ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 15 ವರ್ಷದೊಳಗಿನ ಮಕ್ಕಳ ಪ್ರತಿಭೆ ಗುರುತಿಸಲು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅಹಿಕಾಗೆ ಕಲಾ ಶ್ರೀ ಪ್ರಶಸ್ತಿ ಮುಡಿಗೇರಿದೆ.
ಬೆಂಗಳೂರಿನ ದೊಡ್ಡಕಲ್ಲಸಂದ್ರದ ಕುಮಾರನ್ಸ್ ಅಕಾಡೆಮಿಯ ಎಂಟನೇ ತರಗತಿ ವಿದ್ಯಾರ್ಥಿ ಆಹಿಕಾ ನಾಗದೀಪ್ ಗೆರಾಜಧಾನಿಯ ಬಾಲ ಭವನದ ಸಹಯೋಗದೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇಲಾಖೆಯು ಜಿಲ್ಲಾಮಟ್ಟದಲ್ಲಿ ಹಮ್ಮಿಕೊಂಡಿದ್ದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಅಹಿಕಾ, ರಾಜ್ಯಮಟ್ಟಕ್ಕೆ ಆಯ್ಕೆಯಾದಳು.
300ಕ್ಕೂ ಹೆಚ್ಚು ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಕಲಾಶ್ರೀ ಪ್ರಶಸ್ತಿಗೆ ಅರ್ಹಳಾಗಿದ್ದು ಬಹಳ ವಿಶೇಷ.
ಸಂಗೀತ, ನೃತ್ಯ, ಜಾನಪದ ಸೇರಿದಂತೆ ಪ್ರದರ್ಶನ ಕಲೆಗಳ ವಿಭಾಗದಲ್ಲಿ ಈಕೆ ೩೦೦ಕ್ಕೂ ಹೆಚ್ಚು ಪ್ರತಿಸ್ಪರ್ಧಿಗಳನ್ನು ಮಣಿಸಿ ಪ್ರಥಮ ಸ್ಥಾನಕ್ಕೆ ಏರಿದ್ದು ಮಹತ್ವದ ಸಂಗತಿ.
ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ ನಾಗದೀಪ್ ಹಾಗೂ ಕೃತಿ ನಾಗದೀಪ್ ಪುತ್ರಿಯಾದ ಅಹಿಕಾ, ಖ್ಯಾತ ವಿದುಷಿ ವೈಜಿ.
ಶ್ರೀಲತಾ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ , ವೀಣೆ ಮತ್ತು ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಈ ಮೂರು ವಿಭಾಗದ ಜೂನಿಯರ್ ಪರೀಕ್ಷೆಗಳನ್ನು ಮುಗಿಸಿ ಈಗ ಸೀನಿಯರ್ ಹಂತದ ಕಲಿಕೆಯಲ್ಲಿ ನಿರತಳಾಗಿದ್ದಾಳೆ.
ಕರ್ನಾಟಕ ರಾಜ್ಯದ ವಿವಿಧ ವೇದಿಕೆ ಸೇರಿದಂತೆ ಹೊರ ರಾಜ್ಯಗಳಲ್ಲೂ ಈಕೆ ಸಂಗೀತ ನೃತ್ಯ ಮತ್ತು ವೀಣೆ ಕಲಾಪ್ರದರ್ಶನ ನೀಡಿದ್ದಾಳೆ. ಕಲಾಶ್ರೀಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕುಮಾರನ್ಸ್ ಶಾಲೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಈ ವಿದ್ಯಾರ್ಥಿನಿಯನ್ನು ಅಭಿನಂದಿಸಿದೆ.