"ಆಗ್ನೇಯ ಪುರಾಣದಲ್ಲಿ ಶ್ರೀ ಮಹಾ ವಿಷ್ಣು ಮತ್ತು ಶಚೀ ಸಂವಾದದಲ್ಲಿ ವಿಶೇಶತೆಯನ್ನು ಹೇಳಲಾಗಿದೆ.
ಆದುದರಿಂದ ಧನುರ್ಮಾಸದಲ್ಲಿ ಅರುಣೋದಯದಲ್ಲಿ ಎದ್ದು ಬೇರೇ ಎಲ್ಲಾ ಕಾರ್ಯಗಳನ್ನೂ ಬಿಟ್ಟು ಯಾವನು ಮುದ್ಗಾನ್ನದಿಂದ ನಿನ್ನ ಪೂಜೆಯನ್ನು ಮಾಡುತ್ತಾನೋ ಅವನಿಗೆ ಮುಕ್ತಿ ಕೊಡುವವನಾಗು!
ಮಧ್ಯಾಹ್ನದಲ್ಲಿ ಧನುರ್ಮಾಸ ಪೂಜೆಯನ್ನು ಮಾಡಿದರೆ ನಿಷ್ಫಲವಾಗುತ್ತದೆ.
ಅರುಣೋದಯ ಕಾಲದಲ್ಲಿ ಮಾಡುವ ಪೂಜೆಯೇ ಮುಖ್ಯವೂ ಉತ್ತಮ ಕಲ್ಪಕ್ಕೆ ಸೇರಿದುದು.
ನಕ್ಷತ್ರಗಳು ಕಾಣಿಸದೇ ಇದ್ದಾಗ ಮಾಡುವು ಧನುರ್ಮಾಸ ಪೂಜೆಯು ಮಧ್ಯಮವು.
ಸೂರ್ಯನು ಉದಯವಾದ ಮೇಲೆ ಸೂರ್ಯನು ಕಾಣಿಸುವಾಗ ಮಾಡುವ ಧನುರ್ಮಾಸ ಪೂಜೆಯು ಅಧಮವು.
ಮಧ್ಯಾಹ್ನದಲ್ಲಿ ಮಾಡುವ ಧನುರ್ಮಾಸದ ಪೂಜೆಯು ನಿಷ್ಫಲವೆಂದು ತಿಳಿಯತಕ್ಕದ್ದು.
ಇನ್ನು ಮುದ್ಗಾನ್ನವೆಂದರೆ...
ಹೆಸರುಬೇಳೆಯ ಹುಗ್ಗಿಗೆ ಸೇರಿಸಬೇಕಾದ ಹೆಸರುಬೇಳೆಯ ಪರಿಮಾಣವನ್ನು ಹೇಳುತ್ತಾರೆ.
ಅಕ್ಕಿ ಎಷ್ಟು ಇದೆಯೋ ಹೆಸರುಬೇಳೆಯೂ ಅಷ್ಟೇ ಇರಬೇಕು.
ಉದಾಹರಣೆಗೆ..
ಅಕ್ಕಿಯ ಅರ್ಧದಷ್ಟು ಹೆಸರುಬೇಳೆಯ ಸೇರಿಸಿ ಹುಗ್ಗಿ ಮಾಡಿದರೆ ಅದು ಮಧ್ಯಮವು.
ಅಕ್ಕಿಯ ಕಾಲು ಭಾಗದಷ್ಟು ಹೆಸರುಬೇಳೆಯ ಸೇರಿಸಿ ಹುಗ್ಗಿ ಮಾಡಿದರೆ ಅದು ಅಧಮವು.
ಧರ್ಮ ಶಾಸ್ತ್ರ ಪ್ರವರ್ತಕರಾದ ಮುನಿಶ್ರೇಷ್ಠರು ಅಕ್ಕಿಯ ಎರಡು ಪಾಲು ಹೆಸರುಬೇಳೆ ಸೇರಿಸಿ ಮಾಡುವ ಹುಗ್ಗಿಯೇ ಉತ್ತಮೋತ್ತಮ ಎಂದು ಹೇಳುತ್ತಾರೆ.
ಅಂದರೆ ಒಂದು ಪಾವು ಅಕ್ಕಿಗೆ ಎರಡು ಪಾವು ಹೆಸರುಬೇಳೆ ಸೇರಿಸಿ ಹುಗ್ಗಿ ಮಾಡಬೇಕೆಂದು ಅಭಿಪ್ರಾಯ.
ಈ ಪಕ್ಷದಲ್ಲಿ ತನ್ನ ಶಕ್ತ್ಯಾನುಸಾರವಾಗಿ ಹೆಸರುಬೇಳೆಯನ್ನು ಸೇರಿಸಿ ಹುಗ್ಗಿಯನ್ನು ಮಾಡಬೇಕು.
ಆದರೆ ಅಕ್ಕಿಯ ಅರ್ಧ ಪರಿಮಾಣಕ್ಕಿಂತ ಹೆಸರು ಬೇಳೆ ಕಡಿಮೆ ಮಾಡಬಾರದು.
ನಾನು ಬಡವ, ಧನುರ್ಮಾಸದ ಧರ್ಮ ನಡೆಸಲಾರೆ ಅಥವಾ ಈ ರೀತಿ ಮುದ್ಗಾನ್ನ ನೈವೇದ್ಯ ಮಾಡಿದರೆ ನಾನು ದರಿದ್ರನಾಗುತ್ತೇನೆ ಎಂದೋ ದುರ್ಬುದ್ಧಿಯಿಂದ ಧನುರ್ಮಾಸದಲ್ಲಿ ಶ್ರೀ ಹರಿಗೆ ಯಾರು ಹುಗ್ಗಿಯನ್ನು ಸಮರ್ಪಿಸುವುದಿಲ್ಲವೋ ಅವನು ಮುಂದಿನ ಏಳು ಜನ್ಮಗಳಲ್ಲಿ ಬಡವನಾಗುತ್ತಾನೆ.
ಆದ್ದರಿಂದ ಧನುರ್ಮಾಸದಲ್ಲಿ ಕರ್ಮ ಸಂಕೋಚ ಮಾಡಿ ಮುದ್ಗಾನ್ನ ಸಹಿತವಾಗಿ ಶ್ರೀ ಹರಿಯನ್ನು ಪೂಜಿಸಬೇಕು.
ಇದರಿಂದ ಮಹತ್ತರವಾದ ಫಲವಿದೆ.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ