ರಾಗ : ದರ್ಬಾರ್
ತಾಳ : ಆದಿ
ಯತಿವರ ನಿಮ್ಮನು ಸ್ತುತಿಪ
ಜನರು ದಿವ್ಯ !
ಗುರಿಯನು ಪೊಂದುವರು
ರಾಘವೇಂದ್ರ !! ಪಲ್ಲವಿ !!
ಕ್ಷಿತಿಯೊಳಗೆ ದಶ
ಪ್ರಮತಿಗಳ ಸುಖಕರ
ಮತದ ಪರಮ ಸಂಗತಿಗಳ
ಹರಡಿದ !! ಅ ಪ !!
ಜಯತೀರ್ಥ ಮುನಿಗಳವರ
ಗ್ರಂಥಗಳಿಗೆ ಸುಖ
ಮಯ ಟಿಪ್ಪಣಿಗಳ ರಚಿಸಿ - ಚಿ
ನ್ಮಯ ರಾಮರ ಸೇವೆಯ
ಸಂತಸದಲಿ
ಗಯಿದು ಸುಮಂತ್ರಾಲಯ-
ದಲಿ ನೆಲೆಸಿದ !! 1 !!
ಮಂಗಳಕರವಾದ
ತುಂಗಾ ನದಿಯ - ತ
ರಂಗಗಳಲಿ ಮಿಂದು ನಿಮ್ಮನು
ಕಂಗಳಿಂ ನೋಡಿ
ಗುಣಗಳ ಪಾಡಿ - ನಿ
ಸ್ಸಂಗರಾದ ಸಾಧು
ಸಂಗವ ಪೊರೆಯುವ !! 2 !!
ಪರಿ ಪರಿಯಲಿ ನಿಮ್ಮ
ನಮಿಪ ಸೇವಕರಿಗೆ
ಸುರಧೇನುವಿನಂತೆ ಸಂತತ
ಹರುಷದಿಂದಲೀ ನಿಮ್ಮ
ಭಜಿಪ ಸುಜನರಿಗೇ
ಸುರತರುವಂತೆ
ಪ್ರಸನ್ನರಾಗುವಂಥ !! ೩ !!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
https://www.shikshanaratna.com/2024/12/blog-post_66.html