ತುಮಕೂರಿನ ಸಿದ್ಧಗಂಗಾ ಕಾಲೇಜಿನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ, ರೋಟರಿ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಶಿವಶಂಕರ ಎಲ್ ಕಾಡದೇವರಮಠ ಅವರ 70ನೇ ಜನ್ಮದಿನದ ಅಂಗವಾಗಿ ‘ಗ್ರಂಥ ಗಾರುಡಿಗ’ ಎಂಬ ಅಭಿನಂದನಾ ಗ್ರಂಥವನ್ನು ಇತ್ತೀಚೆಗೆ ಶ್ರೀ ಸಿದ್ಧಗಂಗಾ ಮಠದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಪ್ರೊ.ಕೆ.ಎಸ್.ಕೌಜಲಗಿ,ಪ್ರೊ.ಬಿ.ಎಸ್.ಮಾಳವಾಡ, ಡಾ.ಹಚ್.ಪಿ.ಶೇಖರ್ ರವರ ಸಂಪಾದಕತ್ವದಲ್ಲಿ ರೋಟರಿ ತುಮಕೂರು ಸಹಯೋಗದಲ್ಲಿ ರೋಟರಿ ಛಾರಿಟಬಲ್ ಟ್ರಸ್ಟ್ ವತಿಯಿಂದ ಹೊರತಂದ ಈ ಕೃತಿಯನ್ನು ಸಿದ್ಧಗಂಗಾ ಮಠದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಎಸ್.ಎಲ್.ಕಾಡದೇವರಮಠ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಪದವಿ ಪಡೆದು, ಗ್ರಂಥಾಲಯ ಪುನರ್ನಿರ್ಮಾಣ ಎಂಬ ವಿಷಯದ ಮೇಲೆ ಮಹಾಪ್ರಬಂಧವನ್ನು ರಚನೆ ಮಾಡಿ ಪಿಹೆಚ್ಡಿ ಪಡೆದು ಸಿದ್ಧಗಂಗಾ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿ ಸುದೀರ್ಘಕಾಲ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿ, ನಾಡಿನ ಗ್ರಂಥಾಲಯ ಚಳುವಳಿಯ ರೂವಾರಿ ರಂಗನಾಥನ್ ಅವರ ಸ್ಫೂರ್ತಿಯಿಂದ ಪ್ರಭಾವಿತರಾಗಿ ತಮ್ಮನ್ನು ತಾವು ಗ್ರಂಥಾಲಯಕ್ಕೆ ಸಮರ್ಪಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಶತಮಾನಗಳಿಂದ ಲಕ್ಷಾಂತರ ಜನರಿಗೆ ತ್ರಿವಿಧ ದಾಸೋಹ ನೀಡುತ್ತಾ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀ ಸಿದ್ಧಗಂಗಾ ಮಠದಲ್ಲಿ, ಶ್ರೀಗಳ ಸಮಕ್ಷಮದಲ್ಲಿ ಈ ಗ್ರಂಥ ಬಿಡುಗಡೆ ಮಾಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಶಿವಶಂಕರ ಕಾಡದೇವರಮಠ ಅವರು ಮಾತನಾಡಿ ಹುಬ್ಬಳ್ಳಿ ನನಗೆ ಜನ್ಮಭೂಮಿಯಾದರೂ ತುಮಕೂರು ನನ್ನ ಕರ್ಮಭೂಮಿಯಾಗಿದೆ. ಸಿದ್ಧಗಂಗಾ ಕಾಲೇಜಿನಲ್ಲಿ ಸುಮಾರು 28 ವರ್ಷ ಸಿದ್ಧಗಂಗಾ ಕಾಲೇಜಿನ ಗ್ರಂಥಪಾಲಕನಾಗಿ ಮಾದರಿ ಗ್ರಂಥಾಲಯವನ್ನಾಗಿ ರೂಪಿಸಲು ಶ್ರಮಿಸಿದ್ದೇನೆ ಎಂದು ತಿಳಿಸಿದರು. ರೋಟರಿ ಸಂಸ್ಥೆಯ ಮೂಲಕ ಕರ್ನಾಟಕದ ಸುಮಾರು 450ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳಲ್ಲಿ ನನ್ನ ಏಳಿಗೆಗೆ ನಾನೇ ಶಿಲ್ಪಿ ಅನ್ನುವ ಕಾರ್ಯಕ್ರಮ ಮಾಡಿದ್ದೇನೆ. ನಡೆದಾಡುವ ದೇವರೆಂದು ಹೆಸರಾದ ಶ್ರೀ ಶಿವಕುಮಾರ ಸ್ವಾಮಿಗಳ ಮಾತಿನಂತೆ ‘ಪುಸ್ತಕ ಓದಿ, ಪುಸ್ತಕ ಉಳಿಸಿ’ ಎಂಬುದನ್ನು ದೇಶಾದ್ಯಂತ ಸಾರಲು ಪ್ರಯತ್ನಿಸುತ್ತಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ತುಮಕೂರು ಅಧ್ಯಕ್ಷರಾದ ರೊ.ರಾಜೇಶ್ವರಿ ರುದ್ರಪ್ಪ ವಹಿಸಿದ್ದರು. ರೋಟರಿ ಜಿಲ್ಲೆ 3192ರ ಜಿಲ್ಲಾ ರಾಜ್ಯಪಾಲರಾದ ರೊ. ಮಹದೇವ ಪ್ರಸಾದ್ ಎನ್.ಎಸ್, ಲೆಫ್ಟಿನೆಂಟ್ ಗೌರ್ನರ್ ರೊ. ಎಂ.ಎಸ್.ಉಮೇಶ್, ರೋಟರಿ ತುಮಕೂರಿನ ಕಾರ್ಯದರ್ಶಿ ರೊ.ನಾಗಮಣಿ ಪ್ರಭಾಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಂದೇ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಲಿಂಗಯ್ಯ ಕಾಡದೇವರಮಠ ಮತ್ತು ಬೆಂಗಳೂರಿನ ರಾಜಾಜಿನಗರದ ಹೋಟೆಲ್ ನಳಪಾಕ ಮಾಲೀಕರಾದ ಶ್ರೀಮತಿ ಕವಿತಾ ಲಿಂಗಯ್ಯ ಕಾಡದೇವರಮಠ ರವರು ಕಾರ್ಯಕ್ರಮಕ್ಕೆ ಹಾಜರಾಗಿ ಶುಭಾಶಯ ಕೋರಿದರು.