾಲಯದ ಚರಿತ್ರೆ ಬಗ್ಗೆ ಬನ್ನಿ ಸ್ವಲ್ಪ ತಿಳಿದುಕೊಳ್ಳೋಣ.
ಬಹಳ ಹಿಂದೆ ತರೀಕೆರೆಯಲ್ಲಿ ಪಾಲೆಗಾರರ ಆಳ್ವಿಕೆ ಇದ್ದ ಕಾಲ.ಆಗ ಅಲ್ಲಿನ ಬ್ರಾಹ್ಮಣ ಹಿರಿಯರಾಗಿ ಮನೆವಾರ್ತೆ ಮನೆತದ ಶ್ರೀ ಲಕ್ಷ್ಮೀ ನಾರಾಯಣಪ್ಪ ಎನ್ನುವವರು ಇದ್ದರ.ಅವರು ಬಹಳ ದೈವ ಭಕ್ತರು.ಅವರು ತಮ್ಮ ಕುಟುಂಬದ ಹಾಗು ಊರಿನ ಜನರ ಕ್ಷೇಮಕ್ಕಾಗಿ ಪ್ರತಿ ವರುಷ ಕುಕ್ಕೆ ಸುಬ್ರಮಣ್ಯಕ್ಕೆ ಎತ್ತಿನ ಗಾಡಿ ಕಟ್ಟಿಕೊಂಡು ಪ್ರಯಾಣ ಬೆಳೆಸುತ್ತಿದ್ದರು.ಅಲ್ಲಿ ಪೂಜೆ ಮುಗಿಸಿಕೊಂಡು ತರಿಕೆರೆಗೆ ಹಿಂದಿರುಗುತ್ತಿದ್ದರು.ಒಮ್ಮೆ ಅವರಿಗೆ ಕಾರಣಾಂತರಗಳಿಂದ ಕುಕ್ಕೆಯ ದೇವರ ಸನ್ನಿಧಿಗೆ ಹೋಗಲು ಸಾಧ್ಯವಾಗಲಿಲ್ಲ.ಇದರಿಂದ ಹಿರಿಯರು ಬಹಳ ನೊಂದರು. ಆಗ ಒಂದು ದಿನ ರಾತ್ರಿ ಅವರ ಕನಸಿನಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯು ಬಂದು ಅವರಿಗೆ ಇನ್ನು ಮುಂದೆ ತರೀಕೆರೆಯಲ್ಲಿಯೇ ತಾನು ಬರುವುದಾಗಿ ಹೇಳಿ ಸರ್ಪರೂಪದಲ್ಲಿ ಅಲ್ಲಿನ ಚಿಕ್ಕ ಕೆರೆಯ ಸನಿಹದ ಕೊಳ ಒಂದನ್ನು ಪ್ರವೇಶಿಸಿದನು.ತನ್ನನ್ನು ಅಲ್ಲಿಂದ ಹೊರ ತೆಗೆದು ತನಗೆ ಒಂದು ಗುಡಿ ಕಟ್ಟಿಸಬೇಕೆಂದು ಕೂಡಾ ಕನಸಿನಲ್ಲಿ ಹೇಳಿದನು.
ಬೆಳಿಗ್ಗೆ ಎದ್ದ ಶ್ರೀ ಲಕ್ಷ್ಮೀ ನಾರಾಯಣಪ್ಪನವರು ಈ ಕನಸಿನ ವಿಚಾರವನ್ನು ಜನರಿಗೆ ಹಾಗು ಪಾಲೆಯಗಾರರಿಗೆ ಪ್ರಸ್ತಾಪಿಸಿದರು.ನಂತರ ಎಲ್ಲರ ನೆರವಿನಿಂದ ಕನಸಿನಲ್ಲಿ ಬಂದ ಕೊಳಕ್ಕೆ ಈಜುಗಾರರನ್ನು ಇಳಿಸಿ ಪರೀಕ್ಷಿಸಿದಾಗ ಅಲ್ಲಿ ಸುಂದರ ಏಳು ಹೆಡೆಗಳುಳ್ಳ ಕಪ್ಪು ಶಿಲೆಯ ಸುಬ್ರಹ್ಮಣ್ಯನ ವಿಗ್ರಹ ಕಂಡು ಬಂದಿತು.ಅದನ್ನು ನಂತರ ಈ ಕೊಳದಿಂದ ಹೊರ ತೆಗೆದರು. ಈ ಕೊಳಕ್ಕೆ ನಂತರ ಸುಬ್ರಾಯನ ಕೊಳ ಎಂದೇ ಹೆಸರಾಯಿತು.ಅಲ್ಲಿ ಪ್ರಸನ್ನ ರಾಮೇಶ್ವರ ಹಾಗು ಗಣಪತಿಯ ಗುಡಿಗಳಿವೆ.
ಮುಂದೆ ಪುರೋಹಿತರ ಸಲಹೆ ಹಾಗು ಮುಂದಾಳುತ್ವದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ವಿಗ್ರಹವನ್ನು ಈಗಿರುವ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.
ಅಂದಿನಿಂದ ಪ್ರತಿ ತುಳುವ ಷಷ್ಠಿ ದಿನದಂದು ಅಲ್ಲಿ ಸ್ವಾಮಿಗೆ ರಥೋತ್ಸವ ನಡೆಯುತ್ತದೆ.ಆಗ ಸುತ್ತಮುತ್ತಲ ಹಾಗು ದುರದಿನ್ದ ಭಕ್ತಾದಿಗಳು ಸೇರುತ್ತಾರೆ.ದೇವಾಲಯದ ಎದುರಿಗೆ ಹಿಂದೆ ಪೂರ್ಣಯ್ಯನ ಛತ್ರ ಇತ್ತು.ಈಗ ಅದು ನವೀಕರಣಗೊಂಡು ಅನ್ನಪೂರ್ಣೇಶ್ವರಿ ಭವನ ಎಂದಾಗಿದೆ.
ರಥೋತ್ಸವದ ದಿನ ದೇವರನ್ನು ರಥದಲ್ಲಿ ಕೂರಿಸಿದಾಗ ಮೇಲೆ ಆಕಾಶದಲ್ಲಿ ಗರುಡಗಳು ಪ್ರದಕ್ಷಿಣೆ ಹಾಕುತ್ತವೆ ಎನ್ನುತ್ತಾರೆ.ರಥಕ್ಕೆ ಭಕ್ತಾದಿಗಳು ಬಾಳೆಹಣ್ಣು, ನಾನ್ಯಗಳನ್ನು ತೂ ರುತ್ತಾರೆ. ಈ ದಿನ ಹೊರ ಊರುಗಳಿಂದ ಬಂದಂತಹ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ.
ಈ ದಿನ ಸುಬ್ರಹ್ಮಣ್ಯ ಹೋಮ, ರುದ್ರಾಭಿಷೇಕ, ಬ್ರಹ್ಮಚಾರಿ ಪೂಜೆ, ಹಸತೋೂದಕ,ಉಯ್ಯಾಲೆ ಸೇವೆ, ತೊಟ್ಟಿಲು ಸೇವೆ ರಥೋತ್ಸವ ಇತ್ಯಾದಿ ಇರುತ್ತದೆ.ಹಿಂದಿನ ದಿನ ರುಥ್ವೀಕರುಗಳಿಂದ ಅನೇಕ ಧಾರ್ಮಿಕ ಕಾರ್ಯಗಳು ನಡೆಸಲ್ಪಡುತ್ತವೆ. ಈ ದೇವರು ಸಂತಾನ ಭಾಗ್ಯ ನೀಡುವ ದೇವರು ಎಂದು ಖ್ಯಾತನಾಗಿದ್ದಾನೆ.ಅಲ್ಲದೆ ಅನ್ನದಾನ ಸುಬ್ರಹ್ಮಣ್ಯ ಎಂದು ಕರೆಯುತ್ತಾರೆ.ರಥೋತ್ಸವದ ಮರುದಿನ ಕೂಡಾ ಅನೇಕ ಧಾರ್ಮಿಕ ಕಲಾಪಗಳು ನಡೆಯುತ್ತವೆ. ಈ ದಿನ ಈ ಊರಿನ ಜನರಿಗೆ ಭೋಜನದ ವ್ಯವಸ್ಥೆ ಇರುತ್ತದೆ.ಅಲ್ಲದೆ ಬೆಳಿಗ್ಗೆ ವಿಶೇಷ ಕಷಾಯವನ್ನು ದೇವಾಲಯದಲ್ಲಿ ಭಕ್ತಾದಿಗಳಿಗೆ ಹಂಚುತ್ತಾರೆ.
ಇಲ್ಲಿನ ಬ್ರಾಹ್ಮಣ ಸಮಾಜ, ವಿಪ್ರ ವಿದ್ಯಾರ್ಥಿ ವೇದಿಕೆ, ಮಹಿಳಾ ಮಂಡಳಿಗಳು ಭಜನಾ ಹಾಗು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೆ ನಡೆಸಿಕೊಡುತ್ತಾರೆ.
ಒಟ್ಟಿನಲ್ಲಿ ರಥೋತ್ಸವ 4-5 ದಿನಗಳ ಕಾರ್ಯಕ್ರಮ.
ಉಳಿದಂತೆ ಇಲ್ಲಿ ಪ್ರತಿ ಷಷ್ಠಿ ವಿಶೇಷ ಪೂಜೆ ನಡೆಯುತ್ತದೆ.ಕಾರ್ತೀಕ ಮಾಸದಲ್ಲಿ ತಿಂಗಳು ಪೂರ್ತಿ ಇಲ್ಲಿ ಭಕ್ತಾದಿಗಳಿಂದ ಮಂಗಳಾರತಿ ಹಾಗು ಇತರ ಸೇವೆಗಳು ನಡೆಯುತ್ತವೆ.ಧನುರ್ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ಅಲ್ಲದೆ ಸ್ವಾಮಿಗೆ ಬಹಳಷ್ಟು ಹರಕೆಗಳನ್ನು ಭಕ್ತಾದಿಗಳು ಪ್ರಾರ್ಥಿಸಿ, ನಂತರ ಹರಕೆ ತೀರಿಸುತ್ತಾರೆ.
ಈ ದೇವಾಲಯದ ಮುನ್ನಡೆಯಲ್ಲಿ ಹಾದಿಕೆರೆ ಹಾಗು ನಾಡಿಗ್ ಮನೆತನ ಹಾಗು ತರೀಕೆರೆಯ ಬ್ರಾಹ್ಮಣ ಕುಟುಂಬಗಳ ಸಹಕಾರ ಬಹಳವಾಗಿದೆ.
ನಾನು ಕಂಡಂತೆ ಇಲ್ಲಿ ಹಿಂದೆ ಅರ್ಚಕರಾಗಿದ್ದಂತಹ ಶೃಂಗೇರಿಯಿಂದ ಬಂದಂತಹ ಶ್ರೀ ರಾಮಕೃಷ್ಣ ಭಟ್ಟರು, ಅವರ ಮಗ ಗಣೇಶ ಭಟ್ಟರು ಹಾಗು ಈಗಿನ ಅರ್ಚಕರಾದ ಸತ್ಯನಾರಾಯಣ ಭಟ್ಟರ ಕೊಡುಗೆಗಳು ಗಮನಾರ್ಹವಾದುದು.
ನನ್ನ ತಾಯಿಯವರಾದ ಪ್ರಭಾವತಿಯವರು ಪ್ರಸಿದ್ಧ ಮನೆವಾರ್ಥೆ ಮನೆತನದ ಹೆಣ್ಣು ಮಗಳು.ಹಾಗು ನನ್ನ ಮಗ ಚಿ.ಅಮೃತ್ ತರೀಕೆರೆಯ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಅನುಗ್ರಹದಿಂದ ಹುಟ್ಟಿದ ಮಗು.ನನ್ನ ವಿದ್ಯಾಭ್ಯಾಸ ದಿನಗಳಲ್ಲಿ ಸ್ವಾಮಿಯ ಆಶಿರ್ವಾದ ನನ್ನ ಮೇಲೆ ಇತ್ತು.
ಪ್ರತಿ ಮಾರ್ಗಶೀರ ಮಾಸ ಶುಕ್ಲ ಪಕ್ಷ ಷಷ್ಟಿ ದಿನದಂದು ಹಾದಿ ಕೆರೆ ವಂಶಸ್ಥರು ಸೀತಾರಾಮಯ್ಯ ಅವರ ಮನೆಕಡೆಯಿಂದ ಪಲ್ಲಕ್ಕಿ ಉತ್ಸವ ಸುಮಾರು ವರ್ಷಗಳಿಂದ ಪ್ರಾಯೋಜನ ಮಾಡಿಕೊಂಡು ಬಂದಿರುತ್ತಾರೆ.
ಈ ಬಾರಿ 132 ನೇ ರಥೋತ್ಸವ ಜನವರಿ 5 ರಂದು ನಡೆಯುತ್ತಿ ದೆ.
ಬನ್ನಿ ಓದುಗರೇ ಒಮ್ಮೆ ಈ ದೇವರ ರಥೋತ್ಸ ವಕ್ಕೆ ಹೋಗಿ ದೇವರ ಕೃಪೆಗೆ ಎಲ್ಲರೂ ಪಾತ್ರಾರಾಗೋನ.
ಮಾಹಿತಿ ಕೃಪೆ:-
* ಶ್ರೀಕಂಠ ಸ್ವಾಮಿ ಮನೆವಾರ್ತೆ
* ಸೀತಾರಾಮು ತರೀಕೆರೆ, ಹಾದಿ ಕೆರೆ ಮನೆತನ
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
brahmies@gmail.com