" ಶ್ರೀ ಸುಬುಧೇಂದ್ರ ತೀರ್ಥರ ಆಪ್ತ ಶಿಷ್ಯರೂ - ಶ್ರೀ ಸುಜಯೀ೦ದ್ರತೀರ್ಥರ ಪ್ರೀತಿಪಾತ್ರರೂ - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಕಾರುಣ್ಯಪಾತ್ರರೂ - ಗಯಾ ಕ್ಷೇತ್ರದ ಧಾರ್ಮಿಕ ಗುರುಗಳಲ್ಲಿ ಮುಖ್ಯಸ್ಥರೂ - ಶ್ರೀ ಮಂತ್ರಾಲಯ ರಾಮಾಚಾರ್ಯರ ವೇದಿಕ್ ಪಾಠಶಾಲ, ಗಯಾದ ಪ್ರಾಂಶುಪಾಲರು ಆದ ಶ್ರೀ ಮಂತ್ರಾಲಯ ರಾಮಾಚಾರ್ಯರು "
" ಶ್ರೀ ಕೃಷ್ಣ ಪರಮಾತ್ಮನ ದರ್ಶನ - ವಂದನೆಗಳಿಂದ ಪಾಪ ಪರಿಹಾರ "
ಕೆಂಡ ಕಾಣದೆ -
ಮುಟ್ಟಿದರು ಸರಿ ।
ಕಂಡು ಮುಟ್ಟಲು -
ದಹಿಸದಿಪ್ಪದೆ ।
ಪುಂಡರೀಕದಳಾಯತಾ -
ಕ್ಷನ ವಿಮಲ ಪದಪದ್ಮ ।।
ಬಂಡುಣಿಗಳೆಂದೆನಿಪ ಭಕ್ತರ ।
ಹಿಂದೂ ನೋಡಿದ -
ಮಾತ್ರದಲ್ಲಿ । ತನು ।
ದಿಂಡುಗೆಡಹಿದ ನರನ -
ಪಾವನಮಾಳ್ರಾಕ್ಷಣದಿ ।। 13/12 ।।
ಕೆಂಡವನ್ನು ಕಾಣದೆ ಮುಟ್ಟಿದರೂ ಸರಿ - ಕಂಡು ಮುಟ್ಟಿದರೂ ಸರಿ ಅದು ಸುಡುವುದು ನಿಶ್ಚಿತ.
ಅದರಂತೆ ಶ್ರೀ ಪುಂಡರೀಕಾಕ್ಷನಾದ ಶ್ರೀ ಕೃಷ್ಣ ಪರಮಾತ್ಮನ ನಿರ್ಮಲವಾದ ಪಾದ ಪದ್ಮಗಳಲ್ಲಿ ದುಂಭಿಯಂತೆ ಆಸಕ್ತರಾದ ಭಕ್ತರ ಹಿಂದೂ ತನ್ನನ್ನು ಕಂಡಾಕ್ಷಣ ಸಾಷ್ಟಾಂಗ ವಂದಿಸುವ ನರರನ್ನು ಆ ಕ್ಷಣದಲ್ಲೇ ಪಾವನ ಮಾಡುವನು!
ಹರಿರ್ಹರತಿ ಪಾಪಾನಿ -
ದುಷ್ಟಚಿತ್ತೈರಪಿ ಸ್ಮೃತಃ ।
ಅನಿಚ್ಛಯಾsಪಿ ಸಂಸ್ಪೃಷ್ಟೋ -
ದಹತ್ಯೇವ ಹಿ ಪಾವಕಃ ।।
ಕೆಂಡಕ್ಕೆ ಸುಡುವುದು ಸಹಜ ಸ್ವಭಾವವಾಗಿರುವಂತೆ - ತಮ್ಮನ್ನು ವಂದಿಸುವವರನ್ನು ಉದ್ಧರಿಸುವುದು ಜ್ಞಾನಿಗಳ ಸ್ವಭಾವ !
ಜ್ಞಾನವಿರಲಿ - ಇಲ್ಲದಿರಲಿ ವಂದಿಸುವವರನ್ನು ಅವರ ಉದ್ಧಾರ ಮಾಡುವುದು ಖಚಿತ!
ಆದರೆ ಅವರ ಬಗ್ಗೆ ಜ್ಞಾನ ಪೂರ್ವಕ ಭಕ್ತಿ ಮಾಡಿದಲ್ಲಿ ಇನ್ನೂ ವಿಶೇಷವಾಗಿ ಉದ್ಧಾರ ಮಾಡುವದು ನಿಶ್ಚಿತ!
ಬಂಡುಣಿ = ದುಂಭಿ
ಶ್ರೀ ಹರಿಯ ಪಾದ ಪದ್ಮಗಳಲ್ಲಿ ದುಂಭಿಗಳಾಗುವುದು ಎಂಬ ಮಾತು -
" ಅನುವ್ಯಾಖ್ಯಾನನಲಿನೇ -
ಚಂಚರೀಕತಿ ಮೇ ಮನಃ "
ಯೆಂಬ " ಶ್ರೀಮನ್ನ್ಯಾಯಸುಧೆ " ಯಲ್ಲಿನ ಶ್ರೀ ಜಯತೀರ್ಥರ ಮಾತಿನ ವಿವರಣಾ ರೂಪವಾಗಿದೆ.
ದರ್ಶನ ಮಾತ್ರದಿಂದಲೇ ಶಾಸ್ತ್ರವನ್ನು ಉಪದೇಶಿಸಿ ಅದರ ಮುಖಾಂತರವಾಗಿ ಸಜ್ಜನರು ಸಾಧುಗಳು ಪವಿತ್ರೀಕರಿಸುತ್ತಾರೆ.
" ಕೆಂಡ " ಯೆಂಬ ಪಾಡ್ಯದಿಂದ -
ಅಂದರೆ -
ಶಾಸ್ತ್ರೋಪದೇಶದಿಂದಲೇ ಸಾಧುಗಳು ಪವಿತ್ರಿಸುತ್ತಾರೆ.
" ಕಂಡ "
ಮಾತ್ರದಿಂದಲೇ ಪವಿತ್ರಗೊಳಿಸುವರೆಂಬುದು ತಾತ್ಪರ್ಯ!
" ಇಚ್ಛೆಯಿಲ್ಲದೆ ಮುಟ್ಟಿದರೂ ಸಹ ಅಗ್ನಿಯು ಸುಡುತ್ತದೆ "
ದಿಂಡುಗೆಡುಹಿದ = ಸಾಷ್ಟಾಂಗ ಪ್ರಣಾಮ ಮಾಡಿದ
ಈ ಮೇಲ್ಕಂಡ ವಿಷವು ಶ್ರೀಮದ್ಭಾಗವತ ಪುರಾಣ " ದಲ್ಲಿ -
ನ ಹೃಮ್ಮಯಾನಿ ತೀರ್ಥಾನಿ -
ನ ದೇವಾ ಮೃಚ್ಛಿಲಾಮಯಾ: ।
ತೇ ಪುನಂತ್ಯುರುಕಾಲೇನ -
ದರ್ಶನಾದೇವ ಸಾಧವಃ ।।
ವಿಪಿಶ್ಚಿತರು ಜ್ಞಾನಿಗಳ ಪೂಜಾ ಮಾಡಬೇಕೆಂದು ಹೇಳಿದೆ.
ಆ ವಿಪಿಶ್ಚಿತರು ತೇಜೋಮೂರ್ತಿಗಳಾಗಿ ಹೇಗಿರುವರು?
ಅಂದರೆ -" ಅಗ್ನಿ ಸದೃಶರಾಗಿರುವರೆಂದು ಕೆಂಡದ ದೃಷ್ಟಾಂತ " ದೊಂದಿಗೆ ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಜಗನ್ನಾಥದಾಸಾರ್ಯರ ವಚನ!!
ಮೇಲ್ಕಂಡ ವಿಷಯಕ್ಕನುಗುಣವಾಗಿ ಈ ಲೇಖನದ ಕಥಾನಾಯಕರಾದ ಶ್ರೀ ಮಂತ್ರಾಲಯ ರಾಮಾಚಾರ್ಯರ ಜೀವನ ಚರಿತೆಯಿದೆ.
" ಶ್ರೀ ಮಂತ್ರಾಲಯ ರಾಮಾಚಾರ್ಯರ ಸಂಕ್ಷಿಪ್ತ ಮಾಹಿತಿ "
ಹೆಸರು :
ಶ್ರೀ ರಾಮಾಚಾರ್ಯ ಗೊಗ್ಗಿ
ತಂದೆ :
ಶ್ರೀ ವಾದಿರಾಜಾಚಾರ್ಯ ಗೊಗ್ಗಿ
ತಾಯಿ :
ಸಾಧ್ವೀ ಇಂದಿರಾಬಾಯಿ
ಜನ್ಮ ಸ್ಥಳ : ಲಕ್ಷ್ಮೇಶ್ವರ
ಜನ್ಮ ದಿನಾಂಕ : 05.05.1956
ಗೋತ್ರ : ಭಾರದ್ವಾಜ
ನಕ್ಷತ್ರ : ಪುನರ್ವಸು
" ಕುಲ ಗುರುಗಳು "
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
" ಭಾಷಾ ಪ್ರಾವೀಣ್ಯತೆ "
ಸಂಸ್ಕೃತ - ಕನ್ನಡ - ತೆಲುಗು - ಹಿಂದಿ - ಮಗಧ - ಜಪಾನ್ ಮೊದಲಾದ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.
ವಿದ್ಯಾಭ್ಯಾಸ
ಶ್ರೀ ರಾಮಾಚಾರ್ಯರನ್ನು ಕ್ರಿ ಶ 1965 ರಲ್ಲಿ ಅವರ ಪೂಜ್ಯ ತಂದೆಯವರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಯಮೀ೦ದ್ರತೀರ್ಥರ ಕಂಡು ನನ್ನ ಮಗನನ್ನು ನಿಮ್ಮ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುವುದಕ್ಕಾಗಿ ಬಿಡುತ್ತಿದ್ದೇನೆ ಎಂದು ಪ್ರಾರ್ಥಿಸಿಕೊಂಡಾಗ - ಅವರು ಶ್ರೀ ರಾಮಾಚಾರ್ಯರನ್ನು ತಮ್ಮ ಆಶ್ರಮ ಶಿಷ್ಯರೂ - ಉತ್ತರಾಧಿಕಾರಿಗಳೂ - ಮಧ್ವ ಶಾಸ್ತ್ರ ಕೋವಿದರೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರ ಬಳಿ ಕಳುಹಿಸಿಕೊಟ್ಟರು.
ಶ್ರೀ ರಾಮಾಚಾರ್ಯರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀ೦ದ್ರತೀರ್ಥರು ಕೆಳಕಂಡ ವಿದ್ವಾಂಸರ ಬಳಿ ಕಳುಹಿಸಿ -
ಮಹಾಮಹೋಪಾಧ್ಯಾಯ - ಪಂಡಿತಕೇಸರಿ ವಿದ್ವಾನ್ ಶ್ರೀ ರಾಜಾ ಸುಜ್ಞಾನೇಂದ್ರಾಚಾರ್ಯರ ಬಳಿ -
ನ್ಯಾಯ - ಮೀಮಾಂಸಾ ಹಾಗೂ ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನ ಮಾಡಿದರು.
ವಿದ್ವಾನ್ ಶ್ರೀ ಅರ್ಚಕ ರಾಮಾಚಾರ್ಯರ ಹತ್ತಿರ " ಅಲಂಕಾರ ಶಾಸ್ತ್ರ " ವನ್ನೂ - ಶ್ರೀ ಗ್ವಾತಿಗಿ ಮಧ್ವಾಚಾರ್ಯರ ಬಳಿ " ವ್ಯಾಕರಣ " ವನ್ನೂ - ಶ್ರೀ ಐಜಿ ಶ್ರೀನಿವಾಸಾಚಾರ್ಯರ ಬಳಿ " ಸಾಹಿತ್ಯ ಶಾಸ್ತ್ರ " ವನ್ನೂ - ಶ್ರೀ ಕುರ್ಡಿ ಗೋಪಾಲಾಚಾರ್ಯರ ಬಳಿ " ವೇದ - ಪೌರೋಹಿತ್ಯ " ವನ್ನು ಮಾಡಿ ಉದ್ಧಾಮ ಪಂಡಿತರೆನಿಸಿದರು.
ಮುಂದೆ ಶ್ರೀ ಮಂತ್ರಾಲಯ ರಾಮಾಚಾರ್ಯರು ಕಾಶಿಗೆ ಹೋಗಿ -
ಪಂಡಿತ ಶ್ರೀ ಆದ್ಯ ಮಧ್ವಾಚಾರ್ಯರ ಬಳಿ " ಮೀಮಾಂಸಾ ಶಾಸ್ತ್ರದ ಕೆಲ ಭಾಗಗಳನ್ನೂ " ಹಾಗೂ ಶ್ರೀ ರಾಮದುರ್ಗದ ಮಾಧವೇಶಾಚಾರ್ಯರ ಬಳಿ " ಭಾಗವತ ಸಾರೋದ್ಧಾರ " ಅಧ್ಯಯನ ಮಾಡಿದರು.
ಶ್ರೀ ಮಂತ್ರಾಲಯ ರಾಮಾಚಾರ್ಯರು ಕಾಶಿಯಿಂದ ನೇರವಾಗಿ ಗಯಾ ಕ್ಷೇತ್ರಕ್ಕೆ ಬಂದು ಪಂಡಿತ ಶ್ರೀ ಬಿ ಎಂ ನಾರಾಯಣಭಟ್ಟರ ಬಳಿ ವೇದ - ಸಮಗ್ರ ಪೌರೋಹಿತ್ಯವನ್ನು ಅಧ್ಯಯನ ಮಾಡಿದರು.
ಅಲ್ಲದೇ ಶ್ರೀ ಮಂತ್ರಾಲಯ ರಾಮಾಚಾರ್ಯರು ವಿದ್ವಾನ್ ಶ್ರೀ ಶೇಷಭಟ್ಟರ ಬಳಿ " ಸಮಗ್ರ ಅಪರ ವಿದ್ಯೆ [ ಪಿತೃಕಾರ್ಯ ] ಯನ್ನು ಅಧ್ಯಯನ ಮಾಡಿ ಗಯಾ ಕ್ಷೇತ್ರದ ಮುಖ್ಯ ಧಾರ್ಮಿಕ ಗುರುಗಳು ಎಂದು ಪ್ರಸಿದ್ಧಿ ಪಡೆದರು.
ಶ್ರೀ ಮಂತ್ರಾಲಯ ರಾಮಾಚಾರ್ಯಾರು ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುವಾಗ ವಿದ್ವಾನ್ ಶ್ರೀ ಲಕ್ಷ್ಮೀ ನಾರಾಯಣ ಉಪಾಧ್ಯಾಯ ಹಾಗೂ ವಿದ್ವಾನ್ ಶ್ರೀ ಮಾಗಡಿ ರಂಗನಾಥ ಆಚಾರ್ಯರು ಪರೀಕ್ಷೆ ಮಾಡುತ್ತಾ ಇದ್ದಾರೆ!
"ಸಮಕಾಲೀನ ಯತಿಗಳು "
ಶ್ರೀ ಸುಯಮೀ೦ದ್ರತೀರ್ಥರು - ಶ್ರೀ ಸುಜಯೀ೦ದ್ರ ತೀರ್ಥರು - ಶ್ರೀ ಸುಶಮೀ೦ದ್ರತೀರ್ಥರು - ಶ್ರೀ ಸುವಿದ್ಯೇಂದ್ರತೀರ್ಥರು - ಶ್ರೀ ಸುಯತೀಂದ್ರತೀರ್ಥರು - ಶ್ರೀ ಸುಬುಧೇಂದ್ರತೀರ್ಥರು.
" ಸಮಕಾಲೀನ ಗುರು ಪುತ್ರರು "
ಶ್ರೀ ರಾಜಾ ಆರ್ ಕೃಷ್ಣಾಚಾರ್ಯರು - ಶ್ರೀ ರಾಜಾ ಆರ್ ಗಿರಿಯಾಚಾರ್ಯರು - ಶ್ರೀ ರಾಜಾ ಎಸ್ ರಾಜಗೋಪಾಲಚಾರ್ಯರು - ಶ್ರೀ ಸುಯಮೀ೦ದ್ರಾಚಾರ್ಯರು
" ಸ್ನೇಹಿತರು "
ಕಾಶಿ ಹನುಮದ್ದಾಸರು - ಶ್ರೀ ಕಡಪಾ ರಾಘವೇಂದ್ರಾಚಾರ್ಯರು ಹಾಗೂ ಶ್ರೀ ಹುಲಕುಂಟಾಚಾರ್ಯರು [ ಇವರು ಡಾ ।। ಏನ್ ವಾದಿರಾಜಾಚಾರ್ಯರ ತಂದೆ ]
" ಶಿಷ್ಯ ವರ್ಗ "
ಶ್ರೀ ಮಂತ್ರಾಲಯ ರಾಮಾಚಾರ್ಯ ಗಯಾ ಅವರು ಭಾರತದಾದ್ಯಂತ ಸುಮಾರು 30000 ಅಧಿಕ ಶಿಷ್ಯರನ್ನು ಹೊಂದಿದ್ದು -
ಅದರಲ್ಲಿ ಸುಮಾರು 10000 ಅಧಿಕ ವಿದ್ಯಾರ್ಥಿಗಳಿಗೆ ಪೌರೋಹಿತ್ಯಾ - ಯಜ್ಞ ಯಾಗಗಳ ವಿಧಿ ವಿಧಾನಗಳನ್ನು ಹೇಳಿಕೊಟ್ಟು ಅವರಿಗೆ ಉತ್ತಮ ಮಾರ್ಗವನ್ನು ತೋರಿದರು!
ಸುಮಾರು 500 ವಿದ್ಯಾರ್ಥಿಗಳಿಗೆ ಆಸನ - ವಸನ ಕೊಟ್ಟು ಸಮಗ್ರ ದ್ವೈತ ವೇದಾಂತವನ್ನು ಹೇಳಿ ಕೊಟ್ಟಿದ್ದಾರೆ.
" ಸಾಧನೆಗಳು "
1. ಲಕ್ಷಾಂತರ ಭಕ್ತರ ಕೈಯಲ್ಲಿ ಗಯಾ ಕ್ಷೇತ್ರ ವಿಧಿ ಮಾಡಿಸಿದ ಘನತೆ ಶ್ರೀ ಆಚಾರ್ಯರದ್ದು.
2. ಬೌದ್ಧ ಹಾಗೂ ಜಪಾನಿನ ತಾತ್ವಿಕರಿಗೆ ಶ್ರೀ ಮಾಧ್ವ ವೇದ ವಿದ್ಯೆಯನ್ನು ಕಲಿಸಿದ ಕೀರ್ತಿ ಶ್ರೀ ಆಚಾರ್ಯರದ್ದು.
3. ಗಯಾ ಕ್ಷೇತ್ರದಲ್ಲಿ " ಮಂತ್ರಾಲಯ ವೇದ ವಿದ್ಯಾ ಗುರುಕುಲ " ಸ್ಥಾಪಿಸಿ ನೂರಾರು ವಿದ್ಯಾ್ಥಿಗಳಿಗೆ ವೇದ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ.
4. ಭಾರತಾದ್ಯಂತ ಸಂಚರಿಸಿ " ಹಿಂದೂ ಸನಾತನ ಧರ್ಮ " ದ ಕುರಿತು ಪ್ರಚಾರ ಮಾಡುತ್ತಾ " ಉತ್ತರ ಭಾರತ " ದಲ್ಲಿ ಸನಾತನ ಧರ್ಮವನ್ನು ಎತ್ತಿ ಹಿಡಿದ ಕೀರ್ತಿ ಶ್ರೀ ಆಚಾರ್ಯರದು.
5. ಮಂತ್ರ ತಂತ್ರ ವಿದ್ಯೆಯಲ್ಲಿ ಅಸಾಧಾರಣ ಪಾಂಡಿತ್ಯವನ್ನು ಹೊಂದಿದ್ದಾರೆ.
" ವಿಶೇಷ ವಿಚಾರ "
1.ಟೋಕಿಯೋ ವಿಶ್ವ ವಿದ್ಯಾಲಯದಲ್ಲಿ 4 ವರ್ಷಗಳ ಕಾಲ ವೇದ ವಿಜ್ಞಾನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
2. ನೇಪಾಳದ ರಾಜರು ಇವರ ಶಿಷ್ಯರು.
" ಉಪ ಸಂಹಾರ "
ಶ್ರೀ ಮಂತ್ರಾಲಯ ರಾಮಾಚಾರ್ಯರು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಹುಟ್ಟಿ - ಶ್ರೀ ಕ್ಷೇತ್ರ ಮಂತ್ರಾಲಯ - ಕಾಶಿ - ಗಯಾ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿ ಶ್ರೀ ಕ್ಷೇತ್ರ ಗಯಾದಲ್ಲಿ ಧಾರ್ಮಿಕ ಗುರುಗಳಾಗಿ ಪ್ರಸಿದ್ಧಿ ಹೊಂದಿ - ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಿ - ದೇಶ ವಿದೇಶಗಳವರಿಗೆ ಮಾರ್ಗದರ್ಶಿಗಳಾಗಿ - ರಾಜ ಗುರುಗಳಾಗಿ ಮೆರೆಯುತ್ತಿರುವ ಶ್ರೀ ರಾಮಾಚಾರ್ಯರು ಶ್ರೀ ರಾಯರ ಮಠದ ಶಿಷ್ಯರು ಎನ್ನುವುದು ಗಮನಾರ್ಹ.
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪಾದಕ್ಕೆ ಬಿದ್ದರೆ " ಉತ್ಕೃಷ್ಟ ಸ್ಥಾನ " ದಲ್ಲಿ ಇರುತ್ತಾರೆ ಎನ್ನುವುದಕ್ಕೆ ಶ್ರೀ ಮಂತ್ರಾಲಯ ರಾಮಾಚಾರ್ಯರೇ ಜ್ವಲಂತ ನಿದರ್ಶನ!
ಶ್ರೀ ಮಂತ್ರಾಲಯ ರಾಮಾಚಾರ್ಯರು ಕಳೆದ 40 ವರ್ಷಗಳಿಂದ " ಆಯುರ್ವೇದ - ತಂತ್ರ ,( ತಂತ್ರಸಾರ ) - ಮಂತ್ರಗಳಲ್ಲಿ ವಿಶೇಷವಾಗಿ ಕೃಷಿ ಮಾಡುತ್ತಾ ಇರುವುದು ಸಂತೋಷದ ಸುದ್ದಿ!
ಅಲ್ಲದೇ ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಅಭಿನಯಿಸುತ್ತಾ ಇದ್ದಾರೆ.
ಶ್ರೀ ರಾಘವೇಂದ್ರತೀರ್ಥರು ಶ್ರೀ ಮಂತ್ರಾಲಯ ರಾಮಾಚಾರ್ಯರಿಗೆ ಸಕಲ ಸಂಪತ್ತುಗಳನ್ನೂ - ಆಯುರಾರೋಗ್ಯ - ಕೀರ್ತಿ - ನೆಮ್ಮದಿ - ಶಾಂತಿಯನ್ನು ಕೊಟ್ಟು ಕಾಪಾಡಲೆಂದು -
ಶ್ರೀ ಹರಿ ವಾಯು ಗುರುಗಳಲ್ಲಿ ಅವರ ಸಕಲ ಶಿಷ್ಯ ವರ್ಗದ ಪ್ರಾರ್ಥನೆಯೊಂದಿಗೆ -
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
ವಿದ್ವಾನ್ ಶ್ರೀ ಮಂತ್ರಾಲಯ ರಾಮಚಾರ್ಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ' ಯೋಗ ಯುನಿವರ್ಸಿಟಿ ಆಫ್ ಅಮೆರಿಕ ಇದೇ ತಿಂಗಳ 14.12. 2024 ಶನಿವಾಸದಂದು ಪ್ರದಾನ ಮಾಡುತ್ತಿದೆ.
ಸ್ಥಳ : GKVK Bangalore
ಶ್ರೀ ಆಚಾರ್ಯರ ಶಿಷ್ಯ ವರ್ಗದವರು ಈ ಸಮಾರಂಭದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ವಿನಂತಿ!!
ಇಂತೀ
ಶ್ರೀ ಮಂತ್ರಾಲಯ ರಾಮಾಚಾರ್ಯ ಶಿಷ್ಯ ವರ್ಗದವರು ಬೆಂಗಳೂರು - ಮಂತ್ರಾಲಯ - ಗಯಾ