" ಶ್ರೀ ಅಕ್ಷೋಭ್ಯತೀರ್ಥರ ಸ್ಮರಣೆ "

varthajala
0

" ದಿನಾಂಕ :  21.12.2024 ಶುಕ್ರವಾರ - ಶ್ರೀ ಅಕ್ಷೋಭ್ಯತೀರ್ಥ ಆರಾಧನಾ ಮಹೋತ್ಸವ, ಕೋಟೆ ಮಳಖೇಡ "

ಶ್ರೀ ಅಕ್ಷೋಭ್ಯತೀರ್ಥರು ಶ್ರೀ ಪದ್ಮನಾಭತೀರ್ಥರು ಮತ್ತು ಶ್ರೀ ನರಹರಿತೀರ್ಥರಂತೆ ಪೂರ್ವಾಶ್ರಮದಲ್ಲಿ ರಾಜಕಾರಣ ಧುರಂಧರರೂ; ಶೂರ ಧೀರರೂ ಆಗಿದ್ದರು.


ಹಿಂದೆ ಕದಂಬ ಯಾದವ ರಾಜ್ಯದಲ್ಲಿ ರಾಜಾಶ್ರಯದ ಉನ್ನತಾಧಿಕಾರಿಗಳಾಗಿದ್ದ ಲೌಕಿಕ ವೈದಿಕ ಚತುರ ಮತಿಗಳ ಮನೆತನಗಳಲ್ಲಿ ಇವರ ಮನೆತನವೂ ಒಂದಾಗಿದೆ.

ಭಾರದ್ವಾಜ ಗೋತ್ರದ ಇವರ ವಂಶಕ್ಕೆ ಸ್ವರ್ಣಭಂಡಾರದವರು ಎಂದು ಉಪನಾಮವಿದ್ದೀತು.

ಈ ಸ್ವರ್ಣಭಂಡಾರ ಮನೆತನದ ಮುಂದಾಳುಗಳನ್ನು ಬದಾಮಿಯ ಚಾಲುಕ್ಯ ರಾಜರು ಜಮಖಂಡಿ ರಾಜ್ಯಕ್ಕೆ ಮಾಂಡಲೀಕರನ್ನಾಗಿ ಮಾಡಿದ್ದರು.

ಜಮಖಂಡಿ ಸಂಸ್ಥಾನದ ಮಾಂಡಲೀಕರಾದ ಸ್ವರ್ಣಭಂಡಾರ ಮನೆತನದಲ್ಲಿ ಶ್ರೀ ಕೇಶವ ಭಟ್ಟರು ಅತ್ಯಂತ ಸುಪ್ರಸಿದ್ಧರಾಗಿದ್ದರು. 


ಈ ಮನೆತನದ ವೈಶಿಷ್ಟ್ಯವೆಂದರೆ...

ಈ ರಾಜ ಕುಲದ ಧುರೀಣರೆಲ್ಲರೂ ಶಾಸ್ತ್ರವಿದ್ಯೆ ಮತ್ತು ಶಸ್ತ್ರವಿದ್ಯೆ ಎರಡರಲ್ಲೂ ಪಾರಂಗತರಾಗಿರುತ್ತಿದ್ದರು.

ರಾಜರಾದರೂ ಋಷಿಗಳಂತೆ ಇರುವುದು ಈ ಮನೆತನದ ಪರಂಪರಾ ಪ್ರಾಪ್ತವಾದ ಸದ್ಗುಣವಾಗಿತ್ತು.

ಶ್ರೀ ಕೇಶವಭಟ್ಟರು - ಜನಕರಾಜ ಮತ್ತು ಧರ್ಮರಾಜರಂತೆ ಧರ್ಮವೀರರೂ ಸದಾಚಾರ ಸಂಪನ್ನರೂ - ಆಧ್ಯಾತ್ಮ ವಿದ್ಯಾ ಕೋವಿದರೂ ಆಗಿದ್ದರು.

ಶ್ರೀ ಕೇಶವಭಟ್ಟರ ಪುತ್ರರೇ ಶ್ರೀ ಗೋವಿಂದಭಟ್ಟರು ( ಶ್ರೀ ಅಕ್ಷೋಭ್ಯತೀರ್ಥರು ). 

ಇವರು ವೀರವರೇಣ್ಯರಾದಂತೆ ವಿದ್ವದ್ವರೇಣ್ಯರೂ ಆಗಿದ್ದರು. 

ಧೈರ್ಯ ಶೌರ್ಯಗಳಂತೆ; ವೈರಾಗ್ಯ ದೈವ ಭಕ್ತಿಗಳೂ ಅವರಿಗೆ ಹಿರಿಯರಿಂದ ಬಳುವಳಿಯಾಗಿ ಬಂದಿದ್ದವು.

ಶ್ರೀ ಕೇಶವಭಟ್ಟರ ಅನಂತರ ಅವರು ಶಾಸನ ಸೂತ್ರವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಸಮರ್ಥ ರೀತಿಯಿಂದ ಆಡಳಿತವನ್ನು ನಡೆಸಿದರು.

ಆದರೆ ಕೆಲವು ದಿನಗಳಲ್ಲಿಯೇ ಶ್ರೀ ಗೋವಿಂದ ಭಟ್ಟರಿಗೆ ವಿಷಯದಲ್ಲಿ ವೈರಾಗ್ಯ ಹುಟ್ಟಿತು. ಅವರು ಜಾತ್ಯಾ ವಿರಕ್ತರು. ಅಗತ್ಯಾ ಲೌಕಿಕ ಕಾರ್ಯಾಸಕ್ತರು!!

ಗೌತಮಬುದ್ಧರಂತೆ ಒಂದಾನೊಂದು ದಿನ ಶ್ರೀ ಗೋವಿಂದಭಟ್ಟರು ಐಶ್ವರ್ಯ ತುಂಬಿದ ಅಂತಃಪುರವನ್ನೂ; ಧನ ಕನಕಗಳಿಂದ ತುಂಬಿದ ಅರಮನೆಯನ್ನೂ; ರಾಜೈಶ್ವರ್ಯವನ್ನೂ ತೊರೆದು ತಪಸ್ಸಿಗೆ ಹೊರಟರು.

" ಶ್ರೀಮದಾಚಾರ್ಯರ ದರ್ಶನ "

ಶ್ರೀ ಗೋವಿಂದಭಟ್ಟರಿಗೆ ರಾಜಕೀಯವೇ ಹೇಸಿಗೆಯಾಗಿ ತೋರಿತು. 

ಅವರು ತಮ್ಮ ಸ್ವರೂಪವನ್ನು ಉದ್ಧಾರ ಮಾಡಿಕೊಳ್ಳಲು ಯೋಗ್ಯ ಗುರುಗಳ ನಿರೀಕ್ಷೆಯಲ್ಲಿದ್ದರು. 

ಅಷ್ಟೊತ್ತಿಗಾಗಲೇ ಶ್ರೀಮದಾಚಾರ್ಯರ ಕೀರ್ತಿ ಜಗದ್ವಿಖ್ಯಾತವಾಗಿತ್ತು.

ಶ್ರೀ ಗೋವಿಂದಭಟ್ಟರು ತಮ್ಮ ಚಿಕ್ಕಪ್ಪನಾದ ಧು೦ಡೀರಾಜನಿಗೆ ಮಾಂಡಲೀಕ ತನವನ್ನು ಒಪ್ಪಿಸಿ; ಶ್ರೀಮದಾಚಾರ್ಯರ ದರ್ಶನಕ್ಕೆ ಹೊರಟರು. ಶ್ರೀಮದಾಚಾರ್ಯರ ದರ್ಶನವಾದ ಕೂಡಲೇ ಶ್ರೀ ಗೋವಿಂದಭಟ್ಟರಿಗೆ ಶ್ರೀ ಆಚಾರ್ಯ ಮಧ್ವರಲ್ಲಿ ಅಸದೃಶ ಭಕ್ತಿ ಹುಟ್ಟಿತು.

ಶ್ರೀಮದಾಚಾರ್ಯರ ವಾಗ್ಝರಿಯನ್ನೂ; ತತ್ತ್ವೋಪದೇಶವನ್ನೂ ಕೇಳಿ ಮನಸೋತು ಅವರ ಪಾದದ ಮೇಲೆ ತಮ್ಮ ಶಿರವನ್ನು ಇಟ್ಟು ಸಂನ್ಯಾಸವನ್ನು ನೀಡಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಬಹುವಾಗಿ ಪ್ರಾರ್ಥಿಸಿಕೊಂಡರು.

" ಶ್ರೀ ಗೋವಿಂದಭಟ್ಟರು ಶ್ರೀ ಅಕ್ಷೋಭ್ಯತೀರ್ಥರಾಗಿ ವಿರಾಜಿಸಿದ್ದು "

ಶ್ರೀ ಗೋವಿಂದಭಟ್ಟರ ವಿಷಯ ವೈಮುಖ್ಯ; ಅಧ್ಯಯನಾಭಿಮುಖ್ಯ; ವೈರಾಗ್ಯ ಪ್ರಾಮುಖ್ಯಗಳನ್ನು ಕಂಡು ಸುಪ್ರೀತರಾದ ಶ್ರೀಮದಾಚಾರ್ಯರು ಅವರಿಗೆ ತಮ್ಮೆಲ್ಲ 37 ( ಸರ್ವಮೂಲ  ) ಗ್ರಂಥಗಳನ್ನೂ ಅಮೂಲಾಗ್ರವಾಗಿ ಪಾಠ ಹೇಳಿದರು.

ಶ್ರೀ ಗೋವಿಂದಭಟ್ಟರಿಗೆ ಶ್ರೀ ಆಚಾರ್ಯ ಮಧ್ವರು ಸಂನ್ಯಾಸಾಶ್ರಮವನ್ನು ಕೊಟ್ಟು " ಅಕ್ಷೋಭ್ಯತೀರ್ಥ " ಎಂದು ಅನ್ವರ್ಥಕ ಹೆಸರನ್ನಿಟ್ಟು ಅನುಗ್ರಹಿಸಿದರು.

ಯಾವ ಇಂದ್ರಿಯದಿಂದಲೂ; ಯಾವ ವಿಷಯದಿಂದಲೂ ಎಂದೂ ಅವರ ಮನಸ್ಸು " ಕ್ಷೋಭೆ " ಗೊಳ್ಳುತ್ತಿರಲಿಲ್ಲ. 

ಆದುದರಿಂದ ಅವರಿಗೆ " ಅಕ್ಷೋಭ್ಯ " ಯೆಂದು ಶ್ರೀ ಮಧ್ವರು ಗುಣಾನು ರೂಪವಾದ ನಾಮವನ್ನು ಕೊಟ್ಟಿದ್ದು ಸಾರ್ಥಕವೇ ಆಗಿದ್ದಿತು!!

" ಶ್ರೀ ಅಕ್ಷೋಭ್ಯತೀರ್ಥರ ಅಸಾಧಾರಣ ಪಾಂಡಿತ್ಯ ವೈಭವ "

ಗ್ರಂಥ : 

ಶ್ರೀ ರಾಘವೇಂದ್ರ ವಿಜಯ ಮಹಾಕಾವ್ಯ 

ಗ್ರಂಥಕಾರರು : 

ಕವಿಕುಲಕ ಶ್ರೀ ನಾರಾಯಣಾಚಾರ್ಯರು 

ವ್ಯಾಖ್ಯಾನ : 

ಬಾಲಬೋಧಿನೀ ವ್ಯಾಖ್ಯಾನ - ಶ್ರೀ ರಾಮಾಚಾರ್ಯರು 

ಗುರುಪಾದಸೇವಾ ವ್ಯಾಖ್ಯಾನ - ನ್ಯಾಯಾಲಯ ಪಂಡಿತ ಶ್ರೀ ರಾಘವೇಂದ್ರಾಚಾರ್ಯರು 

ಶ್ರೀ ರಾಘವೇಂದ್ರ ವಿಜಯದ ದ್ವಿತೀಯ ಸರ್ಗದ 10 ಮತ್ತು 11 ಶ್ಲೋಕಗಳು... 

ಮುನೇರಮುಷ್ಮಾದನವದ್ಯಬೋಧಾತ್ 

ಕೃತೋಪದೇಶಃ ಪ್ರತಿಮಾಂ ಚ ಗೃಹ್ಣನ್ ।

ಕ್ಷೋಭಂ ವಿದಾತುಂ ಪ್ರತಿವಾದಿವಾಚಾ-

ಮಕ್ಷೋಭ್ಯನಾಮಾ ಮುನಿರಾವಿರಾಸೀತ್ ।। 

ಬಾಲಬೋಧಿನೀ ವಾಖ್ಯಾನದಂತೆ :

ಅನ್ವಯಾರ್ಥ :

ಅನವದ್ಯಬೋಧಾತ್ = ನಿರ್ದೋಷವಾದ ಜ್ಞಾನವುಳ್ಳ ಶ್ರೀ ಮಾಧವತೀರ್ಥರ ದೆಸೆಯಿಂದ 

ಕೃತೋಪದೇಶಃ = ಮಾಡಲ್ಪಟ್ಟ ಉಪದೇಶವುಳ್ಳ 

ಅಮುಷ್ಮಾತ್ ಮುನೇಃ = ಆ ಶ್ರೀ ಮಾಧವತೀರ್ಥರ ದೆಸೆಯಿಂದ 

ಪ್ರತಿಮಾಂ ಚ = ಶ್ರೀ ಮೂಲರಾಮ, ಶ್ರೀ ದಿಗ್ವಿಜಯರಾಮ ಪ್ರತಿಮೆಗಳನ್ನೂ ಕೂಡ 

ಗೃಹ್ಣನ್ = ಸ್ವೀಕರಿಸಿದ 

ಪ್ರತಿವಾದಿವಾಚಾಂ = ಪ್ರತಿವಾದಿಗಳ ಮಾತುಗಳಿಗೆ 

ಕ್ಷೋಭಂ = ಖಂಡನೆಯನ್ನು 

ವಿಧಾತುಂ = ಉಂಟು ಮಾಡುವುದಕ್ಕೆ 

ಅಕ್ಷೋಭ್ಯನಾಮಾ = ಶ್ರೀ ಅಕ್ಷೋಭ್ಯತೀರ್ಥರೆಂಬ ಹೆಸರುಳ್ಳ 

ಮುನಿಃ = ಯತಿಗಳು 

ಆವಿರಾಸೀತ್ = ಪ್ರಾದುರ್ಭವಿಸಿದರು!!

ಶ್ರೀ ಮಾಧವತೀರ್ಥರ ನಂತರ ಶ್ರೀ ಅಕ್ಶೋಭ್ಯತೀರ್ಥರು ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನವನ್ನು ಆರೋಹಿಸಿದರು. ಶ್ರೀ ಅಕ್ಶೋಭ್ಯತೀರ್ಥರು ಶ್ರೀಮದಾನಂದತೀರ್ಥರಿಂದಲೇ ಉಪದೇಶವನ್ನು ಪಡೆದಿದ್ದರು. ಶ್ರೀ ಅಕ್ಶೋಭ್ಯತೀರ್ಥರು ಶ್ರೀ ಮಾಧವತೀರ್ಥರಿಂದ ಶ್ರೀ ಮೂಲರಾಮ, ಶ್ರೀ ದಿಗ್ವಿಜಯ ರಾಮ ಪ್ರತಿಮೆಯನ್ನು ಸ್ವೀಕಾರ ಮಾಡಿದರು. ಪ್ರತಿವಾದಿಗಳು ಉಪನ್ಯಾಸ ಮಾಡುವ ಶಾಸ್ತ್ರ ವಚನಗಳನ್ನು ಖಂಡಿಸುವ ಸಲುವಾಗಿಯೇ ಈ ಶ್ರೀ ಅಕ್ಶೋಭ್ಯತೀರ್ಥರು ಆವಿರ್ಭವಿಸಿದರು. 

ಗುರುಪಾದ ಸೇವಾ ವ್ಯಾಖ್ಯಾನದನ್ವಯ :

ಅನ್ವಯಾರ್ಥ :

ಅನವದ್ಯಬೋಧಾತ್ = ದೋಷ ರಹಿತವಾದ ಜ್ಞಾನವುಳ್ಳ  

ಅಮುಷ್ಮಾತ್ ಮುನೇಃ = ಈ ಶ್ರೀ ಮಾಧವತೀರ್ಥರ ದೆಸೆಯಿಂದ 

ಕೃತೋಪದೇಶಃ = ಮಾಡಲ್ಪಟ್ಟ ಪ್ರಣವಾದಿ ಮಂತ್ರಗಳು ಮತ್ತು ವೇದಾಂತೋಪದೇಶವುಳ್ಳ  

ಪ್ರತಿಮಾಂ ಚ = ಶ್ರೀ ಮೂಲರಾಮ, ಶ್ರೀದಿಗ್ವಿಜಯ

ರಾಮ ಪ್ರತಿಮೆಗಳನ್ನೂ ಸಹ  

ಗೃಹ್ಣನ್ = ಸ್ವೀಕರ ಮಾಡಿದ  

ಅಕ್ಷೋಭ್ಯನಾಮಾ = ಶ್ರೀ ಅಕ್ಷೋಭ್ಯತೀರ್ಥರೆಂಬ ಹೆಸರುಳ್ಳ 

ಮುನಿಃ = ಯತಿಯು  

ಪ್ರತಿವಾದಿವಾಚಾಂ = ಪ್ರತಿವಾದಿಗಳ ಮಾತುಗಳ  

ಕ್ಷೋಭಂ = ನಿರಾಕರಣೆಯನ್ನು 

ವಿಧಾತುಂ =  ಮಾಡುವುದಕ್ಕೆ 

ಆವಿರಾಸೀತ್ = ಪ್ರಾದುರ್ಭವಿಸಿದರು!!

ಶ್ರೀ ಮಾಧವತೀರ್ಥರು ನಿರ್ದೋಷವಾದ ಜ್ಞಾನ ಉಳ್ಳವರು. 

ಅವರು ಶ್ರೀ ಅಕ್ಶೋಭ್ಯತೀರ್ಥರಿಗೆ ಪ್ರಣವ ಮಂತ್ರೋಪದೇಶ ಮತ್ತು ವೇದಾಂತೋಪದೇಶ ಮಾಡಿದರು. 

ಶ್ರೀ ಅಕ್ಶೋಭ್ಯತೀರ್ಥರು ಶ್ರೀ ಮಾಧವತೀರ್ಥರಿಂದ ಶ್ರೀ ಮೂಲರಾಮ, ಶ್ರೀ ದಿಗ್ವಿಜಯ ರಾಮ ಪ್ರತಿಮೆಗಳನ್ನು ಸ್ವೀಕಾರ ಮಾಡಿದರು. 

ಪ್ರತಿವಾದಿಗಳು ಉಪನ್ಯಾಸ ಮಾಡುವ ಶಾಸ್ತ್ರ ವಚನಗಳನ್ನು ಖಂಡಿಸುವ ಸಲುವಾಗಿಯೇ ಈ ಶ್ರೀ ಅಕ್ಶೋಭ್ಯತೀರ್ಥರು ಆವಿರ್ಭವಿಸಿದರು. 

ವಿವರಣೆ :

ಶ್ರೀಮದಾನಂದತೀರ್ಥರು ಶ್ರೀ ಪದ್ಮನಾಭತೀರ್ಥರಿಗೆ ಆಶ್ರಮವನ್ನು ಕೊಟ್ಟು ಪ್ರಣವಾದಿ ಮಂತ್ರೋಪದೇಶವನ್ನೂ, ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕವನ್ನೂ ಮಾಡಿ ಅವರಿಂದ ಶ್ರೀ ನರಹರಿತೀರ್ಥರಿಗೆ, ಶ್ರೀ ನರಹರಿತೀರ್ಥರಿಂದ ಶ್ರೀ ಮಾಧವತೀರ್ಥರಿಗೆ, ಶ್ರೀ ಮಾಧವತೀರ್ಥರು ಶ್ರೀ ಅಕ್ಷೋಭ್ಯತೀರ್ಥರಿಗೆ ಉಪದೇಶ ಕೊಟ್ಟರು. 

ಇದರ ನಂತರ ಶ್ರೀಮದಾಚಾರ್ಯರು ಈ ಮೂವರಿಗೂ ತಾವು ಉಪದೇಶ ಕೊಟ್ಟರು. 

ಹೀಗೆ ಪರಂಪರಾ ವಿಚ್ಛಿತ್ತಿಯಾಗದಂತೆಯೂ ಮಾಡಿ ತಾವು ಸ್ವತಃ ನಾಲ್ಕು ಜನ ಯತಿಗಳನ್ನೂ ಅನುಗ್ರಹಿಸಿದರು. 

ಆದ್ದರಿಂದ ನಾಲ್ಕು ಜನ ಸಂನ್ಯಾಸಿಗಳಿಗೂ ಶ್ರೀಮದಾಚಾರ್ಯರಿಂದಲೇ ಸಾಕ್ಷಾತ್ ಸಂನ್ಯಾಸ ಮತ್ತು ಉಪದೇಶವು ಎಂಬ ವ್ಯಾಖ್ಯಾನಗಳ ಮಾತಿಗೂ ವಿರೋಧವಿಲ್ಲ!!

ದೃಢಾಸಿನಾ ತತ್ತ್ವಮಸೀತಿ ವಾಚಾ 

ಸಾಮರ್ಥ್ಯಭಾಜಾ ಪರಜೀವಭೇದೇ ।

ಅವೈದಿಕಾಗ್ರ್ಯಂ ಮುನಿರೇಷ 

ವಿದ್ಯಾರಣ್ಯಂ ಶರಣ್ಯಂ ಕುದೃಶಾಂ ಬಿಭೇದ ।।

ಅನ್ವಯಾರ್ಥ -

ಏಷಃ ಮುನಿಃ = ಈ ಶ್ರೀ ಅಕ್ಷೋಭ್ಯತೀರ್ಥರು 

ಪರಜೀವಭೇದೇ = ಪರಮಾತ್ಮ ಮತ್ತು ಜೀವರ ಭೇದ ವಿಷಯದಲ್ಲಿ 

ಸಾಮರ್ಥ್ಯಭಾಜಾ = ಶಕ್ತಿಯನ್ನು ಹೊಂದಿರುವ 

ತತ್ತ್ವಮಸಿ ಇತಿ ವಾಚಾ = ತತ್ತ್ವಮಸಿ ಎಂಬ ವ್ಯಾಖ್ಯಾನ ರೂಪವಾದ 

ದೃಢಾಸಿನಾ = ಬಲವಾದ ಖಡ್ಗದಿಂದ 

ಅವೈದಿಕಾಗ್ರ್ಯಂ = ವೇದ ವಿರೋಧಿಗಳಲ್ಲಿ ಮೊದಲನೆಯವರಾದ 

ಕುದೃಶಾಂ = ಮಿಥ್ಯಾ ಜ್ಞಾನಿಗಳಿಗೆ 

ಶರಣ್ಯಂ = ಆಶ್ರಯನಾದ / ರಕ್ಷಕನಾದ 

ವಿದ್ಯಾರಣ್ಯಂ = ವಿದ್ಯಾರಣ್ಯ ಮುನಿಯನ್ನು ( ಕಾಳಾಮುಖ ಶ್ರೀ ಕ್ರಿಯಾಶಕ್ತಿ ಒಡೆಯರು )

ಬಿಭೇದ = ಜಯಿಸಿದರು / ಕತ್ತರಿಸಿದರು. 

ಶತ್ರುವಿನ ಪ್ರಾಣಪಹಾರ ಮಾಡುವುದಕ್ಕೆ ಸಮರ್ಥವಾದ, ಬಲವಾದ ಖಡ್ಗದಿಂದ ಯೋಧರು ಕೆಟ್ಟ ಜಂತುಗಳಿಗೆ ಆಶ್ರಯವಾದ ಅರಣ್ಯವನ್ನು ಕತ್ತರಿಸುತ್ತಾರೆ.

ಅದರಂತೆ ಬಲವಾದ ಶ್ರೀಮದಕ್ಶೋಭ್ಯತೀರ್ಥರು ಜೀವ ಪರಮಾತ್ಮರಿಗೆ ಭೇದವನ್ನು ತಿಳಿಸುವುದಕ್ಕೆ ಸಮರ್ಥವಾದ " ತತ್ತ್ವಮಸಿ " ಎಂಬ ಶ್ರುತಿ ವಾಕ್ಯದಿಂದ ವೇದ ವಿರುದ್ಧವಾದ ಮಾತುಗಳನ್ನು ಆಡುವರರಲ್ಲಿ ಶ್ರೇಷ್ಠರೂ, ವೇದೋಕ್ತ ಅರ್ಥವನ್ನು ದೂಷಿಸುವವರೂ ಹಾಗೂ ಮಿಥ್ಯಾವಾದಿಗಳಾದ ಜೀವೇಶ್ವರಾಭೇದ ವಾದಿಗಳಿಗೆ ರಕ್ಷಕರೂ ಆದ ವಿದ್ಯಾರಣ್ಯ ಮುನಿಗಳನ್ನು ವಾಖ್ಯಾರ್ಥದಲ್ಲಿ ಸೋಲಿಸಿ ವಿಜಯವನ್ನು ಪಡೆದರು. 

ವಿವರಣೆ :

ವಾದ ನಡೆದಿದ್ದು ಕ್ರಿ. ಶ 1360. 

ವಾದ ಸ್ಥಳ : ಮುಳಬಾಗಿಲು 

ಶ್ರೀ ಅಕ್ಷೋಭ್ಯತೀರ್ಥರಿಗೂ - ಕಾಳಾಮುಖಾಚಾರ್ಯ ಶ್ರೀ ಕಾಶೀ ವಿಲಾಸ ಕ್ರಿಯಾ ಶಕ್ತಿ ಮುನಿಗಳ ಶಿಷ್ಯನಾದ  ಶ್ರೀ ಕ್ರಿಯಾಶಕ್ತಿ ಒಡೆಯರು / ಮುನಿಗಳಿಗೂ ಮಧ್ಯ " ತತ್ತ್ವಮಸಿ " ವಿಚಾರದಲ್ಲಿ ವಾಕ್ಯಾರ್ಥ ಬೆಳೆಯಿತು. 

ಈ ಶ್ರೀ ಕ್ರಿಯಾಶಕ್ತಿ ಒಡೆಯರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.  

ಶ್ರೀ ಕ್ರಿಯಾಶಕ್ತಿ ವಿದ್ಯಾರಣ್ಯ ಒಡೆಯರ ಪೂರ್ತಿ ಹೆಸರು - ಶ್ರೀ ವಿದ್ಯಾಶಂಕರ ಕ್ರಿಯಾಶಕ್ತಿ ಮುನಿಗಳು / ಒಡೆಯರು ಎಂದು. 

ಇವರು ಕಾಳಾಮುಖಾಚಾರ್ಯ ಕಾಶೀ ವಿಲಾಸ ಕ್ರಿಯಾ ಶಕ್ತಿ ಮುನಿಗಳು ಶಿವಾದ್ವೈತ ಪ್ರತಿಪಾದಕರಾದ ವಿಪ್ರವರ್ಯರು. 

ಇವರೂ ಇವರ ಉತ್ತರಾಧಿಕಾರಿಗಳಾದ ಶ್ರೀ ವಾಣಿ ವಿಲಾಸ ಕ್ರಿಯಾಶಕ್ತಿ, ಶ್ರೀ ವಿದ್ಯಾಶಂಕರ ಕ್ರಿಯಾಶಕ್ತಿ, ಶ್ರೀ ತ್ರ್ಯಂಬಕ ಕ್ರಿಯಾಶಕ್ತಿ, ಶ್ರೀ ಚಂದ್ರಭೂಷ ಕ್ರಿಯಾಶಕ್ತಿ ಮುಂತಾದವರು ಮುಂದೆ ಪಾರಂಪರ್ಯವಾಗಿ ವಿಜಯನಗರದ ಅರಸರಿಂದ ಮನ್ನಣೆ ಪಡೆದಿದ್ದರೆಂದೂ ಶಾಸನಗಳಿಂದ ತಿಳಿಯುತ್ತದೆ. 

ಇವರು ಕಾಳಾಮುಖ ಪಾಶುಪತವ್ರತ, ಶಿವಾದ್ವೈತತತ್ತ್ವಾನುಯಾಯಿ, ಕಾಶೀ ವಿಲಾಸ ಕ್ರಿಯಾಶಕ್ತಿಗಳ ಶಿಷ್ಯರೂ, ಸೂತ ಸಂಹಿತೆಗೆ " ತಾತ್ಪರ್ಯ ಚಂದ್ರಿಕಾ " ವ್ಯಾಖ್ಯಾನಕಾರರೂ; ಕಾಶ್ಮೀರದ ಶೈವಾದ್ವೈತವಿಪ್ರನೂ; ಕಠ ಶಾಖೆಯ ಯಜುರ್ವೇದಿಯೂ ಆದ ಆಂಗೀರಸ ಗೋತ್ರದ ಮಾಧವಭಟ್ಟರು. ಇವರು ಶೈವಾದ್ವೈತ ವಿದ್ಯಾಚಾರ್ಯರು.

ಅಸಿನಾ ತತ್ತ್ವಮಸಿನಾ 

ಪರಜೀವ ಪ್ರಭೇದಿನಾ ।

ವಿದ್ಯಾರಣ್ಯ ಮಹಾರಣ್ಯ-

ಮಕ್ಷೋಭ್ಯಮುನಿರಚ್ಛಿನತ ।।

ಶತ್ರು ಜೀವನ ಪ್ರಾಣಾಪಹಾರಕವಾದ ಖಡ್ಗದಿಂದ ಕಾಡನ್ನು ಕಡೆಯುವಂತೆ ಪರಮಾತ್ಮನಿಗೂ, ಜೀವಾತ್ಮನಿಗೂ ಪಾರಮಾರ್ಥಿಕ ಭೇದವನ್ನು ಹೇಳುವ " ತತ್ತ್ವಮಸಿ " ಎಂಬ ಖಡ್ಗದಿಂದ ಶ್ರೀ ಅಕ್ಷೋಭ್ಯ ಮುನಿಗಳು ಅವೈದಿಕ ವಿದ್ಯಾರಣ್ಯರೆಂಬ ( ಶ್ರೀ ಕ್ರಿಯಾಶಕ್ತಿ ಒಡೆಯರು ) ಮಹಾ ವನವನ್ನು ಕತ್ತರಿಸಿದರು ಅಂದರೆ ಪರಾಜಯಗೊಳಿಸಿದರು ಎಂದು ಆ ಶ್ಲೋಕದ ಅಭಿಪ್ರಾಯ. 

ಶ್ರೀ ಅಕ್ಷೋಭ್ಯತೀರ್ಥರಿಗೂ ಶ್ರೀ ಕ್ರಿಯಾಶಕ್ತಿ ಒಡೆಯರಿಗೂ ವಾದವಾದ ಸ್ಥಳದಲ್ಲಿ ಜಯ ಸೂಚಕವಾದ ಮತ್ತು ಮೇಲಿನ ಅಕ್ಷರವನ್ನು ಕೆತ್ತಿದ ಒಂದು ಶಿಲಾ ಜಯ ಸ್ತಂಭವಿದೆ. 

ಅದು ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಊರಿನ ಪೂರ್ವ ದಿಕ್ಕಿಗೆ ಶ್ರೀ ಶ್ರೀಪಾದಾರಾಜರ ಮೂಲ ವೃಂದಾವನ ಸನ್ನಿಧಾನಕ್ಕೆ ಹತ್ತಿರವೇ ಒಂದು ಎತ್ತರವಾದ ದಿಬ್ಬದ ಮೇಲಿನ ಬಂಡೆ ಕಲ್ಲಿನ ಮೇಲಿದೆ. 

" ಶ್ರೀ ಜಯತೀರ್ಥರ ಕಣ್ಣಲ್ಲಿ ಶ್ರೀ ಅಕ್ಷೋಭ್ಯತೀರ್ಥರ ವಿದ್ಯಾ ವೈಭವ "

ಶ್ರೀಮದಕ್ಷೋಭ್ಯತೀರ್ಥರು ಶ್ರೀಮಧ್ವರಿಂದ ಕೇಳಿದ ಪಾಠವನ್ನು ಚೆನ್ನಾಗಿ ಬಾಯಿ ಪಾಠ ಮಾಡಿ ಎದೆಯಲ್ಲಿ ಮೂಡಿಸಿಕೊಂಡು ಬಿಟ್ಟಿದ್ದರು. 

ಅದನ್ನೇಲ್ಲಾ ಇಡಿಕಿಡಿಯಾಗಿ ಶ್ರೀ ಟೀಕಾಕೃತ್ಪಾದರಿಗೆ ಪಾಠ ಹೇಳಿದರು. 

ಶ್ರೀ ಟೀಕಾರಾಯರಿಗೆ ಬಂದ ಜ್ಞಾನ ಸಾಕ್ಷಾತ್ ಶ್ರೀ ಮಧ್ವರ ಮುಖದಿಂದ ಬಂದದ್ದೇ!!

ಆ ಶ್ರೀ ಸರ್ವಜ್ಞರ ವಿದ್ಯಾ ಶರಧಿಯಿಂದ ತಮ್ಮ ಜ್ಞಾನಾಂಜಲಿಯಲ್ಲಿ ತುಂಬಿ ತಂದ ತತ್ತ್ವಾಮೃತವನ್ನು ಶ್ರೀ ಅಕ್ಷೋಭ್ಯತೀರ್ಥರು ಒಂದು ಹನಿಯೂ ಎಲ್ಲಿಯೂ ಸೋರದಂತೆ ಶ್ರೀ ಜಯತೀರ್ಥ ರೂಪವಾದ ಸತ್ಪಾತ್ರದಲ್ಲಿ ಹನಿಸಿದರು .

ಆ ಜ್ಞಾನದ ಭರಣಿಯನ್ನು ಎಲ್ಲಿಯೂ ಬಸಿಯದಂತೆ ಬೆಸಿಗೆ ಹಾಕಿ ತಂದು ಇವರ ಬೊಗಸೆಯಲ್ಲಿ ಬಾಯಿ ಬಿಚ್ಚಿ ಬಗ್ಗಿಸಿದರು. 

ಆದುದರಿಂದಲೇ ಶ್ರೀಮಜ್ಜಯತೀರ್ಥರು ಪ್ರಾಯಃ ತಮ್ಮ ಪ್ರತಿಯೊಂದು ಗ್ರಂಥದ ಪ್ರಾರಂಭದಲ್ಲಿ ಶ್ರೀ ಅಕ್ಷೋಭ್ಯತೀರ್ಥರ ಉಪಕಾರವನ್ನು ನೆನೆಯದೇ ಮುಂದುವರೆಯುವುದಿಲ್ಲ!!

ಪದವಾಕ್ಯ ಪ್ರಮಾಣಜ್ಞಾನ್ 

ಪ್ರತಿವಾದಿಮದಚ್ಛಿದಃ ।

ಶ್ರೀಮದಕ್ಷೋಭ್ಯತೀರ್ಥಾ-

ಖ್ಯಾನುಪತಿಷ್ಠೇ ಗುರೂನ್ಮಮ ।।

ಶ್ರೀ ಅಕ್ಷೋಭ್ಯತೀರ್ಥರು ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಜಯತೀರ್ಥರಿಗೆ ಸಕಲ ವೇದಾಂತ ಪಾಠವನ್ನೂ; ಸಮಸ್ತ ಪ್ರಮೇಯಗಳಲ್ಲಿ ಅಡಕವಾದ ತತ್ತ್ವ ರಹಸ್ಯಗಳನ್ನೂ ಹೇಳಿದರು. 

ಗಿಳಿಗೆ ಪಾಠ ಹೇಳಿದಂತೆ ಗುರುಗಳು ತಮಗೆ ಪಾಠ ಹೇಳಿದರೆಂದು ಶ್ರೀ ಜಯತೀರ್ಥರು " ಗೀತಾಭಾಷ್ಯ ಟೀಕಾಂತ್ಯ " ದಲ್ಲಿ ಸ್ತೋತ್ರ ಮಾಡಿದ್ದಾರೆ.

ಅಕ್ಷೋಭ್ಯತೀರ್ಥ ಗುರುಣಾ 

ಶುಕವಚ್ಚಿಕ್ಷಿತಸ್ಯ ಮೇ ।

ವಚೋಭಿರಮೃತಪ್ರಾಯೈ: 

ಪ್ರೀಯತಾಂ ಸತತಾಂ ಬುಧಾ:!!

ಹೀಗೆ ಶ್ರೀ ಅಕ್ಷೋಭ್ಯತೀರ್ಥರು ಲೌಕಿಕ ವೈದಿಕ ಉಭಯ ವಿದ್ಯೆಗಳಲ್ಲಿಯೂ ಪರಿಣಿತರಾಗಿ ಶ್ರೀ ಆಚಾರ್ಯ ಸಿದ್ಧಾಂತಕ್ಕೂ; ಪರಂಪರೆಗೂ ಅನ್ಯಾದೃಶವಾದ ಸೇವೆಯನ್ನು ಮಾಡಿದ್ದಲ್ಲದೆ ಶ್ರೀ ಟೀಕಾಕೃತ್ಪಾದರಿಗೂ ಪಾಠ ಹೇಳಿ ಅನುಗ್ರಹಿಸಿದರು.

ಮಾಧ್ವ ಇತಿಹಾಸದಲ್ಲಿ ಶ್ರೀಮದಕ್ಷೋಭ್ಯತೀರ್ಥರ ಕೀರ್ತಿ ಅಮರವಾದುದು!!

ಶ್ರೀ ಜಯತೀರ್ಥರು...

ಯೋ ವಿದ್ಯಾರಣ್ಯವಿಪಿನಂ 

ತತ್ತ್ವಮಸ್ಯಸಿನಾಚ್ಛಿನತ್ ।

ಶ್ರೀಮದಕ್ಷೋಭ್ಯತೀರ್ಥಾಯ 

ನಮಸ್ತಸ್ಮೈ ಮಹಾತ್ಮನೇ ।।

ಶ್ರೀ ಪ್ರಾಣೇಶದಾಸರು...

ಇಕ್ಷುಚಾಪನ ಮ್ಯಾಳ ।

ಲಕ್ಷ್ಮೀ ಇಲ್ಲದೆ । ಬಲು ।

ಪೇಕ್ಷೆ ಮಾಡಿದ ।

ಅಕ್ಷೋಭ್ಯ ಮುನಿಪ ।।

ಸಜ್ಜನರ ಮಾಹಿತಿಗಾಗಿ :

ಶ್ರೀ ಅಕ್ಷೋಭ್ಯತೀರ್ಥರ ವೃಂದಾವನ 

ಶ್ರೀ ಕ್ರಿಯಾಶಕ್ತಿ ಒಡೆಯರ ವೃಂದಾವನ

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)