ಶ್ರೀ ಸುಪ್ರಜ್ಞೇ೦ದ್ರತೀರ್ಥರು....
ಸುಧರ್ಮೇಂದ್ರ ಕರಾಬ್ಜೋತ್ಥ೦
ಸುವಿದ್ವನ್ಮಣಿರಾಜಿತಂ ।
ಸುಮೃಷ್ಟಾನ್ನಪ್ರದಾತಾರಂ
ಸುಗುಣೇಂದ್ರ ಗುರು೦ಭಜೇ ।।
ಶ್ರೀ ಸುಗುಣೇಂದ್ರತೀರ್ಥ ಮುನಿಪುಂಗವರು ದಯಾಶೀಲರಾದ ಮಹಾನುಭಾವರು.
ಶ್ರೀ ಸುಗುಣೇಂದ್ರತೀರ್ಥರು ಶ್ರೀ ಸರ್ವಜ್ಞಾಚಾರ್ಯರ ವೇದಾಂತ ವಿದ್ಯಾ ಸಂಹಾಸನಾಧೀಶ್ವರರೂ; ಶ್ರೀಕಾಂತಿ ಸಂಪದ್ಭರಿತರೂ; ವಿದ್ಯಾ ಮತ್ತು ಮೃಷ್ಟಾನ್ನ ದಾನ ಮಾಡುವದರಲ್ಲಿ ಖ್ಯಾತರಾದವರೂ; ಶ್ರೀ ಗುರುಸಾರ್ವಭೌಮರು ವಿರಾಜಿಸಿದ ಮಹಾ ಪೀಠದಲ್ಲಿ ವಿರಾಜಿಸಿ " ಉಭಯ ವಂಶಾಬ್ಧಿ ಸುಧಾಕರ " ರೆಂದು ಖ್ಯಾತರಾಗಿ; ಉಭಯ ವಂಶ ವಿಭೂಷಿತರಾಗಿ ಜಗನ್ಮಾನ್ಯರಾದರು.
ಶಾಸ್ತ್ರ ಪಾರಂಗತರಾದ ಶ್ರೀ ಸುಗುಣೇಂದ್ರತೀರ್ಥರು ಅನೇಕ ಶಿಷ್ಯರಿಗೆ ಪಾಠ ಹೇಳಿ ದ್ವೈತ ಸಿದ್ಧಾಂತ ಜ್ಞಾನವನ್ನೂ; ಸರ್ವರಿಗೂ ಮೃಷ್ಟಾನ್ನವನ್ನೂ ಕರುಣಿಸಿದ ಕರುಣಾಮೂರ್ತಿಗಳು ಶ್ರೀ ಸುಗುಣೇಂದ್ರತೀರ್ಥರು.
ಉಭಯ ವಂಶಾಬ್ಧಿ ಸುಧಾರಕರೂ; ಶ್ರೀ ದುರ್ವಾಸ ಮುನಿಗಳ ಅಂಶ ಸಂಭೂತರೂ ಆದ ಶ್ರೀ ಸುಧರ್ಮೇಂದ್ರತೀರ್ಥರ ವರ ಪುತ್ರಕರಾದ ಶ್ರೀ ಸುಗುಣೇಂದ್ರತೀರ್ಥರ ಆರಾಧನಾ ಶುಭ ಸಂದರ್ಭದಲ್ಲಿ ಅವರ ಕಿರು ಪರಿಚಯದ ಪ್ರಯತ್ನ ಇಲ್ಲಿದೆ.
ವಿಶೇಷ ವಿಚಾರ : -
" ಉಭಯ ವಂಶಾಬ್ಧಿ " ಯೆಂದರೆ " ವಿದ್ಯಾ ಮತ್ತು ದೇಹ ಸಂಬಂಧಿ " ಎಂದರ್ಥ.
ಅಂದರೆ, ಶ್ರೀ ಸುಗುಣೇಂದ್ರತೀರ್ಥರು ದ್ವೈತ ವಿದ್ಯಾ ವಿಶಾರದರು ಆದ್ದರಿಂದ ಶ್ರೀ ರಾಯರಿಗೆ " ವಿದ್ಯಾ ಸಂಬಂಧಿ " ಗಳು ಮತ್ತು " ಶ್ರೀ ರಾಯರ ವೇದಾಂತ ವಿದ್ಯಾ ಸಾಮ್ರಾಜ್ಯಾಧಿಪತಿಗಳು ಆದ್ದರಿಂದ ಶ್ರೀ ರಾಯರಿಗೆ ದೇಹ ಸಂಬಂಧಿಗಳಾಗಿದ್ದರೆ.
ಉಭಯ ವಂಶ = ವಿದ್ಯಾ ವಂಶ ಮತ್ತು ಪರಮ ಹಂಸಾಶ್ರಮ ವಂಶ ಎಂದು ಅರ್ಥವೇ ಹೊರತು " ಉಭಯ ವಂಶ " ಎಂದರೆ ಅವರ ಪೂರ್ವಾಶ್ರಮ ವಂಶ ಎಂದು ಅರ್ಥ ಮಾಡಕೂಡದು. ಹಾಗೇನಾದರೂ ಅರ್ಥ ಮಾಡಿದರೆ " ರೌರವಾದಿ ನರಕ " ತಪ್ಪದು!!
" ಶ್ರೀ ಸುಗುಣೇಂದ್ರತೀರ್ಥರ ಸಂಕ್ಷಿಪ್ತ ಚರಿತ್ರೆ "
ಹೆಸರು :
ಶ್ರೀ ವೆಂಕಟರಾಮಾಚಾರ್ಯರು
ತಂದೆ :
ಶ್ರೀ ರಾಘವೇಂದ್ರಾಚಾರ್ಯರು
ಸಹೋದರ :
ಶ್ರೀ ರಾಜಾ ರಾಜಗೋಪಾಲಾಚಾರ್ಯರು
ವಿದ್ಯಾ ಗುರುಗಳು :
ಶ್ರೀ ಸುಬೋಧೇಂದ್ರರು - ಶ್ರೀ ಸುಜನೇಂದ್ರರು - ಶ್ರೀ ಸುಜ್ಞಾನೇಂದ್ರರು - ಶ್ರೀ ಸುಧರ್ಮೇಂದ್ರರು
ಶ್ರೀ ವೆಂಕಟರಾಮಾಚಾರ್ಯರು ಸಹೋದರರೊಂದಿಗೆ ಪ್ರಾಥಮಿಕ ವಿದ್ಯೆ , ಉದ್ಗ್ರಂಥಗಳನ್ನೂ; ಪುರಾಣ - ಇತಿಹಾಸಗಳನ್ನೂ; ಶ್ರೀ ಸುಭೋಧೇಂದ್ರ - ಶ್ರೀ ಸುಜನೇಂದ್ರ - ಶ್ರೀ ಸುಧರ್ಮೇಂದ್ರತೀರ್ಥರಲ್ಲಿ ವೇದ - ವೇದಾಂತ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಪ್ರಕಾಂಡ ಪಂಡಿತರೆಂದು ಪ್ರಖ್ಯಾತಿಯನ್ನು ಪಡೆದರು.
ಆಶ್ರಮ ಗುರುಗಳು :
ಶ್ರೀ ಸುಧರ್ಮೇಂದ್ರತೀರ್ಥರು
ಆಶ್ರಮ ನಾಮ :
ಶ್ರೀ ಸುಗುಣೇಂದ್ರತೀರ್ಥರು
ಪಂಡಿತೋತ್ತಮರೂ; ವೈರಾಗ್ಯ ನಿಧಿಗಳೂ; ತಪಸ್ವಿಗಳೂ; ಉತ್ತಮ ವಾಗ್ಮಿಗಳೂ ಆದ ಶ್ರೀ ವೆಂಕಟರಾಮಾಚಾರ್ಯರಿಗೆ ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನದ ಸತಸಂಪ್ರದಾಯದಂತೆ ಶ್ರೀ ಸುಧರ್ಮೇಂದ್ರತೀರ್ಥರು ತುರ್ಯಾಶ್ರಮವನ್ನು ನೀಡಿ " ಶ್ರೀ ಸುಗುಣೇಂದ್ರತೀರ್ಥ " ರೆಂದು ನಾಮಕರಣ ಮಾಡಿ ತಮ್ಮ ಅಮೃತಮಯವಾದ ಹಸ್ತಗಳಿಂದ " ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ " ಮಾಡಿದರು.
" ಮಹಿಮೆ "
ಹಿಂದೊಮ್ಮೆ ಮೈಸೂರು ರಾಜ್ಯದಲ್ಲಿ ಒಂದು ವರ್ಷ ಕಾಲ ಮಳೆ, ಬೆಳೆಗಳಿಲ್ಲದೆ ಪ್ರಜೆಗಳೆಲ್ಲರೂ ದುರ್ಭಿಕ್ಷದ ಭವಣೆಗೊಳಗಾಗಿ ಕಷ್ಟ ಪಡುತ್ತಿದ್ದರು.
ಈ ದುರ್ಭಿಕ್ಷದ ತಾಪದಿಂದ ನಂಜನಗೂಡಿನಲ್ಲಿಯೂ ಸಹಸ್ರಾರು ಜನರು ಬಹಳ ಕಷ್ಟ ಪಡುತ್ತಿದ್ದರು. ಅದನ್ನು ಕಂಡು ಕರುಣಾ ಸಮುದ್ರರಾದ ಶ್ರೀ ಸುಗುಣೇಂದ್ರತೀರ್ಥರು ಕ್ಷಾಮ ನಿವಾರಣೆಯಾಗಿ; ಮಳೆ ಬೆಳೆಗಳಿಂದ ದೇಶವು ಸುಭಿಕ್ಷವಾಗಿಯೂ; ಜನರು ಸುಖವಾಗಿಯೂ ಬಾಳುವಂತಾಗಬೇಕೆಂದು ಶ್ರೀ ಮೂಲರಾಮ - ಶ್ರೀ ದಿಗ್ವಿಜಯರಾಯ - ಶ್ರೀ ಜಯರಾಮ - ಶ್ರೀ ಭಾರತೀಶ - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರನ್ನು ವಿಶೇಷಾಕಾರವಾಗಿ ತಪಸ್ಸಿನಿಂದ ಸಂತೋಷ ಪಡಿಸಿ; ಶ್ರೀ ಹರಿ ವಾಯು ಗುರುಸಾರ್ವಭೌಮರ ಪ್ರೇರಣೆಯಂತೆ ಶ್ರೀ ಮಠದ ಸಂಪತ್ತನ್ನು ವ್ಯಯ ಮಾಡಿ ನಂಜನಗೂಡಿನ ಜನರೆಲ್ಲರಿಗೂ ಒಂದು ವರ್ಷದ ಕಾಲ ಮೃಷ್ಟಾನ್ನವನ್ನು ದಾನ ಮಾಡಿ ಸಂರಕ್ಷಿಸಿದರು.
ಒಂದು ವರ್ಷದಲ್ಲಿ ಶ್ರೀ ಶ್ರೀಗಳವರ ತಪಸ್ಸು ಫಲಿಸಿ ದೈವಾನುಗ್ರಹದಿಂದ ಚೆನ್ನಾಗಿ ಮಳೆ ಬೆಳೆಗಳಾಗಿ ಸುಭಿಕ್ಷರಾಗಿ ಸಮಸ್ತ ಜನರೂ ಸುಖ ಶಾಂತಿಯಿಂದ ಬಾಳುವಂತಾಯಿತು.
ಇದು ಇತಿಹಾಸ ಪ್ರಸಿದ್ಧವಾದ ವಿಷಯವು!
ತಮ್ಮ ಸಕಲ ಸಂಪತ್ತುಗಳನ್ನೂ ನಾಡಿನ ಜನರಿಗಾಗಿ ಧಾರೆಯೆರಿದ ಮಹಾ ಮಹಿಮಾನ್ವಿತರು ಶ್ರೀ ಸುಗುಣೇಂದ್ರತೀರ್ಥರು.
ಆಶ್ರಮ ಶಿಷ್ಯರು :
ಸುಪ್ರಜ್ಞೇ೦ದ್ರತೀರ್ಥರು
ವೇದಾಂತ ಸಾಮ್ರಾಜ್ಯಾಧಿಕಾರ :
ಕ್ರಿ ಶ 1872 - 1884
ಆರಾಧನೆ :
ಮಾರ್ಗಶಿರ ಶುದ್ಧ ಪೌರ್ಣಿಮಾ
ಬೃಂದಾವನ ಸ್ಥಳ :
ಚಿತ್ತೂರು
" ಉಪ ಸಂಹಾರ "
ಕರುಣಾಸಮುದ್ರರೂ; ದಾನಿಗಳೂ; ಆಪತ್ಕಾಲ ಮಿತ್ರರೂ; ಮೃಷ್ಟಾನ್ನ ಪ್ರದಾತರೂ; ದ್ವೈತ ವಿದ್ಯಾದಾತರೂ; ತಪಸ್ವಿಗಳೂ; ಶ್ರೀ ಹರಿ ವಾಯು ಗುರುರಾಜರ ಅಂತರಂಗ ಭಕ್ತರೂ ಆದ ಶ್ರೀ ಸುಗುಣೇಂದ್ರತೀರ್ಥರು ಮಾರ್ಗಶಿರ ಶುದ್ಧ ಪೌರ್ಣಿಮಾ ತಿಥಿಯಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬೃಂದಾವನಸ್ಥರಾದರು!!
ಶ್ರೀ ವರದೇಶವಿಠಲರು..
ಅಗಣಿತ ಮಹಿಮ ಮೂಜಗದೊಳು ಪ್ರಖ್ಯಾತ ।
ನಿಗಮಾಗಮಜ್ಞ ಸುಗುಣೇಂದ್ರತೀರ್ಥಾ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ