" ಈದಿನ - ಶ್ರೀ ರಾಯರ - ಶ್ರೀ ವಿಜಯರಾಯರ - ಶ್ರೀ ಶೇಷದಾಸರ - ಶ್ರೀ ಉಪ್ಪಲಿ ತಾತ ಅವರ ಪ್ರೀತಿಪಾತ್ರರು ಶ್ರೀ ಕಾಶಿ ಹನುಮಂತದಾಸರು "
" ಪೂಜ್ಯ ಶ್ರೀ ಕಾಶಿದಾಸರ ಸಂಕ್ಷಿಪ್ತ ಮಾಹಿತಿ "
ದಾಸರೇ ಗತಿಯು ನಮಗೆ ।
ಕಾಶಿ ಹನುಮದ್ದಾಸರೇ ।। ಪಲ್ಲವಿ ।।
ದಾಸ ಸಾಹಿತ್ಯ ಭೂಷಣ ಗುರು ಮಧ್ವ ತಾತನ ।
ವಿಶೇಷ ಅಂತಃಕರಣ ಪಡೆದಂಥ ।। ಅ ಪ ।।
.... ಜಪತಪಾನುಷ್ಠಾನ ಹರಿ ನಾಮ ಶ್ರವಣ ನಿಸ್ಸೀಮ ।
ತಾಪತ್ರಯ ಕಳೆಯೋ ಸಿರಿನಿವಾಸ ವಿಠಲನ ದಾಸರೇ ಹನುಮದ್ದಾಸರೇ ।।
ಹೆಸರು : ಶ್ರೀ ಕಾಶಿ ಹನುಮಂತದಾಸರು
ತಂದೆ : ಶ್ರೀ ಕೃಷ್ಣರಾಯರು
ತಾಯಿ : ಸಾಧ್ವೀ ಪದ್ಮಾವತೀಬಾಯಿ
ಜನನ : ಕ್ರಿ ಶ 1940 ( 14.05.1940 )
ಜನ್ಮ ಸ್ಥಳ : ಬೋರಗಿ ಗ್ರಾಮ ( ಬಿಜಾಪುರ ಜಿಲ್ಲೆ )
" ಶ್ರೀ ಮಂತ್ರಾಲಯ ಪ್ರಭುಗಳ ಪರಮಾನುಗ್ರಹ "
ಮಂತ್ರ ಪ್ರತಿಪಾದ್ಯನ ಕ್ಷೇತ್ರ ಶ್ರೀ ಮಂತ್ರಾಲಯ. ಕ್ಷೇತ್ರ ಪಾಲಕ ಶ್ರೀ ನರಸಿಂಹದೇವರು. ಶ್ರೀ ನರಸಿಂಹದೇವರ ಪೂರ್ಣಾನುಗ್ರಕ್ಕ ಪಾತ್ರರಾದ ಶ್ರೀ ಪ್ರಹ್ಲಾದರಾಜರೇ ಕಲಿಯುಗದ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರು.
ಪ್ರಾರಬ್ಧ ಕರ್ಮ ಎಂಥವರನ್ನಾದರೂ ಮಣಿಸದೆ ಬಿಡದು. " ಅವಶ್ಯ೦ ಅನುಭೋಕ್ತವ್ಯಮ್ " ಎಂದಂತೆ ಮಗು ಶ್ರೀ ಹನುಮಂತರಾಯರು 6 ವರ್ಷದ ಬಾಲಕ. ದುರದೃಷ್ಟವಶಾತ್ ಆ ಬಾಲಕನಿಗೆ ವಿಷಮ ಜ್ವರ ಕಾಣಿಸಿಕೊಂಡಿತು.
ಚಿಕಿತ್ಸೆಗಾಗಿ ಆ ಹಳ್ಳಿಯ ವೈದ್ಯರ ಬಳಿ ಕರೆದುಕೊಂಡು ಹೋದರು. ವೈದ್ಯರು ಬಾಲಕನಿಗೆ ಚುಚ್ಚು ಮದ್ದು ನೀಡಿದರು. ಆ ಔಷಧ ವಿಪರೀತ ಪರಿಣಾಮ ಬೀರಿತು. ಆ ಚುಚ್ಚುಮದ್ದಿನಿಂದ ದೇಹದ ನರ ಮಂಡಲದ ಮೇಲೆ ವಿಪರೀತ ಪರಿಣಾಮ ಬೀರಿದ್ದೂ ಅಲ್ಲದೇ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡು ಕಗ್ಗತ್ತಲೆಯಲ್ಲೇ ಬದುಕುವಂತೆ ಮಾಡಿತು.
ಶ್ರೀ ಕ್ಷೇತ್ರ ಮಂಚಾಲೆಗೆ ಬಂದು ತಾಯಿ - ಮಗ ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದರು. ಒಂದು ಮಂಡಲ ಪರ್ಯಂತ ಸೇವೆ ಮಾಡಿದರೂ ಶ್ರೀ ರಾಯರ ಕರುಣೆ ಆಗಿಲ್ಲವೆಂದು ಚಿಂತಾಕ್ರಾಂತಳಾದಳು. ಕರುಣಾವಾರಿಧಿ ಶ್ರೀ ಹರಿಯ ಕರುಣೆಯ ಕಂದ ಶ್ರೀ ರಾಯರಿಗೆ ಪ್ರೇರಣೆಯಾಯಿತು.
ಶ್ರೀ ರಾಯರು ಶ್ರೀ ಹನುಮಂತದಾಸರ ತಾಯಿಯ ಸ್ವಪ್ನದಲ್ಲಿ ಕಾಣಿಸಿಕೊಂಡು....
ನಿನ್ನ ಮಗನಿಗೆ ಈ ಜನ್ಮದಲ್ಲಿ ದೃಷ್ಟಿ ಬರುವ ಯೋಗವಿಲ್ಲ. ಒಂದುವೇಳೆ ಈ ಜನ್ಮಕ್ಕೆ ಆಗ್ರಹ ಪೂರ್ವಕ ಕಾಣುವ ದೃಷ್ಟಿ ಕೊಟ್ಟರೂ ಮುಂದಿನ ಜನುಮಗಳಲ್ಲಿಯೂ ಅವರು ನೇತ್ರ ಹೀನರಾಗಿಯೇ ಬಾಳಬೇಕು. ಇವೆರಡರಲ್ಲಿ ತಾಯಿಯ ಇಚ್ಛೆಯನ್ನು ಅಪೇಕ್ಷಿಸಿದರು.
ಆಗ ತಾಯಿ ಪದ್ಮಾವತಿಬಾಯಿ ಮಾತೃವಾತ್ಸಲ್ಯ, ಮಮತೆಯ ಸಾಕಾರಮೂರ್ತಿಯು ಮುಂದಿನ ಜನುಮಗಳಲ್ಲಿಯಾದರೂ ಮಗನು ಬೆಳಕಿನಲ್ಲಿ ಓಡ್ಯಾಡುವಂತೆ ಸುಖದ ಬದುಕು ಆಗಲಿ ಎಂದು ಹಾರೈಸಿ ಶ್ರೀ ರಾಯರ ವಿಶೇಷ ಅನುಗ್ರಹಕ್ಕೆ ಪ್ರಾರ್ಥಿಸಿಕೊಂಡು " ನಿಮ್ಮ ಚಿತ್ತ " ಎಮ್ಮ ಭಾಗ್ಯವೆಂದು ಸುಮ್ಮನಾದಳು.
ಶ್ರೀ ಹರಿಯ ಸಂಕಲ್ಪದಂತೆ ಮಗುವಿನ ಕೊನೆಯವರೆಗೂ ಆತನ ಸಾಧನೆ, ಕಾರ್ಯಗಳಲ್ಲಿ ತಾವೇ ಮುಂದಾಗಿ ನಿಂತು ಆತನ ಬದುಕಿನ ನಿರ್ವಹಣೆ ಭಾರ ತಾವೇ ಹೊತ್ತು ತಾಯಿಗಿದ್ದ ಚಿಂತೆ, ಮಹಾಭಯ ಪರಿಹಾರ ಮಾಡುವ ಅಭಯ ನೀಡಿ ಶ್ರೀ ರಾಯರು ಅದೃಶ್ಯರಾದರು.
ಮುಂದೆ 68 ವರ್ಷಗಳ ಕಾಲ ಶ್ರೀ ಕಾಶಿದಾಸರ ಕೈ ಹಿಡಿದು ಕುರಡರಿಗೆ ಕೋಲ ಆಸರೆಯಂತೆ ಆಸರೆ ನೀಡಿ, ಶ್ರೀ ಕಾಶಿದಾಸರ ಆಸೆಗಳನ್ನೆಲ್ಲಾ ಪೂರೈಸುತ್ತಾ ಅವರ ಬದುಕಿನ ಜಟಕಾ ಬಂಡಿಯ ಸಾರಥಿಯಾದರು ಶ್ರೀ ಮಂತ್ರಾಲಯ ಪ್ರಭುಗಳು!
ಇದುವೇ ಶ್ರೀ ರಾಯರ ಕಾರುಣ್ಯ!
ಅಲ್ಲಿಂದ ಮುಂದೆ ಶ್ರೀ ಕ್ಷೇತ್ರ ಉಡುಪಿಗೆ ಹೋಗಿ ಅಲ್ಲಿ ಜಗದೊಡೆಯನಾದ ಶ್ರೀ ಕೃಷ್ಣ ಪರಮಾತ್ಮನ ಸೇವೆ ಮುಗಿಸಿ ಪುನಃ ಶ್ರೀ ರಾಯರ ಸನ್ನಿಧಿಗೆ ಬಂದು ಸೇವೆ ಸಲ್ಲಿಸಿ ಆಪತ್ಕಾಲ ಮಿತ್ರರಾದ ಶ್ರೀ ಚಿಪ್ಪಗಿರಿ ನಿಲಯದಾರ ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯದಾಸರ ಪ್ರೇರಣೆಯಂತೆ ಬಂದು ಸೇವೆ ಮಾಡಲಾರಂಭಿಸಿದರು.
ಶ್ರೀ ವಿಜಯರಾಯರ ಕೃಪಾ ಕಟಾಕ್ಷದಿಂದ ಶ್ರೀ ಕ್ಷೇತ್ರ ಕಾಶಿಗೆ ಹೋಗಿ ಹನುಮಾನ್ ಘಾಟ್ ನಲ್ಲಿಯೇ ವಾಸ ಮಾಡತೊಡಿದರು. ಸುಮಾರು 24 ವರ್ಷಗಳ ಕಾಲ ಕಾಶಿ ಕ್ಷೇತ್ರದಲ್ಲೇ ಶ್ರೀ ವಿಶ್ವನಾಥ - ಶ್ರೀ ವಿಶಾಲಾಕ್ಷಿ ಸನ್ನಿಧಾನದಲ್ಲಿದ್ದು ಸಾಧನೆ ಮಾಡಿದರು. ಶ್ರೀ ರಾಮದುರ್ಗದ ಮಾಧವೇಶಾಚಾರ್ಯರ ಪರಮಾನುಗ್ರಹಕ್ಕೆ ಪಾತ್ರರಾದರು!
ಶ್ರೀ ಕಾಶಿದಾಸರು ಕಾಶಿಯಲ್ಲಿದ್ದಾಗ ನೇಪಾಳದಿಂದ ಬಂದ ಸಾಲಿಗ್ರಾಮ ಮತ್ತು ಪೂಜಾ ವಸ್ತುಗಳನ್ನು ಹೊತ್ತು ತಂದು ಕರ್ನಾಟಕದಲ್ಲಿರುವ ಮಠ - ಮಾನ್ಯಗಳಿಗೆ ಮಾರಾಟ ಮಾಡಿ ಸ್ವತಂತ್ರ ಜೀವನ ಮಾಡಲಾರಂಭಿಸಿದರು!
" ಶ್ರೀ ಗುರು ವಿಜಯದಾಸಾಶ್ರಮ "
ಶ್ರೀ ರಾಮದುರ್ಗದ ಮಾಧವೇಶಾಚಾರ್ಯರ ಪರಮಾನುಗ್ರಹದಿಂದ ಶ್ರೀ ವಿಜಯದಾಸಾಶ್ರಮಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ.
ಶ್ರೀ ಉಪ್ಪಲಿ ಗುರುಮಧ್ವರಾಯರೊಂದಿಗೆ ಶ್ರೀ ಶೇಷದಾಸರ ( ಶ್ರೀ ಗುರು ವಿಜಯ ವಿಠಲ ) ಸೇವೆಯಲ್ಲಿ ಕೈ ಜೋಡಿಸಿರುವ ಮಹನೀಯರು ಶ್ರೀ ಕಾಶೀ ಹನುಮದ್ದಾಸರು. ಇದು ಹಾಲಿನೊಂದಿಗೆ ಜೇನು ಬೆರೆತಂತೆ ಆಗಿ ಸಜ್ಜನ ಜಗತ್ತಿಗೆ ಆನಂದದಾಯಕ ವಿಚಾರವಾಯಿತು! ಶ್ರೀ ಉಪ್ಪಲಿ ಮಧ್ವರಾಯರ ಪರಿವಾರದಲ್ಲಿ ಮುಖ್ಯವಾಗಿದ್ದರು.
" ಗೋಪಾಲವಿಠಲ ಪ್ರಶಸ್ತಿ "
ಶ್ರೀ ಕಾಶೀ ಹನುಮದ್ದಾಸರಿಗೂ, ಶ್ರೀ ಸುಶಮೀ೦ದ್ರತೀರ್ಥ ಶ್ರೀಪಾದಂಗಳವರ ಆಪ್ತ ಕಾರ್ಯದರ್ಶಿಗಳಾದ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯರಿಗೂ ಆತ್ಮೀಯ ಸಂಬಂಧ. ಶ್ರೀ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಕಾಶೀದಾಸರ ಸೇವೆಯನ್ನು ಗುರುತಿಸಿ ಶ್ರೀ ರಾಯರ ಮಠದಿಂದ " ಶ್ರೀ ಗೋಪಾಲವಿಠಲ " ಪ್ರಶಸ್ತಿಯನ್ನು ಶ್ರೀ ಸುಶಮೀ೦ದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತಗಳಿಂದ ಕ್ರಿ ಶ 2007 ರಲ್ಲಿ ಸ್ವೀಕರಿಸಿದ ಪೂತಾತ್ಮಾರು!!
" ಉಪಸಂಹಾರ "
ಶ್ರೀ ಪರಮಾತ್ಮನ ಸೃಷ್ಟಿ ಕ್ರಮದಲ್ಲಿ ಹುಟ್ಟು ಜೀವದ ಪ್ರಾರಂಭ - ಕೊನೆ ಇವೆರಡರ ಮಧ್ಯ ನಡೆಯುವ ಹೋರಾಟವೇ ಜೀವನ.
ಸೃಷ್ಟಿ - ಸ್ಥಿತಿ ನಿಯಮ - ಲಯ ಇವು ಭಗವಂತನ ವ್ಯಾಪಾರ. ಸೃಷ್ಟಿಗೆ ಬಂದದ್ದು ಲಯ ಹೊಂದಲೇಬೇಕು. ( ಜಾತಸ್ಯ ಮರಣಂ ಧ್ರುವಮ್ )
ಮಾನವನು ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಸಾರ್ಥಕದ ಬದುಕು, ಸಾಧನೆ ಎಷ್ಟೆಂಬುದೇ ಮುಖ್ಯ!
ಅಲ್ಪ ಕಾಲದಲ್ಲಿ ಮಹತ್ವ ಸಾಧನೆ ಮಾಡಿ ತೋರಿಸುವುದು ಮಹಾತ್ಮರ ಲಕ್ಷಣ. ಇದರಂತೆ ಶ್ರೀ ಕಾಶಿದಾಸರು ಸಿಕ್ಕ ಅಲ್ಪ ಆಯುಷ್ಯದಲ್ಲಿ ಚಿನ್ನದಂಥಾ ಸಾಧನೆ ಮಾಡಿರುವರು.
ದಿನಾಂಕ : 16.12.2008 ಮಂಗಳವಾರ ಶ್ರೀ ಕಾಲ ನಾಮಕ ಪರಮಾತ್ಮನ ಕರೆಗೆ ಓಗೊಟ್ಟು ವೈಕುಂಠಕ್ಕೆ ಪ್ರಯಾಣ ಮಾಡಿದರು!
ಶ್ರೀ ರಾಯರ - ಶ್ರೀ ವಿಜಯರಾಯರ ಸಂಪರ್ಕಕ್ಕೆ ಬರುವ ಸುಜೀವಿಗಳು ಮಹತ್ತರ ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಇದು ಜ್ವಲಂತ ನಿದರ್ಶನ.
ರಾಯರೇ ಗತಿಯು ಜಗತ್ತಿನ ಸುಜನರಿಗೆಲ್ಲಾ ರಾಯರೇ ಗತಿಯು!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ