ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿರುವ ಡಾ. ರಾಜು ಅವರ ಮೇಲೆ ಅಲ್ಲಿನ ವಿದ್ಯಾರ್ಥಿಯೋರ್ವ ತನ್ನ ತಂದೆಯ ಜೊತೆಯಲ್ಲಿ ಬಂದು ಕರ್ತವ್ಯದ ಅವಧಿಯಲ್ಲಿ ಹಲ್ಲೆ ಮಾಡಿರುತ್ತಾನೆ.
ಯಾವುದೆ ವಿದ್ಯಾರ್ಥಿಯು ಪರೀಕ್ಷೆಗೆ ಕೂರಲು ಕನಿಷ್ಟ ಶೇಕಡ ೭೫ ಹಾಜರಾತಿ ಇರುವುದು ವಿವಿ ನಿಯಮಗಳ ಅನುಸಾರ ಕಡ್ಡಾಯ ಆಗಿರುತ್ತದೆ. ವಿದ್ಯಾರ್ಥಿಯು ರೆಗ್ಯುಲರ್ ಆಗಿ ಕಾಲೇಜಿಗೆ ಬರದೆ, ಹಾಜರಾತಿ ಕೊರತೆ ಅನುಭವಿಸುತ್ತಿದ್ದು; ಹಾಜರಾತಿ ಇಲ್ಲದಿದ್ದರೂ ಹಾಜರಾತಿ ನೀಡಬೇಕೆಂದು ಒತ್ತಡ ಹೇರಲು ಯತ್ನಿಸಿರುವುದು ಮತ್ತು ಟೆಸ್ಟ್‌ಗೆ ಹಾಗೂ ಅಸೈನ್‌ಮೆಂಡಟ್‌ಗೆ ನಿಗಧಿತವಾಗಿ ವಿದ್ಯಾರ್ಥಿಯು ಹಾಜಾರಾಗದೆ ಪರೀಕ್ಷೆಗೆ ಕೂರಲು ಅವಕಾಶ ಕೇಳಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ತನಗೆ ನಿಯಮ ಮೀರಿ ಹಾಜರಾತಿ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ವಿದ್ಯಾರ್ಥಿಯು ಅಧ್ಯಾಪಕರನ್ನು ಹೀನಾಯವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದೂ ಅಲ್ಲದೆ ಹಲ್ಲೆ ಮಾಡಿರುವುದು ನಿಯಮಬಾಹಿರ ಮತ್ತು ಅಮಾನವೀಯ. ಅಲ್ಲದೆ ಮಾನವ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ ಶಿಕ್ಷಕರ ಘನತೆಯ ಮೇಲಿನ ಹಲ್ಲೆ ಕೂಡ ಆಗಿರುತ್ತದೆ. ಇದನ್ನು ನಿಯಂತ್ರಿಸಲು ನಮ್ಮದೆ ಕೆಲವು ಸಲಹೆಗಳನ್ನು ನೀಡಿ ಉನ್ನತ ಶಿಕ್ಷಣ ಮಂತ್ರಿಗಳಿಗೆ ಮತ್ತು ಕಾಲೇಜು ಶಿಕ್ಷಣ ಆಯುಕ್ತರಿಗೆ ಹಾಗೂ ನಿರ್ದೇಶಕರಿಗೆ ಮನವಿಗಳನ್ನು ಸಲ್ಲಿಸಲಾಗಿರುತ್ತದೆ. ಅವುಗಳ ಪ್ರತಿಗಳನ್ನು ಇಲ್ಲಿ ಲಗತ್ತಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಉನ್ನತ ಶಿಕ್ಷಣ ಚಿಂತನಾ ವೇದಿಕೆಯ ಅಧ್ಯಕ್ಷರಾದ ಡಾ. ರಾಮಲಿಂಗಪ್ಪ ಟಿ. ಬೇಗೂರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್. ಕೆ. ಪ್ರೇಮಾವತಿ ಹಾಗೂ ಕಛೇರಿ ಕಾರ್ಯದರ್ಶಿಗಳಾದ ಡಾ.ಸತೀಶ್ ಎಚ್.ಕೆ. ಹಾಗೂ ಖಜಾಂಚಿಗಳಾದ ಡಾ. ಎಸ್. ನಾಗಭೂಷಣ ಅವರುಗಳು ಉಪಸ್ಥಿತರಿದ್ದರು ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಹಾಗೆಯೆ ಕಾಲೇಜು ಶಿಕ್ಷಣ ನಿರ್ದೇಶಕರಾದ ಡಾ. ಎಸ್. ಶೋಭಾ ಅವರಿಗೆ ಮನವಿ ನೀಡಿದ ಚಿತ್ರವನ್ನೂ ಇಲ್ಲಿ ಲಗತ್ತಿಸಿದೆ.