" ಶ್ರೀ ಗೋಪಾಲದಾಸರ ಕಣ್ಣಲ್ಲಿ ಶ್ರೀ ಮುಖ್ಯಪ್ರಾಣದೇವರು "

varthajala
0

ಹೆಸರು : ಶ್ರೀ ಭಾಗಣ್ಣದಾಸರು 

ಅಂಕಿತ : ಗೋಪಾಲವಿಠ್ಠಲ 

ಉಪದೇಶ ಗುರುಗಳು : ಶ್ರೀ ವಿಜಯರಾಯರು 

ರಾಗ : ದರ್ಬಾರ್                                

ತಾಳ : ಆಟ 

ರಾಮದೂತನ ಪಾದ 

ತಾಮರಸವ ಕಂಡ ।

ಆ ಮನುಜನೆ ಧನ್ಯನು ।। ಪಲ್ಲವಿ ।।

ಶ್ರೀಮನೋಹರನಂಘ್ರಿ ಭಜಕ ।

ಸ್ತೋಮ ಕುಮುದಕೆ 

ಸೋಮ ನೆನಿಸುವ ।

ಭೂಮಿಯೋಳು ಯದುಗಿರಿಯ 

ಸೀಮೆಯ ।

ಕಾಮವರದೊಳು 

ಪ್ರೇಮದಿಂದಿಹ ।। ಅ. ಪ ।।

ಕೋತಿ ರೂಪದಿ ರಘು-

ನಾಥನಾಜ್ಞೆಯ ತಾಳಿ ।

ಪಥೋಧಿಯ ಲಂಘಿಸಿ ।

ಖ್ಯಾತ ಲಂಕೆಯ -

ಪೊಕ್ಕು ಶೋಧಿಸಿ ।।

ಮಾತೆಯನು ಕಂಡೆ-

ರಗಿ ದಶಮುಖ ।

ಪೋತ ಖಳಕುಲವಾತ್ರ 

ಘಾತಿಸಿ ।

ಸೀತೆ ವಾರ್ತೆಯ

ನಾಥಗರುಹಿದ ।। ಚರಣ ।।

ಪಾಂಡುಸುತನೆ ಪ್ರ-

ಚಂಡ ಗದೆಯನು । ದೋ ।

ರ್ದಂಡದಿ ಧರಿಸುತಲಿ ।

ಮಂಡಲದೊಳು 

ಭಂಡ ಕೌರವ ।।

ಚಂಡ ರಿಪುಗಳ 

ಖಂಡಿಸಿ ಶಿರ ।

ಚಂಡನಾಡಿ ಸತಿಗೆ -

ಕರುಳಿನ ।

ದಂಡೆ ಮುಡಿಸಿದು-

ದ್ಧಂಡ ವಿಕ್ರಮ ।। ಚರಣ ।।


ಧಾರುಣಿಯೊಳು ದ್ವಿಜ 

ನಾರಿ ಗರ್ಭದಿ ಬಂದು ।

ಮೂರೊಂದಾಶ್ರಮ 

ಧರಿಸಿ ।

ಧೀರ ನೀನೇ-

ಳಧಿಕ ತ್ರಿದಶ ।।

ಸಾರ ಗ್ರಂಥಗಳ್ 

ವಿರಚಿಸುತ ಮಹಾ ।

ಶೂರ ಶ್ರೀ ಗೋಪಾಲ-

ವಿಠ್ಠಲನ ।

ಚಾರು ಚರಣಕೆ ಅರ್ಪಿಸಿದ ಗುರು ।। ಚರಣ ।।

ವಿವರಣೆ :

ರಾಮದೂತನ = ಹನುಮಂತನ 

ಪಾದ ತಾಮರಸವ = ಚರಣ ಕಮಲಗಳನ್ನು 

ಶ್ರೀ ಮನೋಹರ = ಶ್ರೀ ಮಹಾಲಕ್ಷ್ಮೀದೇವಿಯ ಮನೋಹರನಾದ ಶ್ರೀ ಹರಿಯ 

" ಅಂಘ್ರಿ ಭಜಕ ಸ್ತೋಮ ಕುಮುದಕೆ "

ಚರಣಗಳನ್ನು ಭಜಿಸುತ್ತಿರುವ ಭಗವದ್ಭಕ್ತರ ಸಮೂಹವೆಂಬ ಕೆನ್ನೈದಿಲೆಗೆ 

ಸೋಮ ನೆನಿಸುವ = ಚಂದ್ರ ಸದೃಶರಾಗಿರುವ 

" ಯದುಗಿರಿಯ ಸೀಮೆಯ ಕಾಮವರದೊಳು "

 ಆದವಾನಿ ಹತ್ತಿರದ ಕಾಮವರ ಗ್ರಾಮದಲ್ಲಿ 

ಪ್ರೇಮದಿಂದಿಹ = ಆನಂದದಲಿ ವಿರಾಜಮಾನರಾಗಿದ್ದಾರೆ ಶ್ರೀ ಮುಖ್ಯಪ್ರಾಣದೇವರು. 

ಆದವಾನಿಗೆ ಮತ್ತು ಹರಿದಾಸರಿಗೆ ಅವೀನಾಭವ ಸಂಬಂಧವಿದೆ. 

ಶ್ರೀ ವಿಜಯರಾಯರಿಂದ " ವೇಣುಗೋಪಾಲ ವಿಠ್ಠಲ " ಅಂಕಿತ ಶ್ರೀ ಪಂಗನಾಮದ ತಿಮ್ಮಣ್ಣ ದಾಸರು ಶ್ರೀ ಗೋಪಾಲದಾಸರ ಆಪ್ತಮಿತ್ರರು. 

ಶ್ರೀ ವೇಣುಗೋಪಾಲದಾಸರಿಗೆ ಅಪಮೃತ್ಯು ಸಂಭವಿಸಿದಾಗ ಶ್ರೀ ವಿಜಯರಾಯರ ಆಜ್ಞೆಯಂತೆ ಶ್ರೀ ಹರಿಯಲ್ಲಿ ಪ್ರಾರ್ಥಿಸಿ ಪ್ರಾಣ ಸಖರಾದ ಶ್ರೀ ಪಂಗನಾಮದ ತಿಮ್ಮಣ್ಣದಾಸರ ಅಪಮೃತ್ಯುವನ್ನು ಶ್ರೀ ವಿಜಯರಾಯರು ( 2 ಸುಳಾದಿಗಳನ್ನು ) ಮತ್ತು ಶ್ರೀ ಗೋಪಾಲದಾಸರು... 

ವೇಣು ಗೋಪಾಲ ವಿಠ್ಠಲ ದಾತಾ ಮಹಾ । ಪ್ರಭು ।ವೇ ನಾ ಬೇಡುವೆನು ವರವ ।ಪ್ರಾಣಿ ಈತಗೆ ಬಂದ ಹಾನಿ ಹಿಂದಕೆ ಮಾಡಿ ।ಕ್ಷೋಣಿಯಲಿ ನಿಲಿಸಿ ಸಲಹೋ ಸ್ವಾಮಿ ।।

ಎಂದು ಪ್ರಾರ್ಥಿಸಿ ಶ್ರೀ ವೇಣುಗೋಪಾಲದಾಸರಿಗೆ ಬಂದ ಅಪಮೃತ್ಯುವನ್ನು ಪರಿಹರಿಸಿದರು. 

ಈ ವಿಷಯವನ್ನು ಶ್ರೀ ತಂದೆ ಗೋಪಾಲವಿಠ್ಠಲರು.. 

ಪ್ರಾಣ ಸಖಗಪಮೃತ್ಯುವೊದಗಿರೆ ।ವೇಣುಗೋಪಾಲಕೃಷ್ಣನಾ ।ನಾನಾ ಪರಿಯಲಿ ಪ್ರಾರ್ಥಿಸಿನ್ನು ।ಹಾನಿ ಹಿಂದಕೆ ಮಾಡ್ದನಾ  ।। 

ಈ ರೀತಿಯಾಗಿ ಆದವಾನಿಗೆ ಮತ್ತು ಶ್ರೀ ವಿಜಯರಾಯರಿಗೆ, ಶ್ರೀ ಗೋಪಾಲದಾಸರಿಗೆ ಸಂಬಂಧವಿದೆ )

ಪಾಥೋಥಿಯ ಲಂಘಿಸಿ = ಸಮುದ್ರವನ್ನು ಕಾಲುವೆಯಂತೆ ಹಾರಿ 

ದಶ ಮುಖ ಪೋತ = ರಾವಣ ಪುತ್ರ ಅಕ್ಷ ಕುಮಾರನನ್ನು 

ಖಳ ಕುಲ ವ್ರಾತ = ದೈತ್ಯ ಕುಲ ಸಮೂಹವನ್ನು 

ಘಾತಿಸಿ = ಸಂಹರಿಸಿ, ಉಳಿದವರನ್ನು ಗಾಯ ಗೊಳಿಸಿ 

ದೋರ್ದಂಡ = ಬಲಿಷ್ಠವಾದ ಭುಜದಲ್ಲಿ 

ಭಂಡ = ಹಠವಾದಿಗಳೂ, ಮೂರ್ಖರೂ ಆದ 

ಕೌರವ ಚಂಡ ರಿಪುಗಳ = ಪ್ರಚಂಡರಾದ ಕೌರವರೆಂಬ ಶತ್ರುಗಳ 

ಖಂಡಿಸಿ = ಸಂಹರಿಸಿ 

ಶಿರ ಚೆಂಡಾಡಿ = ಅವರ ಶಿರಗಳನ್ನು ಚೆಂಡಿನಂತೆ ಕಾಲಿನಿಂದ ಒದ್ದು 

ಸತಿಗೆ = ದ್ರೌಪದಿಗೆ 

" ಕರುಳಿನ ದಂಡೆ ಮುಡಿಸಿದ "

ದುಶ್ಯಾಸನನ ಉದರವನ್ನು ಬಗೆದು ಅವನ ಕರುಳಿನ ಮಾಲೆಯನ್ನು ದ್ರೌಪದಿಯ ಶಿರದಲ್ಲಿ ಮಾಲಾಕಾರವಾಗಿ ಮುಡಿಸಿದ. 

ಉದ್ಧಂಡ ವಿಕ್ರಮ = ಅತ್ಯಂತ ಪರಾಕ್ರಮಶಾಲಿಗಳು ಶ್ರೀ ಭೀಮಸೇನದೇವರು  

ಧಾರುಣಿಯೊಳು = ಭೂಮಿಯಲ್ಲಿ ( ಪಜಕಾ ಕ್ಷೇತ್ರದಲ್ಲಿ )

" ದ್ವಿಜನಾರಿ ಗರ್ಭದಿ ಬಂದು " 

ವಿಪ್ರೋತ್ತಮರಾದ ಶ್ರೀ ಮಧ್ಯಗೇಹಭಟ್ಟರ ಧರ್ಮಪತ್ನಿಯಾದ ಸಾಧ್ವೀ ವೇದವತಿಬಾಯಿಯವರ ಗರ್ಭಾಂಬುಧಿಯಲ್ಲಿ ಅವತರಿಸಿ 

ಮೂರೊಂದಾಶ್ರಮ = ಯತ್ಯಾಶ್ರಮ 

ಧೀರ = ಜ್ಞಾನ ಶ್ರೇಷ್ಠರು 

ನೀ ಏಳಧಿಕ ತ್ರಿದಶ = 37 ಸಂಖ್ಯಾಕವಾದ ಸರ್ವಮೂಲ ಗ್ರಂಥಗಳನ್ನು  ಮಹಾಶೂರ = ಅಪಾರ ಗುಣ ಸಂಪನ್ನರೂ, ಪರಾಕ್ರಮಿಗಳೂ ಆದ " ಶ್ರೀ ಗೋಪಾಲವಿಠ್ಠಲನ ಚಾರು ಚರಣಕೆ ಅರ್ಪಿಸುದ ಗುರು "

ಎನ್ನ ಬಿಂಬರೂಪಿಯಾದ ಶ್ರೀ ಗೋಪಾಲವಿಠ್ಠಲೋsಭಿನ್ನ ಶ್ರೀ ಹರಿಯ ಸುಂದರವಾದ ಪಾದಾರವಿಂದಗಳಿಗೆ ಅರ್ಪಿಸಿದವ ಆಚಾರ್ಯ ಮಧ್ವರು!!

ವಿಷೇಶ ಸೂಚನೆ :

ನಾನು ಕೂಡಾ ಆದೋನಿ ( ಆದವಾನಿ ) ಯ ಸೈನ್ಸ್ ಆರ್ಟ್ಸ್ ಕಾಲೇಜಿನಲ್ಲಿ ಪದವಿ ಮಾಡಿದ್ದೇನೆ. 

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)