" ಶ್ರೀ ವಿದ್ಯಾ ಪ್ರಸನ್ನತೀರ್ಥರು "

varthajala
0
" ಶ್ರೀ ವಿದ್ಯಾ ಪ್ರಸನ್ನತೀರ್ಥರು "

" ದಿನಾಂಕ : 15.12.2024 ಭಾನುವಾರ - ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ವ್ಯಾಸರಾಜ ಮಠಾಧೀಶರೂ ಆದ ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಆರಾಧನಾ ಮಹೋತ್ಸವ - ಸೋಸಲೆ 

ಶ್ರೀಮತ್ಕೃಷ್ಣ ಚರಣಾ೦ಭೋಜ 
ಮಾನಸಂ ಕವಿ ಪುಂಗವಂ ।
ಶ್ರೀಮದ್ವಿದ್ಯಾಪ್ರಸನ್ನಾಬ್ಧಿಂ 
ಗುರುಂ ವಂದೇ ನಿರಂತರಮ್ ।।

ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನವೆಂದು ಪ್ರಖ್ಯಾತವಾಗಿದ್ದ ಶ್ರೀಮದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧೀಶರಾದ ಶ್ರೀಮಟ್ಟೀಕಾಕೃತ್ಪಾದರ ಪೂರ್ವಾಶ್ರಮ ಸೋದರಳಿಯಂದಿರೂ - ಶ್ರೀ ಮಜ್ಜಯತೀರ್ಥರ ಆಶ್ರಮ ಶಿಷ್ಯರೂ - ಉತ್ತರಾಧಿಕಾರಿಗಳೂ ಆದ ಶ್ರೀ ವಿದ್ಯಾಧಿರಾಜ ತೀರ್ಥರ ಕಾಲದಲ್ಲಿ ಎರಡು ಮಹಾ ಸಂಸ್ಥಾನಗಳಾಗಿ ವಿಭಾಗವಾಗಿ ಶ್ರೀ ರಾಜೇಂದ್ರತೀರ್ಥ ಮಹಾ ಸಂಸ್ಥಾನ ( ಶ್ರೀ ವ್ಯಾಸರಾಜ ಮಠ ) ಮತ್ತು ಶ್ರೀ ಕವೀಂದ್ರತೀರ್ಥ ಮಹಾ ಸಂಸ್ಥಾನ ( ಶ್ರೀ ರಾಯರ ಮಠ ) ಗಳೆಂದು ಜಗದ್ವಿಖ್ಯಾತವಾದ ಸಾಕ್ಷಾತ್ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಗಳಲ್ಲೊಂದಾದ ಶ್ರೀ ರಾಜೇಂದ್ರತೀರ್ಥರ ಪರಿಶುದ್ಧವಾದ ಪೀಳಿಗೆಯಲ್ಲಿ ಬಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪರಮ ಪವಿತ್ರವಾದ ವಿದ್ಯಾ ಸಂಹಾಸನದಲ್ಲಿ ವಿರಾಜಿಸಿದ - ಶ್ರೀ ರಾಘವೇಂದ್ರಸ್ವಾಮಿಗಳವರ ಪರಮ ಪವಿತ್ರವಾದ ವಿದ್ಯಾ ಸಿಂಹಾಸನದಲ್ಲಿ ವಿರಾಜಮಾನರಾದ ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಸುಯಮೀಂದ್ರತೀರ್ಥರ ಪರಮ ಮಿತ್ರರೂ - ಪರಲೋಕ ಬಂಧುಗಳಾದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ಪ್ರಸನ್ನತೀರ್ಥರು!

ಸ್ವಾಮೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಗುರುವರ್ಯರೇ! 

ನೀವು ಕೀರ್ತಿವಂತರೂ - ಶ್ರೀ ಮದಾಚಾರ್ಯರು, ಅವರ ತರುವಾಯ ಶ್ರೀ ಪದ್ಮನಾಭತೀರ್ಥರು, ಶ್ರೀ ಜಯತೀರ್ಥರು, ಶ್ರೀ ರಾಜೇಂದ್ರತೀರ್ಥರು, ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಅಲಂಕರಿಸಿದ ಸಾಕ್ಷಾತ್ ಪರಮಾತ್ಮನ ಪರಮಹಂಸ ವೇದಾಂತ ವಿದ್ಯಾ ದಿಗ್ವಿಜಯ ಸಾಮ್ರಾಜ್ಯ ಕರ್ನಾಟಕ ರತ್ನ ಸಿಂಹಾಸನದಲ್ಲಿ ವಿರಾಜಿಸಿದ ಭಾಗ್ಯವಂತ ಪಂಡಿತಾಗ್ರಣಿಗಳೂ - ನಿಮ್ಮ ಜ್ಞಾನ  ಭಕ್ತಿ ವೈರಾಗ್ಯಗಳನ್ನು ಕಂಡು ಸಜ್ಜನರಾದ ಜ್ಞಾನಿಗಳಿಂದ ವಂದ್ಯರೂ - ಸಂಸ್ಕೃತ ಕನ್ನಡ ಭಾಷಾಮಯ ಕೃತಿಗಳೊಂದಿಗೆ ಹರಿದಾಸ ವಾಜ್ಞ್ಮಯದಲ್ಲಿ ಸುಂದರ ತತ್ತ್ವಾರ್ಥಗರ್ಭಿತ ಕೃತಿಗಳನ್ನು ರಚಿಸುವುದೇ ಮುಂತಾದ ಸತ್ಕಾರ್ಯಗಳಿಂದ ಸರ್ವ ಜನರಿಂದ ಮಾನ್ಯರಾಗಿ - ಆದರ್ಶ ಸತ್ಕಾರ್ಯಗಳಿಂದ ಲೋಕ ವಂದ್ಯರಾದ ಮಹಿಮಾ ಸಂಪನ್ನರೂ - ಧೀಮಂತರೂ ಆದವರು ಶ್ರೀ ವಿದ್ಯಾಪ್ರಸನ್ನತೀರ್ಥರು!!

" ಪರಮ ಪವಿತ್ರವಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವಿದ್ಯಾ ರತ್ನ ಸಿಂಹಾಸನದಲ್ಲಿ ವಿರಾಜಮಾನರಾದ ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಸಂಕ್ಷಿಪ್ತ ಮಾಹಿತಿ "

ಹೆಸರು : 

ತೆಕ್ಕಲೂರು ಶ್ರೀ ವೇಂಕಟ ನರಸಿಂಹಾಚಾರ್ಯರು 

ತಂದೆ : 

ತೆಕ್ಕಲೂರು ಶ್ರೀ  ಅಹೋಬಲಾಚಾರ್ಯರು
( ಶ್ರೀ ವಿದ್ಯಾರತ್ನಾಕರತೀರ್ಥರು )

ತಾಯಿ : 

ಸಾಧ್ವೀ ಸತ್ಯಭಾಮಮ್ಮ 
( ಶ್ರೀ ವಿದ್ಯಾಸಿಂಧುತೀರ್ಥರ ಪೂರ್ವಾಶ್ರಮ ಪುತ್ರಿ )

ಕಾಲ : ಕ್ರಿ ಶ 1940 - 1969

ವಂಶ : ಷಾಷ್ಟಿಕ 

ಮನೆತನ : ಚಿನ್ನಭಂಡಾರಿ 

ಜನ್ಮ ಸ್ಥಳ : ಸೋಸಲೆ 

ಆಶ್ರಮ ಗುರುಗಳು : ಶ್ರೀ ವಿದ್ಯಾವಾರಿಧಿತೀರ್ಥರು 

ಆಶ್ರಮ ನಾಮ : ಶ್ರೀ ವಿದ್ಯಾಪ್ರಸನ್ನತೀರ್ಥರು 

ಆಶ್ರಮ ಶಿಷ್ಯರು : ಶ್ರೀ ವಿದ್ಯಾಪಯೋನಿಧಿತೀರ್ಥರು 

ಅಂಕಿತ : ಪ್ರಸನ್ನ

" ಕೃತಿಗಳು "

ಶ್ರೀ ವಿದ್ಯಾ ಪ್ರಸನ್ನ ತೀರ್ಥರಿಂದ ರಚಿತವಾದ ದೇವರ ನಾಮಗಳಲ್ಲಿ ಭಾವದ ನಿಲುಗಡೆಗೆ ಅನುಗುಣವಾಗಿ ರಾಗ ಬಂಧವನ್ನು ನಿರ್ಮಿಸಿ ಅದಕ್ಕೆ ಅನುರೂಪವಾದ ತಾಳ - ಲಯ - ಪ್ರಾಸಗಳನ್ನು ಮೇಳಗೊಳಿಸಿದ್ದರಿಂದ ಮಧುರ ಗಾನಕ್ಕೂ - ತನ್ಮಯ ಧ್ಯಾನಕ್ಕೂ ಅನುಕೂಲ ಒದಗಿದೆ.

ಮಧುರಾನಾಥನ 
ನಾಮವು ।। ಪಲ್ಲವಿ ।।

ದಧಿ ಮಧು ದ್ರಾಕ್ಷಾ 
ಸುಧೆ ರಸಗಿಂತ ।।

300ಕ್ಕೂ ಅಧಿಕ ಪದ - ಪದ್ಯ - ಲಾವಣಿ - ಕೋಲುಪದ - ಹಾಗೂ ವೃತ್ತನಾಮಗಳನ್ನು ರಚಿಸಿದ್ದಾರೆ ಹಾಗೂ 15 ಸಂಸ್ಕೃತದಲ್ಲಿ ಹಾಡುಗಳನ್ನು ರಚಿಸಿದ್ದಾರೆ.

" ಪ್ರಬಂಧಗಳು "

1. ಸುಮಧ್ವ ವಿಜಯ ಸಾರ ಸಂಗ್ರಹ
2. ವೈಕುಂಠ ವರ್ಣನೆ
3. ಬದರಿಕಾಶ್ರಮ ವರ್ಣನೆ

" ನಾಟಕಗಳು "

1. ಅಜ್ಜೀ ಮಾಮಾಘದ ಯಾತ್ರೆ
2. ಚಾಮಣ್ಣನ ಚಿರೋಟಿ
3. ವಜಾ ಐವತ್ತು ಸಜಾ ಐವತ್ತು
4. ಕಿಟ್ಟೂ ಪುಟಾರಿ
5. ಅಣ್ಣಾಜಪ್ಪನ ಅಮಲು
6. ಕೂಡಿಟ್ಟ ಕೈ

" ಶ್ರೀ ವಿದ್ಯಾ ಪ್ರಸನ್ನತೀರ್ಥರು ಬರೆದ ಪ್ರಮೇಯ ಭರಿತ ಲೇಖನಗಳು "

1. ಜೀವ ಕರ್ತೃತ್ವ ವಿಚಾರ
2. ವರ್ಣಾಶ್ರಮ ಧರ್ಮ

" ಅನುಗ್ರಹ ಸಂದೇಶಗಳು "

1. ಅನುಗ್ರಹ ಸಂದೇಶ
2. ವಿಪ್ರ ಸಮಾಜಕ್ಕೆ ಸಂದೇಶ
3. Presidential Address [ ಅಖಿಲ ಭಾರತ ಮಾಧ್ವ ಮಹಾ ಮಂಡಲ ]

ಆರಾಧನೆ : 

ಮಾರ್ಗಶೀರ್ಷ ಶುದ್ಧ ಪೂರ್ಣಿಮಾ 

ವೃಂದಾವನ ಸ್ಥಳ : ಸೋಸಲೆ 

" ಉಪ ಸಂಹಾರ "

ಹರಿದಾಸ ಪರಂಪರೆಯಲ್ಲಿ ಯತಿಗಳೂ ದಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟವಾದ ಸೇವೆಯನ್ನು ನೀಡಿ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. 

ಶ್ರೀ ವ್ಯಾಸರಾಜರ ಪರಿಶುದ್ಧವಾದ ಪೀಳಿಗೆಯಲ್ಲಿ ಬಂದ ಶ್ರೀ ಲಕ್ಷ್ಮೀಶತೀರ್ಥರು, ಶ್ರೀ ವಿದ್ಯಾಕಾಂತತೀರ್ಥರು, ಶ್ರೀ ವಿದ್ಯಾರತ್ನಾಕರತೀರ್ಥರು, ಶ್ರೀ ವಿದ್ಯಾಪ್ರಸನ್ನತೀರ್ಥರು ಮತ್ತು ಶ್ರೀ ವಿದ್ಯಾಪಯೋನಿಧಿತೀರ್ಥರು ಸರಳ ಸುಂದರವಾಗಿ, ಅತಿ ಮನೋಜ್ಞವಾಗಿ ಪದ ಪದ್ಯಗಳನ್ನು ರಚಿಸಿದ್ದಾರೆ. 

ಶ್ರೀ ವಿದ್ಯಾಪ್ರಸನ್ನತೀರ್ಥರು ಹಲವಾರು ಪುರಾಣ ಭಾಗವತ ಪ್ರಸಂಗಗಳನ್ನು ಕಾವ್ಯಾತ್ಮಕವಾಗಿಯೂ, ಭಕ್ತಿ ಪೂರ್ವಕವಾಗಿಯೂ ಅಲಂಕಾರ ಭಾಷೆಯಲ್ಲಿ ಸಂಯೋಜಿಸಿದ್ದಾರೆ. 

ಹರಿದಾಸರ ಕೃತಿಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವುಗಳ ಸಂದರ್ಭ, ಸನ್ನಿವೇಶಗಳನ್ನು ತಿಳಿಯಬೇಕಾದರೆ ಅಪಾರ ಜ್ಞಾನಬೇಕು. 

ಅದರಲ್ಲಿ ಆಧ್ಯಾತ್ಮಿಕ ತತ್ತ್ವ ಪ್ರಧಾನ ಸಾಹಿತ್ಯವೂ ಉಂಟು!

ವೇದ, ವೇದಾಂತ, ಪುರಾಣ, ಪಂಚರಾತ್ರ, ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತಾದಿ ಗ್ರಂಥಗಳ ಸಾರರನ್ನು ತಮ್ಮ ಪದಗಳಲ್ಲಿ ಸೆರೆ ಹಿಡಿದ್ದಾರೆ ಶ್ರೀ ವಿದ್ಯಾಪ್ರಸನ್ನತೀರ್ಥರು. 

ಉತ್ತಮವಾದ ಕಾವ್ಯ ಗುಣದಿಂದ ಕೂಡಿದ ಭಗವಂತನ ಸಾಕ್ಷಾತ್ಕಾರವನ್ನು ತಮ್ಮ ಬಿಂಬ ರೂಪಿ ಭಗವಂತನನ್ನು ಭಕ್ತಿ ಸಾಹಿತ್ಯದಿಂದ ಕಂಡಿದ್ದಾರೆ ಶ್ರೀ ವಿದ್ಯಾಪ್ರಸನ್ನತೀರ್ಥರು. 

ಶ್ರೀ ವಿದ್ಯಾಪ್ರಸನ್ನತೀರ್ಥರು ಪದ ಪದ್ಯ, ಸಂಪ್ರದಾಯದ ಹಾಡುಗಳ ಜೊತೆಗೆ " ಕೂಡಿಟ್ಟ ಕೈ " ಹಾಗೂ " ಜಿಹ್ವಾ ಚಾಪಲ್ಯ " ಎಂಬ ನಾಟಕಗಳನ್ನು ರಚಿಸಿ - ಸಂಪ್ರದಾಯ - ಭಕ್ತಿ - ಸಮಕಾಲೀನತೆಗಳನ್ನು ಮೇಳವಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಚೈತನ್ಯ ಪೂರ್ಣವಾಗಿ ಬೆಳೆಸಿ ಮಾರ್ಗಶೀರ್ಷ ಶುದ್ಧ ಪೌರ್ಣಿಮಾ ( 1969 ) ದಂದು ಸೋಸಲೆ ಕ್ಷೇತ್ರದಲ್ಲಿ ಬೃಂದಾವನಸ್ಥರಾದರು. 

" ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಕಣ್ಣಲ್ಲಿ ಶ್ರೀ ರಾಘವೇಂದ್ರತೀರ್ಥರು "

ಯತಿವರ ನಿಮ್ಮನು 
ಸ್ತುತಿಪ ಜನರು ದಿವ್ಯ ।
ಗರಿಯನು ಪೊಂದುವರು 
ರಾಘವೇಂದ್ರ ।। ಪಲ್ಲವಿ ।।

 

ಕ್ಷಿತಿಯೊಳಗೆ ದಶ 
ಪ್ರಮತಿಗಳ ಸುಖಕರ ।
ಮತದ ಪರಮ ಸಂಗತಿಗಳ 
ಹರಡಿದ ।। ಅ. ಪ ।।

ಜಯತೀರ್ಥ ಮುನಿಗಳವರ 
ಗ್ರಂಥಗಳಿಗೆ । ಸುಖ ।
ಮಯ ಟಿಪ್ಪಣಿಗಳ ರಚಿಸಿ । ಚಿ ।
ನ್ಮಯ ರಾಮರ 
ಸೇವೆಯ ಸಂತಸದಲಿ ।
ಗಯಿದು ಸುಮಂತ್ರಾಲಯ-
ದಲಿ ನೆಲೆಸಿದೆ ।। ಚರಣ ।।

ಮಂಗಳಕರವಾದ 
ತುಂಗಾ ನದಿಯ । ತ ।
ರಂಗಗಳಲಿ ಮಿಂದು ನಿಮ್ಮನು ।
ಕಂಗಳಿಂ ನೋಡಿ 
ಗುಣಗಳ ಪಾಡಿ । ನಿ ।
ಸ್ಸಂಗರಾದ ಸಾಧು ಸಂಗವ 
ಪೊರೆಯುವ ।। ಚರಣ ।।

ಪರಿ ಪರಿಯಲಿ ನಿಮ್ಮ 
ನಮಿಪ ಸೇವಕರಿಗೆ ।
ಸುರಧೇನುವಿನಂತೆ ಸಂತತ ।
ಹರುಷದಿಂದಲಿ ನಿಮ್ಮ 
ಭಜಿಪ ಸುಜನರಿಗೆ ।
ಸುರತರುವಂತೆ 
ಪ್ರಸನ್ನರಾಗುವಂಥ ।। ಚರಣ ।।

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

ಜಾಹಿರಾತು 




Post a Comment

0Comments

Post a Comment (0)