"ಪೂರ್ವ ಜನ್ಮದ ಕರ್ಮವೇ ವ್ಯಾಧಿ ರೂಪದಲ್ಲಿ ಬಾಧಿಸುತ್ತದೆ"
ಶ್ರೀ ಲಕುಮೀಶರು ಒಮ್ಮೆ ಶೀತ ಜ್ವರದಿಂದ ಬಳಲುತ್ತಿದ್ದಾಗ ರಚಿತವಾದ ಪದ್ಯ ಹೀಗಿದೆ....
ರಾಗ : ಶಿವರಂಜನಿ ತಾಳ : ಆದಿ
ಬರಬಾರದೇ ಅಚ್ಯುತ
ಸಿರಿವರ ಧನ್ವಂತ್ರೀ ।
ಬರಬಾರದೇ ಅಚ್ಯುತ
ಇಲ್ಲಿಗೆ ಓಡಿ ।
ಬರಬಾರದೇ ಅಚ್ಯುತ
ಎನ್ನನು ಪೊರೆಯೆ ।। ಪಲ್ಲವಿ ।।
ಕೀರ್ತನೆಯ ಆರಂಭದಲ್ಲಿ ಈ ಸಾಲುಗಳಲ್ಲಿ ಮತ್ತೆ ಮತ್ತೆ ಪುನರಾವರ್ತಿಕವಾಗುವ -
" ಬರಬಾರದೇ ಅಚ್ಯುತ "
ಎನ್ನುವ -
" ಕರೆ " ಭಕ್ತನ ತೀವ್ರವಾದ ಆರ್ತ ಸ್ವರವನ್ನು ಕೇಳಿಸುತ್ತದೆ.
ಕೀರ್ತನೆಯು ಮುಂದುವರೆದಂತೆ ಲೌಕಿಕದ " ಜ್ವರ ತಾಪದ ಅನುಭವ ಅಲೌಕಿಕ ಮಟ್ಟಕ್ಕೇರುವುದನ್ನು ಜ್ವರ ಬಾಧೆ - ಭವ ಬಾಧೆಗೆ ಪ್ರತಿಮೆಯಾಗುವುದನ್ನು ಗುರುತಿಸುತ್ತೇವೆ.
ಕರಿಕರ ಭವ ಜ್ವರಕೆ
ಥರಥರ ನಡುಗುವೆ ।
ಜ್ವರ ಬಾಧೆಯನು ಬೇಗ
ಪರಿಹರಿಸಲು ಈಗ ।
ಸರ್ವಜ್ಞ ಶಾಸ್ತ್ರದ
ಸ್ಮೃತಿಗೆ ತಲೆ ಭಾರ ।
ಸರ್ವದ ಕಣ್ಣುರಿ
ಸರ್ವದಾ ಬಳಲುವೆ ।
ದುಷ್ಟ ಸಂಗದ ವಾತ
ಕೆಟ್ಟ ಮೈ ಬೇನಿಯು ।
ಅಷ್ಟಿಷ್ಟು ಭವಣೆಯೆ ಬಟ್ಟೆ
ಉಡಲು ಬರದು ।।
ಇಂಥಾ ಜ್ವರಕ್ಕೆ ಶ್ರೀ ಲಕುಮೀಶದಾಸರು ಇಚ್ಛಿಸುವ ಗುಳಿಗೆ, ಔಷಧ ಪಥ್ಯ ಹೀಗಿದೆ...
ಅಂಗಾಂಗದ ರೋಗ-
ವನಂಗಾದಿ ಬಾಧೆಗೆ ।
ರಂಗಾಖ್ಯ ಗುಳಿಗೆ ಸ-
ತ್ಸಂಗ ಪಥ್ಯದಿ ಕೊಡೆ ।।
ಪ್ರಾರಬ್ಧ ಕರ್ಮಗಳೇ ರೋಗಗಳ ರೂಪದಿಂದ ಆವರಿಸುವುದೆಂಬ ನಂಬುಗೆಯನ್ನು ರಂಗನ ಸ್ಮರಣೆಯೇ ಪರಿಹಾರವೆಂಬ ವಿಶ್ವಾಸವನ್ನು ಇಲ್ಲಿ ಕಾಣುತ್ತೇವೆ.
ಇದೇ ಭಾವವನ್ನು ಪೋಲುವ ಕಾಮ, ಕ್ರೋಧ, ಲೋಭ, ಮೋಹಗಳೇ ಬಾಳಿನಲ್ಲಿ ಗೋಳಿನ ರೂಪದ ಉರಿಯಾಗಿ, ಕಾಯದ ಆಲಯದಲ್ಲಿ ತಾಪಗೊಳಿಸುತ್ತದೆ ಎಂಬುವ ಚಿತ್ರಣದಿಂದ ಕೂಡಿದ ಇನ್ನೊಂದು ವಿಚಾರ ಹೀಗಿದೆ...
ಮೂಲವ್ಯಾಧಿ
ಮೂಲವ್ಯಾಧಿ ।
ಬಾಳಿನೊಳಗೆ ಅತಿ
ಗೋಳಿನ ಉರಿ ರೂಪಿ ।
ಹೇಳದೆ ಕಾಯದ
ಆಲಯದೊಳು ಸೇರಿ ।
ಧಾಳಿ ಮಾಡುತ ಯಮ-
ಶೂಲಕ್ಕೆ ನೂಕುವ ।
ನೇಮ ನಿಷ್ಠೆಯ ಬಿಟ್ಟು
ಕಾಮಿನಿಯರ ಕಂಡು ।
ಕಾಮಿಪ ದುರ್ಮತಿ
ತಾಮಸ ಕಾಮವೇ ।।
ಹೀಗೆ ಸಾಗುವ ಈ ಪದ " ಮೂಲವ್ಯಾಧಿ " ಯ ಸ್ವರೂಪವನ್ನು ಬಣ್ಣಿಸುತ್ತಾ ಹೋಗುತ್ತದೆ.
ಒಂದು ರೋಗವಾದ " ಮೂಲವ್ಯಾಧಿ " ಯ ಅರ್ಥ ವಿಸ್ತಾರ,
ಅದು ಒಂದು ಪ್ರತಿಮೆಯಾಗಿ ಇಲ್ಲಿನ ಕಾವ್ಯತ್ವವನ್ನು ತೋರುತ್ತದೆ.
ಮಧ್ವ ತತ್ತ್ವದ ಅನುಷ್ಠಾನದಲ್ಲಿ, ಸಾಧನೆಯಲ್ಲಿ " ಸ್ತ್ರೀಯೂ " ಅರ್ಹಳು ಎಂಬ ಶ್ರೀ ದಾಸಾರ್ಯರ ಕಳಕಳಿಯು ಈ ಪದದಲ್ಲಿ ಅಭಿವ್ಯಕ್ತಗೊಂಡು....
ತಾಳಿದ್ದ ಸ್ತ್ರೀ ಭವದಿ
ತಾಳಿಗ ಗುಣರತ್ನ ।
ಶೀಲೆ ಎಂದೆನಿಸದೆ
ಕೀಳು ಮಾರ್ಗದಿ ನಡೆಯೇ ।।
ಅನುರಾಗದಲಿ ನಿತ್ಯ
ಮನಿಯ ಕಾರ್ಯವ ಮಾಡಿ ।
ಇನಿಯನ ಒಲಿಸಲು
ಮನ ಬರದೆ ಸ್ತ್ರೀ ನಡತೆ ।।
ಸಿರಿ ತುಳಸಿ ಪೂಜಿಸದೆ
ಹರಿವ್ರತ ಚರಿಸದೆ ।
ಪರರ ನೋವಿಗೆ ಬಲು ಹರುಷಿತ
ಪೆಣ್ ಗುಣ ಮೂಲವ್ಯಾಧಿ ।।
ಇಂಥಾ ಮೂಲವ್ಯಾಧಿಯ ನಿರ್ಮೂಲನಕ್ಕೆ ಶ್ರೀ ದಾಸಾರ್ಯರು ಸೂಚಿಸುವುದು.....
ಲಕುಮೀಶನೇ ಜ್ಞಾನ
ಸುಖಪೂರ್ಣನೆಂತೆಂದು ।
ಸಕಲಾವಸ್ಥೆಯಲ್ಲಿ ಭಕುತಿಯಲಿ
ತಿಳಿಯೆ ನಿರ್ ಮೂಲವ್ಯಾಧಿ ।।
ಶ್ರೀ ದಾಸಾರ್ಯರ ಲೋಕಾನುಭವ, ಸಾಮಾನ್ಯ ಮಾನವನ ಬಾಳುವೆಯ ದಿಶೆಯನ್ನು ಕಂಡ ಪರಿ ಹೀಗಿದೆ...
ತಲೆ ಭಾರ ತಲೆ ಭಾರ ।
ಜಲಜಾಕ್ಷ ಪೇಳಿ ಕೊಟ್ಟ
ಚಲುವ ಮಾರ್ಗಗಳ ।
ತಿಳಿಯದೆ ನಾರಾ ಜನ್ಮ
ಕಳಕೊಂಬರ ನೋಡಿ ।।
ಎಲರುಣಿ ಶಯ್ಯನ
ಒಲಿಸಿ ನಲಿಸಿ ತಮ್ಮ ।
ಪೊಳೆವ ಹೃತ್ಕಮಲದಿ
ನಿಲಿಸದವರ ನೋಡಿ ।
ಸುಖಮುನಿ । ಮತ ।
ದಲಿ ಭಕುತಿ ಪೂರ್ವಕವಾಗಿ
ಲಕುಮೀಶನ ಕಂಡು
ಸುಖಿಸದವರ ನೋಡಿ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ