ಬೆಂಗಳೂರು: ಕೋಣನಕುಂಟೆಯ ಜೆಎಸ್‌ಎಸ್ ಶಾಲೆಯ ಮಕ್ಕಳಿಗೆ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ ಸಮಾಜ ಸಹಾಯ ಅಭಿಯಾನದ ಅಡಿಯಲ್ಲಿ ’ಸಂಸ್ಕಾರ ನೋಟ್ ಬುಕ್’ಗಳನ್ನು ವಿತರಿಸಲಾಯಿತು. ೨೫೦ಕ್ಕೂ ಹೆಚ್ಚು ಮಕ್ಕಳು ಇದರ ಲಾಭ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಕಾರ್ಯಕರ್ತರಾದ ಸೌ. ವತ್ಸಲಕಾಶಿ ಇವರು ಧರ್ಮಾಚರಣೆಯನ್ನು ನಾವು ದಿನನಿತ್ಯ ಮಾಡುವುದರಿಂದ ನಮ್ಮ ಆತ್ಮಸ್ಥರ್ಯ ಹೆಚ್ಚಾಗುತ್ತದೆ ಮತ್ತು ಕುಂಕುಮ ಧಾರಣೆ ಮಾಡಿಕೊಳ್ಳುವುದರಿಂದ ನಮ್ಮಲ್ಲಿ ಶಿವ - ಶಕ್ತಿ ತತ್ವ ಜಾಗೃತವಾಗುತ್ತದೆ. ಮೊದಲು ನಾವು ರಾಷ್ಟ್ರ ಪ್ರೇಮಿಗಳಾಗಬೇಕು, ಇದರಿಂದ ನಮ್ಮ ದೇಶದ ಬಗ್ಗೆ ಸತ್ ಚಿಂತನೆ ಮಾಡಲು ಸಹಕಾರಿಯಾಗುತ್ತದೆ. ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕಲು ನಮಗೆ ನೈತಿಕಮೌಲ್ಯ ಶಿಕ್ಷಣದ ಅಗತ್ಯ ಇದೆ ಎಂದರು.
ಮುಂದೆ ಅವರು ಮಾತನಾಡುತ್ತಾ ಈ ಸಂಸ್ಕಾರ ನೋಟ್ ಬುಕ್ಕಿನಲ್ಲಿ ನಮ್ಮ ರಾಷ್ಟ್ರಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಂತರ ಭಾವಚಿತ್ರದ ಜೊತೆಗೆ ಅವರ ಮಾಹಿತಿಗಳು ಇರುತ್ತದೆ ಅದರಿಂದ ನಮಗೆ ಅವರ ಶಕ್ತಿ ಸಾಮರ್ಥ್ಯಗಳ ಅರಿವಾಗಿ ನಮಗೆ ಅದನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು. ಈ ವೇಳೆ ಸಮಿತಿಯ ಕಾರ್ಯಕರ್ತರಾದ ಸೌ. ಕೋಮಲಕಾಶಿ, ಸೌ. ಅನುರಾಧ ಸಿಂಗ್, ಶ್ರೀ. ಸೋಮಶೇಖರ್ ಹಾಗೂ ಶಾಲೆಯ ಮುಖ್ಯೋಪಧ್ಯಾಯರಾದ ಶ್ರೀ. ಡಿ. ನಾಗರಾಜಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.